ಕಾಂಗ್ರೆಸ್ ಸೋತಿದೆಯೇ ವಿನಃ ನಾನಲ್ಲ: ಮಾಜಿ ಸಚಿವ ಶಿವರಾಂ
ನನಗೆ ನನ್ನ ಬಳಿ ಸಂಕಷ್ಟ ಹೇಳಿಕೊಂಡು ಬರುವವರೇ ನನ್ನ ಆಸ್ತಿ. ಇಂದು ನಮ್ಮ ತಾಲೂಕಿನ ಸ್ಥಿತಿಗತಿ ಏನಾಗುತ್ತಿದೆ ಎಂಬುವುದನ್ನು ನೀವೇ ಅರಿಯಬೇಕಿದೆ. ಪಕ್ಷಕ್ಕೆ ದ್ರೋಹ ಮಾಡಿದವರು ಎಂದಿಗೂ ತಲೆ ಎತ್ತಿ ಮೆರೆಯಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಸ್ಥಾನವಿಲ್ಲ. ಇಲ್ಲಿ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಇರುವವರಿಗೆ ಮಾತ್ರ ಸ್ಥಾನಮಾನ ಎಂದ ಮಾಜಿ ಸಚಿವ ಬಿ ಶಿವಾರಾಂ
ಬೇಲೂರು(ಡಿ.10): ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನಾನು ಯಾರನ್ನು ಹೊಣೆಗಾರನನ್ನಾಗಿ ಮಾಡುವುದಿಲ್ಲ. ಸಣ್ಣ-ಪುಟ್ಟ ತಪ್ಪಿನಿಂದಾಗಿ ಕಾಂಗ್ರೆಸ್ ಪಕ್ಷ ಸೋತಿದೆಯೇ ಹೊರತು ಬಿ ಶಿವರಾಂ ಸೋತಿಲ್ಲ. ಅಂದ ಮಾತ್ರಕ್ಕೆ ಇಲ್ಲಿಂದ ಓಡಿ ಹೋಗುವ ವ್ಯಕ್ತಿ ನಾನಲ್ಲ ಎಂದು ಮಾಜಿ ಸಚಿವ ಬಿ ಶಿವಾರಾಂ ಹೇಳಿದರು.
ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಭಾರತ್ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ನನ್ನ ಬಳಿ ಸಂಕಷ್ಟ ಹೇಳಿಕೊಂಡು ಬರುವವರೇ ನನ್ನ ಆಸ್ತಿ. ಇಂದು ನಮ್ಮ ತಾಲೂಕಿನ ಸ್ಥಿತಿಗತಿ ಏನಾಗುತ್ತಿದೆ ಎಂಬುವುದನ್ನು ನೀವೇ ಅರಿಯಬೇಕಿದೆ. ಪಕ್ಷಕ್ಕೆ ದ್ರೋಹ ಮಾಡಿದವರು ಎಂದಿಗೂ ತಲೆ ಎತ್ತಿ ಮೆರೆಯಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಸ್ಥಾನವಿಲ್ಲ. ಇಲ್ಲಿ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಇರುವವರಿಗೆ ಮಾತ್ರ ಸ್ಥಾನಮಾನ ಎಂದರು.
ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಮಾರಾಮಾರಿ; ಕುರ್ಚಿಗಳಿಂದಲೇ ಹೊಡೆದಾಡಿಕೊಂಡ ಕಾರ್ಯಕರ್ತರು!
ಈ ಹಿಂದೆ ಜಿಲ್ಲೆ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷ ಎಷ್ಟು ಬಲಿಷ್ಠವಾಗಿತ್ತು. ಆದರೆ ಈ ಹಿಂದೆ ಜೆಡಿಎಸ್ ನಾಯಕರ ಜೊತೆ ನಮ್ಮ ನಾಯಕರ ಅಪವಿತ್ರ ಮೈತ್ರಿಯಿಂದ ನಮ್ಮ ಪಕ್ಷ ಸರ್ವನಾಶವಾಗಿತ್ತು. ಮತ್ತೆ ರಾಜ್ಯದಲ್ಲಿ ೧೩೫ ಸ್ಥಾನ ಪಡೆಯುವ ಮೂಲಕ ಸ್ವತಂತ್ರವಾಗಿದ್ದೇವೆ. ಈಗ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ೨೮ ಸ್ಥಾನ ಗೆಲ್ಲುತ್ತೇವೆಂದು ತಿರುಕನ ಕನಸು ಕಾಣುವ ಇವರಿಗೆ ಈ ಮೈತ್ರಿಯಿಂದ ಏನಾಗುತ್ತದೆ ಎಂದು ಕಾದುನೋಡಿ. ಚುನಾವಣೆ ಸಮೀಪದಲ್ಲಿರುವ ನಮಗೆ ಈ ರೀತಿಯ ಗುಂಪುಗಾರಿಕೆ ಎಷ್ಟರ ಮಟ್ಟಿಗೆ ಸರಿ. ರಾಮಚಂದ್ರ ಅವರು ಕಾರ್ಯಕರ್ತರ ಅಭಿಪ್ರಾಯ ಆಲಿಸಲು ಬಂದಿದ್ದಾರೆ. ಇಲ್ಲಿ ನಾನೇನು ಎಂಪಿ ಚುನಾವಣೆಯ ಅಭ್ಯರ್ಥಿಯಾಗಲು ಬಂದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಮನವಿ ಮಾಡಿದರು.
ಯಾರಿಗೆ ಟಿಕೆಟ್ ನೀಡಿದರೂ ಬೆಂಬಲಿಸೋಣ:
ಕಾಂಗ್ರೆಸ್ ಮುಖಂಡ ಜಿತ್ತೇನಹಳ್ಳಿ ರಾಮಚಂದ್ರ ಮಾತನಾಡಿ, ನಾನು ಈಗಾಗಲೇ ನಮ್ಮ ಜಿಲ್ಲೆಯ ಎಲ್ಲಾ ಹಿರಿಯ ನಾಯಕರ ಜೊತೆ ಚರ್ಚಿಸಿ ಎಲ್ಲಾ ತಾಲೂಕುಗಳಲ್ಲಿ ಸಭೆ ಮಾಡಿ ಸಂಘಟನೆ ಮಾಡುತ್ತಿದ್ದೇನೆ. ಅದರಂತೆ ಬೇಲೂರಿನಲ್ಲಿ ಶಿವರಾಂ ಅವರ ಸಂಘಟನೆಯ ಹಾಗೂ ಅವರ ಶ್ರಮ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಶಿವರಾಂರವರ ಸಂಘಟನೆ ನಮ್ಮ ಜಿಲ್ಲೆಗೆ ಬೇಕಾಗಿರುವುದರಿಂದ ಅವರಿಗೆ ಟಿಕೆಟ್ ನೀಡಿದರೆ ನಾವು ಸಹ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಸಕಲೇಶಪುರ: ಸಿಸಿ ಕ್ಯಾಮೆರಾದ ಕಣ್ತಪ್ಪಿಸಿ ಹಸು ತಿಂದ ಚಿರತೆ
ನಂತರ ಕಾಂಗ್ರೆಸ್ ಮುಖಂಡರಾದ ಎಮ್ ಆರ್ ವೆಂಕಟೇಶ್, ವೈಟಿ ದಾಮೋದರ್, ಶಾಂತಕುಮಾರ್, ಪಾಪಣ್ಣ ಮಾತನಾಡಿ, ಇಂದಿನ ಸಭೆ ಲೋಕಸಭಾ ಚುನಾವಣೆಗೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದರ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನು ಆಲಿಸಲು ಸಭೆ ಕರೆಯಲಾಗಿದೆ. ಆದರೆ ಇಲ್ಲಿ ಕೆಲವರು ಸಭೆಯಲ್ಲಿ ಗೊಂದಲಕ್ಕೆ ಕಾರಣರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಂಘಟನೆ ಮಾಡುವಂತವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು. ಇಲ್ಲಿ ಕಾರ್ಯಕರ್ತರಿಂದ ನಾವು ಸೋತಿಲ್ಲ ಕೆಲ ನಾಯಕರ ಒಳ ಪಿತೂರಿಯಿಂದ ನಾವು ಸೋತಿದ್ದೇವೆ. ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದಂತ ಕಾರ್ಯಕರ್ತರನ್ನು ಯಾರೂ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಮುಖಂಡರಾದ ಪುನೀತ್, ಕೆಪಿ ಶೈಲೇಶ್, ಪಟೇಲ್ ಶಿವಪ್ಪ, ಬಿ ಎಂ ಸಂತೋಷ್, ಸೈಯದ್ ತೌಫಿಕ್ ಹಾಗೂ ಪುರಸಭೆ ಸದಸ್ಯರು, ಮುಖಂಡರು ಹಾಜರಿದ್ದರು.