ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡಲಿದೆ ಎಂದು ಚಿಂತಕ ಬಿ.ಎಲ್. ಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳನ್ನು ವಿಂಗಡಿಸುವುದರಿಂದ, ದಕ್ಷಿಣದ ರಾಜ್ಯಗಳು ತಮ್ಮ ಸಂಸತ್ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವ ಅಪಾಯವಿದೆ.
ಮುಖಾಮುಖಿ- ಬಿ.ಎಲ್. ಶಂಕರ್ , ಚಿಂತಕ, ರಾಜಕೀಯ ಮುತ್ಸದ್ದಿ. ಮಾಜಿ ಸಭಾಪತಿ
- ಶ್ರೀಕಾಂತ್ ಎನ್.ಗೌಡಸಂದ್ರ
ಕ್ಷೇತ್ರ ಪುನರ್‌ವಿಂಗಡಣೆ ವಿಚಾರ ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿದೆ. ಪಂಚ ರಾಜ್ಯಗಳ ಚುನಾವಣೆ ನಡುವೆಯೇ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗುವಂಥ ಈ ಪ್ರಕ್ರಿಯೆಗೆ ಚಾಲನೆ ನೀಡುತ್ತಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆಗೆ ಮುಂದಾಗಿರುವುದರಿಂದ ಸಹಜವಾಗಿಯೇ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಇದು ಈ ರಾಜ್ಯಗಳ ಭೀತಿಗೆ ಕಾರಣವಾಗಿ ದಕ್ಷಿಣದ ರಾಜ್ಯಗಳಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಅಸಮಾಧಾನದ ಧ್ವನಿ ಜೋರಾಗಿ ಕೇಳಿಬರುತ್ತಿದೆ. ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಈ ರಾಜ್ಯಗಳು ತಮ್ಮ ಪಾಲಿನ ಸಂಸತ್ ಪ್ರಾತಿನಿಧ್ಯತೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ವಿಧಾನಪರಿಷತ್ ಮಾಜಿ ಸಭಾಪತಿ, ಕಾಂಗ್ರೆಸ್ ಹಿರಿಯ ನಾಯಕ ಬಿ.ಎಲ್. ಶಂಕರ್ ಅವರು ಈ ವಿಚಾರದ ಒಳ ಹಾಗೂ ಹೊರ ಆಯಾಮಗಳ ಮಾನತಾಡಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
ದೇಶಾದ್ಯಂತ ಕ್ಷೇತ್ರ ಪುನರ್‌ವಿಂಗಡಣೆ ವಿಚಾರ ಚರ್ಚೆ ಜೋರಾಗಿದೆ?
ಸಂವಿಧಾನದ ಪ್ರಕಾರ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಆಗಬೇಕು. ಜನಗಣತಿ ಆದ ಮೇಲೆ ವಿಧಾನಸಭೆ, ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬೇಕು ಎಂಬುದು ನಿಯಮ. ಆದರೆ, ಇತ್ತೀಚೆಗೆ 2026 ರವರೆಗೆ ಲೋಕಸಭೆ, ವಿಧಾನಸಭೆ ಕ್ಷೇತ್ರಗಳನ್ನು ಜಾಸ್ತಿ ಮಾಡಬಾರದು ಎಂಬ ಕಾರಣಕ್ಕೆ ಸ್ಥಗಿತಗೊಳಿಸಿದ್ದರು. 2021ರಲ್ಲೇ ಜನಗಣತಿ ಆಗಿದ್ದರೆ ಇಷ್ಟೊತ್ತಿಗೆ ಕ್ಷೇತ್ರ ಪುನರ್‌ವಿಂಗಡಣೆ ಆಗಬೇಕಿತ್ತು.
ಮತ್ಯಾಕೆ ಪುನರ್‌ವಿಂಗಡಣೆ ಆಗಿರಲಿಲ್ಲ? ಈಗ ಏಕಾಏಕಿ ಪ್ರಕ್ರಿಯೆ ಆರಂಭವಾಗಿರೋದು ಏಕೆ?
2023ರಲ್ಲಿ ಕೇಂದ್ರ ಸರ್ಕಾರ ಪ್ರತಿಪಕ್ಷಗಳೂ ಸೇರಿ ಸರ್ವಾನುಮತದಿಂದ ಸಂವಿಧಾನಕ್ಕೆ ತಿದ್ದುಪಡಿ ತಂದು ಲೋಕಸಭೆ ಹಾಗೂ ವಿಧಾನಸಭೆಗೆ ಶೇ.33 ಮಹಿಳಾ ಮೀಸಲಾತಿ ತರಬೇಕು ಎಂದು ಮಾಡಿದರು. ಆದರೆ, ಅದನ್ನು ತಕ್ಷಣದಿಂದ ಜಾರಿಗೆ ತರಲು ಒತ್ತಾಯವಿದ್ದರೂ ಆ ರೀತಿ ಮಾಡಲಿಲ್ಲ. 2026ರಲ್ಲಿ ಜನಗಣತಿ ಮಾಡಿ ನಂತರ ಕ್ಷೇತ್ರ ಪುನರ್‌ವಿಂಗಡಣೆ ಮಾಡುತ್ತೇವೆ. ಅದಾದ ಮೇಲೆ ಮಹಿಳಾ ಮೀಸಲಾತಿ ಜಾರಿ ಮಾಡುತ್ತೇವೆ ಹೇಳಿದ್ದರು.
ಈಗ ಯಾಕೆ ಈ ವಿಚಾರ ಚಾಲ್ತಿ ಪಡೆದಿದೆ?
ಅದೇ ಈಗಿರುವ ಪ್ರಶ್ನೆ. 2026ರ ಜನಗಣತಿ ಆಧಾರದ ಮೇಲೆ ಮಾಡುತ್ತೇವೆ ಎಂದವರು ಈಗ ಏಕಾಏಕಿ 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರಪುನರ್ ವಿಂಗಡಣೆ ಮಾಡಿ ಮಹಿಳಾ ಮೀಸಲಾತಿ ತರುತ್ತೇವೆ ಎಂದು ತರಾತುರಿಯಲ್ಲಿ ಹೊರಟಿದ್ದಾರೆ? ಏಪ್ರಿಲ್ ಮೊದಲ ವಾರದಿಂದ 2026 ಜನಗಣತಿ ಶುರುವಾಗುತ್ತಿದೆ. ಇದಕ್ಕೂ ಮೊದಲೇ ಕ್ಷೇತ್ರ ಪುನರ್‌ವಿಂಗಡಣೆಗೆ ಮುಂದಾಗಿರುವ ಹಿಂದೆ ಸ್ಪಷ್ಟ ರಾಜಕೀಯ ಉದ್ದೇಶವಿದೆ ಎಂಬುದಕ್ಕೆ ನಮ್ಮ ವಿರೋಧ. ಅವರು ತಕ್ಷಣದ ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ಮಹಿಳಾ ಮೀಸಲಾತಿ, ಪ್ರಾದೇಶಿಕ ಪ್ರಾತಿನಿಧ್ಯತೆ ನೀಡಲು ನಮ್ಮ ವಿರೋಧವಿಲ್ಲ. 2026ರ ಜನಗಣತಿಗೂ ಮೊದಲೇ 2011ರ ಗಣತಿ ಆಧಾರದ ಮೇಲೆ ಮಾಡುವುದಾದರೆ 2023ರಲ್ಲಿ ಸಂವಿಧಾನ ತಿದ್ದುಪಡಿ ಅಂಗೀಕಾರ ಆದಾಗಲೇ ಮಾಡಬೇಕಿತ್ತು. 545 ಲೋಕಸಭೆ, ರಾಜ್ಯದ 224 ಕ್ಷೇತ್ರಗಳಿಗೆ ಶೇ.33 ಮಹಿಳಾ ಮೀಸಲಾತಿ ಜಾರಿ ಮಾಡಬೇಕಿತ್ತು. ಆ ರೀತಿ ಮಾಡದೆ ಈಗ ಮಾಡಲು ಹೊರಟಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ಈ ಅನುಮಾನ ಯಾಕೆ?
ಕ್ಷೇತ್ರ ಪುನರ್‌ವಿಂಗಡಣೆಯನ್ನು 2026ರ ಜನಸಂಖ್ಯೆ ಆಧಾರದ ಮೇಲೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ ಸಾಕಷ್ಟು ನಷ್ಟ ಉಂಟಾಗಲಿದೆ. ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನಗಳಿಗಿಂತ ಉತ್ತರದ ಸಂಸತ್ ಸ್ಥಾನಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಎಂಬ ಲೆಕ್ಕಾಚಾರ ವ್ಯಾಪಕವಾಗಿ ನಡೆಯುತ್ತಿತ್ತು. ಆ ಚರ್ಚೆಯ ಪ್ರಭಾವ ಕಡಿಮೆ ಮಾಡುವುದು ಒಂದು ಉದ್ದೇಶ. ಮಹಿಳಾ ಮತದಾರರ ಮೇಲೆ ಪ್ರಭಾವ ಬೀರುವುದು ಎರಡನೇ ಉದ್ದೇಶ.
2011ರ ಅಂದರೆ 15 ವರ್ಷಗಳ ಹಿಂದಿನ ಜನಗಣತಿ ಅಂಕಿ-ಅಂಶಗಳ ಆಧಾರದ ಮೇಲೆ ಪುನರ್‌ವಿಂಗಡಣೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ ನಷ್ಟ ಆಗಲ್ಲವೇ?
ಆಗಲೂ ದಕ್ಷಿಣಕ್ಕೆ ನಷ್ಟ ಆಗುತ್ತದೆ, ಉತ್ತರದ ರಾಜ್ಯಗಳಿಗೆ ಹೆಚ್ಚು ಲಾಭ ಆಗುತ್ತದೆ. 2011ರ ಜನಗಣತಿ ಆಧಾರದ ಮೇಲೆ ಮಾಡಿದರೂ ದಕ್ಷಿರಾಜ್ಯಗಳಿಗೆ ನಷ್ಟ, 2026ರ ಆಧಾರದ ಮೇಲೆ ಮಾಡಿದರೂ ದಕ್ಷಿಣಕ್ಕೆ ನಷ್ಟವಾದರೆ ಕೇಂದ್ರ 2026ರ ಆಧಾರದ ಮೇಲೆಯೇ ಮಾಡಬಹುದಿತ್ತಲ್ವ? ದಕ್ಷಿಣ ರಾಜ್ಯಗಳ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ 2026ರಲ್ಲಿ ಮಾಡಿದರೆ ವ್ಯಾಪಕ ವ್ಯತ್ಯಾಸ ಆಗುತ್ತದೆ. ಆ ಚರ್ಚೆಯ ಪರಿಣಾಮ ಕಡಿಮೆ ಮಾಡುವುದು ಸಹ ಕೇಂದ್ರದ ಉದ್ದೇಶ.
ಹಾಗಾದರೆ, ಪರೋಕ್ಷವಾಗಿ 2011ರ ಜನಗಣತಿ ಆಧಾರದ ಮೇಲೆ ಮಾಡುವುದು ದಕ್ಷಿಣ ರಾಜ್ಯಗಳಿಗೆ ಒಳ್ಳೆಯದೇ ಅಲ್ಲವೇ?
ಉತ್ತರದ ರಾಜ್ಯಗಳಿಗೆ ಜಾಸ್ತಿ ಆಗುವ ಸಂಸತ್ ಸ್ಥಾನಗಳ ಸಂಖ್ಯೆಗೆ ಹೋಲಿಸಿದರೆ ದಕ್ಷಿಣಕ್ಕೂ ಹಾಗೂ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸ ಹಾಗೆಯೇ ಉಳಿಯುತ್ತದೆ. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, 2011ರ ಜನಗಣತಿ ಆಧಾರವಾಗಿಯೇ ಆಗಲಿ ಅಥವಾ 2026ರ ಆಧಾರವಾಗಿಯೇ ಆಗಲಿ ಗುಜರಾತ್‌ನಿಂದ ಕೇರಳದವರೆಗೆ ಪಶ್ಚಿಮ ಘಟ್ಟದ ವ್ಯಾಪ್ತಿಯ ರಾಜ್ಯದವರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಉದಾ: ಉಡುಪಿ-ಚಿಕ್ಕಮಗಳೂರು ಜಿಲ್ಲೆ ಸೇರಿ ಒಂದು ಕ್ಷೇತ್ರ ಮಾಡಿದ್ದಾರೆ. ಕೊಡಗು ಸಹ ಮೊದಲು ಮಂಗಳೂರು ಜತೆ ಇತ್ತು, ಈಗ ಮೈಸೂರು ಜತೆಗಿದೆ. ಹಾಸನದ ಬೇಲೂರು, ಸಕಲೇಶಪುರ, ಅರಕಲಗೂಡು ಬೇರೆ ಬೇರೆ ಕ್ಷೇತ್ರಗಳಿಗೆ ಸೇರಿಕೊಂಡಿವೆ. ಎರಡೆರಡು ಜಿಲ್ಲೆ ಸೇರಿ ಒಂದೊಂದು ಕ್ಷೇತ್ರ ಆಗಿದೆ.
ಈ ಸಮಸ್ಯೆಗೆ ಪರಿಹಾರವೇನು?
ಪಶ್ಚಿಮ ಘಟ್ಟಗಳ ಪ್ರದೇಶಗಳಿಗೆ ಈಶಾನ್ಯ ರಾಜ್ಯಗಳಿಗೆ ನೀಡಿದಂತೆ ಭೌಗೋಳಿಕ ಮಾನದಂಡ ಆಧರಿಸಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಬೇಕು. ಆ ಭಾಗದಲ್ಲಿ 12-15 ಸಾವಿರ ಜನಸಂಖ್ಯೆಗೆ ಒಂದು ವಿಧಾನಸಭೆ, 35-40 ಸಾವಿರ ಜನಸಂಖ್ಯೆಗೆ ಒಂದು ಲೋಕಸಭೆ ಕ್ಷೇತ್ರ ಇದೆ. ಇದೇ ಆಧಾರದ ಮೇಲೆ ಮಲೆನಾಡಿನಲ್ಲಿ ಹೊಸನಗರ ಕ್ಷೇತ್ರ ಉಳಿಸಿ ಹೋರಾಟ ತೀವ್ರಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಸೇರಿ ಬಿ.ಸ್ವಾಮಿರಾವ್ ನೇತೃತ್ವದಲ್ಲಿ ಹೊಸನಗರವನ್ನೇ ಬೇರೆ ಕ್ಷೇತ್ರ ಮಾಡುವಂತೆ ಆಗ್ರಹಿಸಿ ದೊಡ್ಡ ಹೋರಾಟ ನಡೆಸುತ್ತಿವೆ.
ಇದೇ ರೀತಿ ಮಲೆನಾಡು ಪೂರ್ತಿ ಹೋರಾಟ ಶುರುವಾಗುತ್ತದೆಯೇ?
ಹೊಸನಗರ ಮಾದರಿಯಲ್ಲಿ ಇಡೀ ಮಲೆನಾಡು ಪ್ರದೇಶದಲ್ಲಿ ಈ ರೀತಿಯ ಪ್ರಯತ್ನ ಮಾಡಬೇಕು ಎಂದಿದ್ದೇವೆ. ಎಲ್ಲಾ ಮಲೆನಾಡು ಪ್ರದೇಶಗಳಿಗೆ ಜನಸಂಖ್ಯೆ ಬದಲಿಗೆ ಭೌಗೋಳಿಕ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಮಾಡಬೇಕು ಎಂಬ ಒತ್ತಾಯ ನಮ್ಮದು. ಶೃಂಗೇರಿ ಕ್ಷೇತ್ರ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಸೇರಿ ಆಗಿದೆ. ಮೂಡಿಗೆರೆ ಕ್ಷೇತ್ರ ಕಳಸಾ, ಮೂಡಿಗೆರೆ, ಚಿಕ್ಕಮಗಳೂರಿನ ಸುತ್ತಮುತ್ತ ಪ್ರದೇಶ ಸೇರಿ ಆಗಿದೆ. ಒಂದು ವಿಧಾನಸಭಾ ಕ್ಷೇತ್ರವೇ 130-140 ಕಿ.ಮೀ. ಉದ್ದ-ಅಗಲ ಇದೆ. ಹೀಗಾಗಿ ತರಾತುರಿಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಮಾಡದೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಎಲ್ಲಾ ರಾಜ್ಯಗಳೊಂದಿಗೆ, ಪಕ್ಷಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಬೇಕು.
ದಕ್ಷಿಣ ರಾಜ್ಯಗಳ ಧ್ವನಿ ಆಲಿಸದೆ ಕ್ಷೇತ್ರ ಪುನರ್‌ವಿಂಗಡಣೇ ಮಾಡಿದರೆ ಪರಿಣಾಮವೇನು?
ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನದಂಥ ಹಿಂದಿ ಭಾಷಿಕ ರಾಜ್ಯಗಳ ಮರ್ಜಿಯಲ್ಲ ದೇಶದ ರಾಜಕೀಯ ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನಗಳಿಗಿಂತ ಉತ್ತರ ರಾಜ್ಯಗಳ ಪಾರುಪತ್ಯ ಹೆಚ್ಚಾಗಲಿದೆ. ಇದು ಪ್ರಾದೇಶಿಕತೆಯ ಕೂಗು ಎಬ್ಬಿಸಿದರೂ ಅಚ್ಚರಿಯಿಲ್ಲ. ಭಾರತ ಎಂಬುದು ರಾಜ್ಯಗಳ ಒಕ್ಕೂಟವೇ ಹೊರತು ಬೇರೇನೂ ಅಲ್ಲ ಎಂಬುದನ್ನು ಕೇಂದ್ರ ಅರಿಯಬೇಕು.
ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದಲೇ ಇದನ್ನು ಮಾಡುತ್ತಿದೆ ಎಂಬ ಅನುಮಾನ ಏಕೆ?
ಪಂಚ ರಾಜ್ಯ ಚುನಾವಣೆ ಮತದಾನ ಏ.29ರವರೆಗೆ ನಡೆಯಲಿದೆ. ಮೇ 5 ರಂದು ಮತ ಎಣಿಕೆ ಆಗುತ್ತದೆ. ಇದಕ್ಕೂ ಮೊದಲೇ ಕ್ಷೇತ್ರ ಪುನರ್‌ವಿಂಗಡಣೆ ಮಾಡಬೇಕಾದ ತುರ್ತು ಏಕೆ ಎಂಬುದು ನಮ್ಮ ಪ್ರಶ್ನೆ. ಈ ರೀತಿ ಮಾಡುವುದಾದರೆ ಕಳೆದ ಅಧಿವೇಶನದ ಅವಧಿಯಲ್ಲೇ ಮಾಡಬಹುದಿತ್ತಲ್ಲವೇ? ಹೀಗಾಗಿ ಏನೋ ಹೊರಗಡೆ ಪ್ರಕಟಿಸದಿರುವಂಥ ಒಳ ರಾಜಕೀಯ ಉದ್ದೇಶದಿಂದಲೇ ಕೇಂದ್ರ ಇದನ್ನು ಮಾಡುತ್ತಿದೆ.
ಕೇಂದ್ರದ ಈ ಪುನರ್‌ವಿಂಗಡಣೆ ಪ್ರಕ್ರಿಯೆಯಿಂದ ರಾಜ್ಯದ ರಾಜಕೀಯ ಪ್ರಭಾವ ಎಷ್ಟು ಕುಸಿಯುತ್ತದೆ?
ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ರಾಜ್ಯಗಳ ಸ್ಥಿತಿ ಕುಸಿಯುತ್ತದೆ. ರಾಜಕಾರಣ ಎಂಬುದು ನಂಬರ್‌ಗೇಮ್. ಯಾರಿಗೆ ಎಷ್ಟು ಸ್ಥಾನ ಬಂದಿದೆ ಎಂಬುದರ ಮೇಲೆಯೇ ಎಲ್ಲವೂ ನಿರ್ಧಾರವಾಗುತ್ತದೆ. ಆ ಸಂಖ್ಯಾಬಲದ ಆಧಾರದ ಮೇಲೆ ನೋಡಿದರೆ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯತೆ ಕಡಿಮೆ ಆಗುವ ದೊಡ್ಡ ಆತಂಕವಿದೆ.
ಹಾಗಾದರೆ ನಿಮ್ಮ ಪ್ರಕಾರ ಕೇಂದ್ರ ಸರ್ಕಾರ ಪುನರ್‌ವಿಂಗಡಣೆ ಹೇಗೆ ಮಾಡಬೇಕು?
ನಾವು ಮಹಿಳಾ ಮೀಸಲಾತಿಗೆ ವಿರುದ್ಧವಿಲ್ಲ. 73, 74ನೇ ತಿದ್ದುಪಡಿ ಮೂಲಕ ಮಹಿಳಾ ಮೀಸಲಾತಿ, ಓಬಿಸಿ ಮೀಸಲಾತಿ ತಂದ ಶ್ರೇಯಸ್ಸು ಕಾಂಗ್ರೆಸ್‌ಗೆ ಇದೆ. ಆದರೆ ಜನಸಂಖ್ಯೆ ನಿಯಂತ್ರಣ, ಅಭಿವೃದ್ಧಿ ಸಾಧನೆ ಮಾಡುವ ವಿಚಾರದಲ್ಲಿ ಉತ್ತರ ರಾಜ್ಯಗಳಿಗಿಂತ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಉತ್ತಮ ಸಾಧನೆ ಮಾಡಿವೆ. ಅಂತಹ ರಾಜ್ಯಗಳು ಪ್ರಾತಿನಿಧಿಕ ಹಾಗೂ ಅಭಿವೃದ್ಧಿ ನ್ಯಾಯದಿಂದಲೂ ವಂಚಿತವಾಗದಂತೆ ಮಾಡಬೇಕು. ದಕ್ಷಿಣ ರಾಜ್ಯಗಳವರ ಉಪಸ್ಥಿತಿ ರಾಷ್ಟ್ರರಾಜಕಾರಣದಲ್ಲಿ ಕಡಿಮೆ ಆಗದಂತೆ ನೋಡಿಕೊಳ್ಳಬೇಕು.
1971 ಜನಗಣತಿ ಆಧಾರದ ಮೇಲೆಯೇ ಪುನರ್‌ವಿಂಗಡಣೆ ಮಾಡಬೇಕೆಂಬ ಬೇಡಿಕೆ ಬಗ್ಗೆ ನೀವು ಏನು ಹೇಳುತ್ತೀರಿ?
ಇಲ್ಲ, ನನ್ನ ಅಭಿಪ್ರಾಯದಲ್ಲಿ ಜನಸಂಖ್ಯೆ ಒಂದೇ ಆಧಾರವಾಗಿರಬಾರದು. ಅದು ಒಂದು ಅಂಶ ಮಾತ್ರ ಆಗಬೇಕು.
ಹಾಗಾದರೆ, ಮತ್ತ್ಯಾವ ಹೆಚ್ಚುವರಿ ಅಂಶಗಳನ್ನು ಪರಿಗಣಿಸಬೇಕು?
ರಾಜ್ಯಗಳ ರಚನೆ ಮಾಡಿದಾಗ ಆಯೋಗ ರಚಿಸಿ ಭಾಷಾವಾರು ರಾಜ್ಯಗಳ ರಚನೆ ಮಾಡಿದರು. ಈ ರೀತಿಯ ತಾಲೀಮು ಅಗತ್ಯ. ರಾಜ್ಯ ಅಭಿವೃದ್ಧಿ ಆಗಿರುವಂತಹ ಸ್ಥಿತಿ, ಪ್ರಗತಿಯ ಸ್ಥಿತಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಾತಿನಿಧಿಕ ನ್ಯಾಯ ಕೊಡುವ ಅಂಶಗಳನ್ನಿಟ್ಟುಕೊಂಡು ಕ್ಷೇತ್ರ ಮರುವಿಂಗಡಣೆ ಮಾಡಬೇಕು. ಮಾನದಂಡಗಳು ಹೆಚ್ಚಾಗಬೇಕು, ಮಾನದಂಡಗಳು ಈ ಎಲ್ಲಾ ಅಂಶಗಳನ್ನೂ ಒಳಗೊಂಡಿರಬೇಕು. ವಿಶೇಷವಾಗಿ ವ್ಯಾಪಕ ಚರ್ಚೆಯಾಗಿ ಜನರ ಅಭಿಪ್ರಾಯಪಡೆಯಬೇಕು. ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಚರ್ಚೆಯಾಗಬೇಕು. ತರಾತುರಿಯಲ್ಲಿ ತಕ್ಷಣದ ರಾಜಕೀಯ ಲಾಭ ನೋಡಿ ಮಾಡಬಾರದು.
ಹೆಚ್ಚು ತೆರಿಗೆ ಸಂಗ್ರಹಿಸಿ ನೀಡುವುದು ದಕ್ಷಿಣ ರಾಜ್ಯಗಳು. ಪ್ರಾತನಿಧಿತ್ವ ಕಡಿಮೆ ಆಗುವುದರಿಂದ ಆರ್ಥಿಕ ಪರಿಣಾಮವೇನು?
ಯಾರು ಹೆಚ್ಚು ತೆರಿಗೆ ನೀಡುತ್ತಾರೋ ಅವರಿಗೆ ಹೆಚ್ಚು ಪಾಲು ನೀಡಬೇಕು. ಅಭಿವೃದ್ಧಿಗಾಗಿ ಅವರಿಗೆ ಆದ್ಯತೆ ನೀಡಬೇಕು. ಆದರೆ, ಕೇಂದ್ರ ಸರ್ಕಾರದ ನಿರ್ಧಾರದಿಂದ ಅವರಿಗೆ ಹೆಚ್ಚು ಶಿಕ್ಷೆ ಆಗಲಿದೆ. ಇಂಥವನ್ನು ತಡೆಯಲೆಂದೇ ಯೋಜನಾ ಆಯೋಗ ನೆಹರೂ ಕಾಲದಿಂದಲೂ ಅಸ್ತಿತ್ವದಲ್ಲಿತ್ತು. ಆದರೆ ಕಾಂಗ್ರೆಸ್, ನೆಹರೂ ಮಾಡಿದ್ದು ಇರಬಾರದು ಎಂಬ ಪ್ರಯೋಗಗಳ ಮೂಲಕ ಬಿಜೆಪಿ ಹಠಕ್ಕೆ ಬಿದ್ದು ಒಕ್ಕೂಟ ವ್ಯವಸ್ಥೆಯ ಸಂಬಂಧಗಳನ್ನು ಹಾಳು ಮಾಡಿದ್ದಾರೆ. ಪರಸ್ಪರ ಉತ್ತರ-ದಕ್ಷಿಣ ರಾಜ್ಯಗಳ ವಿಶ್ವಾಸ ಹಾಳು ಮಾಡಿದ್ದಾರೆ.
ಮೋದಿ ಅವರು ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಆಗಿಲ್ಲ ಎಂದಿದ್ದಾರಲ್ವಾ?
ದಕ್ಷಿಣದಲ್ಲಿ ಎಷ್ಟು ಪ್ರಮಾಣದಲ್ಲಿ ಜಾಸ್ತಿ ಆಗುತ್ತದೆ ಹಾಗೂ ಉತ್ತರ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಏಂಬುದನ್ನು ನೋಡಬೇಕು. ಉತ್ತರದಲ್ಲಿ ವಿಪರೀತವಾಗಿ ಪ್ರಾತಿನಿಧ್ಯ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ. ಇದನ್ನು ಗಮನಿಸಿದರೆ ಮೋದಿ ಅವರ ಹೇಳಿಕೆ ನಂಬಲು ಕಷ್ಟವಾಗುತ್ತದೆ.
ಸಿದ್ದರಾಮಯ್ಯ ಅವರು ಕೇರಳ, ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಈ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ?
ಸಹಜವಾಗಿಯೇ ಹೌದು. ದಕ್ಷಿಣ ರಾಜ್ಯಗಳಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆ ಎಂಬುದು ವ್ಯಾಪಕವಾಗುತ್ತಿದ್ದು, ಬಹುತೇಕರು ಇದನ್ನು ಸತ್ಯ ಎಂದು ನಂಬುತ್ತಿದ್ದಾರೆ. ಈ ಅಭಿಪ್ರಾಯವನ್ನು ದೂರ ಮಾಡಿರುವ ರಾಜಕೀಯದ ಹೇಳಿಕೆ ಎಂಬುದು ಸತ್ಯ.
ಅಸಮರ್ಪಕ ಕ್ಷೇತ್ರ ವಿಂಗಡಣೆಯಿಂದ ಪ್ರಾದೇಶಿಕ ಸಮಸ್ಯೆಗಳ ಪ್ರಾತಿನಿಧ್ಯತೆ ಕಳೆದುಕೊಳ್ಳುತ್ತದೆ ಎಂಬ ಆತಂಕವಿದೆಯೇ?
ಹೌದು, ಅವೈಜ್ಞಾನಿಕವಾಗಿ ಕ್ಷೇತ್ರ ಪುನರ್‌ವಿಂಗಡಣೆ ಆದರೆ ಈ ಸಮಸ್ಯೆಯಾಗುತ್ತದೆ. ಹಾಗಾಗಿಯೇ ಒಂದೇ ರೀತಿಯ ಸಂಸ್ಕೃತಿ, ಭೌಗೋಳಿಕ ಪ್ರದೇಶ ಇರುವ ಪ್ರದೇಶವನ್ನು ಕ್ಷೇತ್ರ ಮಾಡಬೇಕು.
ಕೇಂದ್ರವು ರಾಜ್ಯಗಳ ಅಧಿಕಾರ ವ್ಯಾಪ್ತಿ ಮೇಲೆ ಅತಿಕ್ರಮಣ ಮಾಡುತ್ತಿದೆಯೇ?
ಹೌದು ನೀತಿ ನಿರೂಪಣೆ, ಶಾಸನಾತ್ಮಕ ಬದಲಾವಣೆ ವೇಳೆ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ, ಸಮವರ್ತಿ ಪಟ್ಟಿ ಎಂಬುದು ಇರುತ್ತದೆ. ಇದರಲ್ಲಿ ಬಹಳಷ್ಟು ಅತಿಕ್ರಮಣ ಆಗುತ್ತಿದೆ. ರಾಜ್ಯದ ವ್ಯಾಪ್ತಿಗೆ ಬರುವ ಸಹಕಾರಿ ಕಾಯಿದೆ ತಂದು ಕೇಂದ್ರದಲ್ಲಿ ಸಹಕಾರಿ ಸಚಿವರನ್ನೂ ಮಾಡಿದರು. ಲೋಹಿಯಾ ಅವರು ಹೇಳಿದ ನಾಲ್ಕು ಕಂಬಗಳ ಸರ್ಕಾರ ಸರಿ ಇದ್ದು ಜಿಪಂ, ಗ್ರಾಪಂ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣವಾದರೆ ವಿಧಾನಸಭೆ, ಲೋಕಸಭೆ ಸ್ವರೂಪ ಹೇಗಿದ್ದರೂ ಸಮಸ್ಯೆಯಿಲ್ಲ. ಆದರೆ ಅಧಿಕಾರ ಕೇಂದ್ರೀಕರಣ ಆಗುತ್ತಿದೆ. ಇದರ ನಡುವೆ ಆಗುತ್ತಿರುವ ಇಂತಹ ಬೆಳವಣಿಗೆಗಳು ಆತಂಕ ಹುಟ್ಟಿಸಿವೆ.
ಪುನರ್‌ವಿಂಗಡಣೆ ವಿಚಾರದಲ್ಲಿ ರಾಜ್ಯದ ಮುಂದಿನ ನಡೆ ಹೇಗಿರಬೇಕು?
ಶಾಸನಸಭೆಯಲ್ಲಿ ಚರ್ಚೆ ಮಾಡಿ ತಮ್ಮ ಅಭಿಪ್ರಾಯ ದಾಖಲು ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯುವಂತೆ ಒತ್ತಡ ಹೇರಬೇಕು. ಕಾಲ ಮೀರುವ ಮೊದಲೇ ಪಕ್ಷಬೇಧವಿಲ್ಲದೆ ಹೋರಾಟ ಶುರುವಾಗಬೇಕು.
ರಾಜ್ಯ ಬಿಜೆಪಿ ನಾಯಕರು ಧ್ವನಿಯೇ ಎತ್ತುತ್ತಿಲ್ಲವಲ್ಲ?
ಅಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ನೆಹರೂ ಸರ್ಕಾರದ ವಿರುದ್ಧ ಅಳಿಯ ಫಿರೋಜ್ ಗಾಂಧಿ ಅವರೇ ಬೇಕಾದಷ್ಟು ವಿಚಾರ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ರೀತಿಯ ಸ್ಥಿತಿ ಈಗ ಇಲ್ಲ. ಯಾವುದೇ ಪಕ್ಷದ ನಾಯಕರಾಗಲಿ ಜನರ ಹಿತಾಸಕ್ತಿ ಬಲಿಕೊಟ್ಟು ರಾಜಕೀಯ ಲಾಭ ನೋಡಬಾರದು.


