Asianet Suvarna News Asianet Suvarna News

ಡಿಕೆಶಿ ಸಿಬಿಐ ತನಿಖೆ ವಾಪಸ್‌, ಜಾತಿ ಗಣತಿ ವಿವಾದ ಸರ್ಕಾರ ಪತನದ ಹೆಜ್ಜೆ: ಈಶ್ವರಪ್ಪ

ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್‌ ಪಡೆದದ್ದು ಕಾಂಗ್ರೆಸ್‌ ಸರ್ಕಾರ ಬೀಳುವ ಮೊದಲ ಹೆಜ್ಜೆಯಾದರೆ, ಜಾತಿ ಜನಗಣತಿಯ ವಿವಾದ ಎರಡನೇ ಹೆಜ್ಜೆಯಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು. 
 

Former DCM KS Eshwarappa Slams On Congress Govt At Haveri gvd
Author
First Published Nov 26, 2023, 8:18 PM IST

ಹಾವೇರಿ (ನ.26): ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್‌ ಪಡೆದದ್ದು ಕಾಂಗ್ರೆಸ್‌ ಸರ್ಕಾರ ಬೀಳುವ ಮೊದಲ ಹೆಜ್ಜೆಯಾದರೆ, ಜಾತಿ ಜನಗಣತಿಯ ವಿವಾದ ಎರಡನೇ ಹೆಜ್ಜೆಯಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿದ ಬಿಜೆಪಿ ಸರ್ಕಾರದ ಆದೇಶವನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆಯುವ ಮೂಲಕ ಸಚಿವ ಸಂಪುಟದ ಪಾವಿತ್ರ್ಯ ಹಾಳು ಮಾಡಿದೆ. 

ಈ ಬಗ್ಗೆ ಸರಿಯಾಗಿ ತನಿಖೆ ನಡೆದರೆ ಡಿ.ಕೆ. ಶಿವಕುಮಾರ್‌ ತಿಹಾರ್‌ ಜೈಲಿನಲ್ಲಿರುತ್ತಾರೆ. ಆರೋಪ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಶೇ. 80ರಷ್ಟು ತನಿಖೆಗೊಂಡಿದ್ದ ಸಿಬಿಐ ಪ್ರಕರಣವನ್ನು ಇಡೀ ದೇಶದಲ್ಲಿ ಹಿಂಪಡೆದಿದ್ದು ಇದೇ ಮೊದಲು. ತಮ್ಮ ಮೇಲಿನ ಪ್ರಕರಣವನ್ನು ತಡೆಯುವ ಸಲುವಾಗಿ ಡಿ.ಕೆ. ಶಿವಕುಮಾರ್‌ ಎಲ್ಲ ನ್ಯಾಯಾಲಗಳಿಗೂ ಹೋಗಿ ಬಂದರು. ಆದರೆ, ಅದನ್ನು ತಡೆಯಲು ಆಗಲಿಲ್ಲ. ಆದರೆ, ಜನರಿಂದ ಆಯ್ಕೆಯಾಗಿರುವ ಸರ್ಕಾರ ಈಗ ಅಕ್ರಮ ನಿರ್ಣಯ ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಎಚ್.ಕೆ. ಪಾಟೀಲ ಇವರೆಲ್ಲರೂ ಕಾನೂನು ತಜ್ಞರು. ಇಡೀ ದೇಶದಲ್ಲಿ ಸಿಬಿಐಗೆ ಕೊಟ್ಟ ಪ್ರಕರಣವನ್ನು ಹಿಂಪಡೆದ ಉದಾಹರಣೆ ಇದೆಯೇ ಎಂಬುದನ್ನು ಅವರೇ ಹೇಳಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.

ಭಾರತ ಸನಾತನ ಹಿಂದು ಧರ್ಮದ ಸಂಪ್ರದಾಯ ಹೊಂದಿದೆ: ಕೆ.ಎಸ್.ಈಶ್ವರಪ್ಪ

ಸಿಎಂ, ಡಿಸಿಎಂರಿಂದ ಲೂಟಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದ ವರ್ಗಾವಣೆ ದಂಧೆ ನಡೆಯುತ್ತಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಎಷ್ಟೆಷ್ಟು ಲಂಚ ಪಡೆದು ಉನ್ನತ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಿದರೆ ದಾಖಲೆಗಳನ್ನು ಕೊಡುತ್ತೇನೆ. ಹಲೋ ಅಪ್ಪ ವಿಡಿಯೊದ ಸಂಭಾಷಣೆಯನ್ನು ಗಮನಿಸಿದರೆ ಅದು ವರ್ಗಾವಣೆ ದಂಧೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 

ಡಿಕೆಶಿ ಸಿಬಿಐ ಕೇಸ್ ವಾಪಸಿನ ನಿರ್ಧಾರಕ್ಕೆ ಛೀಮಾರಿ ಬೀಳಲಿದೆ: ಎಚ್‌.ಡಿ.ಕುಮಾರಸ್ವಾಮಿ

ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿದರೆ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಅವರ ಹಣೆಬರಹ ಏನೆಂಬುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಎಂಟು ವರ್ಷಗಳ ಹಿಂದೆ ಜಾತಿ ಜನಗಣತಿ ವರದಿ ಯಾವಾಗ ಬಿಡುಗಡೆ ಮಾಡ್ತೀರಿ ಅಂತ ಸಿದ್ದರಾಮಯ್ಯ ಅವರನ್ನು ಕೇಳಿದ್ದೆ. ಎಲ್ಲ ಸಿದ್ಧವಿದೆ, ಬೈಂಡ್ ಮಾಡಿಸ್ತಿದೀವಿ ಎಂದಿದ್ದರು. ಈಗ ಮೂಲ ಪ್ರತಿ ಕಳೆದಿದೆ ಅಂತ ಕೆಲವರು ಹೇಳುತ್ತಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್‌ ಎನಿಸಿಕೊಳ್ಳಲು ಸಿದ್ದರಾಮಯ್ಯ ಜಾತಿ ಜನಗಣತಿ ಮಾಡಿಸಲು ₹163 ಕೋಟಿ ಹಾಳು ಮಾಡಿದರು. ಜಾತಿ–ಜಾತಿಗಳ ಮಧ್ಯೆ ಕಾಂಗ್ರೆಸ್‌ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

Follow Us:
Download App:
  • android
  • ios