ಡಿಕೆಶಿ ಸಿಬಿಐ ಕೇಸ್ ವಾಪಸಿನ ನಿರ್ಧಾರಕ್ಕೆ ಛೀಮಾರಿ ಬೀಳಲಿದೆ: ಎಚ್.ಡಿ.ಕುಮಾರಸ್ವಾಮಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣ ಸಿಬಿಐ ತನಿಖೆ ನಡೆಸುತ್ತಿರುವಂತಹ ಸೂಕ್ಷ್ಮ ವಿಚಾರ ಸುಪ್ರಿಂ ಕೋರ್ಟಿನಲ್ಲಿರುವಾಗ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಆ ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರ ಮಾಡಿರುವುದು ತಪ್ಪು.
ರಾಮನಗರ (ನ.25): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣ ಸಿಬಿಐ ತನಿಖೆ ನಡೆಸುತ್ತಿರುವಂತಹ ಸೂಕ್ಷ್ಮ ವಿಚಾರ ಸುಪ್ರಿಂ ಕೋರ್ಟಿನಲ್ಲಿರುವಾಗ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಆ ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರ ಮಾಡಿರುವುದು ತಪ್ಪು. ಇದಕ್ಕೆ ಛೀಮಾರಿ ಬೀಳಬಹುದು. ಮುಂದಿನ ಅಧಿವೇಶನದಲ್ಲಿ ಈ ವಿಷಯವಾಗಿ ಚರ್ಚೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಕೀಲರಾಗಿ ಮಾತ್ರವಲ್ಲ ವಕೀಲ ವೃತ್ತಿಯ ಉಪನ್ಯಾಸಕರಾಗಿಯೂ ಕೆಲಸ ಮಾಡಿದವರು. ಅವರ ನೇತೃತ್ವದ ಸಂಪುಟ ಸಭೆಯಲ್ಲಿ ಇಂತಹ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ ಎಂದರು.
ಈ ರೀತಿಯ ಪ್ರಕರಣಗಳಲ್ಲಿ ಸುಪ್ರಿಂ ಕೋರ್ಟ್ ತೀರ್ಪುಗಳು ನಮ್ಮ ಕಣ್ಣ ಮುಂದಿವೆ. ಡಿ.ಕೆ.ಶಿವಕುಮಾರ್ ಪ್ರಕರಣದ ವಿಷಯವಾಗಿ ಹೈಕೋರ್ಟಿನಲ್ಲಿ ಚರ್ಚೆಗಳಾಗಿವೆ. ಎರಡು ಬಾರಿ ಮನವಿ ಸಲ್ಲಿಸಿದರು ಅರ್ಜಿ ವಜಾ ಆಗಿಲ್ಲ. ಇಂತಹ ಸೂಕ್ಷ್ಮ ವಿಚಾರ ನ್ಯಾಯಾಲಯದ ಮುಂದೆ ಇದ್ದಾಗ ಏಕಾಏಕಿ ಪ್ರಕರಣ ಹಿಂಪಡೆಯುವ ರಾಜ್ಯಸರ್ಕಾರದ ನಿರ್ಧಾರ ತಪ್ಪು. ಕಾನೂನನ್ನು ಧಿಕ್ಕರಿಸಿ, ಕಾನೂನಿಗಿಂತ ನಾವೇ ದೊಡ್ಡವರು ಎಂಬುದನ್ನು ಪ್ರದರ್ಶನ ಮಾಡಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ಬಡವರಿಗೆ ರಕ್ಷಣೆ ಇಲ್ಲ. ಲೂಟಿ ಮಾಡುವವರಿಗೆ ಮತ್ತು ಕೊಳ್ಳೆ ಹೊಡೆಯುವವರಿಗೆ ನಮ್ಮ ಸರ್ಕಾರ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಕಿಡಿಕಾರಿದರು.
ಡಿಕೆಶಿ ಸಿಬಿಐ ಕೇಸ್ ವಾಪಸ್, ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ?: ಎಚ್‌ಡಿಕೆ
ಪಾಪ ನಿನ್ನೆ ದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ತಮ್ಮ ಪ್ರಕರಣದ ವಿಚಾರ ಚರ್ಚೆ ಆಗುತ್ತದೆ ಎಂಬ ಕಾರಣಕ್ಕೆ ಸಚಿವ ಸಂಪುಟ ಸಭೆಗೂ ಹೋಗಿಲ್ಲ. ಅಂತಹ ದೊಡ್ಡತನ ತೋರಿಸಿದ್ದಾರೆ. ಅವರ ಸಹಕಾರಕ್ಕೆ ಅಭಿನಂದಿಸಲೇ ಬೇಕು ಎಂದು ವ್ಯಂಗ್ಯವಾಡಿದರು. ಕಳೆದ 3 ದಿನಗಳ ಹಿಂದೆಯೇ ಸೀನಿಯರ್ ಅಡ್ವೋಕೇಟ್ ಗಳ ಸಭೆ ಮಾಡಿ ಈ ಪ್ರಕರಣದಿಂದ ಯಾವ ರೀತಿ ರಕ್ಷಣೆ ಪಡೆಯಬೇಕು ಅಂತ ಚರ್ಚೆ ಮಾಡಿದ್ದಾರೆ. ಮೊನ್ನೆಯೇ ಈ ವಿಚಾರ ಗಮನಕ್ಕೆ ಬಂದಿತು. ನಮಗೂ ಎಲ್ಲಾ ಮಾಹಿತಿ ಇದೆ. ಸರ್ಕಾರದ ನಿನ್ನೆಯ ತೀರ್ಮಾನದ ಬಗ್ಗೆ ರಾಜ್ಯಮಟ್ಟ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿಯೂ ಚರ್ಚೆಗಳು ಆಗುತ್ತವೆ. ಈ ವಿಚಾರಗಳನ್ನು ಮುಂದಿನ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಸರ್ಕಾರದ ಮೇಲೆ ಡಿ.ಕೆ.ಶಿವಕುಮಾರ್ ಒತ್ತಡ ಹಾಕಿದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಇಲ್ಲಿ ಒತ್ತಡದ ಪ್ರಶ್ನೆ ಅಲ್ಲ. ಸರ್ಕಾರ ಇರುವುದು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಲು. ಅಲ್ಲಿರುವ ತಿಳಿವಳಿಕೆ ಇರುವವರೇ ಇಂತಹ ನಿರ್ಣಯ ಮಾಡಿರುವುದರಿಂದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಛೀಮಾರಿ ಬರಬಹುದು ಎಂಬುದನ್ನು ಕಾದು ನೋಡಿ ಎಂದರು. ಒಂದು ಬಾರಿ ಆದೇಶ ಮಾಡಿದ ಮೇಲೆ ಅದನ್ನು ಬದಲಾವಣೆ ಮಾಡಲು ಆಗಲ್ಲ. ಸಿಬಿಐಬಿಂದ ವಾಪಸ್ ತಗೆದು ಲೋಕಾಯುಕ್ತ ಅಥವಾ ಸ್ಥಳೀಯ ಪೊಲೀಸರಿಂದ ಇದನ್ನು ತನಿಖೆ ಮಾಡಿಸಲು ಆಗುತ್ತಾ. ಅವರಿಂದ ಇದನ್ನು ಮಾಡಲು ಸಾಧ್ಯವೇ?.
ಹಿಂದಿನ ಸರ್ಕಾರ ಸ್ಪೀಕರ್ ಅನುಮತಿ ಪಡೆದಿರಲಿಲ್ಲ ಎನ್ನುವುದಾದರೆ, ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ರದ್ದು ಪಡಿಸುವ ತೀರ್ಮಾನದ ಬಗ್ಗೆ ಸ್ಪೀಕರ್ ನಿಂದ ಅನುಮತಿ ಪಡೆದಿದ್ದಾರಾ ಎಂದು ಪ್ರಶ್ನಿಸಿದರು. ಈಗಾಗಲೇ ಸುಪ್ರಿಂ ಕೋರ್ಟಿನಲ್ಲಿ ಪ್ರಕರಣದ ತನಿಖೆ ಮುಂದುವರೆಸುವಂತೆ ಆದೇಶವಾಗಿದೆ. ಹೀಗಿದ್ದರೂ ಸ್ಪೀಕರ್ ಅನುಮತಿ ಪಡೆದು ಲೋಕಾಯುಕ್ತ ತನಿಕೆಗೆ ವಹಿಸುತ್ತೀರಾ. ಸ್ಪೀಕರ್ ಅನುಮತಿ ಪಡೆದರು ಪ್ರಕರಣ ಹಿಂಪಡೆಯಲು ಆಗುತ್ತಾ. ಇವೆಲ್ಲ ಕೇವಲ ಸಬೂಬುಗಳು ಎಂದು ಹೇಳಿದರು.
ಮಂಡ್ಯದಿಂದ ಎಂಪಿಗೆ ಸ್ಪರ್ಧಿಸಲು ಎಚ್‌ಡಿಕೆ, ನಿಖಿಲ್‌ಗೆ ಆಹ್ವಾನ: ಸಿ.ಎಸ್.ಪುಟ್ಟರಾಜು
ಇದೇ ಸಿದ್ದರಾಮಯ್ಯರವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಲೋಕಾಯುಕ್ತ ರದ್ದು ಮಾಡಿ, ಆಗಿನ ಸರ್ಕಾರದ ಹಲವಾರು ಅಕ್ರಮ ಮುಚ್ಚಿಹಾಕಿದ್ದರು. ಇಂತಹ ವಿಚಾರಗಳಲ್ಲಿ ಸಿದ್ದರಾಮಯ್ಯ ನಿಪುಣರು ಮತ್ತು ಅನುಭವಸ್ಥರು. ಹಾಗಾಗಿ ಕಾನೂನು ವ್ಯವಸ್ಥೆಯಲ್ಲಿ ಹೊಸ ಹೆಜ್ಜೆ ಹಾಕಲು ಹೊರಟಿದ್ದಾರೆ ಎಂದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಮತ್ತೆ ಸ್ಪರ್ಧಿಸುತ್ತಾರ ಎಂಬ ಪ್ರಶ್ನೆಗೆ ಈಗೇಕೆ ಅವನ ವಿಷಯ. ಅವನ ಪಾಡಿಗೆ ಅವನು ಎಲ್ಲೋ ಇದ್ದಾನೆ. ಅವನನ್ನು ಏಕೆ ಈ ವಿಚಾರದಲ್ಲಿ ಎಳೆಯುತ್ತೀರಾ ಎಂದಷ್ಟೇ ಕುಮಾರಸ್ವಾಮಿ ಉತ್ತರಿಸಿದರು.