ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ ಕಾರ್ಯಕರ್ತರು ಕೈಜೋಡಿಸಿ, ಔರಾದ್‌ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕರೆ 

ಔರಾದ್‌(ಫೆ.05): ರೈತರ ಆದಾಯ ದುಪ್ಪಟ್ಟು ಮಾಡಿಸುತ್ತೆನೆಂದು ಹೇಳುತ್ತಿದ್ದ ಮೋದಿ, ಅವರದ್ದೆ ರಾಜ್ಯದ ಬಿಜೆಪಿ ಸರ್ಕಾರ ರೈತರ ಸಾಲ ದುಪ್ಪಟ್ಟು ಮಾಡಿ ಸಾಧನೆ ಮೆರೆದಿದೆ ಎಂದು ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗವಾಡಿದರು. ಪಟ್ಟಣದ ಮಿನಿವಿಧಾನಸೌಧ ಎದುರಿಗೆ ಶನಿವಾರ ಕಾಂಗ್ರೆಸ್‌ ಆಯೋಜಿಸಿರುವ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಪದೆಪದೆ ರೈತರ ಆದಾಯ ದ್ವಿಗುಣ ಮಾಡಲಾಗುತ್ತದೆ ಎಂಬ ಹುಸಿ ಭರವಸೆಯಿಂದ ರೈತ ಸಮುದಾಯ ಬೇಸತ್ತಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಗಾಳಿ ಬೀಸುತ್ತಿದೆ. ಯುವಕರಲ್ಲಿ ಮಹಿಳೆಯರಲ್ಲಿ ಕಾಂಗ್ರೆಸ್‌ ಪರವಾಗಿ ಹೆಚ್ಚಿನ ಹುರುಪು ಉತ್ಸಾಹ ಕಂಡು ಬರುತ್ತಿದೆ. ಬೀದರ್‌ ಜಿಲ್ಲೆಯಾದ್ಯಂತ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ನುಡಿದರು.
ತಾಲೂಕಿನ ರಸ್ತೆಗಳು ಅಭಿವೃದ್ಧಿ ಮಾಡಲು ಸಾಧ್ಯವಾಗದ ವ್ಯಕ್ತಿಗಳು ಶಾಸಕನಾಗಲು ಲಾಯಕ್ಕಾ ನಾಲಾಯಕ್ಕಾ ನೀವೆ ಯೋಚಿಸಿ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

'ವೇಸ್ಟ್ ಫೆಲ್ಲೊ, ನಾನ್ ಸೆನ್ಸ್' ಎಂದು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ

ಒಗ್ಗಟ್ಟಿನಿಂದ ಮಾತ್ರ ಕಾಂಗ್ರೆಸ್‌ಗೆ ಹಿತ:

ಔರಾದ್‌ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಟ್ಟು 27 ಜನ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಟಿಕೇಟ್‌ ನೀಡು ಸಾಧ್ಯವಿಲ್ಲ. ಪಕ್ಷದಿಂದ ಯಾರಿಗೆ ಟಿಕೇಟ್‌ ನೀಡಿದರೂ ಉಳಿದ 26 ಆಕಾಂಕ್ಷಿಗಳು ಒಗ್ಗಟ್ಟಿನಿಂದ ಪ್ರಭು ಚವ್ಹಾಣ ಸೋಲಿಸಲು ಕೆಲಸ ಮಾಡಬೇಕಿದೆ ಎಂದು ವೇದಿಕೆ ಮೇಲೆ ಕುಳಿತಿರುವ ಆಕಾಂಕ್ಷಿಗಳಿಗೆ ಹೇಳಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ಆಶಿರ್ವಾದ ಪಡೆದು ಸರ್ಕಾರ ರಚಿಸಲಿಲ್ಲ, ಬದಲಿಗೆ ಆಪರೇಶನ್‌ ಕಮಲ ಎಂಬ ಅನೈತಿಕ ದಾರಿ ಬಳಸಿಕೊಂಡು ರಚಿಸಿದೆ ಇದು ಪ್ರಜಾಪ್ರಭುತ್ವಕ್ಕೆ ಬಿಜೆಪಿ ಸರ್ಕಾರ ಮಾಡಿರುವ ದ್ರೋಹ ಎಂದರು.

ಕಾಂಗ್ರೆಸ್‌ ಕೊಟ್ಟ ಮಾತಿಗೆ ನಡೆಯುವ ಪಕ್ಷವಾಗಿದೆ. ಕಳೆದ ತನ್ನ ಅವಧಿಯಲ್ಲಿ 165 ಭರವಸೆಗಳ ಪೈಕಿ 158 ಭರವಸೆಗಳು ಈಡೇರಿಸಿ 30 ಹೊಸ ಕಾರ್ಯಕ್ರಮ ಜನಕಲ್ಯಾಣಕ್ಕಾಗಿ ನೀಡಿದ್ದೇನೆ. ಬಿಜೆಪಿ 2018ರಲ್ಲಿ 600 ಭರವಸೆಗಳು ನೀಡಿ 50-60 ಭರವಸೆಗಳು ಈಡೆರಿಸದೇ ಒದ್ದಾಡುತ್ತಿದೆ ಇದಕ್ಕೆ ಕಾರಣ ಭ್ರಷ್ಟಾಚಾರವಾಗಿದೆ.

ಹೋಟೆಲ್‌ನಿಂದ ಆಡಳಿತ ನಡೆಸೋರಿಗೆ ಅಧಿಕಾರ ಬೇಡ: ಎಚ್‌ಡಿಕೆಗೆ ಟಾಂಗ್‌ ಕೊಟ್ಟ ಸಿದ್ದು

ಬರಿ ಸುಳ್ಳು ಆಶ್ವಾಸನೆ ನೀಡುತ್ತ ಮಾನ ಮರ್ಯಾದೆ ಇಲ್ಲದ ಏಕೈಕ ಪಕ್ಷ ಬಿಜೆಪಿಯಾಗಿದೆ. ತನ್ನ ಅವಧಿಯಲ್ಲಿ 15ಲಕ್ಷ ಮನೆಗಳು ಬಡವರಿಗೆ ನಿರಾಶ್ರಿತರಿಗೆ ನಾವು ನೀಡಿದ್ದು, ಬಿಜೆಪಿ ಒಂದೇ ಒಂದು ಮನೆ ನೀಡಲಾಗುತ್ತಿಲ್ಲ. 2014ರಲ್ಲಿ ಕೇವಲ 6 ತಿಂಗಳಲ್ಲಿಯೇ ಕಪ್ಪು ಹಣ ತರುವೆನೆಂದು ಹೇಳಿರುವ ಮೋದಿ ಇಂದಿಗೂ ಅದರ ಬಗ್ಗೆ ಮಾತನಾಡದೇ ಮೌನವಾಗಿದ್ದು, ಯುವಕರಿಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಯುವ ಸಮೂಹದ ಕಣ್ಣಲ್ಲಿ ಸುಳ್ಳು ಹೇಳುವ ಪ್ರಧಾನಿ ಎನಿಸಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಈಶ್ವರ ಖಂಡ್ರೆ ಮಾತನಾಡಿದರು. ಮಾಜಿ ಸಚಿವ ಎಂ.ಬಿ ಪಾಟೀಲ್‌, ಬಸವರಾಜ ರಾಯರೆಡ್ಡಿ, ಜಮೀರ ಅಹ್ಮದ್‌, ಹರಿಪ್ರಸಾದ್‌, ಅರವಿಂದಕುಮಾರ ಅರಳಿ ಸೇರಿದಂತೆ ಸ್ಥಳಿಯ ಆಕಾಂಕ್ಷಿ ಅಭ್ಯರ್ಥಿಗಳಾದ ಭೀಮಸೇನ್‌ ಸಿಂಧೆ, ಡಾ. ಲಕ್ಷ್ಮಣ ಸೊರಳ್ಳಿಕರ್‌, ಸುಧಾಕರ್‌ ಕೊಳ್ಳುರ್‌, ಸಿದ್ಧಾರ್ಥ ರಾಠೋಡ್‌, ಗೋಪಿಕೃಷ್ಣ, ಮೀನಾಕ್ಷಿ ಸಂಗ್ರಾಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ ಸೇರಿದಂತೆ ಇನ್ನಿತರರಿದ್ದರು.