ರಾಜ್ಯ ಉಳಿಯಬೇಕಾದರೆ ಈ ಬಾರಿ ಬಿಜೆಪಿ ಸೋಲಿಸಿ: ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷದಲ್ಲಿ ಲೂಟಿ ಹೊಡೆದದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಜ್ಯ ಉಳಿಯಬೇಕಾದರೆ ಈ ಬಾರಿ ಬಿಜೆಪಿ ಸೋಲಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿರೇಕೆರೂರು (ಮಾ.16): ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷದಲ್ಲಿ ಲೂಟಿ ಹೊಡೆದದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಜ್ಯ ಉಳಿಯಬೇಕಾದರೆ ಈ ಬಾರಿ ಬಿಜೆಪಿ ಸೋಲಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು. ಪ್ರಣಾಳಿಕೆಯಲ್ಲಿ ಇನ್ನೂ 2 ಗ್ಯಾರಂಟಿ ಕೊಡುತ್ತೇವೆ. ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷ. ನಾವು ಬಿಜೆಪಿ ರೀತಿ ಸುಳ್ಳು ಹೇಳಲ್ಲ. 2013ರ ಚುನಾವಣೆಯಲ್ಲಿ 165 ಭರವಸೆಗಳಲ್ಲಿ 158 ಕಾರ್ಯಕ್ರಮ ಅನುಷ್ಠಾನ ಮಾಡಿದ್ದು, ಇನ್ನೂ 30 ಹೊಸ ಕಾರ್ಯಕ್ರಮ ನೀಡಿದ್ದೇವೆ. ಬಿಜೆಪಿ ಕೊಟ್ಟಭರವಸೆ ಈಡೇರಿಸದೆ ವಚನ ಭ್ರಷ್ಟವಾಗಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಲ್ಲಿ ಬರೀ ಲೂಟಿ ಹೊಡೆಯುವ ಕೆಲಸ ಮಾಡಿದೆ. ಅವರನ್ನು ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು ಎಂದು ಕರೆಯುತ್ತೇನೆ. ಆ ಕಳ್ಳರಲ್ಲಿ ಬಿ.ಸಿ. ಪಾಟೀಲ ಕೂಡ ಒಬ್ಬ. ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲೋಕಾಯುಕ್ತ ದಾಳಿ ಮಾಡಿದಾಗ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಹಾಕಿಕೊಂಡ. ಅವರ ಮನೆಯಲ್ಲಿ . 8 ಕೋಟಿ ಸಿಕ್ಕಿದೆ. ಒಬ್ಬ ಸಚಿವ ಬಿ.ಸಿ. ಪಾಟೀಲ ಮನೆ ಮೇಲೆ ರೈಡ್ ಮಾಡಿದರೆ ಎಷ್ಟುಕೋಟಿ ಸಿಗಬಹುದು? ಕನಿಷ್ಠ . 1 ಸಾವಿರ ಕೋಟಿ ಸಿಗಬಹುದು. ರೈತರ ಹೆಸರು ಹೇಳಿ ಲೂಟಿ ಹೊಡೆಯೋದೇ ಅವರ ಕೆಲಸ. ಇಂಥವನನ್ನು ನೀವು ಸೋಲಿಸದಿದ್ದರೆ ರಾಜ್ಯ ಮತ್ತು ಹಿರೇಕೆರೂರು ಉಳಿಯಲ್ಲ. ಬಸವರಾಜ ಬೊಮ್ಮಾಯಿ ಮಾತೆತ್ತಿದರೆ ದಾಖಲಾತಿ ಕೊಡಿ ಅಂತಾರೆ. ಅವರದೇ ಪಕ್ಷದ ಶಾಸಕ ರೆಡ್ ಹ್ಯಾಂಡ್ ಆಗಿ ಸಿಕ್ಕ ಮೇಲೂ ಇವರಿಗೆ ದಾಖಲೆ ಬೇಕಾ? ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಗೆ ಅಧಿಕಾರ ಖಚಿತ, ಸಿದ್ದರಾಮಯ್ಯ ಹರಕೆಯ ಕುರಿ: ಸಚಿವ ಶ್ರೀರಾಮುಲು
ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ 5 ಲಕ್ಷ ಮನೆ ಕೊಟ್ಟಿದ್ದೆ. ಬಿಜೆಪಿ ಸರ್ಕಾರ ಒಂದೇ ಒಂದು ಸೂರು ಕೊಟ್ಟಿಲ್ಲ. ಬಡವರಿಗೆ ಸೂರು ಕೊಡಲಾಗದವರು ಅಧಿಕಾರದಲ್ಲಿ ಏಕೆ ಇರಬೇಕು. ಅಭಿವೃದ್ಧಿ ಕೆಲಸ ಮಾಡದೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಬಡವರಿಗೆ ಉಚಿತವಾಗಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಇವರು ಅಧಿಕಾರಕ್ಕೆ ಬಂದ ತಕ್ಷಣ 5 ಕೆಜಿಗೆ ಇಳಿಸಿದರು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ಎಲ್ಲ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಉಚಿತವಾಗಿ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು.
ಬಿಸಿಪಿ ವಿರುದ್ಧ ವಾಗ್ದಾಳಿ: ನಮ್ಮೊಂದಿಗೇ ಇದ್ದ ಬಿ.ಸಿ. ಪಾಟೀಲ ಗೆದ್ದು ಮಾರಾಟವಾದರು. 2018ರ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಬರದಿದ್ದರೆ ಬಿ.ಸಿ. ಪಾಟೀಲ್ ಸೋಲುತ್ತಿದ್ದರು. ನಂತರ ಆಪರೇಷನ್ ಕಮಲದಲ್ಲಿ . 25 ಕೋಟಿ ಕೊಟ್ಟು ಬಿಜೆಪಿಯವರು ಖರೀದಿಸಿದರು. ಬೈ ಎಲೆಕ್ಷನ್‌ನಲ್ಲಿ . 40 ಕೋಟಿ ಖರ್ಚು ಮಾಡಿದರು. ಲೂಟಿ ಹೊಡೆದ ಹಣ ಇತ್ತು. ಹೀಗಾಗಿ ಉಪಚುನಾವಣೆಯಲ್ಲಿ ಖರ್ಚು ಮಾಡಿದರು. ಕೃಷಿ ಮಂತ್ರಿಯಾಗಿ ದುಡ್ಡು ಹೊಡೆದು ದೊಡ್ಡವನಾದನೆ ಹೊರತು ಹಿರೇಕೆರೂರು ಅಭಿವೃದ್ಧಿಗೆ ಏನೂ ಮಾಡಲಿಲ್ಲ. ನಾನು ಸಿಎಂ ಆಗಿದ್ದಾಗ ರಟ್ಟೀಹಳ್ಳಿ ತಾಲೂಕು, ಗುಡ್ಡದ ಮಾದಾಪುರ, ಹಿರೇಕೆರೂರು ಏತ ನೀರಾವರಿ ಯೋಜನೆ ಮಾಡಿ ಕೊಟ್ಟಿದ್ದೇನೆ. ಈಗ ತಾನೇ ಮಾಡಿದ್ದು ಎಂದು ಬಿಸಿಪಿ ಹೇಳಿಕೊಂಡು ಓಡಾಡುತ್ತಾರೆ ಎಂದು ಟೀಕಿಸಿದರು.
ಹಿರೇಕೆರೂರಿನಲ್ಲಿ ಐದಾರು ಮಂದಿ ಟಿಕೆಟ್ ಕೇಳುತ್ತಿದ್ದಾರೆ. ಯಾರು ಗೆಲ್ಲುತ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ. ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಯಾರಿಗೆ ಟಿಕೆಟ್ ಸಿಕ್ಕರೂ ಉಳಿದ ಆಕಾಂಕ್ಷಿಗಳು ಜತೆಗೆ ನಿಂತು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ಈ ಪ್ರಜಾಧ್ವನಿ ವಿಜಯಧ್ವನಿಯಾಗಿ ಮೊಳಗಲು ನಿಮ್ಮ ಆಶೀರ್ವಾದ ಬೇಕು. ಈ ಯುದ್ಧದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವವರರೆಗೆ ನಿಲ್ಲಬಾರದು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ ಬಿ.ಸಿ. ಪಾಟೀಲ್ ಹಿರೇಕೆರೂರು ಕ್ಷೇತ್ರಕ್ಕೆ ಕಪ್ಪು ಚುಕ್ಕೆ ತಂದಿಟ್ಟರು. ಬಿ.ಸಿ. ಪಾಟೀಲ ಮುಕ್ತ ತಾಲೂಕು ಮಾಡಲು ಪಣ ತೊಡಬೇಕು. ಯಾವುದೇ ಆಮಿಷಕ್ಕೆ ಬಲಿಯಾಗದೆ ಜನರ ಸಮಸ್ಯೆಗೆ ಸ್ಪಂದಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಎಂದರು.
ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಚುನಾವಣೆಯಲ್ಲಿ ಅಲ್ಪಸಂಖ್ಯಾತ ಬಾಂಧವರು ಜೆಡಿಎಸ್ ಬೆಂಬಲಿಸಿದರೆ ಅದು ಬಿಜೆಪಿಗೆ ಹಾಕಿದಂತೆ. ಪಕ್ಷಕ್ಕೆ ಮೋಸ ಮಾಡಿದವರಿಗೆ ತಕ್ಕ ಸಂದೇಶ ನೀಡಲು ಕಾಂಗ್ರೆಸ್ ಅಭ್ಯರ್ಥಿಯನ್ನು 25 ಸಾವಿರ ಮತಗಳಿಂದ ಗೆಲ್ಲಿಸಬೇಕು. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ಪಕ್ಷದ ತತ್ವ, ಸಿದ್ಧಾಂತ ಹಾಗೂ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಭ್ರಷ್ಟಾಚಾರದಲ್ಲಿ ಉದಯವಾದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿ ಎದ್ದಿದ್ದು, 150 ಸ್ಥಾನ ಗೆಲ್ಲಲಿದೆ ಎಂದು ಹೇಳಿದರು.
ಸಿದ್ದರಾಮಯ್ಯರಿಂದ ಬುರುಡೆ ಬಿಡುವ ಕೆಲಸ: ಸಿ.ಟಿ.ರವಿ ಆರೋಪ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಸೋಮಣ್ಣ ಬೇವಿನಮರದ ಮಾತನಾಡಿದರು. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಕೆ.ಬಿ. ಕೋಳಿವಾಡ, ಪ್ರಕಾಶ ರಾಥೋಡ, ರುದ್ರಪ್ಪ ಲಮಾಣಿ, ಐ.ಜಿ. ಸನದಿ, ಅಜ್ಜಂಪೀರ್ ಖಾದ್ರಿ, ಡಿ. ಬಸವರಾಜು, ಎಂ.ಎಂ. ಹಿರೇಮಠ, ಎಸ್.ಕೆ. ಕರಿಯಣ್ಣನವರ್, ಆರ್.ಎಂ. ಕುಬೇರಪ್ಪ, ಕೊಟ್ರೇಶಪ್ಪ ಬಸೇಗಣ್ಣಿ, ಅಶೋಕ ಪಾಟೀಲ, ದಿಗ್ವಿಜಯ ಹತ್ತಿ ಇದ್ದರು.