ಬಿಜೆಪಿಗೆ ಅಧಿಕಾರ ಖಚಿತ, ಸಿದ್ದರಾಮಯ್ಯ ಹರಕೆಯ ಕುರಿ: ಸಚಿವ ಶ್ರೀರಾಮುಲು
ನಿಮ್ಮೆಲ್ಲರ ಆಶೀರ್ವಾದದಿಂದ ಕಳೆದ 2018ರಲ್ಲಿ ನಾನು ಸೋತಿರಬಹುದು. ಸೋತು ನಿಮ್ಮೆಲ್ಲರ ಮನಸ್ಸು ಗೆದ್ದಿದ್ದೇನೆ. ಈ ಬಾರಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಪೂರ್ಣ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಹರಕೆಯ ಕುರಿಯಾಗಲಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಾದಾಮಿ (ಮಾ.12): ನಿಮ್ಮೆಲ್ಲರ ಆಶೀರ್ವಾದದಿಂದ ಕಳೆದ 2018ರಲ್ಲಿ ನಾನು ಸೋತಿರಬಹುದು. ಸೋತು ನಿಮ್ಮೆಲ್ಲರ ಮನಸ್ಸು ಗೆದ್ದಿದ್ದೇನೆ. ಈ ಬಾರಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಬಿಜೆಪಿ ಪೂರ್ಣ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಹರಕೆಯ ಕುರಿಯಾಗಲಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಅವರು ಶನಿವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಎಸ್.ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ.
ಈ ಬಾರಿಗೆ ಸಿದ್ದು ಹರಕೆಯ ಕುರಿಯಾಗಲಿದ್ದಾರೆ. ಬಿಜೆಪಿ ಈ ಬಾರಿ 126 ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ 2018ರಲ್ಲಿ ಸಿದ್ದರಾಮಯ್ಯ ಬಾದಾಮಿಗೆ ಸ್ಪರ್ಧೆ ಮಾಡಿದಾಗ ನನಗೆ ಎರಡು ಕ್ಷೇತ್ರದಲ್ಲಿ ಅವಕಾಶ ಕೊಟ್ಟರು. ಆದರೆ ಸ್ವಲ್ಪ ಮತಗಳ ಅಂತರದಿಂದ ಸೋತೆ. ಸ್ವಾತಂತ್ರ್ಯ ದೊರೆತು 75 ವರ್ಷಗಳ ಕಾಲ ಗತಿಸಿದರೂ ರಾಷ್ಟ್ರೀಯ ಪಕ್ಷಗಳು ಎಸ್.ಟಿ ಸಮಾಜವನ್ನು ಕೇವಲ ಮತ ಬ್ಯಾಂಕ್‌ಗಳಾಗಿ ಉಪಯೋಗ ಪಡೆದಿವೆ. ಆದರೆ ಮೀಸಲಾತಿ ನೀಡಲಿಲ್ಲ. ನಾನು ನಿಮ್ಮೆಲ್ಲರ ಮನಸ್ಸಿನಲ್ಲಿ ಸೋತು ಗೆದ್ದಂತೆ. ವಿಜಯ ಸಂಕಲ್ಪ ಯಾತ್ರೆ ಮೂಲಕ ಜನರಲ್ಲಿ ಕಾರ್ಯಕ್ರಮ ಅರಿವು ಮೂಡಿಸಲಾಗುತ್ತಿದೆ.
ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಿ: ಕಾಂಗ್ರೆಸ್‌ಗೆ ರಾಮುಲು ಸವಾಲು
ವಾಲ್ಮೀಕಿ ಸಮುದಾಯ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಬಾರದು. ವಾಲ್ಮೀಕಿ ಜಯಂತಿ, ಪ್ರಶಸ್ತಿ, ಸಮುದಾಯ ಭವನ, ಎಸ್.ಟಿ.ಕಲ್ಯಾಣ ಮಂತ್ರಾಲಯ, ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿವೆ. ಸಂವಿಧಾನದ ಮೂಲಕ ಮೀಸಲಾತಿ ಕೊಟ್ಟಿವೆ. ಯಾವುದೇ ರಾಜಕೀಯ ಪಕ್ಷಗಳು ಮೀಸಲಾತಿ ಕೊಟ್ಟಿಲ್ಲ. ನಮ್ಮ ಬಿಜೆಪಿ ಸರಕಾರ ಬಂದರೆ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದಂತೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಸಿದ್ದರಾಮಯ್ಯ ಮೀಸಲಾತಿ ಸಲುವಾಗಿ ಗೇಲಿ ಮಾಡಿದ್ದರು.
ಆದರೆ ನಾವು ಯಡಿಯೂರಪ್ಪ, ಬೊಮ್ಮಾಯಿಯವರು ಮನಸ್ಸು ಮಾಡಿ ಎಸ್.ಸಿ,ಎಸ್.ಟಿ.ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಎಸ್.ಸಿ-15 ರಿಂದ 17, ಎಸ್.ಟಿ. ಸಮುದಾಯಕ್ಕೆ 3 ರಿಂದ 7 ರ ವರೆಗೆ ಹೆಚ್ಚಳ ಮಾಡಲಾಗಿದೆ ಎಂದರು. ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಈ ಹಿಂದಿನಿಂದಲೂ ಆರ್.ಟಿ.ದೇಸಾಯಿಯವರ ಕಾಲದಿಂದ ಇಂದಿನವರೆಗೆ ಶಾಸಕ, ಸಂಸದರ ಚುನಾವಣೆಯಲ್ಲಿ ಗೆಲುವಿಗೆ ಎಸ್.ಟಿ.ಸಮುದಾಯ ಮಹತ್ತರ ಪಾತ್ರ ವಹಿಸಿದ. ಇಲ್ಲಿಯವರೆಗೆ ಪಕ್ಷದ ಗೆಲುವಿನಲ್ಲಿ ಎಸ್.ಟಿ.ಸಮಾಜದ ಕೊಡುಗೆ ಅಪಾರ. ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಮೋದಿಜಿ ಕಾರಣ.
ನಮ್ಮ ಜನರ ಸಂಕಷ್ಟ, ಮಕ್ಕಳ ಭವಿಷ್ಯಕ್ಕಾಗಿ ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡುಗೆಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಲಾಭ ಸಿಗಬೇಕು. ಜನರ ಕಲ್ಯಾಣಕ್ಕೆ ಸರ್ಕಾರ ಶ್ರಮಿಸುತ್ತಿದೆ. ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ದೇಶಕ್ಕೆ ಹಿನ್ನೆಡೆಗೆ ಕಾಂಗ್ರೆಸ್ ಆಡಳಿತವೇ ಕಾರಣ. ಬಡವರ, ಅಲ್ಪಸಂಖ್ಯಾತರ ಹೆಸರು ಹೇಳಿ ಅಧಿಕಾರ ಅನುಭವಿಸಿದ್ದಾರೆ. ಭ್ರಷ್ಟಾಚಾರದ ಕೂಪ ಕಾಂಗ್ರೆಸ್ ಎಂದರು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿಮಾತನಾಡಿ, ಪ್ರವಾಹ ಬಂದಾಗ ಎಲ್ಲ ಬಿಜೆಪಿ ನಾಯಕರು ಜನರ ಸಮಸ್ಯೆ ಆಲಿಸಿದ್ದಾರೆ. ಕುಮಾರಸ್ವಾಮಿ ಎರಡು ವರ್ಷ ಸಿಎಂ ಆಗಿದ್ದಾಗ ಒಂದು ಮನೆ ಕೊಟ್ಟಿಲ್ಲ. ಈಚೆಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ಗೇಲಿ ಮಾಡಿದರು.
ರಾಜ್ಯ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪೂರ ಮಾತನಾಡಿ, ಕಳೆದ ಚುನಾವಣೆಯಲ್ಲಿ ರಾಮುಲು ಕಡಿಮೆ ಅಂತರದಿಂದ ಸೋತರು. ರಾಮುಲು ಗೆದ್ದರೆ ಬಿಜೆಪಿ ಸ್ವಂತ ಸರ್ಕಾರ ಬರುತ್ತಿತ್ತು. ರಾಮುಲು ಅವರಿಂದ 10-15 ಸ್ಥಾನ ಬಿಜೆಪಿ ಗೆಲುವು ಆಗಿದೆ. ಜನರ ಪ್ರೀತಿಗಾಗಿ ಬಂದವರು ರಾಮುಲು. ಈ ಬಾರಿ ಸೋಲಿನ ಭಯದಿಂದ ಸಿದ್ದರಾಮಯ್ಯ ಬಾದಾಮಿಗೆ ಬರುತ್ತಿಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಲವಾರು ಮುಖಂಡರು ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡುವ ಮೂಲಕ ಸಚಿವ ರಾಮುಲು ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ಯಾತ್ರೆಗೆ ಭಾರಿ ಬೆಂಬಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಸಮಾವೇಶದ ವೇದಿಕೆಯಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತರ, ಮುಖಂಡರಾದ ಬಿ.ಪಿ.ಹಳ್ಳೂರ, ಎಸ್.ಎಸ್.ಮಿಟ್ಟಲಕೋಡ, ಉಮೇಶ ಹಕ್ಕಿ, ಸಿದ್ದಣ್ಣ ಶಿವನಗುತ್ತಿ, ಶಿವನಗೌಡ ಸುಂಕದ, ಅಶೋಕ ಲಿಂಬಾವಳಿ, ಬಸವರಾಜ ಯಂಕಂಚಿ, ಕುಮಾರಗೌಡ ಜನಾಲಿ, ಬಸವರಾಜ ಭೂತಾಳಿ, ಪವಿತ್ರ ತುಕ್ಕನ್ನವರ, ಮುತ್ತು ಉಳಾಗಡ್ಡಿ, ಭೀಮನಗೌಡ ಪಾಟೀಲ, ಕೆ.ಡಿ.ಜ್ಯೋತಿ, ಪ್ರಕಾಶ ಕಾಳೆ, ಚಂದ್ರಶೇಖರ ಹಿರೇಮಠ, ಪರಸಪ್ಪ ನಾಯ್ಕರ, ಹನಮಂತ ಪೂಜಾರ ಸೇರಿದಂತೆ ಎಲ್ಲ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು. ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಕಲಾದಗಿ ಸ್ವಾಗತಿಸಿದರು. ಪಾಂಡು ಗಿರಿಯನ್ನವರ ಕಾರ್ಯಕ್ರಮವನ್ನು ನಿರೂಪಿಸಿದರು.