ದುಡ್ಡಿರುವ ಒಬ್ಬನು ಬೇಕು ಎಂದು ಸೋಮಣ್ಣನನ್ನು ಇಲ್ಲಿಗೆ ತಂದು ಹಾಕಲಾಗಿದೆ. ಸೋಮಣ್ಣ ಹೊರ ಜಿಲ್ಲೆಯವನು. ಸೋಮಣ್ಣನಿಗೆ ವರುಣ ಕ್ಷೇತ್ರದ ಬಗ್ಗೆ ಏನು ಗೊತ್ತಿದೆ. ರಾಮನಗರದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ರಾಜಕೀಯ ಮಾಡಿದವನು ಸೋಮಣ್ಣ. ಸೋಮಣ್ಣಗು, ವರುಣಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ 

ಮೈಸೂರು(ಏ.19): ಸೋಮಣ್ಣನನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ವರುಣದಿಂದ ಸೋಮಣ್ಣ ಸ್ಪರ್ಧೆಗೆ ಬಿ.ಎಲ್‌.ಸಂತೋಷ್‌ ಒತ್ತಡವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ದುಡ್ಡಿರುವ ಒಬ್ಬನು ಬೇಕು ಎಂದು ಸೋಮಣ್ಣನನ್ನು ಇಲ್ಲಿಗೆ ತಂದು ಹಾಕಲಾಗಿದೆ. ಸೋಮಣ್ಣ ಹೊರ ಜಿಲ್ಲೆಯವನು. ಸೋಮಣ್ಣನಿಗೆ ವರುಣ ಕ್ಷೇತ್ರದ ಬಗ್ಗೆ ಏನು ಗೊತ್ತಿದೆ. ರಾಮನಗರದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ರಾಜಕೀಯ ಮಾಡಿದವನು ಸೋಮಣ್ಣ. ಸೋಮಣ್ಣಗು, ವರುಣಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಮೈಸೂರಿನ ಅತಿ ಬಡವ ಅಭ್ಯರ್ಥಿ ಇವರೇ ನೋಡಿ: ಜೆಡಿಎಸ್ ಅಭ್ಯರ್ಥಿ ಬಳಿ ಸ್ಕೂಟರ್ ಬಿಟ್ಟರೆ ಬೇರೆನಿಲ್ಲ!

ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವರುಣಗೆ ಒಂದೇ ಒಂದು ಮನೆ ಕೊಟ್ಟಿದ್ದಾನಾ? ಈಗ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾನೆ. ನನ್ನ, ವರುಣ ಸಂಬಂಧವನ್ನು ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಗ್ಗೆ ವರುಣ ಜನಕ್ಕೆ ಅಪಾರ ಪ್ರೀತಿ, ವಿಶ್ವಾಸ ಇದೆ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನು ಬದಲಾಯಿಸಲಿ, ಏನೇ ಆದರೂ ನನ್ನ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವರುಣದಲ್ಲಿ ಬಿಜೆಪಿ, ಜೆಡಿಎಸ್‌ ಒಳಒಪ್ಪಂದ:

ವರುಣದಲ್ಲಿ ಬಿಜೆಪಿ-ಜೆಡಿಎಸ್‌ ಒಳ ಒಪ್ಪಂದಗಳ ಬಗ್ಗೆ ಎರಡು, ಮೂರು ದಿನದಲ್ಲಿ ಹೇಳುತ್ತೇನೆ. ಸೋಮಣ್ಣ ಗೋವಿಂದರಾಜನಗರದಲ್ಲಿ ಅಭಿವೃದ್ಧಿ ಮಾಡಿದ್ದರೆ ಅವನೇಕೆ ವರುಣಗೆ ಬರುತ್ತಿದ್ದ? ನಾನು ವರುಣ ಕ್ಷೇತ್ರಕ್ಕೆ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದರು.

ವರುಣವನ್ನು ತಾಲೂಕು ಮಾಡುತ್ತೇವೆ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾಲ್ಕು ವರ್ಷದ ಆಡಳಿತದಲ್ಲಿ ಯಾಕೆ ಆ ಕೆಲಸವನ್ನು ಮಾಡಲಿಲ್ಲ?. ಸಿಎಂ ಬೊಮ್ಮಾಯಿ ನಂಬರ್‌ ಒನ್‌ ಸುಳ್ಳುಗಾರ. ವರುಣ ತಾಲೂಕು ಕೇಂದ್ರ ಅಲ್ಲ ಎಂಬುದು ಸಿಎಂಗೆ ಗೊತ್ತಿಲ್ಲ ಎನ್ನುವುದಾದರೆ ಆ ತಕ್ಷಣ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಈಗ ಬಂದು ಬರಿ ಸುಳ್ಳು ಹೇಳುತ್ತಿದ್ದಾರೆ. ಇದು ಒಂದು ರೀತಿ ಅಚ್ಚೇ ದಿನ ಆಗಾಯಾ ಎಂಬ ರೀತಿಯ ಸುಳ್ಳು ಎಂದು ವಾಗ್ದಾಳಿ ನಡೆಸಿದರು.

ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ; ತಾತಗೆ ಸಾಥ್ ನೀಡಿದ ಧವನ್ ರಾಕೇಶ್!

ಬಿ.ಎಲ್‌. ಸಂತೋಷ್‌ ಕಪಿಮುಷ್ಟಿಯಲ್ಲಿ ಬಿಜೆಪಿ ಸಿಲುಕಿದೆ:

ಬಿಜೆಪಿ ಈಗ ಬಿ.ಎಲ್‌.ಸಂತೋಷ್‌ ಅವರ ಕಪಿಮುಷ್ಟಿಯಲ್ಲಿ ಸಿಲುಕಿದೆ. ಈಶ್ವರಪ್ಪಗೆ ಬಾಯಿ ಸರಿ ಇರಲಿಲ್ಲ. ಅವರಿಗೆ ಸರಿಯಾದ ಶಾಸ್ತಿ ಮಾಡಿದ್ದು ಸರಿ. ಆದರೆ, ಜಗದೀಶ್‌ ಶೆಟ್ಟರ್‌, ಸವದಿ, ರಾಮದಾಸ್‌ ಅವರು ಏನು ತಪ್ಪು ಮಾಡಿದ್ದರು? ಅವರ ಮೇಲೆ ಯಾವ ಆರೋಪಗಳೂ ಇಲ್ಲ. ಆದರೂ ಟಿಕೆಟ್‌ ತಪ್ಪಿಸಲಾಗಿದೆ. ಬಿಜೆಪಿಯ ಈ ಎಲ್ಲಾ ಬೆಳವಣಿಗೆಗೆ ಬಿ.ಎಲ್‌. ಸಂತೋಷ ಕಾರಣ. ಶೆಟ್ಟರ್‌ ಅವರು ಬಿ.ಎಲ್‌.ಸಂತೋಷ ಮೇಲೆ ಮಾಡಿರುವ ಆರೋಪಗಳು ಸರಿಯಾಗಿವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.