Asianet Suvarna News Asianet Suvarna News

ಸಿದ್ರಾಮುಲ್ಲಾಖಾನ್‌ ಅಂದರೆ ಬೇಜಾರಿಲ್ಲ: ಸಿದ್ದರಾಮಯ್ಯ

ಅನ್ನರಾಮಯ್ಯ, ರೈತರಾಮಯ್ಯ, ಕನ್ನಡರಾಮಯ್ಯ ಅಂತ ಜನ ಕರೀತಾರೆ, ಬಿಜೆಪಿಯವರಿಂದ ಮಾತ್ರ ಅಪಪ್ರಚಾರ, ಅದನ್ನು ಜನರು ನಂಬೋದಿಲ್ಲ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 

Former CM Siddaramaiah Slams BJP grg
Author
First Published Dec 8, 2022, 3:44 AM IST

ಬೆಂಗಳೂರು(ಡಿ.08):  ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಕಾರ್ಯವನ್ನು ಗುರುತಿಸಿ ಜನತೆ ನನ್ನನ್ನು ಅನ್ನರಾಮಯ್ಯ, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಬಿಜೆಪಿಯವರು ‘ಸಿದ್ರಾಮುಲ್ಲಾಖಾನ್‌’ ಎಂದು ಕರೆದರೆ ಅದಕ್ಕೆ ಬೇಸರವಿಲ್ಲ. ನಾಡಿನ ಜನತೆ ಪ್ರಜ್ಞಾವಂತರಾಗಿದ್ದು, ಅಪಪ್ರಚಾರ ನಂಬುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಇದು ಬಿಜೆಪಿಯವರ ಸೋಲು, ಹತಾಶೆ ಮತ್ತು ಅಸಹಾಯಕತೆಯನ್ನು ಸೂಚಿಸುತ್ತದೆ. ಮುಸ್ಲಿಂ ಹೆಸರು ಸೇರಿಸುವ ಬಗ್ಗೆ ನನಗೆ ಬೇಸರವಿಲ್ಲ. ಜನತೆ ಪ್ರಜ್ಞಾವಂತರಾಗಿದ್ದು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಪಪ್ರಚಾರಗಳಿಗೆ ಹೆದರಿ ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ಕೋಮುವಾದ ರಾಜಕಾರಣದ ವಿರುದ್ಧ ಹೋರಾಟವನ್ನು ನಿಲ್ಲಿಸುತ್ತೇನೆ ಎಂದು ತಿಳಿದರೆ ಅದು ಮೂರ್ಖತನ ಎಂದು ಟಾಂಗ್‌ ನೀಡಿದ್ದಾರೆ.

ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್‌ನತ್ತ?: ಖರ್ಗೆ ಬಳಿಕ ಸಿದ್ದು ಭೇಟಿ

ಮೈತುಂಬ ಕಪ್ಪು ಬಳಿದುಕೊಂಡ ದುಷ್ಟರಿಗೆ ಬಿಳಿ ಬಟ್ಟೆನೋಡಿದಾಕ್ಷಣ ಕಪ್ಪು ಬಳಿಯೋಣ ಎಂದು ಮನಸ್ಸಾಗುವುದು ಸಹಜ ಗುಣ. ಮುಸ್ಲಿಂ ಕುಟುಂಬದಲ್ಲಿ ಜನಿಸಿ, ಗೋವಿಂದ ಭಟ್ಟರ ಶಿಷ್ಯನಾಗಿ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಲೇ ಇರುವ ಸಂತ ಶಿಶುನಾಳ ಷರೀಪರ ಪರಂಪರೆ ನಮ್ಮದು. ಹಾಗೆಯೇ ಸಂತ ರಮಾನಂದರ ಶಿಷ್ಯತ್ವ ಒಪ್ಪಿಕೊಂಡು ಜಗಮೆಚ್ಚಿದ ಸೂಫಿ ಕವಿ ಕಬೀರರೂ ನಮ್ಮದೇ ಪರಂಪರೆಯವರು ಎಂದು ವ್ಯಾಖ್ಯಾನಿಸಿದ್ದಾರೆ.

ಕೋಮುವಾದದ ರಾಜಕೀಯ ಮಾಡಿಲ್ಲ:

ಬಿಜೆಪಿಯವರಂತೆ ನಾನು ಎಲ್ಲ ಮುಸ್ಲಿಂರನ್ನು ಗುರಿಯಾಗಿಟ್ಟುಕೊಂಡು ಕೋಮುವಾದದ ರಾಜಕೀಯ ಮಾಡಿಲ್ಲ. ಟಿಪ್ಪು ಸುಲ್ತಾನ್‌ ಜಯಂತಿಯನ್ನೇ ನೆಪವಾಗಿಟ್ಟುಕೊಂಡು ಕೆಲವು ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ಹುಟ್ಟುಹಾಕಿದ ವಿವಾದ ಮತ್ತು ಗಲಭೆಗಳು ರಾಜಕೀಯ ಪ್ರೇರಿತವಾದುದು ಎಂದು ರಾಜ್ಯದ ಜನರಿಗೆ ಈಗ ಮನದಟ್ಟಾಗಿದೆ. ಬಿಜೆಪಿಯ ಸಚಿವರು, ಶಾಸಕರು ವಿಭಿನ್ನ ವೇಷಧರಿಸಿ ಟಿಪ್ಪು ಜಯಂತಿ ಆಚರಿಸಿದ್ದು ಮಾತ್ರವಲ್ಲ, ಟಿಪ್ಪುವನ್ನು ಹಾಡಿ ಹೊಗಳಿದ್ದಕ್ಕೆ ಸಾಕ್ಷಿಗಳಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಜನತೆ ಪ್ರಜ್ಞಾವಂತರಾಗಿದ್ದು, ಸರಿ-ತಪ್ಪು ಅರ್ಥಮಾಡಿಕೊಳ್ಳುವ ವಿವೇಕವಂತರಾಗಿದ್ದಾರೆ. ಅಪಪ್ರಚಾರವನ್ನು ನಿಲ್ಲಿಸಬೇಕೆಂದು ನಾನು ಮನವಿ ಮಾಡುವುದಿಲ್ಲ. ಆದರೆ ಇಂತಹ ಅಪಪ್ರಚಾರಗಳಿಗೆ ಹೆದರಿ ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮತ್ತು ಕೋಮುವಾದದ ರಾಜಕಾರಣದ ವಿರುದ್ಧದ ಹೋರಾಟವನ್ನು ನಿಲ್ಲಿಸುತ್ತೇನೆ ಎಂದು ತಿಳಿದುಕೊಂಡರೆ ಅದು ಮೂರ್ಖತನ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios