ರಾಜ್ಯದ ಕೆಎಂಎಫ್‌ ಗುಜರಾತ್‌ನ ಅಮುಲ್‌ ಜೊತೆಗೂಡಬೇಕೆಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಇಂತಹ ಯತ್ನಗಳನ್ನು ಈಗಲೇ ತಡೆಯದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಮಾಡುತ್ತಾರೆ.

ಬೆಂಗಳೂರು (ಜ.01): ‘ರಾಜ್ಯದ ಕೆಎಂಎಫ್‌ ಗುಜರಾತ್‌ನ ಅಮುಲ್‌ ಜೊತೆಗೂಡಬೇಕೆಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಇಂತಹ ಯತ್ನಗಳನ್ನು ಈಗಲೇ ತಡೆಯದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಮಾಡುತ್ತಾರೆ. ಸ್ವಾಭಿಮಾನ ನಮ್ಮ ಗುರಿಯಾಗಬೇಕೋ ಅಥವಾ ಗುಜರಾತ್‌ನ ಬಂಡವಾಳಿಗರ ಗುಲಾಮರಾಗುವುದು ನಮ್ಮ ಆಯ್ಕೆಯಾಗಬೇಕೋ ತೀರ್ಮಾನಿಸಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ನಮ್ಮ ಆರ್ಥಿಕತೆಯನ್ನು ನಾಶಮಾಡಲೆತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ. ಚಿನ್ನದ ಮೊಟ್ಟೆಇಡುವ ಕೋಳಿಯ ಮೇಲೆ ಗುಜರಾತ್‌ ಕಾರ್ಪೊರೇಟ್‌ ಕುಳಗಳ ಕಣ್ಣು ಬಿದ್ದಿದೆ. ಇವರಿಗಾಗಿಯೇ ಹಗಲಿರುಳು ದುಡಿಯುತ್ತಿರುವ ಅಮಿತ್‌ ಶಾ, ಮೋದಿ ಮುಂತಾದವರೆಲ್ಲ ಥರ ಥರದ ಸುಳ್ಳುಗಳ, ಮುಳ್ಳಿನ ಟೋಪಿಯನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ತರುತ್ತಿದ್ದಾರೆ. ಈ ಬಗ್ಗೆ ಎಚ್ಚರವಹಿಸಿ’ ಎಂದಿದ್ದಾರೆ.

ಅಧಿವೇಶನ ಯಾವ ಪುರುಷಾರ್ಥಕ್ಕೆ?: ಸಿದ್ದರಾಮಯ್ಯ ಆಕ್ರೋಶ

‘ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು 20 ಸಾವಿರ ಕೋಟಿ ರುಪಾಯಿಗಳವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಈ ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೇ ಹಾಲಿನಿಂದ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ- ಬರೆ ಮುಂತಾದವುಗಳೆಲ್ಲ ಹಾಲಿನಿಂದಲೇ ಬರಬೇಕು. ಇಂತಹ ಸಂಸ್ಥೆಯನ್ನು ನುಂಗಲು ಯತ್ನಿಸುತ್ತಿರುವವರಿಗೆ ಪಾಠ ಕಲಿಸಬೇಕು’ ಎಂದು ಕರೆ ನೀಡಿದ್ದಾರೆ.

‘ಚುನಾವಣೆ ಹತ್ತಿರ ಬರುತ್ತಿದೆ. ಅಂಬಾನಿ, ಅದಾನಿಗಳ ರಾಯಭಾರಿಗಳು ಇನ್ನು ಮುಂದೆ ಕರ್ನಾಟಕಕ್ಕೆ ಬರುತ್ತಾರೆ. ಜನರಿಗೆ ಮುಳ್ಳಿನ ಟೋಪಿ ತೊಡಿಸಿ ಚಿನ್ನದ ಕಿರೀಟವೆನ್ನುತ್ತಾರೆ. ಜನರು ಜಾಗ್ರತೆ ವಹಿಸದಿದ್ದರೆ ನಾಡು ಶಾಶ್ವತವಾಗಿ ಕುಸಿದು ಹೋಗಲಿದೆ. ಕರ್ನಾಟಕದ ಯುವಕರು, ಬುದ್ಧಿವಂತರು ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಕರ್ನಾಟಕವನ್ನು ಈ ಪೀಡೆಗಳಿಂದ ಮುಕ್ತಗೊಳಿಸಬೇಕು. ನವ ಕರ್ನಾಟಕ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಬೇಕು’ ಎಂದು ಹೇಳಿದ್ದಾರೆ.

ಬಸವಪ್ರಭು ಶ್ರೀಗಳೇ ಸಿದ್ದರಾಮಯ್ಯರನ್ನು ಸಿಎಂ ಮಾಡಲಿ: ಕೆ.ಎಸ್‌.ಈಶ್ವರಪ್ಪ

ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು: ‘ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು. ನಾವು ಗಾಂಧೀಜಿಯನ್ನು ಕಳೆದುಕೊಂಡೆವು. ಬಸವಣ್ಣನವರನ್ನು ಕಳೆದುಕೊಂಡೆವು. ಕಲಬುರ್ಗಿಯವರನ್ನು, ಗೌರಿ ಲಂಕೇಶರನ್ನು ಕಳೆದುಕೊಂಡೆವು. ನಮ್ಮದೇ ಪಕ್ಷದ ಇಂದಿರಾಗಾಂಧಿ, ರಾಜೀವ್‌ ಗಾಂಧಿಯವರನ್ನು ಕಳೆದುಕೊಂಡೆವು. ಆದರೆ ಬಿಜೆಪಿಯವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೂರಿಸಿಕೊಂಡು ಕಂದಹಾರ್‌ಗೆ ಬಿಟ್ಟು ಬಂದರು. ತಾಲಿಬಾನ್‌ಗೆ ಗೋಧಿ, ಔಷಧ, ಧಾನ್ಯಗಳು, ಹಣಕಾಸಿನ ನೆರವು ಮಾಡುತ್ತಿದ್ದಾರೆ. ಎಸ್‌ಡಿಪಿಐ ಜತೆ ಹಲವು ಕಡೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇಷ್ಟಾದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ’ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.