ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್: ಸಿದ್ದರಾಮಯ್ಯ
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್, ಅವರ ಹೇಳಿಕೆ, ನಡವಳಿಕೆ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಿರಹಟ್ಟಿ (ಫೆ.17): ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್, ಅವರ ಹೇಳಿಕೆ, ನಡವಳಿಕೆ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಪಟ್ಟಣದ ಜ. ಫಕೀರೇಶ್ವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಒಂದು ಹಳ್ಳಿಯಲ್ಲಿ ಭಾಷಣ ಮಾಡುವಾಗ ಸಚಿವ ಅಶ್ವತ್ಥನಾರಾಯಣ ಟಿಪ್ಪು ಸುಲ್ತಾನ್ ಮುಗಿಸಿದ ರೀತಿಯಲ್ಲಿ ಸಿದ್ದರಾಮಯ್ಯನವರನ್ನೂ ಮುಗಿಸಬೇಕು ಎಂದು ಹೇಳಿದ್ದಾರೆ. ಮಂತ್ರಿ ಎಂದರೆ ಎಲ್ಲರನ್ನೂ ರಕ್ಷಣೆ ಮಾಡುವವರು. ರಾಜ್ಯದ ಜನರ ಮಾನ, ಪ್ರಾಣ, ಆಸ್ತಿ ರಕ್ಷಣೆ ಮಾಡುವಂತಹದ್ದು ಸರ್ಕಾರದ ಜವಾಬ್ದಾರಿ. ಜವಾಬ್ದಾರಿಯುತ ಮಂತ್ರಿಗಳೇ ಈ ರೀತಿ ಹೇಳುತ್ತಾರೆ ಅಂದರೆ ಏನರ್ಥ? ಅವರು ಮಂತ್ರಿ ಸ್ಥಾನದಲ್ಲಿರಲು ನಾಲಾಯಕ್ ಎಂದು ಕಿಡಿಕಾರಿದರು.
ನಾವೆಲ್ಲರೂ ಮನುಷ್ಯರು, ನಂತರ ಧರ್ಮ: ನಾವೆಲ್ಲರೂ ಕೂಡ ಮೂಲತಃ ಮನುಷ್ಯರು, ನಂತರ ಧರ್ಮ. ಧರ್ಮ ಎನ್ನುವುದು ಮನುಷ್ಯರ ಒಳಿತಿಗಾಗಿ ಇರುವಂತದ್ದು, ಧರ್ಮಕ್ಕೋಸ್ಕರ ಮನುಷ್ಯರಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳಿದ್ದಾರೆ. ಯಾವುದೇ ಧರ್ಮವಾಗಲಿ ಮನುಷ್ಯರನ್ನು ಪ್ರೀತಿಸಿ, ಗೌರವಿಸಿ ಎಂದು ಹೇಳುತ್ತದೆ ಹೊರತು ದ್ವೇಷಿಸಿ ಎಂದು ಹೇಳುವುದಿಲ್ಲ. ಕೆಲವರು ಧರ್ಮದ ಹೆಸರಲ್ಲಿ ಸಮಾಜ ಹಾಳು ಮಾಡುತ್ತಿದ್ದಾರೆ, ಅದು ಆಗಬಾರದು ಎಂದರು.
ಬಿಜೆಪಿ ದುರಾಡಳಿತದ ವಿರುದ್ಧ ಜನತೆಗೆ ಬೇಸರ: ಸಿದ್ದರಾಮಯ್ಯ
ಎಲ್ಲ ದೇಶಗಳ ಸಂವಿಧಾನ, ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಬಸವಾದಿ ಶರಣರ ಧರ್ಮದಲ್ಲಿ ಅದನ್ನು ಹೆಚ್ಚು ಪ್ರತಿಪಾದಿಸಲಾಗುತ್ತಿದೆ. ಅದೇ ರೀತಿ ಶಿರಹಟ್ಟಿಶ್ರೀ ಫಕೀರೇಶ್ವರ ಮಠವು ಮಾಡುತ್ತಿದೆ. ಮನುಷ್ಯ, ಮನುಷ್ಯರಲ್ಲಿ ಐಕ್ಯತೆ ಇಲ್ಲವೆಂದರೆ ನಮಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ. ಮನುಷ್ಯರನ್ನು ಮನುಷ್ಯರೇ ತಿನ್ನುವುದೇ, ನಾವು ಮನುಷ್ಯರು ಪ್ರಾಣಿಗಳಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಕೆಲವು ಕಾಡು ಪ್ರಾಣಿಗಳಿವೆ. ಅವುಗಳಿಗೆ ಧರ್ಮ, ಇತಿಹಾಸ, ಮನುಷ್ಯತ್ವ, ಪರಸ್ಪರ ಪ್ರೀತಿ ಇವುಗಳ ಬಗ್ಗೆ ಗೊತ್ತೇ ಇಲ್ಲ. ವಿದ್ಯೆ ಕೊಡುವುದು ಜಾತಿ ಮಾಡುವುದಕ್ಕಲ್ಲ, ಪರಸ್ಪರ ಮನುಷ್ಯರಾಗಿ ಬದುಕುವುದಕ್ಕೆ. ಇಂದು ವಿದ್ಯಾವಂತರೇ ಜಾತಿವಾದಿಗಳಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆ. ವಿದ್ಯೆ ಪಡೆಯುವುದರಿಂದ ಜ್ಞಾನ ಬರಬೇಕು. ಆದರೆ, ಜ್ಞಾನ ಬರುತ್ತಿಲ್ಲ, ಬದಲಾಗಿ ವಿದ್ಯಾವಂತರೇ ಜಾತಿ ಮಾಡುತ್ತಿದ್ದಾರೆ. ಫಕೀರೇಶ್ವರ ಮಠ ಯಾವುದೇ ಜಾತಿಭೇದ, ಪಕ್ಷಭೇದವಿಲ್ಲದೇ ಮಾನವರು ಎಲ್ಲರೂ ಒಂದು, ನಾವೆಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳಬೇಕು ಎಂದು ಭಾವೈಕ್ಯತೆಯ ಸಂದೇಶ ಸಾರುವ ಕೆಲಸ ಮಾಡುತ್ತಿದೆ. ಇದು ದೊಡ್ಡ ಕೆಲಸ, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅಶ್ವತ್ಥ ನಾರಾಯಣ ವಿರುದ್ಧ ದೂರು ದಾಖಲು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನ ರೀತಿ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಇಲ್ಲಿನ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ದೂರು ನೀಡಿದ್ದಾರೆ. ದೂರಿನನ್ವಯ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಠಾಣೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕವಾಗಿ ದುರುದ್ದೇಶ ಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುವ ಮೂಲಕ ಜನರಿಗೆ ಪ್ರಚೋದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವಕ್ಕೆ ಹಾನಿಯಾಗುವ ಸಂಭವಗಳಿವೆ. ಆದಕಾರಣ ಕೂಡಲೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ತನಿಖೆಗೊಳಪಡಿಸಬೇಕು. ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದೊಡನೆ ಅಧಿಕಾರಕ್ಕೆ: ವೀರಪ್ಪ ಮೊಯ್ಲಿ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗದಿಗೆಪ್ಪಗೌಡರ, ರಾಜ್ಯಪಾಲರು ಅಶ್ವತ್ಥ ನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಬಿಜೆಪಿಯವರಿಗೆ ಸೋಲಿನ ಭಯ ಶುರುವಾಗಿದೆ. ಹತಾಶೆಯಿಂದಾಗಿ ಬಿಜೆಪಿಯವರು ಈ ರೀತಿ ಮಾತನಾಡುತ್ತಿದ್ದಾರೆ. ಅಶ್ವತ್ಥ ನಾರಾಯಣ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕು ಎಂದು ತಿಳಿಸಿದರು.