ಸಿದ್ದರಾಮಯ್ಯ-ನಿರಾಣಿ ಭೇಟಿ: ರಾಜಕೀಯ ವಲಯದಲ್ಲಿ ಭಾರೀ ಕುತೂಹಲ..!
ಭೇಟಿ ವೇಳೆ ಯಾವುದೇ ತರಹದ ರಾಜಕೀಯ ಚರ್ಚೆ ನಡೆದಿಲ್ಲ. ಇದೊಂದು ಅನೌಪಚಾರಿಕ ಭೇಟಿಯಾಗಿದ್ದು, ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸಂಗಮೇಶ ನಿರಾಣಿ
ಬಾಗಲಕೋಟೆ(ಸೆ.29): ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರ 60ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾಗ ಸಿದ್ದರಾಮಯ್ಯ, ಎಂ.ಬಿ.ಪಾಟೀಲ ಸೇರಿ ವಿವಿಧ ನಾಯಕರು ನಮ್ಮ ನಿವಾಸಕ್ಕೆ ಭೇಟಿ ನೀಡಿದ್ದು, ಇದೊಂದು ಸೌಹಾರ್ದಯುತ ಭೇಟಿಯಾಗಿದೆ ಎಂದು ಸಂಗಮೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಿಎಂ ಹಾಗೂ ವಿಧಾನಸಭಾ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಗೌರವಪೂರ್ವಕವಾಗಿ ಅತಿಥಿ ಸತ್ಕಾರ ಮಾಡಲಾಯಿತು. ನಂತರ ಕೆಲ ಸಮಯ ಮಾತನಾಡಿ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ವೇಳೆ ಯಾವುದೇ ತರಹದ ರಾಜಕೀಯ ಚರ್ಚೆ ನಡೆದಿಲ್ಲ. ಇದೊಂದು ಅನೌಪಚಾರಿಕ ಭೇಟಿಯಾಗಿದ್ದು, ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬೊಮ್ಮಾಯಿ ಹಿಂಬಾಗಿಲಿನಿಂದ ಬಂದ ಸಿಎಂ: ಸಿದ್ದರಾಮಯ್ಯ
ಸಿದ್ದರಾಮಯ್ಯ ಭೇಟಿ ನೀಡಿರುವುದಕ್ಕೆ ರಾಜಕೀಯ ಬೆರೆಸಬೇಡಿ. ನಾನು ರಾಜ್ಯದ ಎಲ್ಲ ನಾಯಕರೊಂದಿಗೆ ಪಕ್ಷಾತೀತವಾಗಿ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹಿರಿಯ ನಾಯಕರೊಬ್ಬರು ಮನೆಗೆ ಬಂದಾಗ ಆತಿಥ್ಯ ನೀಡುವುದು ನಮ್ಮ ಸಂಸ್ಕೃತಿ. ಇನ್ನು ಸಿದ್ದರಾಮಯ್ಯ ಅವರು ನಮ್ಮ ನಿವಾಸಕ್ಕೆ ಭೇಟಿ ನೀಡಿದ್ದಾಗ ಸಹೋದರರಾದ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಹಾಗೂ ವಿ.ಪ.ಸದಸ್ಯ ಹಣಮಂತ ನಿರಾಣಿ ಇಬ್ಬರೂ ಮನೆಯಲ್ಲಿ ಇರದ ಕಾರಣ ಆತಿಥ್ಯ ನೀಡುವ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇನೆ. ಪ್ರಸಕ್ತ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಚಿಂತನೆಗಳು ನನ್ನಲ್ಲಿಲ್ಲ. ಆದ್ದರಿಂದ, ಪ್ರತಿ ವಿಷಯವನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿಲ್ಲ. ಈ ಚರ್ಚೆ ಇಲ್ಲಿಗೆ ಕೊನೆಗೊಳ್ಳಲಿ ಎಂದು ತಿಳಿಸಿದ್ದಾರೆ.