ಪ್ರಧಾನಿ ಮೋದಿ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಿ: ಬಿಎಸ್‌ವೈಗೆ ಸಿದ್ದು ಸವಾಲು
‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರ ವಿರುದ್ಧ ಸ್ಥಳದಲ್ಲೇ ಪ್ರತಿಭಟಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಆಜ್ಞೆ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ನರೇಂದ್ರ ಮೋದಿ ಕುರಿತ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬೆಂಗಳೂರು (ಅ.15): ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರ ವಿರುದ್ಧ ಸ್ಥಳದಲ್ಲೇ ಪ್ರತಿಭಟಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಆಜ್ಞೆ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ನರೇಂದ್ರ ಮೋದಿ ಕುರಿತ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಯಡಿಯೂರಪ್ಪ ಅವರ ಉತ್ತರಗಳು ರಾಜ್ಯದ ಜನತೆಗಿರಲಿ, ಕನಿಷ್ಠ ಬಿಜೆಪಿ ಕಾರ್ಯಕರ್ತರಿಗಾದರೂ ಸಮಾಧಾನ ತಂದರೆ ಬಳಿಕ ಮೋದಿ ಅವರು ಟೀಕೆ-ವಿಮರ್ಶೆಗೆ ಅರ್ಹರೋ ಅಥವಾ ವಿಮರ್ಶೆಗೆ ಅತೀತರೋ ಜನ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2014ಕ್ಕೂ ಮೊದಲು ಮನಮೋಹನ್ ಸಿಂಗ್ ಸರ್ಕಾರ ರೈತರ ಎಷ್ಟುಸಾಲ ಮನ್ನಾ ಮಾಡಿತ್ತು? ಅಂಬಾನಿ, ಅದಾನಿ ಮತ್ತಿತರ ಕಾರ್ಪೊರೇಟ್ ಬಂಡವಾಳಿಗರ ಎಷ್ಟುಸಾಲ ಮನ್ನಾ ಮಾಡಿತ್ತು. ಅದೇ ರೀತಿ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಎಷ್ಟುರೈತರ ಸಾಲ ಹಾಗೂ ಎಷ್ಟುಕಾರ್ಪೊರೇಟ್ ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಲೀಡರ್‌ಶಿಪ್ ಎಲ್ಲಿದೆ?: ಸಿದ್ದರಾಮಯ್ಯ
ಜತೆಗೆ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜನರು ಕಟ್ಟುತ್ತಿದ್ದ ತೆರಿಗೆಯೆಷ್ಟು? ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆಯೆಷ್ಟು? ಈಗ ಜನರ ಮೇಲಿನ ತೆರಿಗೆ ಎಷ್ಟುಹೆಚ್ಚಾಗಿದೆ? ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಎಷ್ಟುಕಡಿಮೆಯಾಗಿದೆ? 2014ಕ್ಕೆ ಮೊದಲು ಪೆಟ್ರೋಲ್, ಡೀಸೆಲ್‌ಗಳ ಮೇಲೆ ವಿಧಿಸುತ್ತಿದ್ದ ಸೆಸ್‌ಗಳೆಷ್ಟು? ಮೋದಿಯವರು ವಿಧಿಸುತ್ತಿರುವ ಸೆಸ್‌ಗಳೆಷ್ಟು? ಕಚ್ಚಾತೈಲ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟುಪ್ರಮಾಣದಲ್ಲಿ ಹೆಚ್ಚಾಗಿದೆ? 2014ಕ್ಕೆ ಮೊದಲು ದೇಶದ ಜನರ ತಲೆಯ ಮೇಲಿದ್ದ ಸಾಲವೆಷ್ಟು? ಈಗ ಎಷ್ಟಿದೆ? ರೈತರ ಹಾಗೂ ಇತರೆ ಜನಸಮುದಾಯಗಳ ಆದಾಯ ಎಷ್ಟಿತ್ತು? ಈಗ ಎಷ್ಟಿದೆ?
2014ಕ್ಕೆ ಮೊದಲು ದೇಶದ ಮೇಲಿದ್ದ 53 ಲಕ್ಷ ಕೋಟಿ ರು. ಸಾಲವನ್ನು 155 ಲಕ್ಷ ಕೋಟಿಗೆ ಏರಿಸಿ ದೇಶವನ್ನು ದಿವಾಳಿ ಮಾಡಿರುವುದು ನರೇಂದ್ರ ಮೋದಿ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. 2014ಕ್ಕಿಂತ ಮೊದಲು ಮಹಿಳಾ ಕಾರ್ಮಿಕರ ಪ್ರಮಾಣ ಶೇ.32 ಇದ್ದದ್ದು ಈಗ ಶೇ.21ಕ್ಕೆ ಇಳಿಯಲು ಮೋದಿ ಸರ್ಕಾರದ ಮಹಿಳಾ ವಿರೋಧಿ ನೀತಿಗಳು ಕಾರಣವಲ್ಲವೆ? 2018ಕ್ಕೆ ಮೊದಲು 2.42 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವು ಈ ವರ್ಷದ ಕೊನೆಯ ಹೊತ್ತಿಗೆ 5.30 ರಿಂದ 5.40 ಲಕ್ಷ ಕೋಟಿಗಳವರೆಗೆ ಏರಿಕೆಯಾಗಲು ಕಾರಣವೇನು? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಮೋದಿ ಕಾಲಿನಡಿ ಕೂರುವ ಯೋಗ್ಯತೆ ನನಗೆ ಬೇಡ: ಸಿದ್ದರಾಮಯ್ಯ
ಶಾಸಕರೆಲ್ಲ ಬೆಂಗಳೂರಿಗೆ ಬರಲು ಸಿದ್ದು ಸೂಚನೆ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ.17ರ ಸೋಮವಾರ ಚುನಾವಣೆ ನಡೆಯುವುದರಿಂದ ಅ.16ರ ಭಾನುವಾರ ಸಂಜೆಯೊಳಗೆ ಕಾಂಗ್ರೆಸ್‌ನ ಎಲ್ಲಾ ಶಾಸಕರು, ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು ಬೆಂಗಳೂರಿಗೆ ಆಗಮಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅ.17ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಹೀಗಾಗಿ ಭಾನುವಾರ ಸಂಜೆಯೊಳಗೆ ಕಾಂಗ್ರೆಸ್‌ನ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ರಾಜ್ಯಸಭೆ ಸದಸ್ಯರು ಹಾಗೂ ಸಂಸದರು ಬೆಂಗಳೂರಿಗೆ ಆಗಮಿಸಿರಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟನಿರ್ದೇಶನ ನೀಡಿದ್ದಾರೆ.