Karnataka Politics: ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಹಾಸ್ಯಾಸ್ಪದ: ಕುಮಾರಸ್ವಾಮಿ

*   ಯಾವ ಪಕ್ಷವೂ ಆ ರೀತಿ ಮಾಡಕ್ಕಾಗಲ್ಲ, ಕರ್ನಾಟಕದ ಮಟ್ಟಿಗಂತೂ ಸಾಧ್ಯವೇ ಇಲ್ಲ
*  ಪ್ರಧಾನಿ ಮೋದಿ ಕುಟುಂಬ ರಾಜಕಾರಣದ ವಿರುದ್ಧ ದೆಹಲಿಯಲ್ಲಿ ಕೂತು ಮಾತನಾಡುತ್ತಾರೆ
*  ಕರ್ನಾಟದ ಬಿಜೆಪಿಯಲ್ಲಿ ಎಷ್ಟು ಕುಟುಂಬ ರಾಜಕಾರಣ ಇಲ್ಲ 

Former CM HD Kumaraswamy Talks Over Family Politics grg

ಮೈಸೂರು(ಮೇ.18): ಕಾಂಗ್ರೆಸ್‌ನ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎಂಬ ತೀರ್ಮಾನ ತೀರಾ ಹಾಸ್ಯಾಸ್ಪದ. ಅದು ಸಾಧ್ಯವಾಗದ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಗಲಿ, ಬಿಜೆಪಿಯಾಗಲಿ, ಜೆಡಿಎಸ್‌ ಆಗಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ನೀಡಲು ಸಾಧ್ಯವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣದ ವಿರುದ್ಧ ದೆಹಲಿಯಲ್ಲಿ ಮಾತನಾಡುತ್ತಾರೆ. ಆದರೆ ಕರ್ನಾಟದ ಬಿಜೆಪಿಯಲ್ಲಿ ಎಷ್ಟು ಕುಟುಂಬ ರಾಜಕಾರಣ ಇಲ್ಲ. ಈ ಬಾರಿಯ ವಿಧಾನ ಪರಿಷತ್‌ ಸದಸ್ಯರ ಪಟ್ಟಿಯನ್ನು ನೋಡಿದರೆ ಸಾಕು. ಇನ್ನು ಕಾಂಗ್ರೆಸ್‌ನಲ್ಲಿ ಈ ವಿಷಯವನ್ನು ಮೈಸೂರು ಭಾಗದ ನಾಯಕರೇ ಒಪ್ಪುತ್ತಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದರು. ಇದೊಂದು ರೀತಿಯಲ್ಲಿ ಹಾಸ್ಯಾಸ್ಪದ ಮಾತುಗಳು. ಕರ್ನಾಟಕದ ಮಟ್ಟಿಗಂತು ಇದು ಸಾಧ್ಯವೇ ಇಲ್ಲ. ಇವರು ಜನರನ್ನು ಮೂರ್ಖರನ್ನಾಗಿಸಲು ನೋಡುತ್ತಿದ್ದಾರೆ ಎಂದರು.

ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ ಕರ್ನಾಟಕದ ಚಿತ್ರಣವೇ ಬದಲು: ಕುಮಾರಸ್ವಾಮಿ

ಮೊಮ್ಮಗಳು ಕಳೆದುಕೊಂಡ ಜಿಟಿಡಿಗೆ ಎಚ್‌ಡಿಕೆಗೆ ಸಾಂತ್ವನ

ಮೈಸೂರು:  ಮೊಮ್ಮಗಳು ಗೌರಿ ಅಗಲಿಕೆಯ ದುಃಖದಲ್ಲಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಾಂತ್ವನ ಹೇಳಿದರು.

ಮೈಸೂರು ತಾಲೂಕು ಗುಂಗ್ರಾಲ್‌ ಛತ್ರದಲ್ಲಿರುವ ಜಿ.ಟಿ. ದೇವೇಗೌಡರ ನಿವಾಸಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ಮೂರು ವರ್ಷದ ಗೌರಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಜಿ.ಟಿ. ದೇವೇಗೌಡ, ಅವರ ಪುತ್ರ ಹರೀಶ್‌ಗೌಡ ಅವರಿಂದ ಕುಮಾರಸ್ವಾಮಿ ಅವರು ಗೌರಿ ಅನಾರೋಗ್ಯದ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಗೌರಿ ನೆನಪನ್ನು ಹಂಚಿಕೊಂಡ ಜಿ.ಟಿ. ದೇವೇಗೌಡರು ದುಃಖ ವ್ಯಕ್ತಪಡಿಸಿದರು. ಲಲಿತಾ ದೇವೇಗೌಡ, ವರ್ಷ ಹರೀಶ್‌ ಕೂಡ ಇದ್ದರು.

ಶಾಸಕರಾದ ಸಾ.ರಾ. ಮಹೇಶ್‌, ಸಿ.ಎಸ್‌. ಪುಟ್ಟರಾಜು, ಕೆ. ಮಹದೇವ್‌, ಡಿ.ಸಿ. ತಮ್ಮಣ್ಣ, ಬಾಲಕೃಷ್ಣ, ಎಂ. ಅಶ್ವಿನ್‌ಕುಮಾರ್‌, ಡಾ.ಕೆ. ಅನ್ನದಾನಿ, ವಿಧಾನ ಪರಿಷತ್‌ ಸದಸ್ಯರಾದ ಭೋಜೆಗೌಡ, ಕೆ.ಟಿ. ಶ್ರೀಕಂಠೇಗೌಡ, ನಟ ನಿಖಿಲ್‌ ಕುಮಾರಸ್ವಾಮಿ ಮೊದಲಾದವರು ಇದ್ದರು.

ಸಮ್ಮಿಶ್ರ ಸರ್ಕಾರ ಪತನದ ನಂತರ ಮೊದಲ ಭೇಟಿ- ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಯತ್ನ

ಮೊಮ್ಮಗಳ ನಿಧನದ ಹಿನ್ನೆಲೆಯಲ್ಲಿ ಜಿ,ಟಿ. ದೇವೇಗೌಡರ ನಿವಾಸಕ್ಕೆ ಕುಮಾರಸ್ವಾಮಿ ಅವರು ಭೇಟಿ ನೀಡಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೂ ಕಾರಣವಾಗಿದೆ.

ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನದ ನಂತರ ಜಿ.ಟಿ. ದೇವೇಗೌಡರು ಜೆಡಿಎಸ್‌ನಿಂದ ದೂರವಾಗಿದ್ದರು. ಕಳೆದ ಬಾರಿ ತಮ್ಮ ಎದುರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಅವರಿಗೆ ಹತ್ತಿರವಾಗಿದ್ದರು. ಇನ್ನೇನು ಕಾಂಗ್ರೆಸ್‌ ಸೇರುತ್ತಾರೆ ಎಂಬ ವಾತಾವರಣ ಇತ್ತು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಅವರು ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಹೊಸಕಾಮನಕೊಪ್ಪಲು ಗ್ರಾಮದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಹೀಗಾಗಿ ಬಿಜೆಪಿ ನಾಯಕರು ಕೂಡ ದೇವೇಗೌಡರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದರು.

ಕಾಂಗ್ರೆಸ್‌ನಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌. ಐದು ವರ್ಷ ವಿಶೇಷ ಸೇವೆ ಮಾಡಿದ್ದರೆ ಮತ್ತೊಂದು ಟಿಕೆಟ್‌ ಪರಿಗಣಿಸಬಹುದು ಎಂಬ ಹಿನ್ನೆಲೆಯಲ್ಲಿ ಜಿ.ಟಿ. ದೇವೇಗೌಡರು ತಮಗೆ ಹಾಗೂ ತಮ್ಮ ಪುತ್ರ ಜಿ.ಡಿ. ಹರೀಶ್‌ಗೌಡರಿಗೆ ಟಿಕೆಟ್‌ ಸಿಗುವ ಸಂಭವ ಕಡಿಮೆ ಎಂದು ಭಾವಿಸಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್‌ ಅಥವಾ ಬಿಜೆಪಿ ಸೇರಬೇಕೋ ಇಲ್ಲವೇ ಜೆಡಿಎಸ್‌ನಲ್ಲಿಯೇ ಉಳಿಯಬೇಕೋ ಎಂಬ ಜಿಜ್ಞಾಸೆಯಲ್ಲಿದ್ದಾರೆ ಎನ್ನಲಾಗಿದೆ.

ಬೆಂಗ್ಳೂರಿನ ಜಲಮೂಲ ರಕ್ಷಣೆಗೆ ಜೆಡಿಎಸ್‌ ಬದ್ಧ: ಕುಮಾರಸ್ವಾಮಿ

ನೆಲಮಂಗಲ ಬಳಿ ನಡೆದ ಜೆಡಿಎಸ್‌ ಜಲಧಾರೆ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ಜಿ.ಟಿ. ದೇವೇಗೌಡರನ್ನು ಪಕ್ಷದಲ್ಲಿಯೇ ಉಳಿಸಿಕೊಂಡರೆ ಮೈಸೂರು ಭಾಗದಲ್ಲಿ ಪಕ್ಷ ಹೆಚ್ಚಿನ ಸಾಧನೆ ಮಾಡಬಹುದು ಎಂಬ ಲೆಕ್ಕಾಚಾರ ನಡೆದಿದೆ. ಇದಕ್ಕಾಗಿ ವೇದಿಕೆ ಸಿದ್ಧಪಡಿಸಲು ಈ ಭೇಟಿ ಎಂದು ಹೇಳಲಾಗುತ್ತಿದೆ.

ಜಿಟಿಡಿ ಮೊಮ್ಮಗಳ ಅಂತ್ಯಸಂಸ್ಕಾರದಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಭಾಗವಹಿಸಿದ್ದರು. ಸೋಮವಾರ ಸಂಸದ ಪ್ರಜ್ವಲ್‌ ರೇವಣ್ಣ ಭೇಟಿ ನೀಡಿದ್ದರು. ಇವತ್ತು ಕುಮಾರಸ್ವಾಮಿ ಅವರು ಶಾಸಕರ ದಂಡಿನೊಂದಿಗೆ ಭೇಟಿ ನೀಡಿದ ನಂತರ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಕೂಡ ಜಿಟಿಡಿ ಅವರನ್ನು ಭೇಟಿ ಮಾಡಿದ್ದರು.
 

Latest Videos
Follow Us:
Download App:
  • android
  • ios