*  ನಾನು ತೆರಿಗೆ ಹಣ ಲೂಟಿ ಹೊಡೆಯುವ ಸಂಸ್ಥೆ ನಡೆಸುತ್ತಿಲ್ಲ*  ಜೆಡಿಎಸ್‌ ಶಕ್ತಿ ತೋರಿಸುತ್ತೇನೆ*  ಬೆಂಗಳೂರಿನ ರಿಂಗ್‌ ರಸ್ತೆಗೆ 95 ಎಕರೆ ಭೂಮಿ ಕೊಟ್ಟವರು ದೇವೇಗೌಡರು  

ಬೆಂಗಳೂರು(ಜು.11):  ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಸರ್ಕಾರ ಜನರ ತೆರಿಗೆ ಹಣ ಲೂಟಿ ಮಾಡುತ್ತಿದ್ದು, ನಾನು ಯಾವುದೇ ಲೂಟಿ ಹೊಡೆಯುವ ಸಂಸ್ಥೆಗಳನ್ನು ನಡೆಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ನಗರದ ಅಬ್ಬಿಗೆರೆ, ಹೊಸಕೆರೆಹಳ್ಳಿ ಮತ್ತು ಇಟ್ಟಮಡುವಿನಲ್ಲಿ ನಡೆದ ಜನತಾ ಮಿತ್ರ ಕರ್ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷಕ್ಕೆ ಬೆಂಗಳೂರಲ್ಲಿ ನೆಲೆಯೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಪಕ್ಷಕ್ಕೆ ನಗರದಲ್ಲಿ ನೆಲೆ ಇದೆಯೋ, ಇಲ್ಲವೋ ಎಂಬುದನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೋರಿಸುತ್ತೇನೆ ಎಂದು ಕಿಡಿಕಾರಿದರು.

ನಾನು ಲಕ್ಕಿ ಡಿಪ್‌ ಸಿಎಂ.. ನಿಮ್ಮ ಸಿಎಮ್ಮೂ ಲಕ್ಕಿ ಡಿಪ್‌: ಎಚ್‌ಡಿಕೆ

ಬಡವರನ್ನು ಹಿಂಸೆ ಮಾಡುವ ಕೆಲಸ ನಡೆದರೆ ಶ್ರೀಲಂಕಾದ ಪರಿಸ್ಥಿತಿ ಇಲ್ಲಿಯೂ ನಡೆಯುತ್ತದೆ. ಇನ್ನೊಂದು ಶ್ರೀಲಂಕಾ ಸೃಷ್ಟಿಮಾಡುವ ಪಕ್ಷಗಳು ನಿಮಗೆ ಬೇಕಾ? ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬಬೇಡಿ. ನರೇಂದ್ರ ಮೋದಿ ಮಾತಿಗೆ ಮರುಳಾಗಬೇಡಿ. ಮೋದಿ ಮತ್ತು ಬಿಜೆಪಿ ಇರುವುದೇ ಶ್ರೀಮಂತರಿಗಾಗಿ, ಚುನಾವಣೆ ವೇಳೆ ಹಣ ಕೊಟ್ಟು ಮತ ಪಡೆಯಲು ಬರುತ್ತಾರೆ ಎಚ್ಚರವಾಗಿರಿ ಎಂದರು.

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದ್ದ .750 ಕೋಟಿಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿಲ್ಲಿಸಿದೆ. ಜನರಿಗೆ ದ್ರೋಹ ಮಾಡುವ ಪಕ್ಷಗಳ ಮೊದಲ ಸ್ಥಾನದಲ್ಲಿ ಬಿಜೆಪಿ ಇದೆ. ವಿದ್ಯುತ್‌, ಅನಿಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆ ಎಂದ ಅವರು, ಬಡಕುಟುಂಬಗಳಿಗೆ ಉಚಿತವಾಗಿ ವಿದ್ಯುಚ್ಛಕ್ತಿ ಕೊಡಲು ಚಿಂತನೆ ಮಾಡಲಾಗಿದೆ. ಆರೋಗ್ಯ ಮಿತ್ರದಡಿ ಉಚಿತ ಆರೋಗ್ಯ ಒದಗಿಸುತ್ತೇವೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕಲು ಬೇಕಾಗಿರುವ ಎಲ್ಲಾ ಅಗತ್ಯ ಸೌಲಭ್ಯಗಳನ್ನೂ ಒದಗಿಸಲಾಗುವುದು. ಜನರ ಕಷ್ಟಗಳು ಏನೇ ಇದ್ದರೂ ಜನತಾ ಮಿತ್ರ ವಾಹನದ ಬಾಕ್ಸ್‌ನಲ್ಲಿ ಹಾಕಿ, ಯಾವ ರೀತಿಯ ಯೋಜನೆ ಬೇಕು, ಅದನ್ನು ಮಾಡುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಆರ್‌.ಮಂಜುನಾಥ್‌, ಬೆಂಗಳೂರು ನಗರ ಜೆಡಿಎಸ್‌ ಅಧ್ಯಕ್ಷ ಆರ್‌.ಪ್ರಕಾಶ್‌ ಉಪಸ್ಥಿತರಿದ್ದರು.

ಜೆಡಿಎಸ್‌ ಶಕ್ತಿ ತೋರಿಸುತ್ತೇನೆ: ಮಾಜಿ ಮುಖ್ಯಮಂತ್ರಿ

ಬೆಂಗಳೂರು ನಗರದಲ್ಲಿ ಜೆಡಿಎಸ್‌ ನೆಲೆ ಇಲ್ಲ ಎನ್ನುತ್ತಿದ್ದಾರೆ. ಮುಂದಿನ ಚುನಾವಣೆ ಚುನಾವಣೆಯಲ್ಲಿ ಭವಿಷ್ಯ ಇಲ್ಲ ಎನ್ನುತ್ತಾರೆ. ನಮ್ಮ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸುತ್ತೇನೆ ಎಂದ ಅವರು, ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಕಾವೇರಿ ನೀರು ತರಲು ಒಪ್ಪಿಗೆ ಕೊಡಲಿಲ್ಲ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ವೇಳೆ ನಗರಕ್ಕೆ ಒಂಭತ್ತು ಟಿಎಂಸಿ ನೀರು ಕೊಟ್ಟರು. ಬೆಂಗಳೂರಿನ ರಿಂಗ್‌ ರಸ್ತೆಗೆ 95 ಎಕರೆ ಭೂಮಿ ಕೊಟ್ಟವರು ದೇವೇಗೌಡರು. ನಾನು ಬಿಬಿಎಂಪಿ ರಚನೆ ಮಾಡಿ, 198 ವಾರ್ಡ್‌ ರಚಿಸಿದೆ. ಮೆಟ್ರೋ ಯೊಜನೆಗೆ ಚಾಲನೆ ನೀಡಿದೆ ಎಂದು ಕುಮಾರಸ್ವಾಮಿ ಹೇಳಿದರು.