ನಾನು ಲಕ್ಕಿ ಡಿಪ್ ಸಿಎಂ.. ನಿಮ್ಮ ಸಿಎಮ್ಮೂ ಲಕ್ಕಿ ಡಿಪ್: ಎಚ್‌ಡಿಕೆ
* ಬೊಮ್ಮಾಯಿ ಜನಾದೇಶ ಪಡೆದ ಮುಖ್ಯಮಂತ್ರಿಯೇ?
* ಜಗತ್ತಿನ ಅಂಕುಡೊಂಕಿನ ಮಾತು ಹಾಗಿರಲಿ. ಪ್ರಧಾನಮಂತ್ರಿ ಸಂಚರಿಸಿದ ರಸ್ತೆಯನ್ನೇ ನೋಡಿದರೆ ಸಾಕು
* ‘ಮಿಷನ್ ದಕ್ಷಿಣ್’ ಮೂಲ ತಾತ್ಪರ್ಯ ಏನು?
ಬೆಂಗಳೂರು(ಜು.07): ತಮ್ಮನ್ನು ಲಕ್ಕಿಡಿಪ್ ಎಂದ ಬಿಜೆಪಿಗೆ ತೀವ್ರವಾಗಿ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಮುಖ್ಯಮಂತ್ರಿಗಳೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಬುಧವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ಹೌದು, ನಾನು ಲಕ್ಕಿ ಡಿಪ್ ಮುಖ್ಯಮಂತ್ರಿ. ಏನೀಗ? ನಿಮ್ಮ ಮುಖ್ಯಮಂತ್ರಿಯೂ ಲಕ್ಕಿ ಡಿಪ್ಪು ಎಂಬುದನ್ನು ಮರೆತರೆ ಹೇಗೆ ಎಂದಿದ್ದಾರೆ.
ಅಧಿಕಾರದ ನೆರಳೂ ಕಾಣದೆ ಬೆಂಗೆಟ್ಟಿದ್ದ ಬಿಜೆಪಿಗೆ ರಾಜ್ಯದಲ್ಲಿ ಕುರ್ಚಿ ರುಚಿ ತೋರಿಸಿದ ಅಂದಿನ 20:20 ಸರ್ಕಾರದ ಉಪಮುಖ್ಯಮಂತ್ರಿ ಆಗಿದ್ದ ನಿಮ್ಮವರನ್ನೇ ಕೇಳಿ. ನಿಮ್ಮಲ್ಲೆಷ್ಟುಲಕ್ಕಿಡಿಪ್‌ಗಳಿದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ. ಸತ್ಯ ಸಾಕ್ಷಾತ್ಕಾರ ಮಾಡಿಸುತ್ತಾರೆ. ಲಕ್ಕಿಡಿಪ್ ಮುಖ್ಯಮಂತ್ರಿ ಎಂದರೆ ನನಗೆ ಅಪಮಾನವೇನೂ ಅಲ್ಲ. ಆಕಸ್ಮಿಕ ಮುಖ್ಯಮಂತ್ರಿ ಎಂದು ಅನೇಕ ಸಲ ಹೇಳಿದ್ದೇನೆ. ಆದರೆ, ‘ಆಪರೇಷನ್ ಕಮಲದ ಮುಖ್ಯಮಂತ್ರಿ’ ಎನ್ನುವುದಕ್ಕಿಂತ ಕೀಳಾ ಅದು ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಗೆಳೆಯರ ಬಳಗವೇ ಶತ್ರು ವರ್ತುಲಚವಾಗಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಜಗತ್ತಿನ ಅಂಕುಡೊಂಕಿನ ಮಾತು ಹಾಗಿರಲಿ. ಪ್ರಧಾನಮಂತ್ರಿ ಸಂಚರಿಸಿದ ರಸ್ತೆಯನ್ನೇ ನೋಡಿದರೆ ಸಾಕು. ಅರಿವಾಗುತ್ತದೆ ನಿಮ್ಮ ಅಂಕೆಷ್ಟು, ಡೊಂಕೆಷ್ಟು!! ‘ಮಿಷನ್ ದಕ್ಷಿಣ್’ ಮೂಲ ತಾತ್ಪರ್ಯ ಏನು? ಮೈಸೂರಲ್ಲಿ ಯೋಗಾಸನ, ಹೈದರಾಬಾದ್‌ನಲ್ಲಿ ಮಂಥನ. ಅದರ ಮರ್ಮ ಅರಿಯದವರು ಯಾರೂ ಇಲ್ಲ. ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬಂದಿದ್ದೇ ಜೆಡಿಎಸ್ ಕೃಪೆಯಿಂದ. ಸ್ವಪಕ್ಷವನ್ನೇ ಒಡೆದು ನನ್ನ ಜತೆ ಬರಲು ರೆಡಿ ಇದ್ದ ಆ ನಿಮ್ಮ ನಾಯಕರನ್ನು ನಾನೇ ತಡೆಯದೇ ಇದ್ದಿದ್ದರೆ, ನೀವು ಮತ್ತು ನಿಮ್ಮ ಪಕ್ಷ ಅವತ್ತೇ ನಡುನೀರಿನಲ್ಲಿ ಮುಳುಗಿ ಹೋಗುತ್ತಿದ್ದೀರಿ. ಅನುಮಾನ ಇದ್ದರೆ ಒಮ್ಮೆ ಅವರನ್ನೇ ಕೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.