ಜಿಎಸ್‌ಟಿ ರೀತಿ ರಾಜ್ಯದಲ್ಲೀಗ ಯತೀಂದ್ರ ಟ್ಯಾಕ್ಸ್: ಎಚ್‌ಡಿಕೆ ಗಂಭೀರ ಆರೋಪ
ದೇಶದಲ್ಲಿ ಜಿಎಸ್‌ಟಿ ಇರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ‘ವೈಎಸ್‌ಟಿ ತೆರಿಗೆ’ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಜು.03): ದೇಶದಲ್ಲಿ ಜಿಎಸ್‌ಟಿ ಇರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ‘ವೈಎಸ್‌ಟಿ ತೆರಿಗೆ’ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರತ್ತ ಬೆರಳು ತೋರಿದ್ದಾರೆ. ಭಾನುವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಹಣ ಕೊಟ್ಟು ಪೋಸ್ಟ್ ಪಡೆಯಲು ಬಂದವರನ್ನು ದೂರ ಇಟ್ಟಿದ್ದೆ. ಬಿಡಿಎಗೆ ಕೂರಲು ಬಂದ ಅಧಿಕಾರಿಯನ್ನು ಹೊರಗಟ್ಟಿದ್ದೆ. ಯಲಹಂಕ ತಹಶಿಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡುತ್ತೇವೆ ಎಂದವರನ್ನೂ ಆಚೆ ಇಟ್ಟಿದ್ದೆ.
ಇದು ನಾನು ನಡೆಸಿದ ಆಡಳಿತ. ಈಗ ನೋಡಿದರೆ ವೈಎಸ್‌ಟಿ ತೆರಿಗೆ ಅಂತ ಇವರು ಶುರುಮಾಡಿಕೊಂಡಿದ್ದಾರೆ ಎಂದು ಹರಿಹಾಯ್ದರು. ವೈಎಸ್‌ಟಿ ಎಂದರೆ ಏನು? ಸ್ವಲ್ಪ ಬಿಡಿಸಿ ಹೇಳಿ ಎಂಬ ಪ್ರಶ್ನೆಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ. ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ. ನೀವೂ ಪತ್ತೆಹಚ್ಚಿ ಎಂದು ಮಾರ್ಮಿಕವಾಗಿ ಹೇಳಿದರು. ವಸೂಲಿ ಮಾಡಿ ವರ್ಗಾವಣೆ ಮಾಡುವ ದಂಧೆ ಶುರುವಾಗಿದೆ. ಅಧಿಕಾರಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ರಾತ್ರಿ ಒಂದು ಗಂಟೆಯವರೆಗೆ ಸಭೆ ಮಾಡುತ್ತಿದ್ದಾರೆ. ಅದು ಏತಕ್ಕೆ? ಸರ್ಕಾರಿ ಕಚೇರಿಗಳಲ್ಲಿ ಏಕೆ ಸಭೆ ನಡೆಸುವುದಿಲ್ಲ ಎಂದು ಪ್ರಶ್ನಿಸಿದರು.
ನಾನು ಗ್ರಾನೈಟ್ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ
ವರ್ಗಾವಣೆ ದಂಧೆ ವಿಷಯದಲ್ಲಿ ತಮ್ಮ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, ನಾನು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಾನು ತಮ್ಮ ಪಕ್ಷದ ಜತೆ ಸರ್ಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದ್ದೀರಿ ಎನ್ನುವುದು ಗೊತ್ತಿದೆ. ಪೊಗದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು? ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್‌ಡಿಕೆ
ಒಂದು ಸರ್ಕಾರ, ಹತ್ತಾರು ಮುಖ್ಯಮಂತ್ರಿ: ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಆಡಳಿತ ಹಳಿತಪ್ಪಿದೆ. ‘ಒಂದು ಸರ್ಕಾರ, ಹತ್ತಾರು ಮುಖ್ಯಮಂತ್ರಿಗಳು’ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರು ಒಬ್ಬರೇ ಮುಖ್ಯಮಂತ್ರಿ ಅಲ್ಲ. ಇಲಾಖೆಗೊಬ್ಬ ಮುಖ್ಯಮಂತ್ರಿ ಇದ್ದಾರೆ. ಒಬ್ಬೊಬ್ಬರೂ ಮುಖ್ಯಮಂತ್ರಿಯಂತೆ ಹೇಳಿಕೆ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದರು. ಇಲ್ಲಿ ಸಿದ್ದರಾಮಯ್ಯ ಒಂದು ಹೇಳಿದರೆ, ಸತೀಶ್ ಜಾರಕಿಹೊಳಿ ಇನ್ನೊಂದು ಹೇಳುತ್ತಾರೆ. ಹಾಗಾದರೆ, ಇಲ್ಲಿ ಎಷ್ಟುಜನ ಸಿಎಂಗಳು ಇದ್ದಾರೆ ಎಂದು ಪ್ರಶ್ನಿಸಿದ ಅವರು, ಇದನ್ನು ಸರ್ಕಾರ ಅಂತ ಕರೀತೀರಾ? ಇಲ್ಲೇನಾದರೂ ಪಾರದರ್ಶಕತೆ ಅನ್ನೋದು ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.