ಕಾಂಗ್ರೆಸ್ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್‌ಡಿಕೆ
ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಒಂದೇ ಹುದ್ದೆಗೆ ಮುಖ್ಯಮಂತ್ರಿ ಅವರೇ ನಾಲ್ಕರಿಂದ ಐದು ಬಾರಿ ಆದೇಶ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಚನ್ನಪಟ್ಟಣ (ಜೂ.29): ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಒಂದೇ ಹುದ್ದೆಗೆ ಮುಖ್ಯಮಂತ್ರಿ ಅವರೇ ನಾಲ್ಕರಿಂದ ಐದು ಬಾರಿ ಆದೇಶ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ತಾಲೂಕಿನ ಮೈಲನಾಯಕನಹೊಸಹಳ್ಳಿಯಲ್ಲಿ ಟೊಯೊಟೋ ಸಂಸ್ಥೆ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಹುದ್ದೆಗೆ ಐದು ವ್ಯಕ್ತಿಗಳು ನಿಯುಕ್ತಿಗೊಳಿಸಿದ್ದಾರೆ. ಇದನ್ನು ಯಾರು ಆದೇಶ ಮಾಡಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರು ಹೊರನೋಟಕ್ಕೆ ನಾವು ಲಂಚ ತೆಗೆದುಕೊಳ್ಳಲ್ಲ ಅಂತಾರೆ. ನಾನು ಲಂಚ ಮುಟ್ಟಲ್ಲ, ನೀವು ಮುಟ್ಟಬೇಡಿ ಅಂತ ವೀರಾವೇಶದಲ್ಲಿ ಹೇಳುತ್ತಾರೆ. ಆದರೆ ಬೆಳಿಗ್ಗೆ ಎದ್ದರೆ ಕಾಂಗ್ರೆಸ್‌ನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಕಾಂಗ್ರೆಸ್‌ನವರು ವರ್ಗಾವಣೆ ಬಿಟ್ಟರೆ ಬೇರೇನೂ ಕೆಲಸ ಮಾಡ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಅಧಿಕಾರಿಗಳನ್ನು ಕಾಂಗ್ರೆಸ್‌ನವರು ಬಿಜೆಪಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರ ಬಂದಾಗ ತಲೆತಿರುಗದೆ ಗೌರವಯುತವಾಗಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಮೊದಲು ಸಾರ್ವಜನಿಕವಾಗಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ಕಲಿಯಬೇಕು.
Ramanagara: ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ
ಸ್ಪೀಕರ್ ಹೊಸ ಶಾಸಕರಿಗೆ ಮೂರು ದಿನ ಪಾಠ ಮಾಡಿದರು. ಅದರ ಬದಲು ಮಂತ್ರಿಗಳು ಯಾವ ರೀತಿ ಇರಬೇಕು ಅಂತ ಪಾಠ ಮಾಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದಲ್ಲೂ ಈಗ ಪರ್ಸೆಂಟೇಜ್ ಶುರುವಾಗುತ್ತೆ. ಅದರಲ್ಲಿ ಯಾವುದೇ ಅನುಮಾನ ಬೇಡ. ರೇಟ್ ಫಿಕ್ಸ್ ಮಾಡುವ ಸಲುವಾಗಿ ಎಲ್ಲಾ ಕೆಲಸ ನಿಲ್ಲಿಸಿದ್ದಾರೆ. ಕಳೆದ 4 ವರ್ಷದ ಬೆಂಗಳೂರು ಅಭಿವೃದ್ಧಿ ಬಗ್ಗೆ ತನಿಖೆ ಮಾಡ್ತೀವಿ ಅಂತ ಒಬ್ಬ ಮಂತ್ರಿ ಹೇಳ್ತಾರೆ. ಇದು ನಗೆಪಾಟಲಿನ ವಿಚಾರ.
4 ವರ್ಷದ ಅಭಿವೃದ್ಧಿ ಕಾರ್ಯಗಳ ತನಿಖೆ ಯಾವ ರೀತಿ, ಎಲ್ಲಿಂದ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಹಿಂದೆ ಸ್ವಾತಂತ್ರ್ಯ ಪೂರ್ವದ ರಾಜಮಹಾರಾಜರ ಕಾಲದಲ್ಲಿ ಗುಲಾಮಗಿರಿ ಇತ್ತು. ಮೊಘಲರು ಬಂದಾಗ ಒಂದು ರೀತಿಯ ಗುಲಾಮಗಿರಿ ಇತ್ತು. ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರ ಮಾಡಲು ಬಂದು ದೇಶ ಲೂಟಿ ಮಾಡಿ ಹೋದರು. ನಮ್ಮದು ಸಂಪದ್ಭರಿತ ದೇಶ, ಎಷ್ಟುಲೂಟಿ ಮಾಡಿದರು ಸಂಪತ್ತು ಕರಗಲ್ಲ. ಈಗಿನ ರಾಷ್ಟ್ರೀಯ ಪಕ್ಷಗಳು ಕೂಡಾ ಒಂದು ರೀತಿಯ ಈಸ್ಟ್ ಇಂಡಿಯಾ ಕಂಪನಿ ಇದ್ದ ಹಾಗೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಬೆಲೆ ಏರಿಕೆ ಕೇಂದ್ರ ಮಾಡಿರೋದಲ್ಲ. ಕಾಂಗ್ರೆಸ್‌ನವರೀಗ ಕೇಂದ್ರದ ಕಡೆಗೆ ಕೈ ತೋರಿಸುತ್ತಿದ್ದಾರೆ. ಅವರನ್ನು ಹೊಣೆ ಮಾಡಿದರೆ ಇವರು ಇರೋದ್ಯಾಕೆ. ಚುನಾವಣೆ ಪೂರ್ವದಲ್ಲಿ ಇಬ್ಬರೂ ಪೋಟೊ ಹಾಕಿ ಜಾಹೀರಾತು ಕೊಟ್ಟಿದ್ದರಲ್ಲ. ಬೆಲೆ ಏರಿಕೆ ಇಳಿಸ್ತೀವಿ ಅಂತ ತಾನೆ ಜನರ ಮತ ಕೇಳಿದ್ದು. ಈಗ ಕೇಂದ್ರದ ಕಡೆ ಕೈ ತೋರಿಸಿದರೆ ನೀವೇನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಶೀಘ್ರದಲ್ಲೇ ಮತ್ತೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮರು ಚುನಾವಣೆ ಆಗಲಿ ಅಂತ ನಾನೇನು ಬಯಸಲ್ಲ. ಚುನಾವಣೆ ಐದು ವರ್ಷಕ್ಕೆ ಬರುತ್ತೆ. ಯಾವಾಗ ಬರುತ್ತೋ ಕಾದು ನೋಡೊಣ. ಯಾರೋ ಒಬ್ಬ ಮಂತ್ರಿ ನಾನು ಬುಲ್ಡೋಜರ್ ಥರ ನುಗ್ತಿದ್ದೆ. ಯಾರಿಗೂ ಕೇರ್ ಮಾಡದೇ ಸ್ಟೀಲ್ ಬ್ರಿಡ್ಜ್ ಕಟ್ತಿದ್ದೆ ಅಂತಾರೆ. ಜನಾಭಿಪ್ರಾಯದ ವಿರುದ್ಧ ತೀರ್ಮಾನ ತೆಗೆದುಕೊಳ್ತೀನಿ ಅಂತಾರೆ. ಅವರನ್ನ ನಾನು ಕೇಳ್ತೀನಿ, ರಾಜ್ಯಕ್ಕೆ ಬುಲ್ಡೋಜರ್ ಸಂಸ್ಕೃತಿಯ ಅಗತ್ಯವಿಲ್ಲ. ಮುಂದೆ ನಿಮ್ಮ ಕಥೆ ಏನಾಗುತ್ತೋ ಕಾದು ನೋಡೊಣ ಬನ್ನಿ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಆಗಬಹುದು ಎಂದು ಅನಿಸುತ್ತಿದೆ: ಯೋಗೇಶ್ವರ್
ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದಾನಂದಗೌಡರು ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಅನ್ನುತ್ತಾರೆ. ಆದರೆ ನನಗೆ ಈ ಬಗ್ಗೆ ಏನು ಗೊತ್ತಿಲ್ಲ, ಯಾರ-ಯಾರು, ಎಲ್ಲೆಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಕಾದು ನೋಡೊಣ. ಸಮಯ ಬಂದಾಗ ಏನಾಗುತ್ತೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಯೋಗೇಶ್ವರ್ ದೆಹಲಿಯಲ್ಲಿ ಒಳ್ಳೆಯ ಸಂಪರ್ಕ ಹೊಂದಿರಬಹುದು. ಮೊನ್ನೆ ದೆಹಲಿಗೆ ಹೋಗಿ ಬಂದಿದ್ದಾರೆ. ಅಲ್ಲಿಂದ ಬಂದು ಹೇಳಿಕೆ ಕೊಟ್ಟಿರೋದನ್ನ ನೋಡಿದ್ದೇನೆ. ಅಲ್ಲಿ ಏನು ಮಾತುಕತೆ ಆಗಿದೆಯೋ ಗೊತ್ತಿಲ್ಲ. ಆದರೆ ಈ ವಿಚಾರಲ್ಲಿ ನಮ್ಮ ಜೊತೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.