ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ಹೋಗಿದ್ದು ಕನಕಪುರದ ಬಂಡೆಯಿಂದ: ಎಚ್‌ಡಿಕೆ
ಪಬ್ಲಿಕ್‌ನಲ್ಲಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಹರಿಹಾಯ್ದರು.
ರಾಮನಗರ (ಅ.09): ಪಬ್ಲಿಕ್‌ನಲ್ಲಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಹರಿಹಾಯ್ದರು. ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದಲ್ಲಿ ನಡೆದ ರಾಮನಗರ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, 2018ರಲ್ಲಿ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರ ಹೋಗಿದ್ದು ಕನಕಪುರದ ಬಂಡೆ ಮಹಾಶಯ ಡಿ.ಕೆ.ಶಿವಕುಮಾರ್ ಅವರಿಂದಲೇ ಹೊರತು ನನ್ನಿಂದ ಅಲ್ಲ.
ನನಗೂ ರಮೇಶ್ ಜಾರಕಿಹೊಳಿ ಅವರಿಗೂ ವೈಷಮ್ಯ ಇತ್ತಾ? ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ನಾನು ಬಲಿಪಶುವಾದೆ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಏಕೆ. ನಾನು ಕುಮಾರಣ್ಣನ ಸರ್ಕಾರ ಉಳಿಸೋಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕಿ ಪ್ರಚಾರ ತೆಗೆದುಕೊಂಡರು. ಆಮೇಲೆ ನೋಡಿದರೆ ಒಳಗೊಳಗೇ ಮಾಡುವುದೆಲ್ಲವನ್ನು ಮಾಡಿದರು ಎಂದು ಕಿಡಿಕಾರಿದರು. ಅವರನ್ನು ನಂಬಿ ನಾನು ಕುತ್ತಿಗೆ ಕುಯ್ದುಕೊಂಡಿದ್ದೇನೆ. ನಿಮ್ಮ ಕುತ್ತಿಗೆಯನ್ನು ಕುಯ್ದಿದ್ದೇನೆ. ಅವರಿಂದ ನನಗೆ, ನಿಮಗೆ ಅನ್ಯಾಯ ಆಗಿದೆ. ಅದನ್ನು ಬಿಟ್ಟರೆ ಕನಕಪುರ ಜನರಿಗೆ ನನ್ನಿಂದ ಎಳ್ಳಷ್ಟೂ ಅನ್ಯಾಯ ಆಗಿಲ್ಲ. ಆಗಿರುವ ಅನ್ಯಾಯ ಸರಿ ಮಾಡುವ ಹೊಣೆ ನನ್ನದು ಎಂದು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್: ಸ್ಫರ್ಧಿಗಳಿಗೆ ಶಾಕ್!
ದೇವೇಗೌಡರ ಒತ್ತಡಕ್ಕೆ ಮಣಿದು 2018 ರಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ ಕೈ ಜೋಡಿಸದೆ ಇದ್ದಿದ್ದರೆ ಇಂದು ಜೆಡಿಎಸ್ 19 ಸ್ಥಾನಕ್ಕೆ ಬರುತ್ತಿರಲಿಲ್ಲ. 50ರಿಂದ 60 ಸ್ಥಾನ ಗೆಲ್ಲುತ್ತಿದ್ದೆವು. ಕಾಂಗ್ರೆಸ್ ಮೈತ್ರಿಯಿಂದ ನನ್ನ ಕಾರ್ಯಕರ್ತರಿಗೆ ರಕ್ಷಣೆ ಮಾಡಲು ಆಗಲಿಲ್ಲ ಇದರ ಬಗ್ಗೆ ನನಗೆ ಪಶ್ಚಾತ್ತಾಪ ಇದೆ ಎಂದರು. ಕೋಟೆ ಕಟ್ಟಿ ಮೆರೆದೋರೆಲ್ಲ ಏನೇನೋ ಆಗಿ ಹೋದರು. ಅದು ಇವರಿಗೂ ಅನ್ವಯ ಆಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ 2ರಿಂದ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬೇಕು. ಅದಕ್ಕೆ ನೀವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಈ ಮೈತ್ರಿಕೂಟದ ಮೂಲಕ ಇಡೀ ರಾಜ್ಯಕ್ಕೆ ದೇಶಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಎಂಡಿದರು.
ನಾವೆಲ್ಲರೂ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ. ಯಾರೇ ಮೈತ್ರಿಕೂಟದ ಅಭ್ಯರ್ಥಿ ಆದರೂ ಒಟ್ಟಾಗಿ ಕೆಲಸ ಮಾಡೋಣ. ಮಂಡ್ಯ ಚುನಾವಣೆಯಲ್ಲಿ ನಿಖಿಲ್ಗೆ ಮೋಸ ಮಾಡಿದ ಹಾಗೆ ಇಲ್ಲಿಯೂ ನಾವು ಮಾಡಿದ್ದಿದ್ದರೆ ಆ ವ್ಯಕ್ತಿ (ಡಿ.ಕೆ.ಸುರೇಶ್) ಯ ಕಥೆ ಅಂದೇ ಮುಗಿದು ಹೋಗುತ್ತಿತ್ತು. ಆದರೆ, ನಾವು ಮೈತ್ರಿ ಧರ್ಮ ಪಾಲಿಸಿದೆವು. ಅವರು ನಮಗೆ ಕೇಡು ಬಗೆದರು ಎಂದು ಹೇಳಿದರು. ಈ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಇಷ್ಟು ಕೆಟ್ಟ ಸರ್ಕಾರ ನಾನು ನೋಡಿಯೇ ಇಲ್ಲ. ಆಂತರಿಕ ಕಚ್ಚಾಟದಿಂದ ಈ ಸರ್ಕಾರ ಹೋಗುತ್ತದೆ. 2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ.
ಆ ಚುನಾವಣೆಗೆ ಆ ವ್ಯಕ್ತಿ ಅಭ್ಯರ್ಥಿ ಆಗುವುದೇ ಅನುಮಾನ, ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ಜೀವನದಲ್ಲಿ ಅವರ (ಡಿಕೆಶಿ) ಜತೆ ಎಂದೂ ರಾಜಿ ಆಗಿಲ್ಲ. ಒಮ್ಮೆ ಅವರ ಜತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸುತ್ತಿದ್ದೇನೆ. ಅವರು ಒಮ್ಮೆ ತಿಹಾರ್ ನೋಡಿಕೊಂಡು ಬಂದಿದ್ದಾರೆ. ಮತ್ತೆ ಅಲ್ಲಿಗೆ ಪರಮನೆಂಟಾಗಿ ಹೋದರೂ ಅಚ್ಚರಿ ಅಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್ ಗೆ ಓಡುವ ಕಾಲ ಹತ್ತಿರದಲ್ಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಲಿಂಗಾಯತರಿಗೆ ಯಾವ ಸ್ಥಾನ ಕೊಟ್ಟಿದ್ದೀರಿ?: ವೀರಶೈವ ಲಿಂಗಾಯತರಿಗೆ ಎಷ್ಟು ಸ್ಥಾನ ಕೊಟ್ಟಿದ್ದೇವೆ ಎಂದು ಸಂಖ್ಯೆ ಹೇಳುವುದಲ್ಲ, ಯಾವ ಸ್ಥಾನ ಕೊಟ್ಟಿದ್ದೀರಿ ಎನ್ನುವುದು ಮುಖ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪನವರು ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಹೇಳಿದ್ದಾರೆ. ಇಲ್ಲಿ ಸಂಖ್ಯೆಗಿಂತ ಇಲಾಖೆಯಲ್ಲಿ ಯಾವ್ಯಾವ ಅಧಿಕಾರಿಗೆ ಯಾವ ಇಲಾಖೆ ಕೊಟ್ಟಿದ್ದಾರೆ ಎಂಬುದು ಮುಖ್ಯ.
ಮೋದಿ ಮತ್ತೊಮ್ಮೆ ಪ್ರಧಾನಿ: ಮಂಗಳೂರಲ್ಲಿ ‘ಮೋದಿ ಬ್ರಿಗೇಡ್’ ಸಂಘಟನೆ ಅಸ್ತಿತ್ವಕ್ಕೆ
ಕೆಲಸಕ್ಕೆ ಬಾರದ ಜಾಗ ಕೊಟ್ಟು, ಇಂತಹ ಸಮುದಾಯಕ್ಕೆ ಇಷ್ಟು ಸಂಖ್ಯೆ ಕೊಟ್ಟಿದ್ದೇವೆ ಎಂದರೆ ಅದರಿಂದ ಏನು ಉಪಯೋಗವೆಂದು ಅವರು ಧೈರ್ಯವಾಗಿ ಹೇಳಿದ್ದಾರೆ ಎಂದರು. ಹಲವಾರು ಸಮುದಾಯಗಳಿಗೂ ಪರಿಸ್ಥಿತಿ ಏನಾಗಿದೆ ಎನ್ನುವುದು ಗೊತ್ತಿದೆ. ಆ ಮಾನದಂಡ ಏನಿದೆ ಎಂಬುದು ಕೂಡ ನನಗೆ ಗೊತ್ತಿದೆ. ಅಧಿಕಾರಿಗಳು ಮತ್ತು ನೌಕರರ ವರ್ಗದವರಲ್ಲಿ ಅಸಮಾಧಾನ ಇದೆ. ಇದು ಚುನಾವಣೆಯ ಸಂದರ್ಭದಲ್ಲಿ ಸ್ಫೋಟಗೊಳ್ಳಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.