ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಎಚ್‌ಡಿಕೆ ಟಾಂಗ್
ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲೀಫ್ ಕೊಟ್ಟಿಲ್ಲ, ಇವರೆ ತೆಗೆದುಕೊಂಡಿದ್ದಾರೆ. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಡುತ್ತೇವೆ. ಬಂದ ಮೇಲೆ ಎಲ್ಲಾ ಕೇಸ್‌ಗಳನ್ನ ಮುಚ್ಚಿಹಾಕಬಹುದು ಅಂತಾ ಐದಾರು ತಿಂಗಳು ಮುಂದೂಡುತ್ತಿದ್ದಾರೆ.
ಚನ್ನಪಟ್ಟಣ (ಡಿ.01): ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲೀಫ್ ಕೊಟ್ಟಿಲ್ಲ, ಇವರೆ ತೆಗೆದುಕೊಂಡಿದ್ದಾರೆ. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಡುತ್ತೇವೆ. ಬಂದ ಮೇಲೆ ಎಲ್ಲಾ ಕೇಸ್‌ಗಳನ್ನ ಮುಚ್ಚಿಹಾಕಬಹುದು ಅಂತಾ ಐದಾರು ತಿಂಗಳು ಮುಂದೂಡುತ್ತಿದ್ದಾರೆ. ಇದೆಲ್ಲ ತಂತ್ರಗಾರಿಕೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ರಿಲೀಫ್ ದೊರೆತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಚನ್ನಪಟ್ಟಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಲ್ಪ ದಿನ ಪ್ರಕರಣವನ್ನು ಮುಂದೆ ಎಳೆಯಬೇಕಲ್ಲ. ಅದಕ್ಕಾಗಿ ಈ ರೀತಿ ಮಾಡಿದ್ದಾರೆ. ಇದೆಲ್ಲ ತಂತ್ರಗಾರಿಕೆ ಅಷ್ಟೆ. ಅದು ಮುಂದೆ ಏನೇನಾಗುತ್ತೋ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ಆತ್ಮಸಾಕ್ಷಿಯಿಂದ ಕೆಲಸ ಮಾಡಿದರೆ ಮಾತ್ರ ರಾಜಕಾರಣದಲ್ಲಿ ಉಳಿಯಲು ಸಾಧ್ಯ: ಡಿ.ಕೆ.ಸುರೇಶ್
ಸಿದ್ದರಾಮಯ್ಯಗೆ ತಿರುಗೇಟು: ನಾನು ವಕೀಲನಾಗಿರುವುದಕ್ಕೆ ಕೇಸ್ ವಾಪಸ್ ತೆಗೆದುಕೊಂಡಿದ್ದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಅವರು ದೊಡ್ಡ ವಕೀಲರು ಅಂತ ನನಗೆ ಗೊತ್ತು. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರಲ್ವಾ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೋ ಮಾಡಿದ್ರು, ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡ್ರಲ್ಲ. ಆ ರೀತಿಯ ವಕೀಲರು ಇವರು ಎಂದು ತಿರುಗೇಟು ನೀಡಿದರು.
ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಆ ವಕೀಲಿಕೆಯಲ್ಲಿ ಇವರು ಬುದ್ಧಿವಂತರಿದ್ದಾರೆ. ಎಸಿಬಿ ರಚನೆ ಮಾಡಿ, ಇವರ ಮೇಲೆ ಬಂದ ಕೇಸ್‌ಗಳನ್ನ ಮುಚ್ಚಿಹಾಕಿಕೊಂಡರು. ನಾನು ಸಿಎಂ ಆಗಿದ್ದಾಗ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಹೋರಾಟ ಮಾಡಿದ್ದೆ. ನನ್ನ ಮೇಲೆ ಇವರ ಸರ್ಕಾರದ 15 ಕೇಸ್ ಇತ್ತಲ್ಲ. ನಾನು ಆಗ ಇವರ ರೀತಿ ನಡೆದುಕೊಂಡೆನಾ?. ಇಲ್ಲ ಎರಡನೇ ಬಾರಿ ಸಿಎಂ ಆದಾಗ ನನ್ನ ಮೇಲಿನ ಕೇಸ್ ಮುಚ್ಚಿಹಾಕಿದ್ನಾ?. ಮೆರಿಟ್ ಇದ್ದರೆ ಮಾಡಿಕೊಳ್ಳಲಿ ಅಂತ ಬಿಟ್ಟಿದ್ದೀನಿ. ಅವರಿಗೂ, ನಮಗೂ ಇರುವ ವ್ಯತ್ಯಾಸ ಅಷ್ಟೇ ಎಂದರು.
ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇದು ಜನ ಸಾಮಾನ್ಯರ ಜೀವನ್ಮರಣದ ಪ್ರಶ್ನೆ. ಸಿಬ್ಬಂದಿ ಮುಷ್ಕರ ನಡೆಸಿದರೆ ಜನಸಾಮಾನ್ಯರಿಗೆ ತೊಂದರೆ ಆಗುತ್ತೆ. ಈಗಾಗಲೆ ಅಲ್ಲಿನ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರ ತಕ್ಷಣ ಸಿಬ್ಬಂದಿಯ ಸಂಬಳ ನೀಡಬೇಕು ಎಂದು ಆಗ್ರಹಿಸಿದರು.
ನಿಮಾನ್ಸ್‌ನಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮಗು ಸಾವು ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಮಾನ್ಸ್‌ನಲ್ಲಿ ರೋಗಿಗಳ ಒತ್ತಡ ಜಾಸ್ತಿ. ಕೇಂದ್ರ ಸರ್ಕಾರಕ್ಕೆ ಒಳಪಡುವ ಆಡಳಿತಮಂಡಳಿ ಇದೆ. ಒಂದು ಕಡೆ ಮೂಲ ಸೌಕರ್ಯದ ಕೊರತೆ ಇದೆ. ಸರ್ಕಾರಗಳು ಕ್ರಮ ಕೈಗೊಳ್ಳದಿದ್ದಾಗ ಒತ್ತಡ ಜಾಸ್ತಿ ಆಗುತ್ತದೆ. ಸರ್ಕಾರ ಇವುಗಳನ್ನ ಸರಿಪಡಿಸಬೇಕು. ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.
ಶಿಕ್ಷಕರ ಕೊರತೆ ಇದೆ: ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಮುಷ್ಕರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅತಿಥಿ ಉಪನ್ಯಾಸಕರ ಬೇಡಿಕೆ ಬಗ್ಗೆ ಸರ್ಕಾರ ಗೌರವಿಸುತ್ತಿಲ್ಲ. ಸಾಕಷ್ಟು ಶಾಲಾ ಕಾಲೇಜುಗಳಲ್ಲಿ ಶಿಕ್ಷರ ಕೊರತೆ ಇದೆ. ಜತೆಗೆ ಹಲಾವಾರು ಸಮಸ್ಯೆ ಇದೆ. ಈ ರೀತಿ ಆದರೆ ಸರ್ಕಾರಿ ಕಾಲೇಜುಗಳಿಗೆ ಪೋಷಕರು ಹೇಗೆ ಮಕ್ಕಳನ್ನು ಸೇರಿಸುತ್ತಾರೆ. ಸರ್ಕಾರಿ ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಶಾಲಾ ಕಾಲೇಜಿನ ಮೂಲಸೌಕರ್ಯದ ಆದ್ಯತೆ ನೀಡೋ ಆಸಕ್ತಿ ಈ ಸರ್ಕಾರದಲ್ಲಿ ಕಾಣುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ಈ ಸರ್ಕಾರ ಆದ್ಯತೆ ನೀಡುತ್ತಿಲ್ಲ. ಇದರಿಂದ ಪೋಷಕರು ಖಾಸಗಿ ಶಾಲಾ ಕಾಲೇಜಿಗೆ ಕಳುಹಿಸುತ್ತಾರೆ. ಇದರಿಂದ ಪೋಷಕರಿಗೆ ಸಾಕಷ್ಟು ಹೊರೆ ಆಗುತ್ತಾ ಇದೆ. 10 ಸಾವಿರ ಶಿಕ್ಷಕರ ನೇಮಕ ಮಾಡಲು ಪ್ರಪೋಸಲ್ ಕಳುಹಿಸಿದ್ದೇವೆ ಅಂತ ಇಲಾಖೆ ಹೇಳ್ತಾ ಇದೆ. ಕಳೆದ 6 ತಿಂಗಳಿಂದಲೂ ಇದನ್ನೇ ಹೇಳ್ತಾ ಇದೀರಾ. ಇನ್ನು ಎಷ್ಟು ದಿನ ಬೇಕು ಎಂದು ಪ್ರಶ್ನಿಸಿದರು.
ಎಷ್ಟು ದಿನ ಗ್ಯಾರೆಂಟಿ ಕೊಡುತ್ತೀರಾ?: ಐದು ಗ್ಯಾರಿಂಟಿ ಕೊಟ್ಟಿದ್ದೀವಿ. ನುಡಿದಂತೆ ನಡೆದಿದ್ದೇವೆ ಅಂತ ಹೇಳುತ್ತಾ ಇದ್ದೀರಾ, ನಿಮ್ಮ ಗ್ಯಾರಂಟಿ ಎಷ್ಟು ದಿನ ಕೊಡ್ತೀರಾ?. ನಿರಂತರವಾಗಿ ಕೊಡಲು ನಿಮಗೆ ಸಾಧ್ಯನಾ?. ಇದರಿಂದ ಸರ್ಕಾರದ ಮೇಲೆ ಆಗುವ ಆರ್ಥಿಕ ಹೊರೆ ಏನು? ಅಭಿವೃದ್ಧಿ ಕಾರ್ಯಗಳ ಮೇಲೆ ಆಗುವ ದುಷ್ಪರಿಣಾಮ ಏನು? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಂಚ ಗ್ಯಾರಂಟಿ ಜಾರಿ: ಸಂಸದ ಡಿ.ಕೆ.ಸುರೇಶ್
ನಾನು ಕಳೆದ 6 ತಿಂಗಳಿಂದ ನೋಡುತ್ತಾ ಇದ್ದೇವೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಾ ಇಲ್ಲ. ದಿನ ಬೆಳಗ್ಗೆ ಎದ್ದರೆ ನೂರಾರು ಕೋಟಿ ವೆಚ್ಚದಲ್ಲಿ ಜಾಹೀರಾತು ನೀಡುತ್ತಾ ಇದ್ದೀರ. ಎಷ್ಟು ದಿನ ಇದನ್ನ ಹೇಳಿಕೊಂಡು ಹೋಗುತ್ತೀರಾ. ನಿಮ್ಮ ಎರಡು ಸಾವಿರದಲ್ಲಿ ಜನ ಬದುಕಬಹುದಾದ್ರೆ. ತುಮಕೂರಿನಲ್ಲಿ ಜನ್ಮಕೊಟ್ಟ ತಂದೆನೇ ಮಕ್ಕಳನ್ನ ಕೊಲೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡರು. ಆ ಕುಟುಂಬ ನಾಶ ಆಯ್ತಲ್ಲ. ನಿಮ್ಮ ಎರಡು ಸಾವಿರ ರೂ. ಜನರನ್ನು ಬದುಕಿಸುತ್ತದಾ? ಸರ್ಕಾರ ಜನರು ಆರ್ಥಿಕ ಬದುಕನ್ನು ಕಟ್ಟಿಕೊಳ್ಳುವ ಕಾರ್ಯಕ್ರಮಗಳನ್ನು ಕೊಡಬೇಕು ಎಂದರು.