Asianet Suvarna News Asianet Suvarna News

ಗುಲಾಮಗಿರಿ ಕಾಂಗ್ರೆಸ್ ಸಂಸ್ಕೃತಿ: ಕುಮಾರಸ್ವಾಮಿ ವಾಕ್‌ ಪ್ರಹಾರ

ದೇವೇಗೌಡರಿಗೆ ರಾಜಕೀಯವಾಗಿ ಹಾಸನಕ್ಕಿಂತ ಹೆಚ್ಚು ಶಕ್ತಿ ನೀಡಿದ್ದು ಮಂಡ್ಯ ಜಿಲ್ಲೆ. ನನ್ನ ಮಾತುಗಳು ನಾಟಕೀಯ ಮಾತಲ್ಲ. ನಾನು, ನನ್ನ ಕುಟುಂಬದ ಯಾರೂ ಯಾರಿಗೂ ದ್ರೋಹ ಮಾಡಿದವರಲ್ಲ. ಬೆಳೆಯುವವರ ಹಿಂದೆ ನಿಂತು ಶಕ್ತಿ ತುಂಬಿದ್ದೇವೆ ಎಂದು ಸಚಿವ ಚಲುವರಾಯಸ್ವಾಮಿ ಗುರಿಯಾಗಿಸಿಕೊಂಡು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 

Former CM HD Kumaraswamy Slams Congress grg
Author
First Published Mar 16, 2024, 4:29 AM IST

ಮಂಡ್ಯ(ಮಾ.16):  ಗುಲಾಮಗಿರಿ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ. ಜೆಡಿಎಸ್ ರೈತರ ಪಕ್ಷವೇ ಹೊರತು ಗುಲಾಮಗಿರಿ ಪಕ್ಷವಲ್ಲ. ನಾವು ಯಾವ ಕಾಲದಲ್ಲೂ ಜನರನ್ನು ಗುಲಾಮರನ್ನಾಗಿ ಮಾಡಿಲ್ಲ. ಜನರ ಗುಲಾಮರಾಗಿ ಕೆಲಸ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ವಾಕ್‌ ಪ್ರಹಾರ ನಡೆಸಿದರು.

ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಆಯೋಜಿಸಿದ್ದ ಮಂಡ್ಯ ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಡಾ.ಮಂಜುನಾಥ್ ಅವರನ್ನು ಸ್ಪರ್ಧೆ ಮಾಡುವಂತೆ ನಾನು ಹೇಳಿಲ್ಲ. ಅವರೂ ಸಹ ಬಯಸಿರಲಿಲ್ಲ. ಜನರ ಒತ್ತಾಯದ ಮೇರೆಗೆ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಕಾಂಗ್ರೆಸ್‌ನವರು ದೇವೇಗೌಡರ ಕುಟುಂಬದ ಗುಲಾಮರಾಗೋದು ಬೇಡ ಎಂದು ಹೇಳುತ್ತಿದ್ದಾರೆ. ನಾವು ರಾಮನಗರ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿಲ್ಲ. ನಾವು ಅವರ ಸೇವಕರಾಗಿದ್ದೇವೆ. ರಾಮನಗರ ಜನರನ್ನು ಗುಲಾಮರನ್ನಾಗಿ ಕಾಣೋದು ಕಾಂಗ್ರೆಸ್‌ನವರು ಎಂದು ಹರಿಹಾಯ್ದರು.

ಚಿಕ್ಕಬಳ್ಳಾಪುರ ಬಿಜೆಪಿಯ ಭದ್ರಕೋಟೆ ಆಗಬೇಕು: ಮಾಜಿ ಸಚಿವ ಡಾ.ಕೆ.ಸುಧಾಕರ್‌

ದೇವೇಗೌಡರಿಗೆ ರಾಜಕೀಯವಾಗಿ ಹಾಸನಕ್ಕಿಂತ ಹೆಚ್ಚು ಶಕ್ತಿ ನೀಡಿದ್ದು ಮಂಡ್ಯ ಜಿಲ್ಲೆ. ನನ್ನ ಮಾತುಗಳು ನಾಟಕೀಯ ಮಾತಲ್ಲ. ನಾನು, ನನ್ನ ಕುಟುಂಬದ ಯಾರೂ ಯಾರಿಗೂ ದ್ರೋಹ ಮಾಡಿದವರಲ್ಲ. ಬೆಳೆಯುವವರ ಹಿಂದೆ ನಿಂತು ಶಕ್ತಿ ತುಂಬಿದ್ದೇವೆ ಎಂದು ಸಚಿವ ಚಲುವರಾಯಸ್ವಾಮಿ ಗುರಿಯಾಗಿಸಿಕೊಂಡು ಹೇಳಿದರು.

ನಾವು ಮಹಾರಾಜರ ವಂಶಸ್ಥರಲ್ಲ:

ಹೊಟ್ಟೆಪಾಡಿಗಾಗಿ ಜೆಡಿಎಸ್ ಕುಟುಂಬ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂಬ ಚಲುವರಾಯಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು (ಚಲುವರಾಯಸ್ವಾಮಿ) ಮಹಾರಾಜರ ವಂಶಸ್ಥರು. ನಾವು ಸಾಮಾನ್ಯ ರೈತ ಕುಟುಂಬದಿಂದ ಬಂದವರು ಎಂದು ಅಣಕಿಸಿದರಲ್ಲದೇ, ರಾಜಕಾರಣಕ್ಕೆ ಯಾವ ರೀತಿ ಅವರು ಬಂದರು, ಯಾವ ರೀತಿ ಬೆಳೆದರು ಎನ್ನುವುದು ನನಗೆ ಗೊತ್ತಿದೆ. ೧೯೯೯ರ ಚುನಾವಣೆ ವೇಳೆ ಬೆಳ್ಳೂರಿನಲ್ಲಿ ನಾನು ಭಾಷಣ ಮಾಡುತ್ತಾ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಚಲುವರಾಯಸ್ವಾಮಿ ಮಂತ್ರಿ ಮಾಡುತ್ತೇನೆ. ಅವರನ್ನು ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮನವಿ ಮಾಡಿದ್ದೆ. ಆದರೆ, ಆ ಚುನಾವಣೆಯಲ್ಲಿ ಚಲುವರಾಯಸ್ವಾಮಿಯನ್ನು ಬಿಟ್ಟು ನಾವೆಲ್ಲರೂ ಸೋತಿದ್ದಾಗಿ ನೆನೆಸಿಕೊಂಡರು.

೨೦೦೪ರಲ್ಲಿ ಬಹುಮತದೊಂದಿಗೆ ಯಾವ ಪಕ್ಷವೂ ಅಧಿಕಾರಕ್ಕೆ ಬರಲಿಲ್ಲ. ಆಗ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆವು. ನಮ್ಮೊಂದಿಗೆ ೫೮ ಜನ ಶಾಸಕರಿದ್ದರು. ಅದರಲ್ಲಿ ಆರು ಮಂದಿ ಮಂತ್ರಿಯಾಗಿದ್ದರು. ಸಂಪುಟಕ್ಕೆ ಮಂಡ್ಯದಿಂದ ಹೆಸರನ್ನು ತೆಗೆದುಕೊಳ್ಳುವಾಗ ಶ್ರೀರಂಗಪಟ್ಟಣದ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡರ ಹೆಸರನ್ನು ತೆಗೆದುಕೊಂಡಿದ್ದೆವು. ಆದರೆ, ೫೦ ಶಾಸಕರ ಮನವೊಲಿಸಿ ವಿಜಯಲಕ್ಷ್ಮೀ ಅವರ ಹೆಸರನ್ನು ತೆಗೆದು ಚಲುವರಾಯಸ್ವಾಮಿ ಹೆಸರನ್ನು ಸೇರಿಸಿಕೊಂಡೆವು. ಇಂತಹವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಸಾಲ ಮಾಡಿ ಪಕ್ಷ ಕಟ್ಟಿದ್ದೇವೆ:

ದೇವೇಗೌಡರು ರಾಜಕಾರಣಕ್ಕೆ ಬಂದು ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿದರೇ ವಿನಃ ಹಣ ಮಾಡಲಿಲ್ಲ. ನಾವು ಸಾಲ ಮಾಡಿ ಪಕ್ಷ ಕಟ್ಟಿದ್ದೇವೆ. ಬಡ್ಡಿ ಹಣ ಕಟ್ಟಿ ಪಕ್ಷವನ್ನು ಬೆಳೆಸಿದ್ದೇವೆ. ಬೇರೆಯವರು ಕೊಟ್ಟ ಹಣವನ್ನು ಸ್ವಂತಕ್ಕೆ ನಾವೆಂದೂ ಬಳಸಿಕೊಂಡಿಲ್ಲ. ಪಕ್ಷ ಸಂಘಟನೆ, ರಾಜಕಾರಣಕ್ಕಾಗಿ ಬಳಸಿದ್ದೇವೆ. ಪ್ರಾಮಾಣಿಕವಾಗಿ, ಜನರ ಅಭಿಮಾನ, ಬೆಂಬಲದಿಂದ ಕಟ್ಟಿ ಬೆಳೆಸಿದ ಪಕ್ಷದಿಂದ ಬೆಳೆದುಹೋದ ಸಿದ್ದರಾಮಯ್ಯನವರು ಜಾತ್ಯತೀತ ಪದವನ್ನು ತೆಗೆಯುವಂತೆ ಹೇಳುತ್ತಾರೆ. ನಾವು ರಾಜಕೀಯದಲ್ಲಿ ಹಲವರನ್ನು ಬೆಳೆಸಿದ್ದೇವೆಯೇ ವಿನಃ ಹಾಳುಮಾಡಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಹಿಂದೊಮ್ಮೆ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿಯಿಂದ ಹೊರಬಂದಾಗ ನನ್ನೊಂದಿಗೆ ಮಾತನಾಡುತ್ತಾ, ನಾನು ಬಿಜೆಪಿ ಬಿಡಲಿದ್ದೇನೆ. ನಿಮ್ಮೊಂದಿಗೆ ಸೇರಿಕೊಳ್ಳುವೆ ಎಂದಿದ್ದರು. ಆದರೆ, ನಾನು ನಿಮ್ಮೊಂದಿಗೆ ದೊಡ್ಡ ಸಂಘಟನೆ ಇದೆ. ದುಡುಕಿನ ನಿರ್ಧಾರ ಮಾಡಬೇಡಿ. ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದಿದ್ದೆ. ಅವರನ್ನು ಹಾಳು ಮಾಡಬೇಕೆಂದಿದ್ದರೆ ಅವರಿಂದ ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೆ. ಆಗ ಅವರ ಪರಿಸ್ಥಿತಿ ಏನಾಗಿರೋದು. ಅಂತಹ ಕೆಲಸವನ್ನು ನಾನು ಮಾಡಲಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಚಕ್ರವರ್ತಿಯಿಂದ ಅಚ್ಚರಿಯ ಹೇಳಿಕೆ: ಏನಂದ್ರು ಸೂಲಿಬೆಲೆ!

ಜಿಲ್ಲೆಯ ಜನರು ಅನ್ಯಾಯ ಮಾಡಿಲ್ಲ:

೨೦೧೯ರ ಲೋಕಸಭೆ ಚುನಾವಣೆ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನರು ನಮಗೆ ಅನ್ಯಾಯ ಮಾಡಿಲ್ಲ. ನಮ್ಮನ್ನು ಬೆಳೆಸಿದ್ದೀರಿ, ಉಳಿಸಿದ್ದೀರಿ. ನಾವೇ ಹಲವಾರು ತಪ್ಪುಗಳನ್ನು ಮಾಡಿದ್ದೇವೆ. ನೀವು ಮತ ಕೊಟ್ಟಿದ್ದೀರಿ. ನಾವು ತಪ್ಪು ಮಾಡಿದ್ದೇವೆ. ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಟಿ.ಮಂಜು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಡಿ.ಸಿ.ತಮ್ಮಣ್ಣ, ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಜಿ.ಬಿ.ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್.ಮಂಜು, ಅಂಬುಜಮ್ಮ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios