ಆತ್ಮಸಾಕ್ಷಿ ಮತದಿಂದ ಅಲ್ಲ, ಅಡ್ಡ ಮತದಾನದಿಂದ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಎಂದೆಲ್ಲ ಭಜನೆ ಮಾಡುವ ಪಕ್ಷ ಮಾಡುವ ಕೆಲಸವೇ ಎಂದು ಕಿಡಿಕಾರಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ 

ಬೆಂಗಳೂರು(ಫೆ.28):  ಚುನಾವಣೆ ವ್ಯವಸ್ಥೆಯಲ್ಲಿ ಅಡ್ಡ ಮತದಾನಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಜೊತೆಗೆ ಆತ್ಮಸಾಕ್ಷಿ ಮತವೆಂದರೆ ಅಡ್ಡಮತ ಎಂದೇ ಅರ್ಥ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆತ್ಮಸಾಕ್ಷಿ ಮತದಿಂದ ಅಲ್ಲ, ಅಡ್ಡ ಮತದಾನದಿಂದ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಎಂದೆಲ್ಲ ಭಜನೆ ಮಾಡುವ ಪಕ್ಷ ಮಾಡುವ ಕೆಲಸವೇ ಎಂದು ಕಿಡಿಕಾರಿದರು.

ಶಿವರಾಮ್ ಹೆಬ್ಬಾರ್ ಕಾಣೆಯಾಗಿದ್ದಾರೆ ಹುಡುಕಿಕೊಡುವಂತೆ ಪಂಚಾಯ್ತಿ ಸದಸ್ಯನಿಂದ ಯಲ್ಲಾಪುರ ಠಾಣೆಗೆ ದೂರು!

ಆತ್ಮಸಾಕ್ಷಿ ಮತ ಎನ್ನುವ ಪದವನ್ನು ದೇಶದಲ್ಲಿ ಮೊದಲು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ. 1969ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಕೈಗೊಂಬೆ ರಾಷ್ಟ್ರಪತಿ ಬೇಕೆಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ವಿರುದ್ಧ ವಿ.ವಿ.ಗಿರಿ ಅವರನ್ನು ಕಣಕ್ಕೆ ಇಳಿಸಿ ಆತ್ಮಸಾಕ್ಷಿ ಮತ ಹಾಕುವಂತೆ ಕರೆ ನೀಡಿದ್ದರು. ಅಂದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ಅವರು ಅಡ್ಡಮತಗಳಿಂದ ಸೋತರು. ಅಡ್ಡಮತ ಪರಿಕಲ್ಪನೆಯ ಜನಕನೇ ಕಾಂಗ್ರೆಸ್ ಎಂದು ವಿವರಿಸಿದರು.

ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ:

ಜೆಡಿಎಸ್ ಪಕ್ಷದ 19 ಶಾಸಕರು ಒಟ್ಟಾಗಿದ್ದೇವೆ. ಎಲ್ಲರೂ ಬಂದು ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದ್ದಾರೆ. ನಮ್ಮ ಶಾಸಕರನ್ನು ಸೆಳೆಯುವ ಕಾಂಗ್ರೆಸ್ ತಂತ್ರ ಫಲಿಸಲಿಲ್ಲ. ಪಕ್ಷದ ಶಾಸಕರ ಒಗ್ಗಟ್ಟಲ್ಲಿದ್ದೇವೆ ಎಂಬ ಸಂದೇಶವನ್ನು ಕಾಂಗ್ರೆಸ್‌ ರವಾನಿಸಲು ಎನ್‌ಡಿಎ ಅಭ್ಯರ್ಥಿಯಾಗಿ ರೆಡ್ಡಿ ಅವರನ್ನು ಕಣಕ್ಕಿಳಿಸಲಾಯಿತು ಎಂದು ಇದೇ ವೇಳೆ ಹೇಳಿದರು.

DK Shivakumar: ಕಾಂಗ್ರೆಸ್‌ಗೆ ಆತ್ಮಸಾಕ್ಷಿಯ ವೋಟು ಹಾಕ್ತಾರೆ, ದುಡ್ಡಿದೆ ಎಂದು ಶಾಸಕರನ್ನ ಬೆದರಿಸಿದ್ರೆ ಆಗಲ್ಲ: ಡಿಕೆಶಿ

ರಾಜ್ಯಸಭೆ ಚುನಾವಣೆಯ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿ ಮತ್ತಷ್ಟು ಬಲವಾಗಿದೆ. ಪ್ರಜಾಪ್ರಭುತ್ವ ದ್ರೋಹಿಗಳು, ಸಂವಿಧಾನ ದ್ರೋಹಿಗಳು ಯಾರು ಎಂಬುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಅಲ್ಲಿ ಅಧಿಕಾರ ಅನುಭವಿಸಿದವರು ಈಗ ಅದೇ ಬಿಜೆಪಿಗೆ ಟೋಪಿ ಹಾಕಿ ಅಡ್ಡ ಮತದಾನ ಮಾಡಿ ದ್ರೋಹ ಎಸಗಿದ್ದಾರೆ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರವು ಜೆಡಿಎಸ್ ಪಕ್ಷದ 12ಕ್ಕೂ ಹೆಚ್ಚು ಶಾಸಕರು ತಮ್ಮ ಕಡೆ ಬರಲಿದ್ದಾರೆ ಎಂದು ಸುಳ್ಳು ಹೇಳಿಕೊಂಡಿತ್ತು. ನಮ್ಮ ಶಾಸಕರು ಕ್ಷೇತ್ರದ ಕೆಲಸಕ್ಕಾಗಿ ಪತ್ರ ತೆಗೆದುಕೊಂಡು ಹೋದರೆ, ‘ನೋಡಿ ನೀವು ಈಗ 13ನೇಯವರು. ನಮ್ಮ ಪಕ್ಷಕ್ಕೆ ಬಂದರೆ ನಿಮ್ಮ ಕೆಲಸಗಳೆಲ್ಲಾ ಆಗುತ್ತವೆ. ಆಲೋಚನೆ ಮಾಡಿ..’ ಎಂದು ಕಳೆದ ಏಳು ತಿಂಗಳಿಂದ ಆಮಿಷ ಒಡ್ದುತ್ತಲೇ ಇದ್ದಾರೆ ಎನ್ನುವುದು ಜಗಜ್ಜಾಹೀರಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.