ಮುಂದಿನ ಚುನಾವಣೆಗೆ ಜೆಡಿಎಸ್ ಮಿಷನ್-123: ಎಚ್ ಡಿ ಕುಮಾರಸ್ವಾಮಿ
* 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ ಈಗಿನಿಂದಲೇ ತಯಾರಿ
* ಜೆಡಿಎಸ್ ಮಿಷನ್ 123 ಗುರಿಯನ್ನಿಟ್ಟುಕೊಂಡಿರುವುದಾಗಿ ಎಚ್‌ಡಿಕೆ ಮಾಹಿತಿ
* ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ನ ಭಯ ಶುರು: ಕುಮಾರಸ್ವಾಮಿ
ಬೆಂಗಳೂರು(ಆ.13): ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್ ಮಿಷನ್ 123 ಗುರಿಯನ್ನಿಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ಸಿದ್ಧತೆ ಕಾರ್ಯಗಳನ್ನು ಕೈಗೊಂಡಿದೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್‌ನ ಭಯ ಶುರುವಾಗಿದೆ. ರಾಜ್ಯದಲ್ಲಿ 2023ಕ್ಕೆ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, 123 ಸ್ಥಾನ ಗೆಲ್ಲುವ ಗುರಿಯನ್ನಿಟ್ಟುಕೊಂಡಿದೆ. ಗುರಿ ಸಾಧನೆಯನ್ನು ಯಾವ ರೀತಿ ಮಾಡಲಾಗುತ್ತದೆ ಎಂಬುದನ್ನು ಮುಂದೆ ಕಾದು ನೋಡಿ ಎಂದು ತಿಳಿಸಿದರು.
ಹಾಲಿ ಶಾಸಕರನ್ನು ಹೊರತುಪಡಿಸಿ 100 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಕೋರ್ ಕಮಿಟಿ ಸಭೆ ನಡೆಸಿ ಚರ್ಚಿಸಲಾಗುವುದು. ಎರಡು ದಿನಗಳ ಕಾಲ ಕಾರ್ಯಾಗಾರ ನಡೆಸಿ 100 ಅಭ್ಯರ್ಥಿಗಳಿಗೆ ಒಂದು ತರಬೇತಿ ಕ್ಯಾಂಪ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಿಎಸ್‌ವೈ ರಾಜೀನಾಮೆ ಬಳಿಕ ಛಿದ್ರವಾಯ್ತಾ ಮಿತ್ರಮಂಡಳಿ.?
ಮೂರು ಮಹಾನಗರ ಪಾಲಿಕೆಯ ಚುನಾವಣೆ ಘೋಷಣೆಯಾಗಿದೆ. ಬೆಳಗಾವಿ, ಹುಬ್ಬಳಿ-ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆಗೆ ಚುನಾಣಾ ದಿನಾಂಕ ಪ್ರಕಟಿಸಲಾಗಿದೆ. ಕಲಬುರಗಿ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇವೆ. ಆ ಭಾಗದ ನಮ್ಮ ಶಾಸಕರಾದ ಬಂಡೆಪ್ಪ ಕಾಶೆಂಪೂರ, ನಾಡಗೌಡ ಅವರು ಚುನಾವಣೆಗಾಗಿ ಹೆಚ್ಚಿನ ಶ್ರಮ ವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಮೊದಲಿಂದಲೂ ಜೆಡಿಎಸ್ ಶಕ್ತಿ ಇದೆ. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಕುರಿತು ಚರ್ಚಿಸಲಾಗಿದೆ. ಅಲ್ಲದೇ, ಮುಂದಿನ ದಿನದಲ್ಲಿ ಪಕ್ಷದ ಸಂಘಟನೆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲಿಯೇ ಒಂದು ಕಾರ್ಯಾಗಾರ ಮಾಡಲಾಗುವುದು ಎಂದರು.