ವಿದ್ಯಾರ್ಥಿಗಳಿಂದ ಟಾಯ್ಲೆಟ್‌ ಕ್ಲೀನ್‌: ಸಿಎಂ, ಸಚಿವರು ಕಾರಣ: ಎಚ್‌ಡಿಕೆ

ವಿದ್ಯಾರ್ಥಿಗಳಿಂದ ಶಾಲೆಯ ಟಾಯ್ಲೆಟ್‌ ಮತ್ತು ಮಲಗುಂಡಿ ಸ್ವಚ್ಛಗೊಳಿಸಿದ ಬೆಂಗಳೂರಿನ ಅಂದ್ರಳ್ಳಿ ಮತ್ತು ಕೋಲಾರದ ಮಾಲೂರಿನಲ್ಲಿ ನಡೆದ ಘಟನೆಗಳಿಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. 

former cm hd kumaraswamy reacts students made to clean school toilet gvd

ಬೆಂಗಳೂರು (ಡಿ.24): ವಿದ್ಯಾರ್ಥಿಗಳಿಂದ ಶಾಲೆಯ ಟಾಯ್ಲೆಟ್‌ ಮತ್ತು ಮಲಗುಂಡಿ ಸ್ವಚ್ಛಗೊಳಿಸಿದ ಬೆಂಗಳೂರಿನ ಅಂದ್ರಳ್ಳಿ ಮತ್ತು ಕೋಲಾರದ ಮಾಲೂರಿನಲ್ಲಿ ನಡೆದ ಘಟನೆಗಳಿಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟರ್‌ನಲ್ಲಿ ಅವರು, ಈ ಎರಡೂ ಘಟನೆಗಳಲ್ಲಿ ಕೇವಲ ಶಿಕ್ಷಕರು, ಪ್ರಾಂಶುಪಾಲರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಸರ್ಕಾರಿ ಶಾಲೆ ಒಂದರ ಸ್ವಚ್ಛತೆ, ಸಂಪೂರ್ಣ ನಿರ್ವಹಣೆ ವೆಚ್ಚಗಳಿಗೆ ಕೊಡುತ್ತಿರುವ ಹಣವೆಷ್ಟು? 

ಈ ಹಣ ನಿಯಮಿತವಾಗಿ ಬಿಡುಗಡೆ ಆಗುತ್ತಿಲ್ಲ. ನನಗೆ ಬಂದಿರುವ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ಈ ಅನುದಾನವನ್ನೇ ಕೊಟ್ಟಿಲ್ಲ. ಕೊಡುವ ಅತ್ಯಲ್ಪ ಹಣದಲ್ಲಿ ಶಿಕ್ಷಕರು ಏನು ಮಾಡಿಯಾರು? ಈ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದವರು ಈ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು. ಆದರೆ, ಶಿಕ್ಷರನ್ನಷ್ಟೇ ಬಲಿಪಶುಗಳನ್ನಾಗಿ ಮಾಡುವ ಕೆಲಸ ಆಗುತ್ತಿದೆ. ಹಾಗೆಯೇ ಬೋಧಕರು, ಶಾಲಾ ಸಿಬ್ಬಂದಿ ಕೂಡ ಇಂತಹ ಘಟನೆಗಳಿಗೆ ಅವಕಾಶ ಕೊಡಬಾರದು ಎಂದಿದ್ದಾರೆ.

ನನಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದು ಬಿಜೆಪಿ ಹೈಕಮಾಂಡ್‌: ವಿಜಯೇಂದ್ರ

ಜನವರಿ ಕೊನೆಗೆ ಕ್ಷೇತ್ರ ಹಂಚಿಕೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಕ್ಷೇತ್ರ ಹಂಚಿಕೆ ಕುರಿತು ಜನವರಿ ಅಂತ್ಯಕ್ಕೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಜೆಪಿ ಜೊತೆಗಿನ ಕ್ಷೇತ್ರ ಹಂಚಿಕೆ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. 

ಯಾವ, ಯಾವ ಕ್ಷೇತ್ರದಲ್ಲಿ ಯಾರು, ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ. ಜನವರಿ ಅಂತ್ಯದೊಳಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಎಷ್ಟು ಕ್ಷೇತ್ರ ಕೇಳುತ್ತಿದ್ದೀರಿ ಎನ್ನುವ ಪ್ರಶ್ನೆಗೆ, ನಾವು ಗೆಲ್ಲುವ ಕಡೆಯಷ್ಟೇ ಕ್ಷೇತ್ರ ಕೇಳುತ್ತೇವೆ. ನಾವು ಎಲ್ಲೆಲ್ಲಿ ಗೆಲ್ಲುತ್ತೇವೆ ಎಂದು ನಮ್ಮ ಬಳಿ ರಿಪೋರ್ಟ್ ಇದೆ. ಆ ರಿಪೋರ್ಟ್ ಪ್ರಕಾರ ನಾವು ಕೆಲಸ ಮಾಡುತ್ತೇವೆ. ಮೂರನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಓಪನ್‌ ಐಟಂ ನನ್ನ, ನಿಖಿಲ್‌ ಸ್ಪರ್ಧೆ ಇಲ್ಲ: ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆಗೆ ತಾವಾಗಲಿ, ನಿಖಿಲ್‌ ಆಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಲೋಕಸಭೆಗೆ ಸ್ಪರ್ಧೆ ಮಾಡುವ ಉದ್ದೇಶ ನನಗಿಲ್ಲ. ನಾನೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ. ನಾನು ಇಲ್ಲಿಯೇ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎನ್ನುವುದು ಜನರ ಅಭಿಪ್ರಾಯ, ನನ್ನ ಅಭಿಪ್ರಾಯವೂ ಅದೇ ಆಗಿದೆ. ನಾನು ಕರ್ನಾಟಕದಲ್ಲೇ ಇರಲು ತೀರ್ಮಾನ ಮಾಡಿದ್ದೇನೆ ಎಂದರು. 

ಈ ಬಾರಿಯೂ ಚಿಕ್ಕಮಗಳೂರಿನಿಂದಲೇ ಲೋಕಸಭಾ ಚುನಾವಣೆಗೆ ಸ್ಪರ್ಧೆ: ಶೋಭಾ ಕರಂದ್ಲಾಜೆ

ಕೇಂದ್ರ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ, ಯಾರ ಹಣೆಯ ಮೇಲೆ ಏನು ಬರೆದಿದೆ ಎಂಬುದು ಗೊತ್ತಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡೋಣ ಎಂದರು. ತಮ್ಮ ಪುತ್ರನ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ನಿಖಿಲ್‌ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಯಲಿ, ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ ಜನರ ಅನುಕಂಪವೂ ಇದೆ ಎಂದು ಜನ, ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ, ನಿಖಿಲ್‌ ಸ್ಪರ್ಧಿಸಲ್ಲ. ಅವರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ ಎಂದರು.

Latest Videos
Follow Us:
Download App:
  • android
  • ios