ಈ ಬಾರಿ ರಾಜ್ಯದ ಜನತೆ ಜೆಡಿಎಸ್‌ಗೆ ಬಹುಮತ ನೀಡುವ ವಿಶ್ವಾಸವಿದೆ, ಬಿಜೆಪಿ, ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸುವ ಇಚ್ಛೆ ಇಲ್ಲ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 

ಪಿರಿಯಾಪಟ್ಟಣ(ಏ.07): ಬಿಜೆಪಿ ಅಥವಾ ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸುವ ಇಚ್ಛೆ ಇಲ್ಲ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ವೇಳೆ ಭಾಗವಹಿಸುತ್ತಿರುವ ಜನಸ್ತೋಮ ನೋಡಿದರೆ ಈ ಬಾರಿ ರಾಜ್ಯದ ಜನತೆ ಬಹುಮತ ನೀಡುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಶಾಸಕ ಕೆ. ಮಹದೇವ್‌ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

ನವಂಬರ್‌ ತಿಂಗಳಿನಲ್ಲಿ ಕೋಲಾರದಲ್ಲಿ ಆರಂಭವಾದ ಪಂಚರತ್ನ ರಥಯಾತ್ರೆ ರಾಜ್ಯಾದ್ಯಂತ ಐದು ತಿಂಗಳ ಕಾಲ ಸಂಚರಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಉಚಿತ ಆರೋಗ್ಯ ಶಿಕ್ಷಣ ಉದ್ಯೋಗ ಸೇರಿದಂತೆ ಕೃಷಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನೂತನ ಯೋಜನೆಗಳನ್ನು ಆರಂಭಿಸಿ ರೈತರು ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮನವರಿಕೆ ಮಾಡಿಕೊಟ್ಟಿದ್ದು, ರಥಯಾತ್ರೆ ಸಂದರ್ಭ ಮತದಾರರ ಅಭೂತಪೂರ್ವ ಬೆಂಬಲ ನೋಡಿದರೆ ಮುಂದಿನ ಬಾರಿ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದರು.

ಮೋದಿಯಂಥ ಸ್ಟಾರ್ ನಟರೇ ಅಟ್ರ್ಯಾಕ್ಷನ್ ಮಾಡೋಕೆ ಆಗ್ತಿಲ್ಲ; ಸುದೀಪ್, ಪವನ್ ಕಲ್ಯಾಣ್ ಏನು ಮಾಡ್ತಾರೆ?: ಎಚ್‌ಡಿಕೆ ಲೇವಡಿ

ಮೈಸೂರು ನಾಯಕನ ಕುತಂತ್ರದಿಂದ ಸರ್ಕಾರ ಪತನ:

ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ, ಅವರು ಅಧಿಕಾರಕ್ಕೆ ಬರಲು ನೇರ ಕಾರಣ ಕಾಂಗ್ರೆಸ್‌ನವರಾಗಿದ್ದು, ಪ್ರಮುಖವಾಗಿ ಮೈಸೂರಿನ ನಾಯಕನ ಕುತಂತ್ರದಿಂದ ಮೈತ್ರಿ ಸರ್ಕಾರ ಪತನವಾಯಿತು ಎಂದು ಸಿದ್ದರಾಮಯ್ಯ ಅವರ ಹೆಸರು ಹೇಳದೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಜೆಡಿಎಸ್‌ ಅನ್ನು ಬಿಜೆಪಿ ಬಿ. ಟೀಂ ಎಂಬ ಅಪಪ್ರಚಾರ ಮಾಡಿದ್ದಾರೆ. ನಿಜವಾಗಿ ಕೋಮು ಸಂಘರ್ಷ ಇರುವುದು ಈ ಎರಡು ಪಕ್ಷಗಳಿಂದ ಮುಸ್ಲಿಂ ಸಮುದಾಯಕ್ಕೆ ದೇವೇಗೌಡರು ನೀಡಿದ ಶೇ. 4 ರಷ್ಟುಮೀಸಲಾತಿಯನ್ನು ತೆಗೆದು ಹಾಕಿದ್ದಾರೆ, ದಲಿತ ಸಮುದಾಯ ಒಡೆಯುವ ಕೆಲಸ ಮಾಡಿದ್ದಾರೆ, ಎಲ್ಲರ ಬದುಕಿನಲ್ಲಿ ಸಮಾನತೆ ತರುವ ಕೆಲಸ ಮಾಡಬೇಕೆಂದರೆ ಜೆಡಿಎಸ… ಪಕ್ಷಕ್ಕೆ ರಾಜ್ಯದಲ್ಲಿ 5 ವರ್ಷ ಸ್ವತಂತ್ರ ಅಧಿಕಾರ ಸಿಗಬೇಕು ಈ ನಿಟ್ಟಿನಲ್ಲಿ ಮತದಾರರು ಜೆಡಿಎಸ್‌ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೋರಿದರು. ಶಾಸಕ ಕೆ. ಮಹದೇವ್‌ ಪ್ರತಿಪಕ್ಷ ಸ್ಥಾನದಲ್ಲಿದ್ದರು ತಾಲೂಕಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಅವರ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತ್ತೊಮ್ಮೆ ಗೆಲ್ಲಿಸಿದರೆ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿ ಕೊಡದೆ ಜೆಡಿಎಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.

ದೇವೇಗೌಡರ ಕುಟುಂಬಕ್ಕೆ ನಿಷ್ಠವಾಗಿರುವುದರಲ್ಲಿ ಪಿರಿಯಾಪಟ್ಟಣ ತಾಲೂಕು ಮೊದಲ ಸ್ಥಾನದಲ್ಲಿದೆ, ಇಂತಹ ಪ್ರಾಮಾಣಿಕ ಮುಖಂಡರು ಮತ್ತು ದೇವೇಗೌಡರನ್ನು ಇಷ್ಟಪಡುವ ಲಕ್ಷಾಂತರ ಕಾರ್ಯಕರ್ತರು ಪಿರಿಯಾಪಟ್ಟಣದಲ್ಲಿದ್ದು, ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದ್ದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಸದಾ ಹೋರಾಟ ಮಾಡುವ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಈ ಬಾರಿ ರಾಜ್ಯದ ಜನತೆ ಬಹುಮತ ನೀಡಿ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯಾಗಬೇಕು, ದೇವೇಗೌಡರು ತಂಬಾಕು ರೈತರ ಪರ ಹೋರಾಟ ಮಾಡಿದವರು, ಈ ಬಾರಿ ಜೆಡಿಎಸ್‌ನ ಅಭ್ಯರ್ಥಿ ಕೆ. ಮಹದೇವ್‌ಗೆ ಮತ ನೀಡುವ ಮೂಲಕ ದೇವೇಗೌಡರ ಕುಟುಂಬದ ಋುಣ ತೀರಿಸಬೇಕು ಎಂದರು.

ಶಾಸಕ ಕೆ. ಮಹದೇವ್‌ ಮಾತನಾಡಿ, ಮೊದಲ ಬಾರಿಗೆ ಶಾಸಕನಾದರೂ ಕೋವಿಡ್‌ ಹಾಗೂ ನೆರೆ ಪ್ರವಾಹ ಸಂದರ್ಭದಲ್ಲಿಯೂ ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರದಿಂದ ಹಣ ಮಂಜೂರು ಮಾಡಿಸಿ ತಂದು ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ನನ್ನ ಅವಧಿಯಲ್ಲಿನ ಶಾಸಕರ ಅವಧಿಯಲ್ಲಿನ ಅಭಿವೃದ್ಧಿಯನ್ನು ಮನಗಂಡು ಮುಂದಿನ ಬಾರಿಯೂ ತಾಲೂಕಿನ ಜನತೆ ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.

ಅದ್ಧೂರಿ ಸ್ವಾಗತ:

ಬೆಳಗ್ಗೆ 9 ಕ್ಕೆ ಆಗಮಿಸಬೇಕಿದ್ದ ಕುಮಾರಸ್ವಾಮಿ ಅವರು ಮಧ್ಯಾಹ್ನ 1ಕ್ಕೆ ಪಟ್ಟಣದ ಹೂರವಲಯದ ತಾಲೂಕು ಕ್ರೀಡಾಂಗಣ ಬಳಿ ನಿರ್ಮಿಸಿದ್ದ ಹೆಲಿಪ್ಯಾಡಿಗೆ ಹೆಲಿಕ್ಯಾಪ್ಟರ್‌ ಮೂಲಕ ಬಂದಿಳಿದು, ರಸ್ತೆ ಮಾರ್ಗವಾಗಿ ಕಂಪಲಾಪುರ ತಲುಪಿದರು. ಕಂಪಲಾಪುರದ ಸರ್ಕಲ್‌ನಲ್ಲಿ ಸಾವಿರಾರು ಮಂದಿ ಜಮಾವಣೆಗೊಂಡು ಕುಮಾರಸ್ವಾಮಿ ಅವರಿಗೆ ಭವ್ಯ ಸ್ವಾಗತ ಕೋರಿದರಲ್ಲದೆ, ಬೃಹತ್‌ ಸೇಬಿನ ಹಾರವನ್ನು ಕ್ರೇನ್‌ ಮೂಲಕ ಹಾಕಿ ಸ್ವಾಗತಿಸಿದರು.

ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಕಾರಿನಲ್ಲಿ ಬಂದರೆ ತೊಂದರೆ ಎಂದು ಅರಿತಿದ್ದ ನಾಯಕರು ಬೈಕ್‌ ಮೂಲಕವೇ ಆಗಮಿಸಿ ರಸ್ತೆಯುದ್ದಕ್ಕೂ ಜೈಕಾರ ಕೂಗಿ ಸಂಭ್ರಮಿಸಿದರು. ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಬೈಕ್‌ ಚಾಲನೆ ಮಾಡುವ ಮೂಲಕ ಎಲ್ಲರಲ್ಲಿಯೂ ಉತ್ಸಾಹ ತುಂಬಿದರು,

ಕಂಪಲಾಪುರ, ಮಾಕನಹಳ್ಳಿ, ದೊಡ್ಡಬೇಲಾಳು, ಅರೇನಹಳ್ಳಿ, ರಾವಂದೂರು, ಬಾವಲಾಳು, ಹಂಡಿತವಳ್ಳಿ, ಕಿತ್ತೂರು, ಮರದೂರು, ಬೆಟ್ಟದಪುರ ಸೇರಿದಂತೆ ಹಲವು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.

ಚುನಾವಣೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ : ಜಿಲ್ಲಾಧಿಕಾರಿ

ಜೆಡಿಎಸ್‌ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭೆ ಅಧ್ಯಕ್ಷ ಮಹೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ, ಮಾಜಿ ಅಧ್ಯಕ್ಷ ಮಂಜುನಾಥ್‌ಸಿಂಗ್‌, ಪುರಸಭಾ ಸದಸ್ಯ ನಿರಂಜನ್‌, ಮಾಜಿ ಸದಸ್ಯ ಅಮ್ಜದ್‌ ಶರೀಫ್‌, ರಾಜ್ಯವಕ್ತಾರೆ ನಜ್ಮಾನಜೀರ್‌, ಮಹಿಳಾ ಅಧ್ಯಕ್ಷೆ ಪ್ರೀತಿ ಅರಸ್‌, ಟಿಎಪಿಸಿಎಂಸಿ ನಿರ್ದೇಶಕಿ ಸುನಿತಾ ಮಂಜುನಾಥ್‌, ಎಂಡಿಸಿಸಿ ನಿರ್ದೇಶಕ ರವಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೆ.ಎಸ್‌. ಮಂಜುನಾಥ್‌, ಯುವ ಮುಖಂಡ ಗಗನ್‌, ತಾಲೂಕು ಕಾರ್ಯದರ್ಶಿ ಬಿ.ವಿ. ಗಿರೀಶ್‌, ಮುಖಂಡರಾದ ರಮೇಶ್‌, ದಿನೇಶ್‌, ವಿದ್ಯಾಶಂಕರ್‌, ರವಿಗೌಡ, ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.