Asianet Suvarna News Asianet Suvarna News

ಸಾಹುಕಾರಗಿರಿ ಪದ್ಧತಿ ದೂರು ಮಾಡಿ: ಎಚ್‌.ಡಿ.ಕುಮಾರಸ್ವಾಮಿ

ಮಣ್ಣಿನ ಮಗ ಎಚ್‌.ಡಿ.ದೇವೇಗೌಡರು ದೇಶದ ಪ್ರಧಾನಮಂತ್ರಿಯಾದಾಗ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 28 ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡಲಾಯಿತು: ಎಚ್‌.ಡಿ. ಕುಮಾರಸ್ವಾಮಿ 

Former CM HD Kumaraswamy Election Campaign in Belagavi grg
Author
First Published May 5, 2023, 8:10 PM IST | Last Updated May 5, 2023, 8:10 PM IST

ಯಮಕನಮರಡಿ(ಮೇ.05): ಸಾಹುಕಾರಗಿರಿ ಪದ್ಧತಿ ದೂರ ಮಾಡಿ ವಿದ್ಯಾವಂತ, ಕ್ರಿಯಾಶೀಲ, ಪ್ರಾಮಾಣಿಕತೆ ವ್ಯಕ್ತಿತ್ವವುಳ್ಳ ಮಾರುತಿ ಅಷ್ಟಗಿಯವರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿ ಯಮಕನಮರಡಿಯಲ್ಲಿ ಬದಲಾವಣೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಯಮಕನಮರಡಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಮಾರುತಿ ಅಷ್ಟಗಿಯವರ ಪರ ಬುಧವಾರ ಮತಯಾಚಿಸಿ ಮಾತನಾಡಿದ ಅವರು, ಮಾರುತಿ ಅಷ್ಟಗಿ ಜೆಡಿಎಸ್‌ ಪಕ್ಷಕ್ಕೆ ಬಂದಿದ್ದರಿಂದ ಒಂದು ಹೊಸ ಶಕ್ತಿ ಬಂದಿದೆ. ಅವರನ್ನು ಗೆಲ್ಲಿಸಬೇಕು. ಈ ಸಲದ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ 8 ಸ್ಥಾನಗಳು ದೊರೆಯಲಿವೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕೀಯಕ್ಕೆ ಕಡಿವಾಣ ಹಾಕುವುದು ಮತದಾರರ ಕೈಯಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ರಾಜಕೀಯ ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದ ಸಮಯದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಅನುಮತಿ ಇರಲಿಲ್ಲ. ಮಣ್ಣಿನ ಮಗ ಎಚ್‌.ಡಿ.ದೇವೇಗೌಡರು ದೇಶದ ಪ್ರಧಾನಮಂತ್ರಿಯಾದಾಗ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 28 ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡಲಾಯಿತು. ಇಂದು ಕಬ್ಬು ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರು ಬೆಳದಂತಹ ಕಬ್ಬಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಮತ್ತು ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಇದರಿಂದ ಕಬ್ಬು ಬೆಳಗಾರರು ತೀರಾ ಸಂಕಟದಲ್ಲಿದ್ದಾರೆ. ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಕಬ್ಬು ಬೆಳೆಗಾರರ ಪ್ರತಿಯೊಂದು ಸಮಸ್ಯೆ ಬಗೆಹರಿಸಲಾಗುವುದು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಭ್ರಷ್ಟಾಚಾರ ಬಿಟ್ಟರೆ ಬೇರೇನೂ ಸಾಧನೆ ಮಾಡದ ಬಿಜೆಪಿ: ಲಕ್ಷ್ಮೀ ಹೆಬ್ಬಾಳಕರ

ಜೆಡಿಎಸ್‌ ಅಭ್ಯರ್ಥಿ ಮಾರುತಿ ಅಷ್ಟಗಿ ಮಾತನಾಡಿ, ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿಬೆಳಸಿದ್ದೇನೆ. ಈ ಸಲದ ಚುನಾವಣೆಯಲ್ಲಿ ಕೂಡ ಹೊಂದಾಣಿಕೆ ರಾಜಕೀಯ ಮಾಡಿ ಕುತಂತ್ರದಿಂದ ನನಗೆ ಟಿಕೆಟ್‌ ತಪ್ಪಿಸಿದ್ದಾರೆ. ನನಗೆ ಪ್ರತಿದಿನವು ಒತ್ತಡಗಳು ಬರುತ್ತಿದ್ದು, ಜೆಡಿಎಸ್‌ ಪಕ್ಷ ಬಿಟ್ಟು ಬಂದು ಬಿಜೆಪಿಗೆ ಬೆಂಬಲಿಸಬೇಕೆಂದು ಹೇಳುತ್ತಿದ್ದಾರೆ. ಆದರೆ, ನಾನೊಬ್ಬ ಸ್ವಾರ್ಥಿಅಲ್ಲ, ಸ್ವಾಭಿಮಾನಿಯಾಗಿದ್ದೇನೆ. ಜೆಡಿಎಸ್‌ ಪಕ್ಷವು ನನಗೆ ಬಿ ಫಾರ್ಮ್‌ ನೀಡಿದ್ದು, ಪಕ್ಷಕ್ಕೆ ದ್ರೋಹ ಬಗೆಯದೇ ಧೈರ್ಯದಿಂದ ಚುನಾವಣೆಯಲ್ಲಿ ಎದುರಿಸುತ್ತೇನೆ ಎಂದು ಗುಡುಗಿದರು.

ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2,800 ಮತಗಳಿಂದ ಪರಾಭವಗೊಂಡಿದ್ದಕ್ಕೆ ದಿಲ್ಲಿಯ ಹಾಗೂ ರಾಜ್ಯದ ನಾಯಕರ ನಿರಾಸಕ್ತಿಯೇ ಕಾರಣವಾಗಿದೆ. ಒಂದು ವೇಳೆ ನನಗೆ ಅವರು ಚುನಾವಣೆಯಲ್ಲಿ ತಮ್ಮ ಸ್ವ ಇಚ್ಚೆಯಿಂದ ಸಹಾಯ ಮಾಡಿದ್ದಲ್ಲಿ 28,000 ಸಾವಿರ ಮತಗಳಿಂದ ಆಯ್ಕೆಯಾಗಿ ಶಾಸಕನಾಗುತ್ತಿದ್ದೆ. ನನ್ನ ಆಶೆಗೆ ಬಿಜೆಪಿ ನಾಯಕರು ತಣ್ಣೀರು ಎರಚಿದ್ದಾರೆ ಎಂದು ಕಿಡಿಕಾರಿದರು.

ವಿಧಾನಪರಿಷತ್‌ ಮಾಜಿ ಉಪಸಭಾಪತಿ ಸಚ್ಚಿದಾನಂದ ಖೋತ ಮಾತನಾಡಿ, ಎಚ್‌.ಡಿ.ಕುಮಾರಸ್ವಾಮಿಯವರು ಮಾಡಿದಷ್ಟುಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯೂ ಕೂಡಾ ಮಾಡಿಲ್ಲ. ಬೆಳಗಾವಿಯಲ್ಲಿ ವಿಧಾನಸಭಾ ಕಲಾಪಗಳನ್ನು ಆರಂಭಿಸಿ ರೈತರು ಮತ್ತು ಸಾರ್ವಜನಿಕರು ತಮ್ಮ ಬೇಕು ಬೇಡಗಳಿಗೆ ಸರ್ಕಾರದ ಗಮನ ಸೆಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಾರುತಿ ಅಷ್ಟಗಿಯವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಿದರೂ ಕೂಡಾ ಜನಸಾಮಾನ್ಯರ ಹೃದಯದಲ್ಲಿ ಇನ್ನೂ ಇದ್ದಾರೆ. ಅವರು ಜೆಡಿಎಸ್‌ ಪಕ್ಷಕ್ಕೆ ಬಂದಿದ್ದರಿಂದ ಒಂದು ದೊಡ್ಡ ಬಲ ಬಂದಿದೆ ಮತ್ತು ಪಕ್ಷಕ್ಕೆ ಪುನರಜನ್ಮ ಸಿಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಶಂಕರ ಮಾಡಲಗಿ, ಕಲ್ಲಪ್ಪ ಮಗ್ಗೆನ್ನವರ, ಯಮಕನಮರಡಿ ಬ್ಲಾಕ ಜೆಡಿಎಸ್‌ ಅಧ್ಯಕ್ಷ ಜಾಕೀರ ನಧಾಪ ಬಸವರಾಜ ಪಾಟೀಲ, ಬಾಬಾಗೌಡ ಪಾಟೀಲ, ಪಾರೇಶ ಮಲಾಜಿ, ಸೇರಿದಂತೆ ಸಮಸ್ತ ಜೆಡಿಎಸ್‌ ನಾಯಕರು ವೇದಿಕೆಯಲ್ಲಿದ್ದರು. ಜಯಶ್ರೀ ಮಡ್ಡಿ ಕಾರ್ಯಕ್ರಮ ನಿರೂಪಿಸಿದರು.

ಮಹಾಜನ ವರದಿಯ ತೀರ್ಪು ಬಂದ ನಂತರ ಗೋಕಾಕ ಜಿಲ್ಲೆ: ರಮೇಶ ಜಾರಕಿಹೊಳಿ

ಮಾರುತಿ ಅಷ್ಟಗಿಯವರು ಜೆಡಿಎಸ್‌ ಪಕ್ಷಕ್ಕೆ ಬಂದಿದ್ದರಿಂದ ಒಂದು ಹೊಸ ಶಕ್ತಿ ಬಂದಿದೆ. ಅವರನ್ನು ಗೆಲ್ಲಿಸಬೇಕು ಈ ಸಲದ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ 8 ಸ್ಥಾನಗಳು ದೊರೆಯಲಿವೆ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿಬೆಳಸಿದ್ದೇನೆ. ಈ ಸಲದ ಚುನಾವಣೆಯಲ್ಲಿ ಕೂಡ ಹೊಂದಾಣಿಕೆ ರಾಜಕೀಯ ಮಾಡಿ ಕುತಂತ್ರದಿಂದ ನನಗೆ ಟಿಕೆಟ್‌ ತಪ್ಪಿಸಿದ್ದಾರೆ. ನನಗೆ ಪ್ರತಿದಿನವು ಒತ್ತಡಗಳು ಬರುತ್ತಿದ್ದು, ಜೆಡಿಎಸ್‌ ಪಕ್ಷ ಬಿಟ್ಟು ಬಂದು ಬಿಜೆಪಿಗೆ ಬೆಂಬಲಿಸಬೇಕೆಂದು ಹೇಳುತ್ತಿದ್ದಾರೆ. ಆದರೆ, ನಾನೊಬ್ಬ ಸ್ವಾರ್ಥಿ ಅಲ್ಲ, ಸ್ವಾಭಿಮಾನಿಯಾಗಿದ್ದೇನೆ ಅಂತ ಜೆಡಿಎಸ್‌ ಅಭ್ಯರ್ಥಿ ಮಾರುತಿ ಅಷ್ಟಗಿ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios