Asianet Suvarna News Asianet Suvarna News

ನಿಮ್ಮ ಜೊತೆ ನಾನಿರುತ್ತೇನೆ: ದಾಸರಹಳ್ಳಿ ಕ್ಷೇತ್ರದ ಮುಖಂಡರಿಗೆ ಎಚ್‌ಡಿಕೆ ಧೈರ್ಯ

‘ನೀವು ಧೃತಿಗೆಡಬೇಡಿ. ನಿಮ್ಮನ್ನು ಉಳಿಸಿ, ರಕ್ಷಣೆ ಮಾಡಿಕೊಳ್ಳುವ ಹೊಣೆ ನನ್ನದು’ ಎಂದು ದಾಸರಹಳ್ಳಿ ಕ್ಷೇತ್ರದ ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧೈರ್ಯ ತುಂಬಿದರು. 
 

Former CM HD Kumaraswamy courage for Dasarahalli constituency leaders gvd
Author
First Published Nov 27, 2023, 9:43 PM IST

ರಾಮನಗರ (ನ.27): ‘ನೀವು ಧೃತಿಗೆಡಬೇಡಿ. ನಿಮ್ಮನ್ನು ಉಳಿಸಿ, ರಕ್ಷಣೆ ಮಾಡಿಕೊಳ್ಳುವ ಹೊಣೆ ನನ್ನದು’ ಎಂದು ದಾಸರಹಳ್ಳಿ ಕ್ಷೇತ್ರದ ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧೈರ್ಯ ತುಂಬಿದರು. ಬಿಡದಿ ಬಳಿಯ ಕೇತಗಾನಹಳ್ಳಿ ತೋಟದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಕ್ಷೇತ್ರದ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ನಿಷ್ಠಾವಂತರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಕುತಂತ್ರಗಳು ನಡೆಯಲ್ಲ, ಅದಕ್ಕೆ ಹೆದರುವ ಪ್ರಶ್ನೆಯೂ ಇಲ್ಲ ಎಂದರು.

ಪಕ್ಷ ಬಿಟ್ಟವರ ಬಗ್ಗೆ ಅತೀವ ಬೇಸರ: ದಾಸರಹಳ್ಳಿ ಕ್ಷೇತ್ರದಲ್ಲಿ ನಮ್ಮ ಪಕ್ಷ ಪ್ರಬಲವಾಗಿದೆ. ನಮ್ಮೆಲ್ಲರ ದುಡಿಮೆ, ಶ್ರಮದಿಂದ ಗೆದ್ದು ಶಾಸಕರಾದವರು ಈ ಬಾರಿ ಸೋತೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದಾರೆ. ಅವರು ಕಾಂಗ್ರೆಸ್‌ನಿಂದ ನಮ್ಮ ಪಕ್ಷಕ್ಕೆ ಬಂದವರು. ಈಗ ಆ ಪಕ್ಷವನ್ನೇ ಸೇರಿದ್ದಾರೆ. ಸೋತು ಬೇಸರದಲ್ಲಿ ಇದ್ದ ಅವರನ್ನು ಎರಡು ಮೂರು ಸಲ ಕರೆದು ಮಾತನಾಡಿದೆ. ಮುಂದೆ ಒಳ್ಳೆಯ ಅವಕಾಶ ಬರುತ್ತದೆ, ಕಾಯಿರಿ, ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ದುಡುಕಬೇಡಿ, ಕಾರ್ಯಕರ್ತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದೆ. 

ಸಿದ್ದರಾಮಯ್ಯ ಜನತಾದರ್ಶನ ಜಾಹೀರಾತಿಗೆ ಸೀಮಿತ: ಎಚ್‌.ಡಿ.ಕುಮಾರಸ್ವಾಮಿ

ದುರಂತ ಎಂದರೆ ಕಾರ್ಯಕರ್ತರ ರಕ್ಷಣೆ ಮಾಡಬೇಕು, ಅವರ ಮೇಲೆ ಕಾಂಗ್ರೆಸ್‌ನವರು ಸುಳ್ಳು ಕೇಸು ಹಾಕುತ್ತಿದ್ದಾರೆ ಎಂದು ಕಾರ್ಯಕರ್ತರ ಕಾರಣ ಕೊಟ್ಟೇ ಅವರು ಕಾಂಗ್ರೆಸ್ ಸೇರಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ದೇವೇಗೌಡರು ಅವರ ಮನೆಗೆ ಹೋಗಿದ್ದರು. ಅಷ್ಟಾದರೂ ಅವರಿಗೆ ಆ ಬಗ್ಗೆ ಸ್ಮರಣೆ ಇಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ಕಾರ್ಯಕರ್ತರಿಗೆ ಮೋಸ ಮಾಡಿ ಹೋಗಿದ್ದು ನನಗೆ ನೋವು ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸರ್ಕಾರದ ಪಾಪದ ಕೊಡ ತುಂಬಿದೆ: ಈ ಸರ್ಕಾರದ ಪಾಪದ ಕೊಡ ತುಂಬಿದೆ. ಪ್ರತಿಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಕ್ಯಾಟಗರಿ ಮಾಡಿಕೊಡುತ್ತೇವೆ ಎಂದು ಆಸೆ ಹುಟ್ಟಿಸುತ್ತಿದ್ದಾರೆ. ಆಸೆಯಿಂದ ಹೋದವರಿಗೆ ನಿರಾಶೆ ತಪ್ಪಿದ್ದಲ್ಲ. ಲೋಕಸಭೆ ಚುನಾವಣೆ ಮುಗಿಯುವವರೆಗೂ ಇವರು ಬಿಬಿಎಂಪಿ ಚುನಾವಣೆ ಮಾಡಲ್ಲ ಎಂದರು. ನಮ್ಮ ಕಾರ್ಯಕರ್ತರಿಗೆ ಆಸೆ ಆಮಿಷ ಒಡ್ಡುತ್ತಿದ್ದಾರೆ. ನಿಮ್ಮ ಶ್ರಮ, ದುಡಿಮೆ, ನಿಷ್ಠೆ ಬಗ್ಗೆ ನನಗೆ ಗೊತ್ತಿದೆ, ನಿಮ್ಮ ಹಿತ ಕಾಯುತ್ತೇನೆ. ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. 

ಡಿಕೆಶಿ ಸಿಬಿಐ ಕೇಸ್ ವಾಪಸಿನ ನಿರ್ಧಾರಕ್ಕೆ ಛೀಮಾರಿ ಬೀಳಲಿದೆ: ಎಚ್‌.ಡಿ.ಕುಮಾರಸ್ವಾಮಿ

ದ್ವೇಷಕ್ಕೆ, ಅಸೂಯೆಗೆ ನಾನು ಸರಕಾರದ ಬಗ್ಗೆ ಚರ್ಚೆ ಮಾಡ್ತಿಲ್ಲ. ಆದರೆ, ಇಂಥ ಕಷ್ಟದ ಕಾಲದಲ್ಲಿ ನಾನು ಮೌನಕ್ಕೆ ಶರಣಾದರೆ ನಾನು ಜನತೆಗೆ ದ್ರೋಹ ಬಗೆದಂತೆ. ನನ್ನ ಕರ್ತವ್ಯ ಮಾಡ್ತಾ ಇದೀನಿ. ವಿದ್ಯುತ್ ಕಳ್ಳ ಎಂದು ಹಣೆಪಟ್ಟಿ ಕಟ್ಟಿದರು. ನನ್ನನ್ನು ಮಾನಸಿಕವಾಗಿ ಕುಂದಿಸುವ ಕೆಲ್ಸ ಮಾಡ್ತಾ ಇದಾರೆ. ಅಧಿವೇಶನದಲ್ಲಿ ಇದೆಲ್ಲವನ್ನೂ ಎದುರಿಸುತ್ತೇನೆ. ನಿಮ್ಮ ನೈತಿಕ ಬೆಂಬಲ ಇದ್ದರೆ ಎಂಥದ್ದೇ ಸವಾಲು ಎದುರಿಸುತ್ತೇನೆ ಎಂದು ಹೇಳಿದರು. ದಾಸರಹಳ್ಳಿ ಕ್ಷೇತ್ರದಲ್ಲಿ ಆದಂತೆಯೇ ಮಹಾಲಕ್ಷ್ಮಿ ಲೇಔಟ್‌ನಲ್ಲಿಯೂ ಆಯಿತು. ಅಲ್ಲಿಯೂ ಇಬ್ಬರು ಇದೇ ರೀತಿ ಎರಡು ಬಾರಿ ಟೋಪಿ ಹಾಕಿ ಹೋದರು. ಹಲವಾರು ಕ್ಷೇತ್ರಗಳಲ್ಲಿ ಹೀಗೆಯೇ ಆಗಿದೆ. ಆದರೆ ಎಂದೂ ನನಗೆ ಕಾರ್ಯಕರ್ತರು ಮೋಸ ಮಾಡಿಲ್ಲ. ಅವರಿಗಾಗಿ ನಾನು ಬದುಕುತ್ತೇನೆ ಎಂದು ಕುಮಾರಸ್ವಾಮಿ ಭಾವುಕರಾಗಿ ನುಡಿದರು.

Follow Us:
Download App:
  • android
  • ios