ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳಿಂದ ಅಧಿಕಾರ ಹಿಡಿದಿದ್ರು: ಸಿಎಂ ಸಿದ್ದರಾಮಯ್ಯ
ಹೆಚ್.ಡಿ. ಕುಮಾರಸ್ವಾಮಿ ಅವರು ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಅಧಿಕಾರ ಗಳಿಸಿ ಹಣದ ಲೂಟಿಗಾಗಿ ಮಾಡಿದ್ದಾರೆ. ಅವರಿಗೆ ಅಭಿವೃದ್ಧಿ ವಿಚಾರಗಳು ಅರ್ಥವಾಗುವುದಿಲ್ಲ.

ಬೆಂಗಳೂರು (ನ.16): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಅಧಿಕಾರ ಗಳಿಸಿ ಹಣದ ಲೂಟಿಗಾಗಿ ಮಾಡಿದ್ದಾರೆ. ಅವರಿಗೆ ಅಭಿವೃದ್ಧಿ ವಿಚಾರಗಳು ಅರ್ಥವಾಗುವುದಿಲ್ಲ. 'ತಾ ಕಳ್ಳ ಇತರರ ನಂಬ' ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ತಮ್ಮ ತಂದೆಯೊಂದಿಗೆ ಮಾತನಾಡುತ್ತಾ ಯಾರು ನಿಮಗೆ ಆ ಪಟ್ಟಿಯನ್ನು ಕೊಟ್ಟಿದ್ದು, ಮಹದೇವು ಯಾರಪ್ಪಾ? ಕೊಡಿ ಅವರಿಗೆ ಮಾತಾಡ್ತೀನಿ. ರೀ ನಾನು ಕೊಟ್ಟ ಪಟ್ಟಿಯನ್ನಷ್ಟೇ ಕೊಡಿ ಬೇರೆಯದ್ದು ಕೊಡಬೇಡಿ ಎಂದು ಹೇಳಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ತಮ್ಮ ಸಮಾಜಿಕ ಜಾಲತಾಣ ಎಕ್ಸ್ ನಲ್ಲಿ 'ಕಾಸಿಗಾಗಿ ಹುದ್ದೆ ಉರುಫ್ (ಕ್ಯಾಷ್ ಫಾರ್ ಪೋಸ್ಟಿಂಗ್ #CashForPosting) ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ಕಾಂಗ್ರೆಸ್ ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ ಎಂದು ಪೋಸ್ಟ್ ಮಾಡಿಕೊಂಡಿದ್ದರು.
ಹಾಸನಾಂಬೆ ಪವಾಡದಲ್ಲಷ್ಟೇ ಅಲ್ಲ, ಆದಾಯದಲ್ಲೂ ಶ್ರೀಮಂತೆ: ಕೇವಲ 12 ದಿನದಲ್ಲಿ 8.72 ಕೋಟಿ ಆದಾಯ ಗಳಿಕೆ
ಮುಂದುವರೆದು ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ? ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ? ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ಅದರ ಸಾಧಕ ಬಾಧಕ ನಾನೇ ಎದುರಿಸುತ್ತೇನೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ 'ಸುಲಿಗೆಪುತ್ರ' ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರಲ್ಲ! ಇದಕ್ಕೆ ಅಹಿಂದ ಮಹಾಪುರುಷರಾದ ತಾವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ಮಾಜಿ ಸಿಎಂ ಕುಮಾರಸ್ವಾಮಿಗೆ ಟ್ವೀಟ್ ಮೂಲಕವೇ ಟಾಂಗ್ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ತಾ ಕಳ್ಳ ಇತರರ ನಂಬ' ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಫೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ ಹೆಚ್.ಡಿ. ಕುಮಾರಸ್ವಾಮಿಯವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರೆದು, 'ಫೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಹೆಸರಿಸಿದ ವಿವೇಕಾನಂದ ಅವರು ವರುಣ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ). ವರುಣ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ, ಕೀಳನಪುರ, ದೇವಲಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 5 ಸರ್ಕಾರಿ ಶಾಲೆಗಳ ರಿಪೇರಿಯಾಗಬೇಕಾಗಿರುವ ಕೊಠಡಿಗಳ ವಿವರದ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಯ ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿದ್ದರು. ಇದರ ಬಗ್ಗೆಯೇ ನಾನು ಡಾ.ಯತೀಂದ್ರ ಅವರ ಜೊತೆಯಲ್ಲಿ ಮಾತನಾಡಿದ್ದು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇಲ್ಲಿ ಲಗತ್ತಿಸಿದ್ದೇನೆ.
ಹಳ್ಳಿಯಿಂದ ಬೆಂಗಳೂರಿಗೆ ಬಂದ ಹುಡ್ಗೀರೇ ಹುಷಾರ್: ಸರ್ಕಾರಿ ಕೆಲಸದ ಆಮಿಷವೊಡ್ಡಿ ವಂಚಿಸುವ ಗ್ಯಾಂಗ್‌ನಿಂದ ದೂರವಿರಿ!
'ಸುಳ್ಳುಕೋರರ ನಂಜಿನ ಆರೋಪಗಳಿಗೆ ವಿವರಣೆ ನೀಡಬೇಕಾದ ಅಗತ್ಯ ಖಂಡಿತ ಇಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುತ್ತಿರುವ ಸುಳ‍್ಳು ಸುದ್ದಿಗಳನ್ನು ಅಮಾಯಕ ಜನ ನಂಬಿ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿವರವನ್ನು ನೀಡಿದ್ದೇನೆ. ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಗಳಿಸಿದ ಅಧಿಕಾರವನ್ನು ಕೇವಲ ಹಣದ ಲೂಟಿಗಾಗಿ ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಅಭಿವೃದ್ದಿಯ ವಿಚಾರ ಅರ್ಥವಾಗುವಂತಹದ್ದಲ್ಲ' ಟ್ವೀಟ್ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.