ರಾಷ್ಟ್ರೀಯ ಪಕ್ಷ ವ್ಯಾಮೋಹ ಬಿಡಿ, ಜೆಡಿಎಸ್‌ ಮೇಲೆ ನಂಬಿಕೆಯಿಡಿ| ರಾಜ್ಯದ ಗೌರವ ಕಾಪಾಡುವುದು ಜೆಡಿಎಸ್‌: ಮಾಜಿ ಸಿಎಂ ಎಚ್‌ಡಿಕೆ| ಈ ಹಿಂದೆ ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ಮೋದಿಯೇ ಟೀಕಿಸಿದ್ದ ವ್ಯಕ್ತಿಯನ್ನು ಬಿಜೆಪಿಯವರು ಈ ಬಾರಿ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ ಕುಮಾರಸ್ವಾಮಿ|

ಬೆಂಗಳೂರು(ಅ.17): ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದಿದ್ದೇ ಈ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕೊಡುಗೆ. ಅದರಿಂದ ಕೊರೋನಾ ಹೋಗಲಿಲ್ಲ, ಬದಲಿಗೆ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ ಹೆಚ್ಚಾಯಿತು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ಮೋದಿಯೇ ಟೀಕಿಸಿದ್ದ ವ್ಯಕ್ತಿಯನ್ನು ಬಿಜೆಪಿಯವರು ಈ ಬಾರಿ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ರಾಷ್ಟ್ರೀಯ ಪಕ್ಷಗಳ ವ್ಯಾಮೋಹ ಬಿಟ್ಟುಬಿಡಿ. ರಾಜ್ಯದ ಗೌರವ ಕಾಪಾಡುವ ಜೆಡಿಎಸ್‌ ಮೇಲೆ ನಂಬಿಕೆಯಿಡಿ. ಬೆಂಗಳೂರಿಗೆ ಜೆಡಿಎಸ್‌ ಬಹಳ ದೊಡ್ಡ ಕೊಡುಗೆ ನೀಡಿದೆ. ಕೊರೋನಾ ಸಮಯದಲ್ಲಿ ಸರ್ಕಾರ ಯಾರಿಗೆ ನೆರವಾಗಿದೆ. ಸರ್ಕಾರ ಘೋಷಿಸಿದ ಕೊರೋನಾ ಪ್ಯಾಕೇಜ್‌ ಎಷ್ಟುಜನಕ್ಕೆ ತಲುಪಿದೆ. ಕೊರೋನಾ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದರೆ ಸಂಕಷ್ಟಕ್ಕೀಡಾಗಿರುವ 50 ಲಕ್ಷ ಕುಟುಂಬಗಳಿಗೆ ತಲಾ .10 ಸಾವಿರ ನೀಡುತ್ತಿದ್ದೆ ಎಂದು ಹೇಳಿದರು.

200 ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ : ಇದೇ ನನ್ನ ರಾಜಕೀಯ ಎಂದ ಡಿಕೆಶಿ

ಈ ಚುನಾವಣೆ ನನಗೂ ಸತ್ವ ಪರೀಕ್ಷೆ ಇದ್ದಂತೆ. ಪ್ರಾಮಾಣಿಕ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದ್ದೇವೆ. ಮುನಿರತ್ನ ಕೆಲಸವೇ ಮಾಡದೇ .250 ಕೋಟಿ ಲೂಟಿ ಮಾಡಿದ್ದಾರೆ. ಪಾಪದ ದುಡ್ಡಿನಿಂದ ಆಹಾರ ಕಿಟ್‌ ನೀಡಿದ್ದಾರೆ. ಅವರೇನು ತಮ್ಮ ಜೇಬಿನಿಂದ ನಿಮಗೆ ಫುಡ್‌ಕಿಟ್‌ ಕೊಟ್ಟಿಲ್ಲ. ನಿಮ್ಮ ದುಡ್ಡು ಲೂಟಿ ಮಾಡಿ ಕೊಟ್ಟಿದ್ದಾರೆ ಎಂದು ಹರಿಹಾಯ್ದರು. ವಿಧಾನ ಪರಿಷತ್‌ ಸದಸ್ಯ ರಮೇಶ್‌ ಕುಮಾರ್‌, ಮಾಜಿ ಸದಸ್ಯ ಟಿ.ಎ.ಶರವಣ, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಇತರರು ಉಪಸ್ಥಿತರಿದ್ದರು.

ಕಣ್ಣೀರಿಟ್ಟ ಜೆಡಿಎಸ್‌ ಅಭ್ಯರ್ಥಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಣ ತೆಗೆದುಕೊಂಡು ನನ್ನನ್ನು ಹರಕೆ ಕುರಿ ಮಾಡಲಾಗಿದೆ ಎಂದೆಲ್ಲಾ ಆರೋಪ ಮಾಡಲಾಗುತ್ತಿದೆ. ಆದರೆ, ನಾನು ಹರಕೆಯ ಕುರಿಯಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡಲಾಗಿದೆ. ನನಗೇನಾದರೂ ಹೇಳಲಿ. ಆದರೆ, ಕುಮಾರಸ್ವಾಮಿ ಅವರಿಗೆ ಏನು ಹೇಳಬೇಡಿ. ತುಂಬಾ ನೋವಾಗುತ್ತದೆ ಎಂದು ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಭಾವುಕವಾಗಿ ನುಡಿದರು.

ಸ್ಥಳೀಯವಾಗಿ ನಾನು ಬೆಳೆಯುವುದು ಕೆಲವರಿಗೆ ಇಷ್ಟವಿಲ್ಲ. ಯುವಕರು ಬೆಳೆಯುವುದನ್ನು ಸಹಿಸಲು ಆಗುತ್ತಿಲ್ಲ. ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಗೆ ಹೋಗಿರುವ ಮುಖಂಡರು ಜನರ ಮಧ್ಯೆ ಇರಬೇಕಿತ್ತು. ಆದರೆ, ತನ್ನನ್ನು ಮಾರಿಕೊಳ್ಳುವುದು ಮಾತ್ರವಲ್ಲದೇ ಮತದಾರರನ್ನು ಮಾರಿದ್ದಾರೆ. ಅಂತಹವರಿಗೆ ಮತ ಹಾಕವುದು ಸರಿಯಲ್ಲ. ನಾನು ಅವರಂತೆ ಮತದಾರರ ಬೆನ್ನಿಗೆ ಚೂರಿ ಹಾಕುವುದಿಲ್ಲ. ಕುಮಾರಸ್ವಾಮಿ ಅವರು ಪಕ್ಷದ ಏಳ್ಗೆಗಾಗಿ ಸತ್ತು ಬದುಕುತ್ತಿದ್ದಾರೆ. ನನ್ನ ವಿರುದ್ಧವೂ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಕುಮಾರಸ್ವಾಮಿ ಅವರು ಎಂದಿಗೂ ಕಾರ್ಯಕರ್ತರಿಗೆ ಮೋಸ ಮಾಡುವುದಿಲ್ಲ ಎಂದು ಕಣ್ಣೀರಿಟ್ಟರು.