ಬೆಂಗ​ಳೂ​ರು(ಅ.10): ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಎಫ್‌ಆರ್‌ ಹಾಕಿ ಹೆದರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ನಡೆಸಲಾಗುವುದು’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಡಿಕಾರಿರುವ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಈಗ ಯಾಕೆ ಈ ವಿಚಾರ ಪ್ರಸ್ತಾಪಿಸಲಾಯಿತು ಎಂಬುದರ ಬಗ್ಗೆ ಜನತೆಗೆ ತಿಳಿಸಬೇಕು. ಅಷ್ಟಕ್ಕೂ ಈ ಸಂಸ್ಕೃತಿ ಬರಲು ಪ್ರೇರಣೆ ಯಾರು? ಕಾಂಗ್ರೆಸ್‌ನವರಿಗೆ ಈಗ ಜ್ಞಾನೋದಯವಾಗಿದೆಯಾ?’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಶಿವಕುಮಾರ್‌ ಅವರು ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ಜಾತಿ ರಾಜಕಾರಣವನ್ನು ಇವರು ಗುತ್ತಿಗೆ ಪಡೆದಿದ್ದಾರೆಯೇ? ಜಾತಿಗಳ ಮೇಲೆ ದಬ್ಬಾಳಿಕೆ ನಡೆದಾಗ ತಡೆಯುವ ಕೆಲಸ ಯಾಕೆ ಮಾಡಲಿಲ್ಲ. ಈಗ ‘ನಮ್ಮ ಜಾತಿಯವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಾವೆಲ್ಲಾ ಒಂದಾಗಬೇಕು’ ಎಂದು ಚರ್ಚಿಸುತ್ತಿದ್ದಾರೆ. ಯಾವ ಕಾಂಗ್ರೆಸ್‌ ನಾಯಕರು ಅವರಿಗೆ ಹೇಳಿದ್ದಾರೆ ಎನ್ನುವುದು ಗೊತ್ತಿದೆ ಎಂದು ತಿಳಿಸಿದ್ದಾರೆ.

ಹವಾಲಾ ಕೇಸ್‌: ಏಳು ಮಂದಿ ಡಿಕೆಶಿ ಆಪ್ತರಿಗೂ ಈಗ ವಿಚಾರಣೆ ಸಂಕಷ್ಟ

ಇಂತಹ ವಿಚಾರಗಳ ಬಗ್ಗೆ ಮಾತನಾಡುವ ವೇಳೆ ಗಾಜಿನ ಮನೆಯಲ್ಲಿ ಕುಳಿತವರು, ಹೊಡೆದವರು ಯಾರು ಎನ್ನುವುದನ್ನು ತಿಳಿದುಕೊಂಡು ಮಾತನಾಡಬೇಕು. ಕಾರ್ಯಕರ್ತರನ್ನು ಹೆದರಿಸುವ ಸಂಸ್ಕೃತಿ ಆರಂಭವಾಗಿದ್ದು ಯಾವಾಗ? ಚುನಾವಣೆ ವೇಳೆ ನೆನಪಿಗೆ ಬಂದಿದೆಯೇ? ಜನರ ದಾರಿ ತಪ್ಪಿಸಲು ಹೀಗೆ ಹೇಳುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.