ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಯಶಸ್ಸು ಕಂಡಿದ್ದಾರೆ. ಈಗ ಅವರು ಪ್ರಧಾನಮಂತ್ರಿ ಹುದ್ದೆಯತ್ತ ಗಮನ ಹರಿಸಬೇಕು. ಧರ್ಮಸ್ಥಳದಲ್ಲಿ ಶವ ಹೂತಿರುವ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರು (ಜು.28): ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಶ್ರಮ ವ್ಯರ್ಥವಾಯಿತು ಎಂದು ಹೇಳಬಾರದು. ಅವರು ಶ್ರಮ ಹಾಕಿದ್ದರಿಂದಲೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಈಗ ಅವರು ಪ್ರಧಾನಮಂತ್ರಿ ಹುದ್ದೆಯ ಕಡೆಗೆ ಗಮನಹರಿಸಬೇಕು. ಅದನ್ನು ಬಿಟ್ಟು ರಾಜ್ಯಕ್ಕೆ ವಾಪಸ್ ಬಂದು ಮುಖ್ಯಮಂತ್ರಿ ಪದವಿಗೆ ಆಸೆ ಪಡಬಾರದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನೂರಾರು ಶವಗಳು ಪತ್ತೆಯಾಗಿರುವ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಧರ್ಮಸ್ಥಳದಲ್ಲಿ ಶವ ಹೂತಿತುವ ಪ್ರಕರಣ ಇದೀಗ ತನಿಖಾ ಹಂತದಲ್ಲಿದೆ. ನಾನು ಮಾಜಿ ಕಾನೂನು ಸಚಿವನಾಗಿದ್ದೇನೆ. ಆದ್ದರಿಂದ ಕಾನೂನು ತನ್ನ ದಾರಿಗೆ ನಡೆಯಲಿದೆ. ತನಿಖೆ ಪ್ರಗತಿಯಲ್ಲಿರುವ ಈ ಸಂದರ್ಭದಲ್ಲಿ ನಾನು ಯಾವುದೇ ವಿವರಣೆ ನೀಡಲು ಬಯಸಲ್ಲ ಎಂದು ಸ್ಪಷ್ಟನೆ ನೀಡಿದರು.

ಪಕ್ಷದೊಳಗಿನ ಶುದ್ಧೀಕರಣ ಪ್ರಕ್ರಿಯೆ ಪ್ರಾರಂಭ:

ನಮ್ಮ ಪಾರ್ಟಿಯಲ್ಲಿ ಶುಚಿ ಗೊಳಿಸುವ ಕಾರ್ಯ ಶುರುವಾಗಿದೆ. ಈಗಷ್ಟೇ ನೀರು ಹಾಕಿ ಸೋಪು ಹಚ್ಚಿದ್ದೇವೆ. ಕೆಲವು ಶಾಸಕರು ದೆಹಲಿಗೆ ವಿಜಯೇಂದ್ರರ ಪರವಾಗಿ ಬಿಜೆಪಿ ಹೈಕಮಾಂಡ್‌ ಭೇಟಿ ಮಾಡುವುದಕ್ಕೆ ಹೋಗುವ ವಿಷಯದ ಬಗ್ಗೆ ಮಾತನಾಡಿ, ಅಲ್ಲಿ ಇಲ್ಲಿ ಕೆಲವರು ಫೋನ್‌ನಲ್ಲಿ ಮಾತಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳ್ತಾ ಇದ್ದೇವೆ. ಒಬ್ಬೊಬ್ಬರೆ ಶಾಸಕರು ಹೋಗೋದು ಬೇರೆ. ಆದರೆ ಗುಂಪಾಗಿ ಹೋಗೊದು ಬೇರೆ. ಮುಂದೆ ಶುದ್ಧೀಕರಣ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಖರ್ಗೆ ಹೇಳಿಕೆಯ ವಿರುದ್ಧ ಕಠಿಣ ಪ್ರತಿಕ್ರಿಯೆ:

ಮಲ್ಲಿಕಾರ್ಜುನ ಖರ್ಗೆ ತಮ್ಮ ಶ್ರಮ ವ್ಯರ್ಥವಾಯಿತೆಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ, 'ಅವರು ಈಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಈಗ ಅವರು ಮುಖ್ಯಮಂತ್ರಿ ಹುದ್ದೆಗೆ ಕಣ್ಣಿಟ್ಟಿರುವುದು ಸೂಕ್ತವಲ್ಲ. ಈಗ ಅವರು ಪ್ರಧಾನ ಮಂತ್ರಿ ಹುದ್ದೆ ಕಡೆ ಗಮನ ಹರಿಸಬೇಕು. ತಮ್ಮ ಶ್ರಮ ವ್ಯರ್ಥವಾಯಿತು ಎನ್ನುತ್ತಿದ್ದಾರೆ ಎಂದರೆ ಅವರು, ವ್ಯರ್ಥವಾಗುವ ಶ್ರಮವನ್ನೇ ಮಾಡಿರುತ್ತಾರಲ್ಲವೇ? ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಅವರು ರಾಜ್ಯಕ್ಕೆ ವಾಪಸ್ ಬಂದು ಮುಖ್ಯಮಂತ್ರಿ ಸ್ಥಾನವನ್ನು ಕೇಳಬಾರದು ಎಂದು ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ರಸಗೊಬ್ಬರ ಗೊಂದಲ ಆಗಲು ರಾಜ್ಯ ಸರ್ಕಾರದ ಡಿಸ್ಟ್ರುಬ್ಯುಶನ್ ಕಾರಣವಾಗಿದ್ದಾರೆ. ರಸಗೊಬ್ಬರ ಅಂಗಡಿಗಳ ಮುಂದೆ ಕಿಲೋಮೀಟರ್‌ಗಟ್ಟಲೇ ರೈತರು ಕ್ಯೂ ನಿಂತಿದ್ದಾರೆ. ಈ ಗೊಂದಲ ಆಗಲು ರಾಜ್ಯ ಸರ್ಕಾರ ಕಾರಣ. ಮಳೆ ಎಲ್ಲಿ ಹೆಚ್ಚಾಗಿರುತ್ತದೆ ಅಲ್ಲಿಗೆ ಗೊಬ್ಬರ ಪೂರೈಕೆ ಮಾಡಬೇಕು. ಎಲ್ಲಿ ಮಳೆ ಬಂದಿಲ್ಲ ಆ ಭಾಗದಿಂದ ಮಳೆ ಹೆಚ್ಚು ಬಂದ ಜಿಲ್ಲೆಗಳಿಗೆ ಸಪ್ಲೈ ಮಾಡೋದು ಸಾಮಾನ್ಯ. ಹಾಗೆ ಡಿಸ್ಟ್ರುಬ್ಯುಟ್ ಮಾಡಲು ಸ್ವತಃ ಅಧಿಕಾರಿಗಳು, ಕೃಷಿ ಸಚಿವರು ಅಲ್ಲೆ ನಿಂತು ಕೆಲಸ ಮಾಡಿಸಬೇಕು. ಈ ವರ್ಷ ಸ್ವಲ್ಪ ಮಳೆ ಬೇಗ ಆರಂಭ ಆಗಿದೆ‌. ಏಕಾಏಕಿ ಕೇಂದ್ರ ಸಹ ಸಪ್ಲೈ ಮಾಡೋಕೆ ಆಗಲ್ಲ ಎಂದು ಹೇಳಿದರು.

ಜೋರ್ಡಾನ್ ಮತ್ತು ಸನೆಗಲ್ ನಿಂದ ಕಚ್ಚಾ ಸರಕು (ರಾ ಮಟಿರಿಯಲ್) ನಮ್ಮ ದೇಶಕ್ಕೆ ಬರುತ್ತದೆ. ರಷ್ಯಾ ಯುಕ್ರೇನ್ ಯುದ್ಧದ ಪರಿಣಾಮ ಸ್ವಲ್ಪ ಸಮಸ್ಯೆ ಆಗಿದೆ. ಆದರೆ, ಕೇಂದ್ರ ಸರ್ಕಾರ 2.25 ಲಕ್ಷ ಸಬ್ಸಿಡಿ ನೀಡುತ್ತದೆ. ಕೇಂದ್ರದ ಕಾರ್ಯಕ್ಕೆ ನಾವು ಮೆಚ್ಚಬೇಕು. ಬೆಂಗಳೂರಿನಲ್ಲೇ ನ್ಯಾನೊ ಪರ್ಟಿಲೈಸರ್ ತಯಾರಾಗುತ್ತದೆ. ಇಫ್ಕೊ ಕಂಪನಿ (Indian Farmers Fertiliser Cooperative Limited-IFFCO) ಬೆಂಗಳೂರಿನಲ್ಲಿ ಪರ್ಟಿಲೈಸರ್ ತಯಾರಿಸುತ್ತದೆ. ಆದರೆ ಅದನ್ನು ರೈತರು ಕೊಂಡುಕೊಳ್ಳುವಲ್ಲಿ ಹಿಂದೇಟು ಹಾಕಿದ್ದಾರೆ. ಕಾರಣ ಅದು ಪರಿಣಾಮಕಾರಿ ಹೌದೊ, ಅಲ್ಲವೊ ಎಂದು ರೈತರಿಗೆ ಗೊಂದಲ ಇದೆ. ಆದರೆ ಇಫ್ಕೊ ಕಂಪನಿಯ ಯುರಿಯಾ ಲಿಕ್ವಿಡ್ ಪರ್ಟಿಲೈಸರ್ ಉತ್ತಮವಾಗಿದೆ‌. ಕಳೆದ ವರ್ಷ 50 ಸಾವಿರ ಬಾಟಲಿ ತಯಾರು ಮಾಡಿದೆ ಎಂದು ಮಾಹಿತಿ ನೀಡಿದರು.

ಈಗ ಗೊಬ್ಬರ ಕೊರತೆ ಆಗಲು ಕಾರಣ ಬ್ಲಾಕ್ ಮಾರ್ಕೆಟ್ ಕೂಡ ಕಾರಣ. ಅವರ ಮೇಲೆ ಕೇಸ್ ಹಾಕಿ. ಎಷ್ಟು ಸ್ಟಾಕ್ ಇದೆ ಪರಿಶೀಲನೆ ಮಾಡಿ. ಅಂತಹವರ ಲೈನ್ಸಸ್ ರದ್ದು ಮಾಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಕೊರತೆ ಇದೆ. ಇಲ್ಲಿ ಸರ್ಕಾರದ ಸಚಿವರು ಹಾಗೂ ಕೈ ನಾಯಕರು ಡಿಸ್ಟ್ರಿಬ್ಯುಟರ್ಸ್ ಅವರಿಂದ ಅದೆಷ್ಟು ಲಂಚ ಹೊಡಿತಾರೊ ಗೊತ್ತಿಲ್ಲ ಎಂದು ಟೀಕೆ ಮಾಡಿದರು.