ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ತಾವು ಸಂತುಷ್ಟ ರಾಜಕಾರಣಿ ಎಂದು ಹೇಳಿದ್ದಾರೆ. ಯಾವುದೇ ಸ್ಥಾನಮಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿ ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ ಎಂದಿದ್ದಾರೆ.

ಬೆಂಗಳೂರು (ಫೆ.08): ನಮ್ಮ ರಾಜ್ಯದಲ್ಲಿ ನನ್ನ ರಾಜ್ಯಾಧ್ಯಕ್ಷ ಅವಧಿಯಲ್ಲಿಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಇವತ್ತು ನಾನೊಬ್ಬ ಸಂತುಷ್ಟ ರಾಜಕಾರಣಿ ಆಗಿದ್ದೇನೆ. ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿಯೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.

ದೆಹಲಿ ವಿದಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ಫಲಿತಾಂಶ ನಮ್ಮ ಪಕ್ಷಕ್ಕೆ ಬಹಳ ಸಂತೋಷ ತಂದಿದೆ. ದೆಹಲಿಯಲ್ಲಿ ಬಿಜೆಪಿಯನ್ನ ಕೈ ಹಿಡಿತಿಲ್ಲ ಅನ್ನೋ ಮಾತಿತ್ತು. ಆದರೆ ಈಗ 27 ವರ್ಷಗಳ ಬಳಿಕ ಮತ್ತೆ ಬಿಜೆಪಿಯನ್ನ ನಂಬಿದ್ದಾರೆ. ಮೋದಿ ನಾಯಕತ್ವವನ್ನ ನಂಬಿ ಜನ‌ ಆಶಿರ್ವಾದ ಮಾಡಿದ್ದಾರೆ. ಎಎಪಿಯಲ್ಲಿನ ಭ್ರಷ್ಟಾಚಾರ ಕೇಜ್ರಿವಾಲ್ ಜೈಲಿಗೆ ಹೋಗಿದ್ದು AAP ಸೋಲಿಗೆ ಕಾರಣವಾಯ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಗೊಂದಲಗಳ ವಿಚಾರದ ಬಗ್ಗೆ ಮಾತನಾಡುತ್ತಾ, ಈಗಾಗಲೇ ಏನೆಲ್ಲ ಹೇಳಬೇಕೋ ಎಲ್ಲವನ್ನೂ ನಾವು ಎಲ್ಲರಿಗೂ ತಿಳಿಸಿ ಹೇಳಿದ್ದೇವೆ. ಕೇಂದ್ರದವರು ಯಾವಾಗ ಏನು ಹೇಳುತ್ತಾರೋ ಅದರಂತೆ ನಾವು ಇದೀಗ ನಡೆಯುತ್ತೇವೆ. ಇದು ಬಿಟ್ಟು ಬೀದಿಯಲ್ಲಿ ಕೆಲವರು ಮಾತಾಡೋದು ಮಾತಾಡ್ತಿದ್ದಾರೆ, ಅದು ಯಾವಾಗಲೂ ನಡೆಯುತ್ತಿರುತ್ತದೆ. ಆದರೆ, ದೆಹಲಿ ಫಲಿತಾಂಶದಿಂದ ಕೆಲವರಿಗಾದರೂ ಬೀದಿಯಲ್ಲಿ ಮಾತಾಡೋದು ಬೇಡ ಅಂತ ಅನಿಸಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ: ಸಂಸದ ಶೆಟ್ಟರ್

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ನಿಂದನೆ ಮಾಡುವುದನ್ನು ತಡೆಯಲಿಲ್ಲ ಎಂದು ರಾಜ್ಯ ಬಿಜೆಪಿಯ ಕೆಲವು ಹಿರಿಯ ನಾಯಕರ ಮೇಲೆ ವಿಜಯೇಂದ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ಕೆಲವರ ಬಾಯಿಗೆ ಬೀಗ ಹಾಕಲು‌ ನಮ್ಮಿಂದ ಸಾಧ್ಯವಿಲ್ಲ. ಇದನ್ನ ನಾವು ಈಗಾಗಲೇ ಹೇಳಿದ್ದೇವೆ. ಹೈಕಮಾಂಡ್‌ಗೆ ಮಾತ್ರ ರಾಜ್ಯದಲ್ಲಿ ಪಕ್ಷದ ಹಿರಿಯ ನಾಯಕರ ವಿರುದ್ಧ ಬಹಿರಂಗವಾಗಿ ಮಾತನಾಡುವವರ ಬಾಯಿಗೆ ಬೀಗ ಹಾಕಲು ಸಾಧ್ಯ ಎಂದು ಹೇಳಿದರು.

ನಾನು ಎಂದಿಗೂ ರಾಜ್ಯಾಧ್ಯಕ್ಷ ಸ್ಥಾನ ಕೇಳಿರಲಿಲ್ಲ, ಆ ಸ್ಥಾನ ನೋಡಿ ಬಂದವನು. ನನ್ನ ಕಾಲದಲ್ಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು. ಇವತ್ತು ನಾನು ಒಬ್ಬ ಸಂತುಷ್ಟ ರಾಜಕಾರಣಿ ಆಗಿದ್ದೇನೆ. ನಾನು ಪಕ್ಷದಲ್ಲಿ ಇದೀಗ ಯಾವ ಸ್ಥಾನಮಾನದ ಆಕಾಂಕ್ಷಿಯೂ ಅಲ್ಲ. ಯಾರಾದರೂ ನನ್ನ ಹೆಸರು ಶಿಫಾರಸು ಮಾಡಿದರೂ ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಅಂತ ಹೇಳುತ್ತೇನೆ ಎಂದು ಹೇಳಿದರು.