ಸೊರಬದಲ್ಲಿ ಕುಮಾರ್ ಬಂಗಾರಪ್ಪ ಗೆಲ್ಲಿಸಿ: ಬಿ.ಎಸ್.ಯಡಿಯೂರಪ್ಪ
ಮಾಜಿ ಸಚಿವರು, ಹಾಲಿ ಜನಪ್ರಿಯ ಶಾಸಕರು ಮತ್ತು ಅಭಿವೃದ್ಧಿಯ ದೃಷ್ಠಿಯಿಂದ ಜನಮನ್ನಣೆ ಗಳಿಸಿರುವ ಕುಮಾರ್ ಬಂಗಾರಪ್ಪ ಅವರಿಗೆ ಮುಂದಿನ ದಿನಗಳಲ್ಲೂ ಬೆಂಬಲವನ್ನು ನೀಡಬೇಕು.
ಸೊರಬ (ಮಾ.19): ಮಾಜಿ ಸಚಿವರು, ಹಾಲಿ ಜನಪ್ರಿಯ ಶಾಸಕರು ಮತ್ತು ಅಭಿವೃದ್ಧಿಯ ದೃಷ್ಠಿಯಿಂದ ಜನಮನ್ನಣೆ ಗಳಿಸಿರುವ ಕುಮಾರ್ ಬಂಗಾರಪ್ಪ ಅವರಿಗೆ ಮುಂದಿನ ದಿನಗಳಲ್ಲೂ ಬೆಂಬಲವನ್ನು ನೀಡಬೇಕು ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೊರಬ ವಿಧಾನಸಭಾ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪನವರಿಗೆ ಬಿಜೆಪಿ ಟಿಕೆಟ್ ಖಚಿತ ಎನ್ನುವ ಸುಳಿವು ನೀಡಿದರು.
ಪಟ್ಟಣದಲ್ಲಿ ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತಿ ವತಿಯಿಂದ 285 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಮೂಡಿ ಏತ ನೀರಾವರಿ ಯೋಜನೆ ಮತ್ತು ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಎಸ್.ಬಂಗಾರಪ್ಪ ಮೆಮೋರಿಯಲ್ ಸ್ಪೋಟ್ಸ್‌ರ್ ಅಕಾಡೆಮಿ ಲೋಕಾರ್ಪಣೆಗೊಳಿಸಿ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 18 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಾರಾಯಣಗುರು ವಸತಿ ಶಾಲೆ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ವಿಶ್ವವೇ ಪ್ರಧಾನಿ ಮೋದಿ ನಾಯಕತ್ವ ಒಪ್ಪಿದೆ: ಸಂಸದ ಬಿ.ವೈ.ರಾಘವೇಂದ್ರ
ಕುಮಾರ ಬಂಗಾರಪ್ಪ ಈಗಾಗಲೇ ತಾಲೂಕಿನ ಅಭಿವೃದ್ಧಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ ಎನ್ನುವುದನ್ನು ತಿಳಿಸಿ ಹೇಳುವ ಅವಶ್ಯಕತೆ ಇಲ್ಲ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ದಿನಗಳಲ್ಲೂ ತಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು. ಪ್ರತಿಯೊಬ್ಬರೂ ಒಂದಾಗಿ, ಒಟ್ಟಾಗಿ, ಸಂಘಟಿತರಾಗಿ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನೇತ್ವತ್ವದಲ್ಲಿ ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ ಎನ್ನುವ ವಿಶ್ವಾಸ ತಮಗಿದೆ. ಹಾಗಾಗಿ ತಮ್ಮ ಆಶೀರ್ವಾದ ಮತ್ತು ಬೆಂಬಲ ಸದಾ ಇರಲಿ ಎಂದರು.
ಶಾಸಕ ಕುಮಾರ ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಹಿಂದೆಂದೂ ಕಂಡರಿಯದಷ್ಟುಅಭಿವೃದ್ಧಿ ಕೆಲಸಗಳು ಶೀಘ್ರಗತಿಯಲ್ಲಿ ಸಾಗುತ್ತಿವೆ. ಬಿ.ಎಸ್. ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಗೂರು ಏತ ನೀರಾವರಿಗೆ ಮಂಜೂರಾತಿ ನೀಡಿ ಶಂಕುಸ್ಥಾಪನೆಯನ್ನೂ ಸಹ ನೆರವೇರಿಸಿದ್ದರು. ಕೇವಲ 100 ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಇಂದು ಲೋಕಾರ್ಪಣೆಗೊಂಡಿದೆ. ರಾಜ್ಯದಲ್ಲಿ ಶಂಕುಸ್ಥಾಪನೆ ನಡೆದು ಉದ್ಘಾಟನೆಗೊಂಡ ಏಕೈಕ ಕಾಮಗಾರಿ ಎಂದರೆ ಅದು ಮೂಗೂರು ಏತ ನೀರಾವರಿ ಯೋಜನೆ. ಇದರ ಹೆಗ್ಗಳಿಕೆ ಅಭಿವೃದ್ಧಿಯ ಹರಿಕಾರರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಇದಕ್ಕೆ ಸಹಕರಿಸಿದ ಸಚಿವ ಗೋವಿಂದ ಕಾರಜೋಳ ಅವರನ್ನು ತಾಲೂಕಿನ ರೈತರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ತಾಲೂಕಿನ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ಅನನ್ಯವಾಗಿದೆ. ಮುಖ್ಯಮಂತ್ರಿಯಾಗಿ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಎಸ್.ಬಂಗಾರಪ್ಪ ಅವರ ಪುತ್ಥಳಿ ನಿರ್ಮಾಣಕ್ಕೆ ಹಣ ಮತ್ತು ತಂದೆ ಹೆಸರಿನಲ್ಲಿ ಉತ್ತಮ ಕ್ರೀಡಾಂಗಣವನ್ನು ನಿರ್ಮಿಸುವಂತೆ .20 ಕೋಟಿಯನ್ನು ಮಂಜೂರು ಮಾಡಿದ ಪರಿಣಾಮ ಎಸ್.ಬಂಗಾರಪ್ಪ ಮೆಮೋರಿಯಲ್ ಸ್ಪೋಟ್ಸ್‌ರ್ ಅಕಾಡೆಮಿಯನ್ನು ನಿರ್ಮಿಸಲಾಗಿದೆ ಮತ್ತು ಆರ್ಯ ಈಡಿಗ ಸಂಘದ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ಎಲ್ಲ ಸರ್ಕಾರಿ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸುವ 100 ಕೋಟಿ ವೆಚ್ಚದ ವಿಸ್ತಾರ ಯೋಜನೆ ಮತ್ತು ಜಡೆ ಮತ್ತು ಆನವಟ್ಟಿಭಾಗದ ರೈತರ ಜಮೀನುಗಳಿಗೆ ನೀರುಣಿಸುವ ದಂಡಾವತಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಡಿವಾಳ ಮಾಚಿದೇವ ನಿಗಮ ಮಂಡಳಿ ರಾಜ್ಯಾಧ್ಯಕ್ಷ ರಾಜು ಎಂ. ತಲ್ಲೂರು, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಜಿಲ್ಲಾ ಬಿಜೆಪಿ ಮುಖಂಡ ದತ್ತಾತ್ರಿ, ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಪುರಸಭಾ ಉಪಾಧ್ಯಕ್ಷ ಮಧುರಾಯ ಜಿ. ಶೇಟ್, ಸದಸ್ಯರಾದ ಎಂ.ಡಿ.ಉಮೇಶ, ನಟರಾಜ ಉಪ್ಪಿನ ಮೊದಲಾದವರು ಹಾಜರಿದ್ದರು.
18 ನಿಮಿಷಗಳಲ್ಲಿ ಮುಗಿದ ಕಾರ‍್ಯಕ್ರಮ: ಮಧ್ಯಾಹ್ನ 12 ಗಂಟೆಗೆ ಪ್ರಾರಂಭಗೊಂಡ ವೇದಿಕೆ ಕಾರ್ಯಕ್ರಮ ಕೇವಲ 18 ನಿಮಿಷ ಮಾತ್ರ ನಡೆಯಿತು. ಬೃಹತ್ ಪೆಂಡಾಲ್‌ನಲ್ಲಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಭಾಷಣ ಕೇಳಲು ತಾಲೂಕಿನ ಮೂಲೆ ಮೂಲೆಯಿಂದ ಸುಮಾರು 6ರಿಂದ 8 ಸಾವಿರದಷ್ಟುಕಾರ್ಯಕರ್ತರು ಮತ್ತು ಸಾರ್ವಜನಿಕರು ಆಗಮಿಸಿದ್ದರು. ಆದರೆ, ಅವರೆಲ್ಲ ನಿರಾಶೆಗೊಂಡರು. ಪ್ರಾಸ್ತಾವಿಕವಾಗಿ ಕುಮಾರ ಬಂಗಾರಪ್ಪ 7 ನಿಮಿಷ ಮಾತನಾಡಿದರೆ ಯಡಿಯೂರಪ್ಪ ಕೇವಲ 2 ನಿಮಿಷ ಮಾತನಾಡಿ, ಚನ್ನಗಿರಿ ಕಾರ್ಯಕ್ರಮಕ್ಕೆ ತೆರಳಬೇಕಿದೆ ಎಂದು ಹೇಳಿ ತಮ್ಮ ಭಾಷಣ ಮೊಟಕುಗೊಳಿಸಿದರು.
ಮಧು ಬಂಗಾರಪ್ಪ ನಾಲಾಯಕ್ ಶಾಸಕ: ಕುಮಾರ್ ಬಂಗಾರಪ್ಪ ವಾಗ್ದಾಳಿ
ನಮೋ ವೇದಿಕೆ ಹಿರಿಯ ಮುಖಂಡ ಭಾಗಿ: ಶಾಸಕ ಕುಮಾರ ಬಂಗಾರಪ್ಪರ ವರ್ತನೆಯಿಂದ ಮುನಿಸಿಕೊಂಡು ಪ್ರತ್ಯೇಕವಾಗಿ ನಮೋ ವೇದಿಕೆ ಹುಟ್ಟು ಹಾಕಿರುವ ಬಿಜೆಪಿ ಹಿರಿಯ ಮುಖಂಡ, ಆರ್‌ಎಸ್‌ಎಸ್ ರಾಷ್ಟ್ರೀಯ ಮುಖಂಡ ಎಚ್.ಎಸ್. ದತ್ತಾತ್ರೇಯ ಅವರ ಹಿರಿಯ ಸಹೋದರ ಎಚ್.ಎಸ್. ಮಂಜಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಮುಂಭಾಗದಲ್ಲಿ ಆಸೀನರಾಗಿದ್ದರು. ಕಳೆದ 2 ತಿಂಗಳ ಹಿಂದೆ ಬಿಜೆಪಿ ಮತ್ತು ನಮೋ ವೇದಿಕೆಯನ್ನು ಒಂದು ಮಾಡುವಂತೆ ಸಚಿವ ಸಿ.ಟಿ.ರವಿ ಮತ್ತು ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲು ಅವರು ಎಚ್.ಎಸ್. ಮಂಜಪ್ಪ ಅವರ ಸೊರಬ ಮನೆಗೆ ತೆರಳಿ ನಡೆಸಿದ್ದ ಸಂಧಾನ ವಿಫಲವಾಗಿತ್ತು. ಆದರೆ, ಇತ್ತೀಚೆಗೆ ರಾಷ್ಟ್ರಮಟ್ಟದ ಬೆಳವಣಿಗೆ ಮತ್ತು ಸ್ವತಃ ಯಡಿಯೂರಪ್ಪ ಅವರೇ ಮುಂದೆ ನಿಂತು ನಮೋ ವೇದಿಕೆ ಮುಖಂಡರ ಜೊತೆ ಮಾತನಾಡಿ, ಎಲ್ಲ ಅಸಮಾಧಾನವನ್ನೂ ಶಮನಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.