ಸ್ಪರ್ಧೆ ಹೆಸರಲ್ಲಿ ಸಿದ್ದರಾಮಯ್ಯ ಪ್ರಚಾರ ಪಡೆಯುತ್ತಿದ್ದಾರೆ: ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಗೆ ಅಲ್ಲಿ ನಿಲ್ಲುತ್ತೇನೆ, ಇಲ್ಲಿ ನಿಲ್ಲುತ್ತೇನೆ ಎಂದು ಹೇಳಿಕೊಂಡು ಕೇವಲ ಪ್ರಚಾರ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು (ಮಾ.24): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಗೆ ಅಲ್ಲಿ ನಿಲ್ಲುತ್ತೇನೆ, ಇಲ್ಲಿ ನಿಲ್ಲುತ್ತೇನೆ ಎಂದು ಹೇಳಿಕೊಂಡು ಕೇವಲ ಪ್ರಚಾರ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಕ್ಷೇತ್ರ ಗೊಂದಲ ಏನಿಲ್ಲ. ಜನರ ಮಧ್ಯೆ ಅವರು ಅಲ್ಲಿ ನಿಲ್ಲುತ್ತೇನೆ, ಇಲ್ಲಿ ನಿಲ್ಲುತ್ತೇನೆ. ಎಲ್ಲಿ ಬೇಕಾದರೂ ನಿಂತು ಗೆಲ್ಲುತ್ತೇನೆ ಎಂಬ ವಾತಾವರಣ ಸೃಷ್ಟಿಸಲು ಹೊರಟಿದ್ದಾರೆ. ಇದರಿಂದ ಪ್ರಯೋಜನ ಏನು ಎಂಬುದು ನಮಗೂ ಅರ್ಥವಾಗುತ್ತಿಲ್ಲ. ಇದಕ್ಕೆ ಅವರೇ ಉತ್ತರ ಕೊಡಬೇಕು. ಅವರು ಎಲ್ಲಿ ನಿಲ್ಲಬೇಕು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಎಸ್‌ವೈ ಮನೆಯಲ್ಲಿ ಅಮಿತ್ ಶಾ ಉಪಾಹಾರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಉಪಾಹಾರ ಸೇವಿಸಲಿದ್ದಾರೆ. ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ಅವರು ಬೆಳಗ್ಗೆ 9.30ಕ್ಕೆ ಯಡಿಯೂರಪ್ಪ ಅವರ ಸರ್ಕಾರಿ ನಿವಾಸ ‘ಕಾವೇರಿ’ಗೆ ಆಗಮಿಸಿ ಉಪಾಹಾರ ಸೇವಿಸಲಿದ್ದಾರೆ. ಸ್ವತಃ ಯಡಿಯೂರಪ್ಪ ಅವರೇ ಅಮಿತ್ ಶಾ ಅವರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಪದೇ ಪದೇ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರೂ ಆಗಿರುವ ಅಮಿತ್ ಶಾ ಅವರು ಉಪಾಹಾರ ಸೇವಿಸುವುದರಿಂದ ಒಂದು ಸಂದೇಶವನ್ನೂ ರವಾನಿಸಿದಂತಾಗುತ್ತದೆ ಎಂಬ ಲೆಕ್ಕಾಚಾರವಿದೆ.
ಯಡಿಯೂರಪ್ಪರನ್ನು ಬಿಜೆಪಿ ಹೆದರಿಸುತ್ತಿದೆ: ಡಿ.ಕೆ.ಶಿವಕುಮಾರ್
ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಿ: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡಿ. ಮತ್ತೊಮ್ಮೆ ಅವರನ್ನು ಶಾಸಕರಾಗಿ ಆಯ್ಕೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು. ಅವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರ ಸೋಲಿಗೆ ಕಾರಣ ಏನು ಎಂಬ ಕೊರಗು ಇಂದಿಗೂ ನನ್ನನ್ನು ಕಾಡುತ್ತಿದೆ.
ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜು, ಆಸ್ಪತ್ರೆಗಳನ್ನು ಮಾಡಿ ಜನರಿಗೆ ಉಪಯೋಗ ಮಾಡಿದ್ದಾರೆ. ಹಾಲಿ ಶಾಸಕರೇ ಗ್ರಾಮಾಂತರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಬಿ.ಎಸ್.ವೈ, ಜನ ನಿಮ್ಮನ್ನು ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ. ಈ ಬಾರಿ ಜನರೇ ನಿಮಗೆ ಬುದ್ದಿ ಕಲಿಸಲಿದ್ದಾರೆ. ಇತಿಹಾಸ ಮತ್ತೊಮ್ಮೆ ಪುನಾರಾವರ್ತನೆಯಾಗಲಿದೆ ಎಂದು ಬಿ.ಎಸ್.ವೈ. ಭವಿಷ್ಯ ನುಡಿದರು. ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರಮೋದಿ ಒಂದು ದಿನವೂ ರಜೆ ಪಡೆದಿಲ್ಲ. ಅದೇ ರೀತಿ ರಾಜ್ಯದ ಬಿಜೆಪಿ ಕಾರ್ಯಕರ್ತರು ಮುಂದಿನ ಎರಡುವರೆ ತಿಂಗಳ ಕಾಲ ವಿಶ್ರಾಂತಿ ಪಡೆಯದೆ, ಪಕ್ಷದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳಿದ್ದೀನೆಯೇ ಹೊರತು ರಾಜಕೀಯ ನಿವೃತ್ತಿ ತೆಗೆದುಕೊಂಡಿಲ್ಲ: ಬಿಎಸ್‌ವೈ
ವಿಶ್ವಮಟ್ಟದಲ್ಲಿ ಭಾರತದ ವಿಜಯಪತಾಕೆ ಹಾರಿಸಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಲ್ಲಿ, ರಾಜಕೀಯದ ಎಬಿಸಿಡಿ ತಿಳಿಯದ ರಾಹುಲ್‌ಗಾಂಧಿ ಎಲ್ಲಿ. ಮೋದಿಗೆ ರಾಹುಲ್ ಸರಿಸಾಟಿಯಲ್ಲ. ದೇಶದ ಬಡವರು, ದಿನ ದಲಿತರು,ಮಹಿಳೆಯರು, ಮಕ್ಕಳು ಎನ್ನದೆ ಎಲ್ಲರಿಗೂ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನೀಡುವ ಮೂಲಕ ನರೇಂದ್ರ ಮೋದಿ ಒಳ್ಳೆಯ ಆಡಳಿತಗಾರ ಎಂದು ಹೆಸರು ಪಡೆದಿದ್ದಾರೆ. ಅದೇ ಮಾರ್ಗದಲ್ಲಿ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರವೂ ನಡೆಯುತ್ತಿದೆ. ಹಾಗಾಗಿ ಮುಂದಿನ ಬಾರಿಯೂ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಈ ರಾಜ್ಯದ ಜನತೆ ಬಯಸಿದ್ದಾರೆ. ಅದು ಈಡೇರಬೇಕೆಂದರೆ ನಿಮ್ಮೆಲ್ಲರೂ ಹಗಲಿರುಳು ಪಕ್ಷಕ್ಕಾಗಿ ದುಡಿಯಬೇಕಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ನುಡಿದರು.