ಹಸು ಕಡಿಯುವ ಸಚಿವರ ಹೇಳಿಕೆಗೆ ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಎಮ್ಮೆ, ಕೋಣಗಳನ್ನು ಕಡಿಯಬಹುದಾದರೆ ಹಸುಗಳನ್ನೇಕೆ ಕಡಿಯಬಾರದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಅವರು ನೀಡಿರುವ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ.

Former CM Basavaraj Bommai Slams On Minister K Venkatesh gvd

ಬೆಂಗಳೂರು (ಜೂ.05): ಎಮ್ಮೆ, ಕೋಣಗಳನ್ನು ಕಡಿಯಬಹುದಾದರೆ ಹಸುಗಳನ್ನೇಕೆ ಕಡಿಯಬಾರದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಅವರು ನೀಡಿರುವ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಹೇಳಿಕೆ ನೀಡುವ ಮೊದಲು ಸಚಿವರಾದವರು ಆಲೋಚಿಸಬೇಕು. ಇಂತಹ ಹೇಳಿಕೆಯಿಂದ ರಾಜ್ಯದಲ್ಲಿ ಗೋ ಕಳ್ಳಸಾಗಣೆ, ಗೋಹತ್ಯೆ ಮಾಡುವ ಕಾನೂನುಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ. ಸಚಿವ ವೆಂಕಟೇಶ್‌ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೋ ಅಥವಾ ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೋ ಅಥವಾ ಹೈಕಮಾಂಡ್‌ ಮೆಚ್ಚಿಸಲಿಕ್ಕೋ ಗೊತ್ತಿಲ್ಲ. ಆದರೆ, ಇಂತಹ ಹೇಳಿಕೆಯಿಂದ ರಾಜ್ಯದಲ್ಲಿ ಗೋ ಕಳ್ಳಸಾಗಣೆ, ಗೋಹತ್ಯೆ ಮಾಡುವ ಕಾನೂನು ಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ. ಹಾಗಾಗಿ ಇಂತಹ ವಿಚಾರಗಳಲ್ಲಿ ಹೇಳಿಕೆ ನೀಡುವಾಗ ಸಚಿವರು ಆಲೋಚಿಸಬೇಕು. 

ಭಾರತದ ಜನ ಬಿಜೆಪಿಯನ್ನು ಸೋಲಿಸುತ್ತಾರೆ: ರಾಹುಲ್‌ ಗಾಂಧಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಚಿವರಿಗೆ ಸೂಕ್ತ ಸಲಹೆ ನೀಡಬೇಕಿದೆ ಎಂದರು. ಗೋಹತ್ಯೆ ನಿಷೇಧ ಪ್ರಥಮವಾಗಿ ಪ್ರತಿಪಾದಿಸಿದ್ದು ಮಹಾತ್ಮಾ ಗಾಂಧಿಜಿ. ಬಳಿಕ ಗೋಹತ್ಯೆ ನಿಷೇಧವನ್ನು 1960ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನು ತರಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ನಾವು ಹೊಸ ಕಾಯ್ದೆಯನ್ನೇನೂ ತಂದಿಲ್ಲ. ಕಾನೂನುಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತಂದು ಇರುವ ಕಾನೂನಿಗೆ ಬಲ ತುಂಬಿದ್ದೇವೆ ಎಂದರು.

ಗ್ಯಾರಂಟಿಗೆ ಬಿಜೆಪಿ ಯೋಜನೆ ಹಣ ಕಡಿತ ಬೇಡ: ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಬಡವರು, ದೀನದಲಿತರು ಸೇರಿದಂತೆ ಎಲ್ಲಾ ವರ್ಗದವರ ಹಿತ ಕಾಪಾಡಲು ಅನುಕೂಲಕರವಾಗಿರುವುದರ ಜತೆಗೆ ಆ ವರ್ಗದ ಏಳ್ಗೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಯೋಜನೆಗಳಿಗೆ ನೀಡುತ್ತಿರುವ ಅನುದಾನವನ್ನು ಕಡಿತಗೊಳಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರದ ಯೋಜನೆಗಳಿಗೆ ಅನುದಾನವನ್ನು ಕಡಿತಗೊಳಿಸದೆ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಎರಡು ವಾರದಿಂದ ಕಾಂಗ್ರೆಸ್‌ ಪಕ್ಷ ನೀಡಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ಅದರಲ್ಲಿಯೂ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸುತ್ತಿರುವುದು ತಿಳಿದಿರುವ ಸಂಗತಿ. ತಾವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸುಮಾರು ಐವತ್ತು ಸಾವಿರ ಕೋಟಿ ರುಪಾಯಿ ಬೇಕೆಂದು ರಾಜ್ಯದ ಜನತೆಗೆ ತಿಳಿಸಿದ್ದೀರಿ. ಈ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಕೆಲವು ಎಚ್ಚರಿಕೆ ವಹಿಸುವುದು ಅಗತ್ಯ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕವನ್ನು ಕಾಂಗ್ರೆಸ್‌ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ: ಸಂಸದ ಪ್ರತಾಪ್‌ ಸಿಂಹ

ರಾಜ್ಯದ ಪ್ರಮುಖ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ, ಮೂಲಭೂತ ಸೌಕರ್ಯ, ರೈತರು, ದೀನ ದಲಿತರು ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವ ಅವಶ್ಯಕತೆ ಇದೆ ಎನ್ನುವ ಮಾತು ಜನರಲ್ಲಿ ಕೇಳಿಬರುತ್ತಿದೆ. ಅದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ ಮೂರು ಲಕ್ಷದಿಂದ ಐದು ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಹಣಕಾಸಿನ ಕಡಿತ ಮಾಡುವುದು ಸೂಕ್ತವಲ್ಲ. ರೈತರ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಆವರ್ತ ನಿಧಿಯನ್ನು 3,500 ಕೋಟಿ ರು.ಗಳಿಗೆ ಹೆಚ್ಚಿಸಲು 2023-24ರ ಆಯವ್ಯಯದಲ್ಲಿ 1500 ಕೋಟಿ ರು. ಒದಗಿಸಲಾಗಿದ್ದು, ಇದು ಅತ್ಯಂತ ಅಗತ್ಯವಾಗಿದ್ದು ಇದನ್ನು ಕಡಿತಗೊಳಿಸಬಾರದು ಎಂದು ಬೊಮ್ಮಾಯಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios