ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್‌ ವಿರುದ್ಧ ರೇವಣ್ಣ ವಾಗ್ದಾಳಿ

ಈ ಕಾಂಗ್ರೆಸ್‌ ಸರ್ಕಾರ ರೈತರ ಮನೆ ಹಾಳಾದ್ರು ಪರವಾಗಿಲ್ಲ, ಬೇಕಾದರೇ ಬೀದಿಪಾಲಾಗಲಿ ನಮಗೆ ಗ್ಯಾರಂಟಿ ಯೋಜನೆ ಈಡೇರಿಸುವುದೇ ಮುಖ್ಯ ಎನ್ನುವಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಟೀಕಿಸಿದರು.

Mla HD Revanna Slams On Congress Govt At Hassan gvd

ಹಾಸನ (ಸೆ.13): ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿ ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಆದರೆ ಈ ಕಾಂಗ್ರೆಸ್‌ ಸರ್ಕಾರ ರೈತರ ಮನೆ ಹಾಳಾದ್ರು ಪರವಾಗಿಲ್ಲ, ಬೇಕಾದರೇ ಬೀದಿಪಾಲಾಗಲಿ ನಮಗೆ ಗ್ಯಾರಂಟಿ ಯೋಜನೆ ಈಡೇರಿಸುವುದೇ ಮುಖ್ಯ ಎನ್ನುವಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲೆಯ ರೈತರು ಕಷ್ಟದಲ್ಲಿದ್ದು, ನಿಮ್ಮ ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ. ಸಂಕಷ್ಟಕ್ಕೆ ಸಿಲುಕಿರೊ ರೈತರ ನೆರವಿಗೆ ಸರ್ಕಾರ ಬರಬೇಕು. 

ಹಾಸನ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. 75 ಸಾವಿರ ಹೆಕ್ಟೇರ್ ಜಾಗದಲ್ಲಿ ರಾಗಿ ಬೆಳೆಯಲಾಗಿದೆ. ಒಟ್ಟು ಸುಮಾರು 2 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಬಹುತೇಕ ನಾಶವಾಗಿದೆ. ಇದುವರೆಗೂ ಸರಕಾರವು ಗಮನ ನೀಡಿ ಪರಿಹಾರ ನೀಡಿರುವುದಿಲ್ಲ. ರೈತರು ಹಾಳು ಬಿದ್ದು ಹೋಗಲಿ ಎನ್ನುವ ಪರಿಸ್ಥಿತಿಗೆ ಬಂದಿದೆ. ಕೇವಲ ಗ್ಯಾರಂಟಿ ಕಡೆ ಗಮನ ಕೊಡಲಾಗಿದ್ದು, ನಾವೇನಾದ್ರೂ ಮಾತನಾಡಿದ್ರೆ ಜೆಡಿಎಸ್ ಮುಗಿದು ಹೋಗುತ್ತೆ. ಅದಕ್ಕೆ ಅವರಿವರ ಬಳಿ ಹೋಗುತ್ತಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಗರಂ ಆಗಿ ರೇವಣ್ಣ ಮಾತನಾಡಿದರು. ಮೊದಲು ರೈತರನ್ನು ಉಳಿಸಿ ಅವರ ಬೆಳೆಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.

ನಾವು ಯಾರ ಜೊತೆ ಮೈತ್ರಿ ಆಯ್ತಿವೊ ಬಿಡ್ತಿವೊ ಇವರಿಗೇನು ಕಾಯಿಲೆ. ದೇವೇಗೌಡರು ಇಂದು ಗುಡುಗು ಬಿಟ್ಟಹಾಗೆ ಇವರಿಗೆ ಯಾಕೆ ನಡುಕ. ಹಿಂದೆ ಇವರೇ ಜೆಡಿಎಸ್ ಬಿಜೆಪಿ ಬಿಟೀಂ ಅಂದಿದ್ರು. ಇವರು ಚುನಾವಣೆ ಆದಮೇಲೆ ಅದೇ ಬಿ ಟೀಂ ಹತ್ರಾ ಯಾಕೆ ಬಂದ್ರು? ನಾವು ಈ ಜಿಲ್ಲೆಯಲ್ಲಿ ಇರಲಿ ರಾಜ್ಯದಲ್ಲಿ ಇರಲಿ ಯಾವು ಯಾವುದೇ ಟೀಂನಲ್ಲಿ ಇದ್ದರೂ ಅಲ್ಪಸಂಖ್ಯಾತರ ಕೈ ಬಿಡಲ್ಲ. ಸಿಎಂ ಇಬ್ರಾಹಿಂ ಅವರೇ ನಮ್ಮ ಅಧ್ಯಕ್ಷರಾಗಿಲ್ವಾ.! ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ಯಾರು? ಆಗ ಈ ಕಾಂಗ್ರೆಸ್ ಎಲ್ಲಿತ್ತು ಎಂದು ಆಕ್ರೋಶವ್ಯಕ್ತಪಡಿಸಿದರು.

ಸಭಾಧ್ಯಕ್ಷನಾಗಿ ಸ್ಥಾನದ ಘನತೆ ಉಳಿಸುವ ಕೆಲಸ ಮಾಡುವೇ: ಯು.ಟಿ.ಖಾದರ್

ಹಿಂದುಳಿದವರಿಗೆ ಮೀಸಲಾತಿ ಕೊಡಲು ದೇವೇಗೌಡರು ಬರಬೇಕಾಯ್ತು. ಈ ರಾಜ್ಯ ಉಳಿಯಬೇಕಿದೆ. ಇವರು ಇಂಡಿಯಾ ಟೀಂ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಡ್ತಿದ್ದಾರೆ. ರಾಷ್ಟ್ರೀಯ ಪಕ್ಷ ಜೆಡಿಸ್ ಎಲ್ಲಿದೆ ಅಂತಾ ಕೇಳ್ತಾರೆ? ಕೋಮುವಾದಿಗಳನ್ನು ದೂರ ಇಡಬೇಕೆಂದು 28 ಪಕ್ಷದವರು ಒಂದಾಗಿದ್ದಾರೆ. ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಇಳಿಸಿದಾಗಿನಿಂದ ಯಾವ ರೀತಿ ನಡೆಸಿಕೊಂಡರು. ಇವರು ಬೇಕಾದಾಗ ಬಂದು ಕಾಲು ಹಿಡಿತಾರೆ, ಬೇಡವಾದಾಗ ಮುಗಿಸ್ತೀವಿ ಅಂತಾರೆ. ನಾವು ಜನರನ್ನು ಉಳಿಸಬೇಕಿದೆ. ನಮ್ಮ ನಿಲುವು ಬದಲಾವಣೆಗೆ ಕಾಂಗ್ರೆಸ್ ಕಾರಣ. ಇವರಿಗೆ ಅಧಿಕಾರದ ಮದ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಯಾಕೆ ಈ ಸ್ಥಿತಿಗೆ ಬಂದಿದೆ ಗೊತ್ತಾ, ಇವರು ಕಮ್ಯುನಿಸ್ಟ್ ರನ್ನ ಮುಗಿಸಿದ್ರು, ಲಾಲೂ ಪ್ರಸಾದ್ ಮುಗಿಸಿದ್ರು, ಬೇಕಾದಾಗ ತಬ್ಬಿಕೊಳ್ತಾರೆ, ಪ್ರಾದೇಶಿಕ ಪಕ್ಷ ಮುಗಿಸಿದ್ದು ಇವರೇ ಎಂದು ದೂರಿದರು. ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ ತುಮಕೂರಿನಲ್ಲಿ ಅವರ ಜೊತೆ ಸೇರಿ ದೇವೇಗೌಡರನ್ನು ಸೋಲಿಸಿದ್ರು. ಮೋದಿಯವರೇ ಹೇಳಿದ್ರು ಕುಮಾರಸ್ವಾಮಿ ಅವರೆ ಐದು ವರ್ಷ ನೀವೆ ಸಿಎಂ ಆಗಿ ಅಂತಾ, ಆದರೆ ನಾವು ಒಪ್ಪಲಿಲ್ಲ. ಇಂಡಿಯಾ ಒಕ್ಕೂಟದ ಸಭೆಗೆ ದೇವೇಗೌಡರಿಗೆ ಶಕ್ತಿ ಇಲ್ಲಾ ಎಂದು ಕರೆದಿಲ್ಲ. ದೇವೇಗೌಡರು ಕುಮಾರಸ್ವಾಮಿ, ಇಬ್ರಾಹಿಂ ತೀರ್ಮಾನಕ್ಕೆ ನಾವು ಬದ್ಧರಾಗಿದ್ದು, ಇನ್ನು ದೇವೇಗೌಡರು ತುಮಕೂರಿನಿಂದ ಸೀಟ್ ಕೇಳಿರಲಿಲ್ಲ. ಅವರು ಮೈಸೂರು ಮಂಡ್ಯ ಕೇಳಿದ್ದರು. ಆದರೆ ತುಮಕೂರಿನಲ್ಲಿ ನಿಲ್ಲಿಸಿ ಸೋಲಿಸಿದ್ರು ಎಂದು ಕಾಂಗ್ರೆಸ್ ವಿರುದ್ಧ ರೇವಣ್ಣ ಹರಿಹಾಯ್ದರು.

ಸಂಸದ ಪ್ರಜ್ವಲ್ ರೇವಣ್ಣ ಸದಸ್ಯತ್ವ ಅನರ್ಹತೆ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ನ್ಯಾಯಾಲಯದ ಬಗ್ಗೆ ನಮ್ಮ ಕುಟುಂಬಕ್ಕೆ ಗೌರವ ಇದ್ದು, ದೇಶದಲ್ಲಿ ಯಾರಾದ್ರು ನ್ಯಾಯಾಲಯಕ್ಕೆ ಹೆಚ್ಚಿಗೆ ಗೌರವ ಕೊಟ್ಟ ಕುಟುಂಬ ಇದ್ದರೆ ನಮ್ಮದು. ದೇವೇಗೌಡರ ಮೇಲೆ ಲೋಕಾಯುಕ್ತ ತನಿಖೆ ನಡೆಯಿತು. ಸಿಒಡಿ ತನಿಖೆ ನಡೆಯಿತು. ಹೈಕೋರ್ಟ್‌ನಲ್ಲಿ, ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಹಾಕಿದ್ರು. ಇದು ನಮಗೆ ಹೊಸದೇನು ಅಲ್ಲ. ನಮ್ಮ ಕುಟುಂಬದ ಮೇಲೆ ಈ ಪಕ್ಷ ಮುಗಿಸಬೇಕು ಎಂದು ಪ್ರಯತ್ನ ನಡೆಯುತ್ತಲೆ ಇದೆ. ಕೆಲವು ವರ್ಗಗಳು ಈ ಪ್ರಯತ್ನ ಮಾಡುತ್ತಿವೆ. ಇದಕ್ಕೆಲ್ಲಾ ನಾವು ಹೆದರಿ ಓಡಿ ಹೋಗೋದಿಲ್ಲ.

ದೇವೇಗೌಡರು ಜಾತಿ ಕಡೆ ವಾಲಲ್ಲ ಎಂದುಕೊಂಡಿದ್ದೆ: ಶಾಸಕ ಶಿವಲಿಂಗೇಗೌಡ ಬೇಸರ

ಕಾನೂನಿಗೆ ತಲೆ ಬಾಗುತ್ತೇವೆ: ನಾವ್ಯಾವತ್ತು ಕಾನೂನಿಗೆ ತಲೆಬಾಗೊ ಕುಟುಂಬ ಮತ್ತು ಪಕ್ಷವಾಗಿದೆ. ನಮ್ಮ ಪಕ್ಷದ ಕಚೇರಿ 40 ವರ್ಷದಿಂದ ಇತ್ತು. ಅದನ್ನು ಕೂಡ ಕಿತ್ತುಕೊಂಡ್ರಪ್ಪ. ದೇವೇಗೌಡರು ರಾತ್ರಿ 9 ಗಂಟೇಲಿ ಕಣ್ಣೀರು ಹಾಕಿಕೊಂಡು ಬಂದ್ರು. ನಾವೇನು ಹೆದರಿದ್ವಾ, ದೇವೇಗೌಡರು ಕುಮಾರಸ್ವಾಮಿಗೆ ಇದನ್ನೆಲ್ಲಾ ಎದುರಿಸೊ ಶಕ್ತಿ ಇದೆ. ನಮ್ಮ ಆಸ್ತಿ ಇರಲಿ, ನನ್ನ ಪತ್ನಿ ಮಕ್ಕಳ ಆಸ್ತಿ ಇರಲಿ ನಾವು ಯಾವುದನ್ನು ಮುಚ್ಚಿಟ್ಟಿಲ್ಲ ಎಲ್ಲವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೀವಿ. ಆದಾಯ ತೆರಿಗೆ ಇಲಾಖೆಗೆ ಹತ್ತು ವರ್ಷದ ಹಿಂದೆಯೇ ಕೊಟ್ಟಿದ್ದೀವಿ. ನಮ್ಮ ಮೇಲೆ ಆದಾಯ ತೆರಿಗೆ ಇಲಾಖೆಗೂ ಬರೆದಿದಾರೆ. ಎಲ್ಲಾ ರೀತಿಯ ತನಿಖೆಗೆ ಬರೆದು ಏನೇನೊ ಮಾಡಬೇಕೊ ಮಾಡಿದ್ದಾರೆ ಎಂದು ಹೇಳಿದರು. ನ್ಯಾಯಾಲಯವು ತೀರ್ಪು ಕೊಟ್ಟಿರುವುದಕ್ಕೆ ನಾವು ತಲೆ ಬಾಗುತ್ತೇವೆ. ಇದೆ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios