ನಿದ್ದೆ ಮಾಡುವ ಆಸಾಮಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿದೆವು| ಚಿಕಿತ್ಸೆಗಾಗಿ ರಾಮಕೃಷ್ಣ ಹೆಗಡೆ ತೋಟ ಮಾರೋದು ತಪ್ಪಿಸಿದೆ!| ಕೆಂಗಲ್‌ ಹನುಮಂತಯ್ಯನವರ ಕೋಟು ಕೆಡಿಸಿದ ನಮ್ಮ ಸಂಬಂಧಿ| ಜನವರಿ 4ರಂದು ಬಿಡುಗಡೆಯಾಗಲಿರುವ ಎಸ್‌.ಎಂ. ಕೃಷ್ಣ ಅವರ ಆತ್ಮಕತೆ ‘ಸ್ಮೃತಿ ವಾಹಿನಿ’ ಕೃತಿಯ ಆಯ್ದ ಭಾಗ.

ನಾಟಕಕ್ಕೆ ಹಣ ಕೊಟ್ಟಿದ್ದಕ್ಕಾಗಿ ಅನರ್ಹ ಶಾಸಕನಾಗಿಬಿಟ್ಟಿದ್ದೆ!

1962ರಲ್ಲಿ ಮೊದಲ ಬಾರಿ ಪಿಎಸ್‌ಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಪ್ರಭಾವಿ ವ್ಯಕ್ತಿ ವೀರಣ್ಣ ಗೌಡರನ್ನು ಸೋಲಿಸಿದ್ದೆ. ಆದರೆ ನನ್ನ ಚುನಾವಣೆಗೆ ಸಂಬಂಧಿಸಿದಂತೆ ವೀರಣ್ಣಗೌಡರು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಹಾಕಿದ್ದರು. ಯಾವುದೋ ಹಳ್ಳಿಗೆ ನಾನು ಹೋಗಿದ್ದೆ. ಅಲ್ಲಿ ನಾಟಕ ನಡೆಯುತ್ತಿತ್ತು. ಅದಕ್ಕೆ ನಾನು ದುಡ್ಡು ಕೊಟ್ಟೆಎನ್ನುವ ವಿಚಾರವನ್ನು ಮುಂದಿಟ್ಟು ಶಾಸಕತ್ವ ರದ್ದುಪಡಿಸಬೇಕೆಂದು ಅಪೀಲು ಹಾಕಿದ್ದರು.

ನ್ಯಾಯಾಲಯ ಕೇಳಿದ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ, ‘ಮದ್ದೂರು ಚುನಾವಣೆ ಫಲಿತಾಂಶ ಅಸಿಂಧು ಹಾಗೂ ಕೃಷ್ಣ 6 ವರ್ಷ ಚುನಾವಣೆಗೆ ನಿಲ್ಲಬಾರದು’ ಎಂದು ಕೋರ್ಟು ತೀರ್ಪು ನೀಡಿತು. ಹೈಕೋರ್ಟಿಗೆ ಅಪೀಲು ಮಾಡಿದೆ. ಜಸ್ಟೀಸ್‌ ಹೊಂಬೇಗೌಡರ ಮುಂದೆ ನನ್ನ ಕೇಸ್‌ ಬರಬೇಕಾಯ್ತು. ಆದರೆ ಅವರು ಮರು ವಿಚಾರಣೆ ನಡೆಸಲು ಒಪ್ಪದೆ ಬೆಂಚ್‌ಗೆ ಹಾಕಿದರು. ವಾದ-ಪ್ರತಿವಾದದ ಬಳಿಕ ಹೈಕೋರ್ಟ್‌ನಲ್ಲಿ ನನ್ನ ಆಯ್ಕೆ ಸಿಂಧು ಎಂದಾಯಿತು.

'ಕೃಷ್ಣ ರೀತಿ ದೇವೇಗೌಡ ಪಕ್ಷಾಂತರ ಮಾಡಿಲ್ಲ'

ಸಂಜಯ್‌ ಗಾಂಧಿ ವ್ಯಾಸೆಕ್ಟಮಿ ಸ್ಕೀಮ್‌ನಲ್ಲಿ ನಾನೂ ಇಕ್ಕಟ್ಟಿಗೆ

ತರ್ತು ಪರಿಸ್ಥಿತಿ ವೇಳೆ ಸಂಜಯ್‌ ಗಾಂಧಿ ಕರ್ನಾಟಕಕ್ಕೆ ಬಂದಿದ್ದರು. ಅವರನ್ನು ಕರೆದುಕೊಂಡು ಬರಲು ಅರಸು ನನ್ನನ್ನು ಕಳುಹಿಸಿದ್ದರು. ಅವರನ್ನು ಮಂಡ್ಯಕ್ಕೆ ತೆರೆದ ವಾಹನದಲ್ಲಿ ಕರೆದುಕೊಂಡು ಹೋದೆ. ಹೆಚ್ಚು ಪ್ರಚಾರವಿಲ್ಲದೆಯೂ ಅಸಂಖ್ಯಾತ ಜನರು ಸ್ವಯಂಪ್ರೇರಿತರಾಗಿ ಸಂಜಯ್‌ ಗಾಂಧಿ ಅವರನ್ನು ನೋಡಲು ಬಂದಿದ್ದರು. ಆವತ್ತಿನ ಭಾಷಣದಲ್ಲಿ ಮೂರು ವಿಚಾರಗಳಿಗೆ ಅವರು ಪ್ರಾಮುಖ್ಯತೆ ಕೊಟ್ಟರು. ಮೊದಲನೆಯದು ಜನಸಂಖ್ಯಾ ನಿಯಂತ್ರಣ; ಎರಡನೆಯದು ದೇಶದ ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ; ಮೂರನೆಯದು ಪರಿಸರ ಸಂರಕ್ಷಣೆ.

ಆದರೆ ಅವರ ಜನಸಂಖ್ಯಾ ನಿಯಂತ್ರಣ ಆಶಯವನ್ನು ಅಧಿಕಾರಶಾಹಿ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡು ಇಡೀ ಕಾರ‍್ಯಕ್ರಮವನ್ನು ಗಬ್ಬೆಬ್ಬಿಸಿದರು. ಸಿಕ್ಕಸಿಕ್ಕ ಗಂಡಸರನ್ನೆಲ್ಲಾ ಕರೆದೊಯ್ದು ಸಂತಾನ ಹರಣ ಮಾಡಿದರು! ಅದೊಂದು ರಾತ್ರಿ ನಾಗಮಂಗಲದಿಂದ ವೃದ್ಧರೊಬ್ಬರು ತುರ್ತಾಗಿ ನನ್ನನ್ನು ಭೇಟಿಯಾಗಿ ‘ಏನಪ್ಪಾ ಮಾಡುವುದು, ಹಳ್ಳಿಹಳ್ಳಿಗೆ ಬಂದು ವ್ಯಾಸೆಕ್ಟಮಿ ಆಪರೇಷನ್‌ ಮಾಡಿಸಿಕೋ ಅಂತ ಹೇಳಿ ನಮ್ಮನ್ನೆಲ್ಲಾ ಎತ್ತಿಕೊಂಡು ಆಪರೇಷನ್‌ ಮಾಡಿಸುತ್ತಿದ್ದಾರಲ್ಲಪ್ಪಾ’ ಎಂದರು. ಒಂದು ಕ್ಷಣ ಇದೆಲ್ಲೋ ದಾರಿ ತಪ್ಪುತ್ತಿದೆ ಎನಿಸಿತು. ಮಂಡ್ಯ ಜಿಲ್ಲಾಧಿಕಾರಿ ಬಳಿ ಮಾತನಾಡಿದೆ. ಆದರೆ ಪ್ರಯೋಜನವಾಗಲಿಲ್ಲ.

ತಿಮ್ಮಪ್ಪನ ಹುಂಡಿಗೆ ವಾಚು, ಎಸ್‌ಎಂಕೆಗೆ ಮಂತ್ರಿ ಹುದ್ದೆ!

ನಿದ್ದೆ ಮಾಡುವ ಆಸಾಮಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿದೆವು

ತುರ್ತು ಪರಿಸ್ಥಿತಿ ಘೋಷಣೆಯ ನಂತರ ನಡೆದ ಚುನಾವಣೆಯಲ್ಲಿ ಮಂಡ್ಯದಿಂದ ಚಿಕ್ಕಲಿಂಗಯ್ಯ ಎಂಬುವರನ್ನು ಚುನಾವಣೆಗೆ ನಿಲ್ಲಿಸಿದ್ದೆವು. ಅವರು ನಮ್ಮ ತಂದೆಯ ಒಡನಾಡಿಯಾಗಿದ್ದರು. ತೆರೆದ ವಾಹನದಲ್ಲಿ ಅವರನ್ನು ನಿಲ್ಲಿಸಿ ಮೆರವಣಿಗೆ ಹೊರಟರೆ ತೂಕಡಿಸುತ್ತಿದ್ದರು. ಎಡಗಡೆ ನಾಗೇಗೌಡ, ಬಲಗಡೆ ನಾನು ಅವರನ್ನು ಹಿಡಿದು ಹಿಡಿದು ಸಾಕಾಗಿ ಹೋಯಿತು. ‘ಈ ಹಿರಿಯರನ್ನು ಎಲ್ಲಿಂದ ಕರೆದುಕೊಂಡು ಬಂದು ನಿಲ್ಲಿಸಿದರೋ’ ಅಂತ ಜನ ಕೇಳೋರೆ. ಇಷ್ಟಾದರೂ ಆತನ ಸ್ವಪ್ರತಿಷ್ಠೆಗೆ ಮಿತಿಯೇ ಇರಲಿಲ್ಲ. ಒಂದೂ ಚುನಾವಣೆಯನ್ನು ಸ್ಪರ್ಧಿಸಿ ಆತ ಗೆದ್ದಿರಲಿಲ್ಲ. ಹಿರಿಯರೆಂಬ ಕಾರಣಕ್ಕೆ ಆತನನ್ನು ನಿಲ್ಲಿಸಿದ್ದೆವು. ಜನರೇಷನ್‌ ಗ್ಯಾಪ್‌ನಿಂದ ಆತ ನಮ್ಮನ್ನು ಅರ್ಥಮಾಡಿಕೊಳ್ಳಲಿಕ್ಕೆ ಸಾಧ್ಯವೇ ಇರಲಿಲ್ಲ. ನಾವೇ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಹೇಗೋ ಬಹಳ ಪ್ರಯತ್ನ ಪಟ್ಟಕಾರಣಕ್ಕಾಗಿ ಅವರು 5000 ಮತಗಳ ಅಂತರದಿಂದ ಜಯಶೀಲರಾದರು.

ದೇವೇಗೌಡ ವಿರುದ್ಧದ ಸಿಬಿಐ ತನಿಖೆ ಕಡತ ವಾಪಸ್‌ ಕಳಿಸಿದ್ದೆ

1999ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಾರ್ವಜನಿಕ ಲೆಕ್ಕ ಪರಿಶೋಧನಾ ಸಮಿತಿಯ ಸರ್ವಾನುಮತದ ಶಿಫಾರಸಿನನ್ವಯ ಎಚ್‌ ಡಿ ದೇವೇಗೌಡ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೊಟ್ಟಕೃಷ್ಣಾ ಮೇಲ್ದಂಡೆ ತುಂಡು ಗುತ್ತಿಗೆ ಕಾಮಗಾರಿಯನ್ನು ಸಿಬಿಐ ತನಿಖೆಗೆ ವಹಿಸಬೇಕೆಂಬ ಕಡತ ನನ್ನ ಮುಂದೆ ಬಂದಿತು. ರಾತ್ರಿ ಮನೆಗೆ ಕಡತ ತೆಗೆದುಕೊಂಡು ಹೋಗಿ ಅಧ್ಯಯನ ಮಾಡಿ, ಮಾರನೇ ದಿನ ತನಿಖೆಯ ಅಗತ್ಯವಿಲ್ಲವೆಂದು ಬರೆದು ಕಳುಹಿಸಿದೆ. ವೈಯಕ್ತಿಕ ದ್ವೇಷವನ್ನು ಸಾಧಿಸುತ್ತಾ ಕುಳಿತರೆ ಸಾರ್ವಜನಿಕ ಜೀವನದಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ.

ಕಾಂಗ್ರೆಸ್‌ ಸೇರಲು ಮುಂದಾಗಿದ್ದ ದೇವೇಗೌಡ!

ಚಿಕಿತ್ಸೆಗಾಗಿ ರಾಮಕೃಷ್ಣ ಹೆಗಡೆ ತೋಟ ಮಾರೋದು ತಪ್ಪಿಸಿದೆ!

ರಾಷ್ಟ್ರಮಟ್ಟದಲ್ಲಿ ಜನತಾದಳ ರೂಪುಗೊಳ್ಳಲು ರಾಮಕೃಷ್ಣ ಹೆಗಡೆ ಅವರ ಕೊಡುಗೆ ಇದೆ. 1999ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಹೆಗಡೆಯವರು ಅನಾರೋಗ್ಯದಿಂದ ಮಣಿಪಾಲ್‌ ಆಸ್ಪತ್ರೆಗೆ ಸೇರ್ಪಡೆಯಾಗಿದ್ದರು. ಭೇಟಿಗಾಗಿ ಅಲ್ಲಿಗೆ ಹೋಗಿದ್ದೆ. ಅಲ್ಲಿ ಶಕುಂತಳಾ ಹೆಗಡೆ ಇದ್ದರು. ಲಂಡನ್‌ನಲ್ಲಿ ಆಪರೇಷನ್‌ ಮಾಡಿಸಬೇಕು ಅಂತ ಡಾಕ್ಟರ್‌ ಹೇಳಿದ್ದಾರೆ, ತುಂಬಾ ಕಷ್ಟಅಂತ ಹೇಳಿದರು. ಮೂವತ್ತೈದರಿಂದ ನಲವತ್ತು ಲಕ್ಷ ವೆಚ್ಚವಾಗಬಹುದು ಎಂದರು. ನಾನು ಆಸಕ್ತಿ ವಹಿಸಿ ಹೆಗಡೆಯವರ ತುರ್ತು ವೈದ್ಯಕೀಯ ವೆಚ್ಚಕ್ಕೆ ಹಣ ಮಂಜೂರು ಮಾಡಿ ಲಂಡನ್‌ನಲ್ಲಿ ತುರ್ತು ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟೆ. ಲಂಡನ್‌ನಿಂದ ಬಂದ ಮೇಲೆ ಅವರನ್ನು ನೋಡಲು ಹೋಗಿದ್ದೆ. ಅವರು ನನ್ನ ಕೈ ಹಿಡಿದುಕೊಂಡು, ‘ನೀವು ನನ್ನ ಸಹಾಯಕ್ಕೆ ಬರದೇ ಹೋಗಿದ್ದರೆ ನನ್ನ ಪೂರ್ವಿಕರ ತೋಟ ಮಾರಬೇಕಿತ್ತು’ ಎಂದರು.

ದೇವೇಗೌಡರ ಜೊತೆ ಏಕೆ ಬಾಂಧವ್ಯ ಬೆಳೆಯಲಿಲ್ಲ?

1999ರಲ್ಲಿ ನಾನು ಮುಖ್ಯಮಂತ್ರಿಯಾದ ಮೇಲೆ ಅನೇಕ ಸಾರಿ ದೇವೇಗೌಡರು ವರ್ಗಾವಣೆ ಅಥವಾ ಇತರ ವಿಚಾರಗಳಿಗೆ ಫೋನ್‌ ಮಾಡುತ್ತಿದ್ದರು. ಆಗೆಲ್ಲಾ ನನ್ನ ಕಾರ‍್ಯದರ್ಶಿ ಎಂ.ಕೆ. ಶಂಕರೇಗೌಡರಿಗೆ ದೇವೇಗೌಡರು ಹೇಳಿದ ಎಲ್ಲಾ ಕೆಲಸಗಳನ್ನು ನೀವು ಮಾಡಬಹುದು ಎಂಬ ಸ್ಟಾಂಡಿಂಗ್‌ ಇನ್‌ಸ್ಟ್ರಕ್ಷನ್‌ ಕೊಟ್ಟಿದ್ದೆ. ಇಷ್ಟಾದರೂ ನನ್ನ ಹಾಗೂ ದೇವೇಗೌಡರ ಬಾಂಧವ್ಯ ಬೆಳೆಯಲೇ ಇಲ್ಲ. ಇದರಲ್ಲಿ ನನ್ನದೂ ತಪ್ಪಿರಬಹುದೇನೋ. ಅವರ ಜೊತೆ ಮಾತನಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ನಾನು ಅಂತಹ ಅವಕಾಶವನ್ನು ಸೃಷ್ಟಿಮಾಡಿಕೊಳ್ಳಲಿಲ್ಲ. ಹಾಗೆಯೇ ನಾನು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ಎಂದೂ ನನ್ನನ್ನು ಸಹಾನುಭೂತಿಯಿಂದ ಕಂಡ ನೆನಪಿಲ್ಲ.

17 ಶಾಸಕರ ರಾಜೀನಾಮೆ ಹಿಂದೆ ನನ್ನ ಪಾತ್ರವೂ ಇದೆ: ಎಸ್‌. ಎಂ. ಕೃಷ್ಣ

ನನಗಾಗಿ ಇರಿಸಿದ್ದ ಸಿಎಂ ಕುರ್ಚಿಯಲ್ಲಿ ಅಟಲ್‌ ಅಳಿಯ ಕೂತಿದ್ದರು

ಪ್ರಧಾನಿಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಇತ್ತು. ನಾನು ಆ ಸಮಾರಂಭಕ್ಕೆ ಹೋಗುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಎಂದು ನಿಗದಿ ಮಾಡಿದ್ದ ಕುರ್ಚಿಯಲ್ಲಿ ಯಾರೋ ಬಂದು ಕೂತುಬಿಟ್ಟಿದ್ದರು. ತಕ್ಷಣ ಒಬ್ಬರು ಬಂದು ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಬಂಧುಗಳ ಜೊತೆಗೆ ಕೂರಿಸಿಕೊಂಡರು. ಆಮೇಲೆ ಗೊತ್ತಾಯಿತು, ಕುರ್ಚಿಯಲ್ಲಿ ಕೂತಿದ್ದು ವಾಜಪೇಯಿ ಅವರ ಸಾಕು ಮಗಳ ಗಂಡ. ಅಂದರೆ ವಾಜಪೇಯಿ ಅವರ ಅಳಿಯ ಎಂದು. ಮಾರನೇ ದಿನ ಪ್ರಧಾನಮಂತ್ರಿಯವರನ್ನು ಔಪಚಾರಿಕವಾಗಿ ನೋಡಿ ಅಭಿನಂದಿಸಿ, ಕರ್ನಾಟಕದ ಬೆಳವಣಿಗೆಗೆ ಸಹಕಾರ ಕೋರಿದೆ. ಆಗ ಅವರು ತಮಾಷೆಗೆ, ‘ನಿನ್ನೆ ನೀವು ನಮ್ಮ ಕುಟುಂಬದ ಜೊತೆಗೆ ಕುಳಿತು ಪ್ರಮಾಣವಚನ ನೋಡಿದ್ದೀರಿ. ಒಂದರ್ಥದಲ್ಲಿ ನೀವು ನಮ್ಮ ಕುಟುಂಬದವರೇ ಆಗಿದ್ದೀರ’ ಎಂದರು. ‘ಹೌದು, ಕರ್ನಾಟಕವನ್ನು ಕಟ್ಟಲು ನಿಮ್ಮ ಸಹಕಾರ ಬೇಕು, ರಾಜಕೀಯ ಭೇದ ಏನಿದ್ದರೂ ನಿಮ್ಮ ಪ್ರೋತ್ಸಾಹ ಮತ್ತು ನೆರವಿನಿಂದ ಕರ್ನಾಟಕಕ್ಕೆ ಹೊಸ ರೂಪ ಕೊಡಲು ಪ್ರಾರಂಭಿಸುತ್ತೇನೆ’ ಎಂದೆ. ಅವರೂ ‘ಖಂಡಿತ ಕೊಡೋಣ’ ಎಂದಿದ್ದರು.

ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದ್ದು ಹೇಗೆ?

ಉತ್ತರ ಕರ್ನಾಟಕ್ಕೆ ಪ್ರವಾಸ ಹೋಗಿದ್ದೆ. ನನ್ನ ಜೊತೆಗೆ ಒಂದಿಬ್ಬರು ಮಿತ್ರರು ಇದ್ದರು. ಸಂಜೆ ಇಳಿಹೊತ್ತು ಶಾಲೆಯಿಂದ ಹೆಣ್ಣುಮಕ್ಕಳು ನಡೆದುಕೊಂಡು ಬರುತ್ತಿದ್ದರು. ಅವರನ್ನು ನಿಲ್ಲಿಸಿ ಅವರು ಮನೆಬಿಟ್ಟಸಮಯ ಹಾಗೂ ಶಾಲೆಯಲ್ಲಿ ಏನಾದರೂ ತಿನ್ನಲಿಕ್ಕೆ ಕೊಟ್ಟರಾ, ನೀವು ಎಷ್ಟೊತ್ತಿಗೆ ಮನೆಗೆ ಹೋಗುತ್ತೀರಾ ಮುಂತಾದ ವಿಷಯಗಳನ್ನು ವಿಚಾರಿಸಿಕೊಂಡೆ. ಬೆಳಿಗ್ಗೆ ಒಂದಿಷ್ಟುಊಟ ಮಾಡಿದ ಮಕ್ಕಳು ಸಂಜೆ 6 ಗಂಟೆಯ ತನಕ ಹಸಿದಿರಬೇಕಾಗುತ್ತದೆ. ಹಸಿದ ಮಕ್ಕಳಿಗೆ ವಿದ್ಯೆಯ ಜೊತೆಗೆ ಹೊಟ್ಟೆಗೂ ಸಮಜಾಯಿಶಿ ಹೇಳಬೇಕೆಂಬುದು ನನ್ನ ಕನಸಾಗಿತ್ತು. ಈ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರ ಕೊಡಬೇಕು ಎಂದುಕೊಂಡೆ. ಹಿಂದೆ ಅಂಥ ಪ್ರಯತ್ನಗಳು ನಡೆದು ವಿಫಲವಾಗಿದ್ದವು. ಅಕ್ಷರ ದಾಸೋಹ ಕಾರ‍್ಯಕ್ರಮದ ಹೊರೆ ಹೊರಲು ಕಷ್ಟಎಂದು ಆರ್ಥಿಕ ಇಲಾಖೆ ಹೇಳಿತು. ಕೊನೆಗೆ ಶಿಕ್ಷಣ ಇಲಾಖೆಗೆ ಸಾಕಷ್ಟುಸಂಪನ್ಮೂಲ ಒದಗಿಸಿ ಅಕ್ಷರ ದಾಸೋಹ ಕಾರ‍್ಯಕ್ರಮ ಆರಂಭಿಸಿದೆ.

ಜಯಲಲಿತಾ ಸಮಕ್ಕೆ ನಾವೂ ಕುಳಿತುಕೊಳ್ಳುವಂತಿರಲಿಲ್ಲ

ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾಗ ಚೆನ್ನೈನಲ್ಲಿ ನಡೆದ ಅನೇಕ ಸಭೆಗಳಿಗೆ ಹೋಗಿದ್ದೇನೆ. ಯಾವ ವ್ಯಕ್ತಿಯೂ ಅವರ ಸರಿಸಮನಾಗಿ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳುವಂತಿರಲಿಲ್ಲ. ದೊಡ್ಡ ಕಂದಕ ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಇರಬೇಕು. ಏನಾದರೂ ಹೇಳಬೇಕಾದರೆ ಎದ್ದು ಹೋಗಿ ಬಗ್ಗಿ, ಕಿವಿಯಲ್ಲಿ ಅವರಿಗೆ ಹೇಳಿ ಬಂದು ತನ್ನ ಸ್ಥಾನದಲ್ಲಿ ಕುಳಿತುಕೊಳ್ಳಬೇಕಿತ್ತು!

ಡಿ.ಕೆ.ಶಿವಕುಮಾರ್ ಮನೆಗೆ ಎಸ್.ಎಂ.ಕೃಷ್ಣ ಭೇಟಿ

ನಾನೂ ಸರ್‌ಎಂವಿ ರೀತಿ ಸದಾ ರಾಜೀನಾಮೆಗೆ ಸಿದ್ಧವಾಗಿರುತ್ತಿದ್ದೆ

ದೇವೇಗೌಡರು ರೈತರು, ಕೃಷಿ ಎಂದರೆ ತಾವು ಮಾಹಿತಿ ತಂತ್ರಜ್ಞಾನ, ವಸತಿ ಅಂತೀರ. ಆದರೆ ನೀವು ಗ್ರಾಮೀಣ ಪ್ರದೇಶದ ಜನರಿಗೆ 9 ಲಕ್ಷ ಮನೆಗÜಳನ್ನು ಕಟ್ಟಿಸಿಕೊಟ್ಟಿದ್ದೀರಿ. ಇದನ್ನು ಯಾರೂ ಗುರುತಿಸಲೇ ಇಲ್ಲವಲ್ಲ ಎಂದು ನಮ್ಮ ಮಿತ್ರರೊಬ್ಬರು ಹೇಳುತ್ತಿದ್ದರು. ಆಗ ನನಗೆ ಚಿಂತೆ ಇಲ್ಲ. ಕೆಲಸ ಮಾಡುವುದಷ್ಟೇ ಗಮನದಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದೆ. ನನ್ನ ಕಣ್ಣೆದುರಿಗೆ ಯಾವಾಗಲೂ ವಿಶ್ವೇಶ್ವರಯ್ಯ ನಿಲ್ಲುತ್ತಿದ್ದರು. ಸರ್‌.ಎಂ.ವಿ. ದಿವಾನರಾಗಿದ್ದಾಗ ಅನೇಕ ಸಾರಿ ವೈಯಕ್ತಿಕ ನೆಲೆಯಲ್ಲೂ ಅವರನ್ನು ಟೀಕಿಸಲಾಗುತ್ತಿತ್ತು. ಇನ್ನು ಕನ್ನಂಬಾಡಿ ಕಟ್ಟಬೇಕೆಂದಾಗಲೂ ಇದೇ ತರಹ ನೋವು ಉಂಡಿದ್ದಾರೆ. ಆದರೆ ಅವರು ಎಂದೂ ಟೀಕೆಗೆ ಹೆದರಿದವರಲ್ಲ. ತಮ್ಮ ಉದ್ದೇಶ ಈಡೇರದಿದ್ದರೆ ರಾಜೀನಾಮೆ ಕೊಡಲಿಕ್ಕೆ ಸದಾ ತಯಾರಾಗಿರುತ್ತಿದ್ದರು. ಅವರ ಜೇಬಲ್ಲಿ ರಾಜೀನಾಮೆ ಪತ್ರ ಸಿದ್ಧವಾಗಿರುತ್ತಿತ್ತು. ನಾನೂ ಹೀಗೆ ಯೋಚಿಸಿದ್ದೆ. ಪ್ರಮಾಣವಚನ ಸ್ವೀಕಾರ ಮಾಡಿದ ದಿನವೇ ಅದನ್ನು ನಿರ್ಧಾರ ಮಾಡಿದ್ದೆ. ನನ್ನ ಮನಸ್ಸಿನಲ್ಲಿ ಇರುವ ಕಾರ‍್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗದೇ ಹೋದರೆ ಒಂದು ಕ್ಷಣವೂ ಈ ಸ್ಥಾನದಲ್ಲಿ ಕುಳಿತುಕೊಳ್ಳಬಾರದು ಎಂಬ ವಿರಕ್ತ ಭಾವ ಇಟ್ಟುಕೊಂಡು ಕೆಲಸ ಮಾಡಿದೆ. ಸುದೈವದಿಂದ ಅಂತಹ ಪರಿಸ್ಥಿತಿ ಎಂದೂ ಬರಲಿಲ್ಲ.

ಕೆಂಗಲ್‌ ಹನುಮಂತಯ್ಯನವರ ಕೋಟು ಕೆಡಿಸಿದ ನಮ್ಮ ಸಂಬಂಧಿ

ಕೆಂಗಲ್‌ ಹನುಮಂತಯ್ಯನವರಿಗೆ ವಸ್ತ್ರವಿನ್ಯಾಸದ ಬಗ್ಗೆ ತುಂಬಾ ಪ್ರೀತಿ ಇತ್ತು. ನಮ್ಮ ದೊಡ್ಡ ಭಾವ, ಮೊದಲ ಅಕ್ಕನ ಗಂಡ ಅವರ ಸಹಪಾಠಿಗಳಾಗಿದ್ದರು. ನಮ್ಮ ಭಾವ ಒಂದು ಸಾರಿ ಮದ್ದೂರಿನಿಂದ ಬೆಂಗಳೂರಿಗೆ ಮತ್ತೊಬ್ಬ ಅಕ್ಕನ ಮನೆಗೆ ಬಂದಿದ್ದರು. ನಾವು ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರನ್ನು ನೋಡಲು ಕುಮಾರಕೃಪಾಕ್ಕೆ ಹೋದೆವು. ಯಾವುದೋ ಸಮಾರಂಭಕ್ಕೆ ಹೋಗಲು ಶುಭ್ರವಾದ ಸಿಲ್‌್ಕ ಸೂಟು ಹಾಕಿಕೊಂಡು, ಪೇಟಾ ಕಟ್ಟಿಕೊಂಡು ಹನುಮಂತಯ್ಯ ಸಿದ್ಧರಾಗಿ ಮಹಡಿಯಿಂದ ಕೆಳಗೆ ಬಂದರು. ನಮ್ಮ ಸೋದರ ಮಾವ ನೀರು ತೊಟ್ಟಿಕ್ಕುತ್ತಿದ್ದ ಹಾರವನ್ನು ಹಿಡಿದು ಹೋದರು. ಹನುಮಂತಯ್ಯನವರು ‘ಕೆಂಪಣ್ಣ ಗೌಡರೇ, ಕೆಂಪಣ್ಣ ಗೌಡರೇ’ ಅಂತ ಹೇಳುತ್ತಿದ್ದರೂ ಕೇಳಿಸಿಕೊಳ್ಳದೆ ಅವರಿಗೆ ಹಾರ ಹಾಕಿಯೇ ಬಿಟ್ಟರು. ಅವರು ಸೂಟು ಎಲ್ಲಾ ಕಲೆಯಾಗಿ ಹೋಯಿತು! ತಕ್ಷಣ ಮೇಲೆ ಹೋಗಿ ಸೂಟು ಬದಲಾಯಿಸಿಕೊಂಡು ಸಮಾರಂಭಕ್ಕೆ ಹೋದರು.

ದೇಶಕ್ಕೆ ಬೇಕು ವಿಶ್ವ ದರ್ಜೆಯ ‘ಜ್ಞಾನನಗರಿ’; ಮೋದಿ ಮನಸ್ಸು ಮಾಡಿದರೆ ಸಾಧ್ಯ!