ನನ್ನ ಸ್ಪರ್ಧೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ: ಬಿಎಸ್‌ವೈ
ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಕುರಿತ ಹೇಳಿಕೆ ಆಡಳಿತಾರೂಢ ಬಿಜೆಪಿಯಲ್ಲಿ ಅಚ್ಚರಿ, ಗೊಂದಲವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಕಾರ್ಯಕರ್ತರು ಒತ್ತಾಯ ಮಾಡಿದ್ದಕ್ಕೆ ಹೇಳಿದ್ದೇನೆ.
ಬೆಂಗಳೂರು (ಜು.24): ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಕುರಿತ ಹೇಳಿಕೆ ಆಡಳಿತಾರೂಢ ಬಿಜೆಪಿಯಲ್ಲಿ ಅಚ್ಚರಿ, ಗೊಂದಲವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಕಾರ್ಯಕರ್ತರು ಒತ್ತಾಯ ಮಾಡಿದ್ದಕ್ಕೆ ಹೇಳಿದ್ದೇನೆ. ಆದರೆ, ಅಂತಿಮ ತೀರ್ಮಾನವನ್ನು ಕೇಂದ್ರದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ತನ್ಮೂಲಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಹೇಳಿಕೆಯಿಂದ ಉಂಟಾದ ಅಚ್ಚರಿ, ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶುಕ್ರವಾರ ಶಿಕಾರಿಪುರದಲ್ಲಿ ನೀಡಿದ ಹೇಳಿಕೆ ಬಗ್ಗೆ ಸಾಕಷ್ಟುಗೊಂದಲ ಮೂಡಿದೆ. ಶಿಕಾರಿಪುರದ ಜನ ಒತ್ತಾಯ ಮಾಡಿರುವುದಕ್ಕೆ ಆ ರೀತಿ ಹೇಳಿದ್ದೇನೆ. ಆದರೆ ಅಂತಿಮ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೈಗೊಳ್ಳಲಿದ್ದಾರೆ. ನಾನು ಯಾವುದೇ ಬೇಡಿಕೆ ಇಡಲು ಸಾಧ್ಯವಿಲ್ಲ. ಕೇವಲ ನನ್ನ ಸಲಹೆ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ವಿಜಯೇಂದ್ರ ಸ್ಪರ್ಧೆ ಬಗ್ಗೆ ಮತ್ತೊಂದು ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯದಲ್ಲಿ ಎಲ್ಲಿ ಹೇಳಿದರೂ ಸ್ಪರ್ಧಿಸಲು ಸಿದ್ಧರಿದ್ದಾರೆ. ಅವರಿಗೆ ಆ ಶಕ್ತಿ ಇದ್ದು, ಅಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ. ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು. ಅವರಿಗೆ ಮುಜುಗರವನ್ನುಂಟು ಮಾಡಲು ಇಷ್ಟವಿಲ್ಲದೆ, ನಾನು ಸ್ಪರ್ಧಿಸುವುದಿಲ್ಲ, ವಿಜಯೇಂದ್ರನನ್ನು ನಿಲ್ಲಿಸೋಣ ಎಂದು ಹೇಳಿದೆ. ಅದು ಅನಿರೀಕ್ಷಿತವೇ ಹೊರತು ಬೇರೆ ಯಾವುದೇ ಕಾರಣ ಇಲ್ಲ. ಪಕ್ಷದ ವರಿಷ್ಠರು ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ. ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರ ಸೂಚನೆಯನ್ನು ಪಾಲಿಸುತ್ತೇವೆ ಎಂದರು.
ರಾಜ್ಯ ಪ್ರವಾಸ ಮಾಡುವ ಉದ್ದೇಶವನ್ನು ಹೊಂದಿದ್ದೇನೆ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸಲಾಗುವುದು. ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ಬಲವರ್ಧನೆ ಮಾಡುವ ಕಾರ್ಯದಲ್ಲಿ ತೊಡಗುತ್ತೇನೆ. ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸುವ ಮಾತಿಲ್ಲ. ನನಗೆ ಪಕ್ಷವು ಎಲ್ಲವನ್ನೂ ಕೊಟ್ಟಿದೆ. ಪುರಸಭೆ ಸದಸ್ಯನಾಗಿದ್ದವನನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಎಲ್ಲ ರೀತಿಯ ಸೌಲಭ್ಯ, ಸವಲತ್ತು ಮತ್ತು ಜವಾಬ್ದಾರಿ ನೀಡಿದೆ ಎಂದು ತಿಳಿಸಿದರು.
ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಇಬ್ಬರು ಮುಖಂಡರು ಈಗಾಗಲೇ ಮುಖ್ಯಮಂತ್ರಿ ಹುದ್ದೆಗೆ ಕಚ್ಚಾಡುತ್ತಿದ್ದಾರೆ. ಅವರು ಕಚ್ಚಾಡುವುದರಲ್ಲಿಯೇ ಇರಲಿದ್ದಾರೆ. ಆದರೆ, ನಮ್ಮಲ್ಲಿ ಅಂತಹ ಯಾವುದೇ ಕಚ್ಚಾಟ ಇಲ್ಲ. ಅಲ್ಲಿ ಇರುವಂತೆ ನಮ್ಮಲ್ಲಿ ಯಾವುದೇ ರೀತಿಯ ಪೈಪೋಟಿ ಇಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಲಿದ್ದು, ಸರ್ಕಾರವನ್ನು ರಚನೆ ಮಾಡುತ್ತೇವೆ. ಬಿಜೆಪಿ ಪಕ್ಷವೇ ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎಂದು ನುಡಿದರು.
ಇದೇ ವೇಳೆ ಪಿಎಸ್‌ಐ ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರದ್ದು ಮೂರ್ಖತನದ ಪರಮಾವಧಿ ಹೇಳಿಕೆ. ಅವರು ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯಬೇಕು. ತಾನು ಕಳ್ಳ, ಪರರು ಕಳ್ಳರು ಎಂಬುದಾಗಿ ಭಾವಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಪರ ವಿರೋಧದ ಚರ್ಚೆಗೆ ಗ್ರಾಸವಾದ ಸಕ್ರಿಯ ರಾಜಕಾರಣದಿಂದ ದೂರಾಗುವ ಯಡಿಯೂರಪ್ಪ ಹೇಳಿಕೆ
ಯಡಿಯೂರಪ್ಪ ಅವರು ತಮ್ಮ ಮಕ್ಕಳೂ ಸೇರಿದಂತೆ ಯಾರೇ ಆಗಲಿ ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕು ಎಂಬ ಅಪೇಕ್ಷೆ ಹೊಂದಿದ್ದಾರೆ. ಹೀಗಾಗಿ ಶಿಕಾರಿಪುರಲ್ಲಿ ನನ್ನ ಸ್ಪರ್ಧೆ ಕುರಿತು ಘೋಷಣೆ ಮಾಡಿದ್ದಾರೆ. ಪಕ್ಷಕ್ಕೂ ವಿಜಯೇಂದ್ರಗೆ ಶಕ್ತಿ ಹಾಗೂ ತಾಕತ್ತು ಇದೆ ಎನ್ನಿಸಿದರೆ ಜವಾಬ್ದಾರಿ ನೀಡುತ್ತದೆ.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ