ಪರ ವಿರೋಧದ ಚರ್ಚೆಗೆ ಗ್ರಾಸವಾದ ಸಕ್ರಿಯ ರಾಜಕಾರಣದಿಂದ ದೂರಾಗುವ ಯಡಿಯೂರಪ್ಪ ಹೇಳಿಕೆ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರವನ್ನು ಮಗ ವಿಜಯೇಂದ್ರನಿಗೆ ಬಿಟ್ಟು ಕೊಡುವುದಾಗಿ ಬಹಿರಂಗ ಹೇಳಿಕೆ ಕೊಟ್ಟ ಬೆನ್ನಲ್ಲೇ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತಂದೆ ಮಾರ್ಗದರ್ಶನ ಮತ್ತು ಪಕ್ಷದ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ ಎಂದಿದ್ದಾರೆ. ಯಡಿಯೂರಪ್ಪ ಅವರು ವಿಪಕ್ಷಗಳಿಗೆ ಹಾಕಿದ ಸವಾಲಿನಂತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು: ಶಿಕಾರಿಪುರ ಕ್ಷೇತ್ರ ಬಿಎಸ್ ಯಡಿಯೂರಪ್ಪ ಬಿಟ್ಟು ಕೊಟ್ಟ ವಿಚಾರಕ್ಕೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ತಂದೆಯವರ ಮಾರ್ಗದರ್ಶನ, ಪಕ್ಷ ತೆಗೆದುಕೊಳ್ಳುವ ನಿರ್ಧಾರದಂತೆ ನಡೆದು ಕೊಳ್ಳುತ್ತೇನೆ ಎಂದಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ನಾಗಿ ಪಕ್ಷದ ಸಂಘಟನೆ ಮಾಡಿದ್ದೇನೆ. ಒಂದು ತಿಂಗಳ ಹಿಂದೆ ಶಿಕಾರಿಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಮುಖಂಡರು ನನ್ನ ಸ್ಪರ್ಧೆ ಬಗ್ಗೆ ಬೆಂಗಳೂರಿನಲ್ಲಿ ಬಿಎಸ್ ವೈ ಗೆ ಒತ್ತಡ ಹಾಕಿದ್ದರು. ಅದರಂತೆ ತಂದೆ ಯಡಿಯೂರಪ್ಪ ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ. ತಂದೆಯವರ ತೀರ್ಮಾನದ ಬಗ್ಗೆ ಪಕ್ಕದ ತೆಗೆದುಕೊಳ್ಳುವ ನಿರ್ಧಾರದ ನಂತರ ನನ್ನ ನಿಲುವು ತಿಳಿಸುತ್ತೇನೆ. ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಎಂದು ಬಯಸುವ ಪ್ರಶ್ನೆ ಉದ್ಭವಿಸೊಲ್ಲ. ತಂದೆಯವರ ಮಾರ್ಗದರ್ಶನದಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವತ್ತೂ ಬದ್ದ. ಯಡಿಯೂರಪ್ಪನವರ ರಾಜಕೀಯಕ್ಕೂ ನಿವೃತ್ತಿಗೂ ಸಂಬಂದವೇ ಇಲ್ಲ. ಸಿಎಂ ಸ್ಥಾನ ಬಿಟ್ಟುಕೊಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ತರುವುದಾಗಿ ವಿಪಕ್ಷ ಗಳಿಗೆ ಸವಾಲ್ ಹಾಕಿದಂತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ಪರ ವಿರೋಧದ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.
ಜಮೀರ್ ಟೀಕೆ:
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮಾತನಾಡಿ, ಕ್ಷೇತ್ರದಲ್ಲಿ ಯಾರೂ ಕಾರ್ಯಕರ್ತರೇ ಇಲ್ಲವಾ? ಕಾರ್ಯಕರ್ತರಿಗೆ ಕ್ಷೇತ್ರ ಬಿಟ್ಟುಕೊಡದೆ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಕಾರ್ಯಕರ್ತರಿಗೆ ಕ್ಷೇತ್ರ ಬಿಟ್ಟುಕೊಡಬೇಕು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದವರು ಕಾರ್ಯಕರ್ತರು ಎಂದು ಜಮೀರ್ ಯಡಿಯೂರಪ್ಪ ಅವರ ನಡೆಯನ್ನು ಟೀಕಿಸಿದ್ದಾರೆ.
ಭೇಟಿಯಾಗಿ ಮಾತನಾಡುತ್ತೇನೆ: ಜ್ಞಾನೇಂದ್ರ:
ವಿಕಾಸಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಬಗ್ಗೆ ಬಿಎಸ್ ವೈ ಘೋಷಣೆ ವಿಚಾರ ಮಾಧ್ಯಮಗಳಲ್ಲಷ್ಟೇ ಗಮನಿಸಿದ್ದೇನೆ. ಇವತ್ತು ಅಥವಾ ನಾಳೆ ಭೇಟಿ ಮಾಡುತ್ತೇನೆ. ವಯಸ್ಸಿನ ಕಾರಣ ಅಥವಾ ಬೇರೆ ಕಾರಣಕ್ಕಾಗಿ ಹೇಳಿರಬಹುದು. ಸಂಘಟನೆಯವರು ಅವರ ಜತೆ ಮಾತನಾಡುತ್ತಾರೆ. ಚುನಾವಣಾ ರಂಗದಿಂದ ಹಿಂದೆ ಸರಿದಿದ್ದಾರೆ ಎಂದ ಕೂಡಲೇ ರಾಜಕೀಯ ರಂಗದಿಂದ ಹಿಂದೆ ಸರಿದಿದ್ದಾರಂತಲ್ಲ. ಈ ನಿರ್ಧಾರದಿಂದ ರಾಜ್ಯ ಸುತ್ತಲು ಹೆಚ್ಚು ಸಮಯ ಅವರಿಗೆ ಸಿಗುತ್ತದೆ. ಯಡಿಯೂರಪ್ಪ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. 150 ಪ್ಲಸ್ ಸ್ಥಾನ ಬರಲು ಸ್ಟ್ರಾಟಜಿ ಚರ್ಚೆಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಲ್ಲ ಅಂದರೆ ರಾಜಕೀಯ ರಂಗದಿಂದ ಹಿಂದೆ ಸರಿದಿದ್ದಾರೆ ಎಂದಲ್ಲ. ಬಿಎಸ್ ವೈ ಯನ್ನು ಪಕ್ಷದಲ್ಲಿ ಸೈಡ್ ಲೈನ್ ಮಾಡಲಾಗಿದೆ ಎಂಬ ಆರೋಪ ವಿಚಾರಕ್ಕೆ ಉತ್ತರಿಸಿದ ಜ್ಞಾನೇಂದ್ರ, ಪಕ್ಷದಲ್ಲಿ ಅವರನ್ನು ಸೈಡ್ ಲೈನ್ ಮಾಡಿಲ್ಲ. ಎಲ್ಲವೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಯಡಿಯೂರಪ್ಪರನ್ನು ಯಾರು ಸೈಡ್ ಲೈನ್ ಮಾಡ್ತಾರೆ. ನಮ್ಮ ಸಂಘಟನೆಯಲ್ಲಿ ಆ ರೀತಿ ಆಗಲ್ಲ. ವಿಜಯೇಂದ್ರಗೆ ಸೂಕ್ತ ಸ್ಥಾನ ಮಾನ ನೀಡಲು ಸೂಕ್ತ ಕಾಲವೇ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಗೊತ್ತಿಲ್ಲ, ಸಂಘಟನೆ ತೀರ್ಮಾನ ಮಾಡುತ್ತೆ ಎಂದರು.
ಕುಟುಂಬ ರಾಜಕಾರಣ ಬೇಡ: ವಿಶ್ವನಾಥ್:
ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಚುನಾವಣೆ ರಾಜಕೀಯಕ್ಕೆ ಯಡಿಯೂರಪ್ಪ ನಿವೃತ್ತಿ ಘೋಸಿಸಿದ್ದಾರೆ. ಆದ್ರೆ ಅನುಭವ ರಾಜ್ಯಕ್ಕೆ ಅವಶ್ಯಕತೆ ಇದೆ. ಮೋದಿ ಒಂದು ಮಾತು ಹೇಳಿದ್ರು, ವಂಶಪಾರಂಪರ್ಯ ರಾಜಕೀಯ ಸಲ್ಲ ಅಂತ. ಮೋದಿ ಮಾತು ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮೋದಿ ಸಂದೇಶ ವಂಶಪಾರಂಪರ್ಯ ಆಡಳಿತ ಬೇಡ. ಜನತಂತ್ರ ಆಡಳಿತಕ್ಕೆ ಮಾರಕ ಅಂತ ಮೋದಿ ಹೇಳಿದ್ದಾರೆ. ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತೆ ಅಂದಿದ್ದಾರೆ. ಬಿ ವೈ ರಾಘವೇಂದ್ರ ಈಗಾಗಲೇ ಇದ್ದಾರೆ. ಶಿಕಾರಿಪುರಕ್ಕೆ ಬೇರೆಯವರಿಗೆ ಅವಕಾಶ ಕೊಡಲಿ. ಸಾಮಾನ್ಯ ಕಾರ್ಯಕರ್ತರಿಗೆ ಕ್ಷೇತ್ರ ಬಿಟ್ಟುಕೊಡುವುದು ಒಳ್ಳೆಯದು. ಯಡಿಯೂರಪ್ಪ ಬಹಳ ಹಿರಿಯರು. ನನಗೂ ಆತ್ಮೀಯರಾಗಿದ್ದಾರೆ. ನಿಮಗೋಸ್ಕರ ದುಡಿದ ಕಾರ್ಯಕರ್ತರು ಇದ್ದಾರೆ. ಅವರಿಗೆ ಅವಕಾಶ ಮಾಡಿಕೊಡಿ ಎಂದು ಯಡಿಯೂರಪ್ಪರಿಗೆ ವಿಶ್ವನಾಥ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಸಕ್ರಿಯ ರಾಜಕಾರಣಕ್ಕೆ ಪರೋಕ್ಷ ನಿವೃತ್ತಿ ಘೋಷಿಸಿದ ಯಡಿಯೂರಪ್ಪ? ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ
ನಿರಾಣಿ ಪ್ರತಿಕ್ರಿಯೆ ಏನು:
ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಅವರು ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದಿದ್ದಾರೆ. ಪಕ್ಷ ಎಲ್ಲೂ ಅವರಿಗೆ ಕೊಡಿ ಎಂದಿಲ್ಲ. ನಾನು ಅದನ್ನ ಹೇಳಲ್ಲ. ವಯಸ್ಸಾಗಿದೆ ಎಂದು ಅವರೇ ಅಂದುಕೊಂಡಿರಬಹುದು. ಆ ಕಾರಣಕ್ಕೆ ಅವರೇ ತೀರ್ಮಾನ ಮಾಡಿರಬಹುದು. ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಪದೇ ಪದೇ ಕೊನೆ ಚುನಾವಣೆ ಅಂತಿಲ್ವೇ. ಆದ್ರೂ ಚುನಾವಣೆ ನಿಲ್ತಿಲ್ವೇ. ಇದಕ್ಕೆ ಏನು ಹೇಳೋಣ ಎಂದಿದ್ದಾರೆ.