ಸಿದ್ದು, ಡಿಕೆಶಿ ಕಾದಾಟದಿಂದ ಸರ್ಕಾರ ಬಿದ್ದು ಹೋಗುತ್ತದೆ: ಸುನಿಲ್ ಸುಬ್ರಹ್ಮಣಿ
ಜಮೀರ್ ಅಹಮದ್ ಖಾನ್‌ನನ್ನ ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು. ಜಮೀರ್ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಕೋರ್ಟ್ ತೀರ್ಪು ಬಂದರೆ ಅದರ ವಿರುದ್ಧವೂ ಮಾತನಾಡುತ್ತಾನೆ. ಅವನಿಗೆ ಕಾನೂನಿನ ಪರಿಮಿತಿಯೇ ಇಲ್ಲದಂತೆ ಆಗಿದೆ. ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಚೆಕ್ ಮಾಡಿಸಬೇಕು: ಬಿಜೆಪಿ ಮಾಜಿ ಎಂಎಲ್ಸಿ ಸುನಿಲ್ ಸುಬ್ರಹ್ಮಣಿ
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ನ.20): ಈಗಾಗಲೇ ನಡೆದಿರುವ ಉಪಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ. ಇದು ಬಿಜೆಪಿಯಿಂದ ರಾಜ್ಯ ಸರ್ಕಾರ ಬೀಳುವುದಿಲ್ಲ, ನಮಗೆ ಅದರ ಅವಶ್ಯಕತೆಯೂ ನಮಗೆ ಇಲ್ಲ. ಬದಲಾಗಿ ಕಾಂಗ್ರೆಸ್ಸಿನವರ ಕಾದಾಟದಿಂದಾಗಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಮಾಜಿ ಎಂಎಲ್ಸಿ ಸುನಿಲ್ ಸುಬ್ರಹ್ಮಣಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರ ಕಾದಾಟದಿಂದ ಸರ್ಕಾರ ಬಿದ್ದು ಹೋಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಜೊತೆಗೆ 136 ಸೀಟು ಗೆದ್ದಿದ್ದೇವೆ ಎಂಬ ದುರಂಹಕಾರದಿಂದ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದ್ದಾರೆ.
ದೇಶದಲ್ಲೇ 'ಪರಿಶುದ್ಧ ಗಾಳಿ'ಗೆ ಮಡಿಕೇರಿ ಅಗ್ರಸ್ಥಾನ: ಗದಗಕ್ಕೆ 8ನೇ ಸ್ಥಾನ!
ಮುಂದುವರಿದು ಮಾತನಾಡಿದ ಅವರು ಉಪಚುನಾವಣೆಯಲ್ಲಿ ಜಮೀರ್ ಅಹಮ್ಮದ್ ನಂತಹ ತುಘಲಕ್ ಮಂತ್ರಿ ನೀಡುವ ಹೇಳಿಕೆ ಸುಮ್ಮನೆ ಬಂದಿದ್ದಲ್ಲ ಎನ್ನುವ ಮೂಲಕ ಇದು ಕಾಂಗ್ರೆಸ್ನವರಿಂದಲೇ ಇಂತಹ ಹೇಳಿಕೆ ನೀಡಿರಬಹುದು ಎಂಬ ಗುಮಾನಿ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಈಗ ಕೇಂದ್ರದ ಸಚಿವರಾಗಿದ್ದಾರೆ. ಹೀಗಿರುವಾಗ ಜನರನ್ನು ಪ್ರಚೋದನೆ ಮಾಡುವಂತಹ ರೀತಿಯಲ್ಲಿ ಹೇಳಿಕೆ ಕೊಡುತ್ತಾನೆ. ಒಂದು ಪ್ರಮುಖವಾದ ಗೌಡ ಕಮ್ಯುನಿಟಿಯ ವಿರುದ್ಧ ಜಮೀರ್ ಮಾತನಾಡುತ್ತಾನೆ. ಹುಟ್ಟುವಾಗ ಇಂತಹ ಜಾತಿ, ಬಣ್ಣದಲ್ಲಿ ಹುಟ್ಟಬೇಕೆಂದೇನು ಹುಟ್ಟಲ್ಲ. ಇಂತವನನ್ನು ಮಂತ್ರಿಯನ್ನಾಗಿ ಮಾಡಲಾಗಿದೆ. ಅವನನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು, ಜಮೀರ್ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸುನಿಲ್ ಸುಬ್ರಹ್ಮಣಿ ಆಗ್ರಹಿಸಿದ್ದಾರೆ.
ಸಿಎಂ ಬಂಧನವಾಗುತ್ತದೆ ಎಂದು ಯಾರು ನಿಮಗೆ ಮಾಹಿತಿ ಕೊಟ್ಟಿದ್ದು?: ಎ.ಎಸ್.ಪೊನ್ನಣ್ಣ
ಕೋರ್ಟ್ ತೀರ್ಪು ಬಂದರೆ ಅದರ ವಿರುದ್ಧವೂ ಮಾತನಾಡುತ್ತಾನೆ. ಅವನಿಗೆ ಕಾನೂನಿನ ಪರಿಮಿತಿಯೇ ಇಲ್ಲದಂತೆ ಆಗಿದೆ. ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಚೆಕ್ ಮಾಡಿಸಬೇಕು ಏಕವಚನದಲ್ಲಿ ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ರವಿ.ಕಾಳಪ್ಪ, ರಾಜ್ಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವ ವಕ್ಫ್ ಕಾಯ್ದೆಯನ್ನು ಕೂಡಲೇ ರದ್ದು ಮಾಡುವಂತೆ ಆಗ್ರಹಿಸಿ ಹಾಗೂ ಬಡವರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನೆಡೆಸಲು ಕೊಡಗು ಜಿಲ್ಲಾ ಬಿಜೆಪಿ ನಿರ್ಧರಿಸಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಈ ಕಾಯ್ದೆಯಿಂದಾಗಿ ರಾಜ್ಯದಲ್ಲಿ ರೈತರ ನೆಮ್ಮದಿ ಹಾಳಾಗಿದೆ. ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬರುವ ಸ್ಥಿತಿ ರಾಜ್ಯದ ಜನತೆಗೆ ಎದುರಾಗಿದೆ. ಹೀಗಾಗಿ ಇದನ್ನು ವಿರೋಧಿಸಿ ಇದೇ ಶುಕ್ರವಾರ ಕೊಡಗು ಜಿಲ್ಲಾ ಬಿಜೆಪಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧವಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರವು ಬಡವರ ವಿರೋಧಿಯಾಗಿದೆ ಎನ್ನುವುದಕ್ಕೆ ಬಡ, ಕೂಲಿ ಕಾರ್ಮಿಕರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದೆ. ಜಿಎಸ್ಟಿ, ಐಟಿ ರಿಟರ್ನಿಂಗ್ ಅಂತ ಹೇಳಿ ಕೂಲಿ ಮಾಡಿ ಅಂದಿನ ಬದುಕು ನಡೆಸುವವರ ಕಾರ್ಡುಗಳನ್ನು ರದ್ಧು ಮಾಡಿದೆ. ಇದೆಲ್ಲವೂ ಜಾರಿ ಮಾಡಿರುವ ಗ್ಯಾರೆಂಟಿ ಯೋಜನೆಗಳನ್ನು ಕೊಡಲು ಸಾಧ್ಯವಾಗದೆ ಇಂತಹ ಸಬೂಬುಗಳನ್ನು ಹೇಳಿ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿದೆ ಎಂದಿದ್ದಾರೆ. ಇಂತಹ ಹಲವು ವಿಷಯಗಳ ಆಧಾರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರವಿ.ಕಾಳಪ್ಪ ಹೇಳಿದ್ದಾರೆ.