ಗಂಗಾವತಿ: ಜು. 3ರಂದು ಕಾಂಗ್ರೆಸ್‌ ಸೇರ್ಪಡೆ: ಶ್ರೀನಾಥ

*   ಜು. 3ರಂದು ಕಾಂಗ್ರೆಸ್‌ ಸೇರ್ಪಡೆ: ಶ್ರೀನಾಥ
*  ಜನಪರ ಆಡಳಿತ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ
*  ಬಿಜೆಪಿಯ ಭ್ರಷ್ಟಾಚಾರಕ್ಕೆ ಬೇಸತ್ತ ಜನತೆ 
 

Former BJP MLC HR Shrinath Will Be Joins Congress on July 3rd in Bengaluru grg

ಗಂಗಾವತಿ(ಜೂ.23):  ಜು. 3ರಂದು ಸಾಂಕೇತಿಕವಾಗಿ ಬೆಂಗಳೂರಿನ ಕೆಪಿಸಿಸಿ ಕಾರ್ಯಾಲಯದಲ್ಲಿ ಕಾಂಗ್ರೆಸ್‌ ಸೇರುವುದಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಘೋಷಿಸಿದರು. ಬುಧವಾರ ತಮ್ಮ ನಿವಾಸದಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಜತೆ ಪೂರ್ವಭಾವಿ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.

ಸಾಂಕೇತಿಕವಾಗಿ ಕಾಂಗ್ರೆಸ್‌ ಸೇರಿದ ಬಳಿಕ ಮುಂದಿನ ದಿನಗಳಲ್ಲಿ ಗಂಗಾವತಿಯಲ್ಲಿ ಬೃಹತ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಆಯೋಜಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಮತ್ತೊಮ್ಮೆ ಸೇರ್ಪಡೆಗೊಳ್ಳುವುದಾಗಿ ತಿಳಿಸಿದರು.

ಪ್ರಧಾನಿ ಮೋದಿ ಶ್ರೀಕೃಷ್ಣನ ಅವತಾರ: ಸಚಿವ ಶ್ರೀರಾಮುಲು

ಬಿಜೆಪಿಯ ಭ್ರಷ್ಟಾಚಾರ ಅಧಿಕಾರ ಕೊನೆಗಾಣಿಸಿ, ಜನಪರ ಆಡಳಿತ ನೀಡುವುದು ಕಾಂಗ್ರೆಸ್‌ದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ಭ್ರಷ್ಟಾಚಾರಕ್ಕೆ ಜನತೆ ಬೇಸತ್ತಿದ್ದಾರೆ ಎಂದರು.

ಈ ಹಿಂದೆ ನಮ್ಮ ತಂದೆ ರಾಮುಲು ಅವರ ನೇತೃತ್ವದಲ್ಲಿ ಕೊಪ್ಪಳ- ಬಳ್ಳಾರಿ ಹಾಗೂ ರಾಯಚೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಅನಾರೋಗ್ಯ ಹಿನ್ನೆಲೆ ತಂದೆಯವರು ಪಕ್ಷದಿಂದ ದೂರವಾದ ಬಳಿಕ ಕಾಂಗ್ರೆಸ್‌ ದುರ್ಬಲವಾಗಿದೆ. ಈಗ ಮತ್ತೆ ರಾಜ್ಯ ಕಾಂಗ್ರೆಸ್‌ ಮುಖಂಡರ ಆಶಯದಂತೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವ ಹೊಣೆಗಾರಿಕೆ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರ ಮೇಲಿದೆ ಎಂದರು.

ಪಕ್ಷ ಸೇರ್ಪಡೆ ಹಿಂದೆ ಯಾವುದೇ ದುರುದ್ದೇಶವಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಯಾರಿಗೇ ನೀಡಿದರೂ ಅದನ್ನು ಅತ್ಯಂತ ಗೌರವದಿಂದ ಸ್ವೀಕರಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವೆ. ರಾಮುಲು ಕುಟುಂಬ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಯಾವುದೇ ಕಾರಣಕ್ಕೂ ಕೋಮುಗಲಭೆ ಸಹಿಸುವುದಿಲ್ಲ ಎಂದರು.

ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ನೀಡಲ್ಲ, ರೈತರ ಆಕ್ರೋಶ

ವಿಧಾನಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಮಾತನಾಡಿ, ನನ್ನ ರಾಜಕೀಯ ಬೆಳವಣಿಗೆಯಲ್ಲಿ ಎಚ್‌.ಜಿ. ರಾಮುಲು ಪಾತ್ರ ದೊಡ್ಡದು. ಅವರ ಮನೆತನ ನನಗೆ ಬೆನ್ನೆಲುಬಾಗಿ ನಿಂತಿದೆ ಎಂದರು.

ಸುರೇಶಗೌರಪ್ಪ, ರಾಮಕೃಷ್ಣ, ರಜೀಯಾಬೇಗಂ, ಅನ್ನಪೂರ್ಣ ಸಿಂಗ್‌ ಮಾತನಾಡಿದರು. ಕೃಷ್ಣಪ್ಪನಾಯಕ, ಆರ್‌.ಪಿ. ರೆಡ್ಡಿ, ರಮೇಶ್‌ ಗೌಳಿ, ಸಿ.ಎಚ್‌. ರಾಮಕೃಷ್ಣ, ನೆವಣಕ್ಕಿ ಹನುಮಂತಪ್ಪ, ರಹೆಮಾನಸಾಬ, ರೆಡ್ಡಿ ಶ್ರೀನಿವಾಸ್‌, ಪುತ್ತೂರು ಶ್ರೀನಿವಾಸ, ಮಲ್ಲೇಶಪ್ಪ, ದ್ಯಾಮಣ್ಣ, ಸಿದ್ದಪ್ಪ, ಎಂ.ಡಿ. ಉಸ್ಮಾನ್‌, ಆಯುಬ್‌ಖಾನ್‌, ಜಿನ್ನಾ ಟೇಲರ್‌ ಇತರರು ಇದ್ದರು.
 

Latest Videos
Follow Us:
Download App:
  • android
  • ios