ಇನ್ನು ಐದು ವರ್ಷ ಹೋದರೆ ನಾವೆಲ್ಲ 70 ವರ್ಷ​ದ ಗಡಿಗೆ ಬರುತ್ತೇವೆ. 2028ರ ಚುನಾವಣೆ ವೇಳೆ ಜೆಡಿಎಸ್‌ ಯುವ ನಾಯಕತ್ವದ ತಂಡ ರಚನೆಯಾಗಲಿದೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ಚಿಕ್ಕಮಗಳೂರು (ಮಾ.02): ಇನ್ನು ಐದು ವರ್ಷ ಹೋದರೆ ನಾವೆಲ್ಲ 70 ವರ್ಷ​ದ ಗಡಿಗೆ ಬರುತ್ತೇವೆ. 2028ರ ಚುನಾವಣೆ ವೇಳೆ ಜೆಡಿಎಸ್‌ ಯುವ ನಾಯಕತ್ವದ ತಂಡ ರಚನೆಯಾಗಲಿದೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2028ರಲ್ಲಿ ಹೊಸ ನಾಯಕತ್ವಕ್ಕೆ ಉತ್ತಮ ಕುಟುಂಬದಿಂದ ಬಂದಿರುವ, ಒಳ್ಳೆಯ ಜನ​ಪರ ಕೆಲಸ ಮಾಡುವಂಥ ಯುವಕರನ್ನು ಆಯ್ಕೆ ಮಾಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದರು. ವಿಧಾನಪರಿಷತ್‌ ಮಾಜಿ ಉಪ ಸಭಾಪತಿ, ದಿವಂಗತ ಎಸ್‌.ಎಲ್‌.ಧರ್ಮೇಗೌಡರ ಪುತ್ರನಿಗೆ ಈ ಬಾರಿ ಟಿಕೆಟ್‌ ನೀಡುತ್ತೀರಾ ಎಂಬ ಪ್ರಶ್ನೆಗೆ ಆತ ಇನ್ನೂ ರಾಜಕಾರಣದಲ್ಲಿ ಅಂಬೆಗಾಲು ಇಡುತ್ತಿದ್ದಾನೆ ಎಂದರು.

ಕಾರ್ಯ ಕ್ಷಮತೆ ನೋಡಿ ಟಿಕೆಟ್‌: ರಾಜ್ಯದ 93 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲಾಗಿದೆ. ಅವರ ಕಾರ್ಯಕ್ಷಮತೆ ನೋಡಿ ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದು. ಚುನಾವಣೆ ಘೋಷಣೆಗೂ ಮುನ್ನ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲಾಗಿದ್ದು, ಅವರವರ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಚುರುಕಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಸದ್ಯದ ಅಂದಾಜಿನ ಪ್ರಕಾರ ಚುನಾವಣೆಗಿನ್ನು 2 ತಿಂಗಳು ಬಾಕಿ ಇದೆ. ಸಂಭವನೀಯ ಅಭ್ಯರ್ಥಿಗಳ ಕಾರ್ಯಕ್ಷಮತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಪಟ್ಟಿಅಂತಿಮಗೊಳಿಸಲಾಗುವುದು. ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸದವ​ರನ್ನು ಬದಲಾವಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಿದರು.

ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ: ಸಿದ್ಧರಾಮಯ್ಯಗೆ ಎಚ್‌ಡಿಕೆ ಟಾಂಗ್‌

ಚನ್ನಪಟ್ಟಣದಿಂದ ನನ್ನ ಕೊನೆ ಚುನಾವಣೆ: ಚನ್ನಪಟ್ಟಣ ಕ್ಷೇತ್ರದಿಂದ ಇದು ನನ್ನ ಕೊನೆಯ ವಿಧಾನಸಭೆ ಚುನಾವಣೆಯಾಗಿದ್ದು, 2028ರ ವಿಧಾನಸಭೆ ಚುನಾವಣೆಗೆ ನಿಮ್ಮಲ್ಲೇ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಅವರನ್ನೇ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಹಮ್ಮಿಕೊಂಡಿದ್ದ ಬೊಂಬೆನಾಡಿನ ಬಮೂಲ್‌ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ನೊಂದಿದ್ದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ಪಕ್ಷ ಉಳಿಸಬೇಕೆಂಬ ಉದ್ದೇಶದಿಂದ ಕಳೆದ ಬಾರಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದೆ. ನಿಮ್ಮಲ್ಲಿ ಒಬ್ಬರು ಬಲಿಷ್ಠರಾಗಿ ಬೆಳೆದಿದ್ದರೆ ಈ ಬಾರಿಯೇ ಕ್ಷೇತ್ರ ಬಿಟ್ಟುಕೊಡುತ್ತಿದ್ದೆ. ಆದರೆ ಅಂತಹ ಪರಿಸ್ಥಿತಿ ಇಲ್ಲದ ಕಾರಣ ಕೊನೆಯ ಬಾರಿ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇನೆ ಎಂದರು.

ಚನ್ನಪಟ್ಟಣದಿಂದಲೇ ಸ್ಪರ್ಧೆ: ನಿಮ್ಮನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ಷಡ್ಯಂತ್ರ ನಡೆಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಕೆ.ಆರ್‌.ಪೇಟೆಯಿಂದ ಸ್ಪರ್ಧಿಸುವಂತೆ ಮಂಡ್ಯ ಜಿಲ್ಲೆಯ ಮುಖಂಡರು ಒತ್ತಡ ಹೇರಿದರು. ಅದೇ ರೀತಿ ನವಿಲುಗುಂದದಲ್ಲಿ ಸ್ಪರ್ಧಿಸಿದರೆ 8ರಿಂದ 10 ಕ್ಷೇತ್ರಗಳಲ್ಲಿ ಅನುಕೂಲವಾಗಲಿದ್ದು, ನೀವು ಇಲ್ಲಿಂದ ನಾಮಪತ್ರ ಸಲ್ಲಿಸಿ ಹೋಗಿ ನಾವು ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತೇವೆ ಎಂದು ಅಲ್ಲಿನ ಮುಖಂಡರ ಹೇಳಿದರು. ಆದರೆ, ಪ್ರತಿ ಬಾರಿ ಕ್ಷೇತ್ರ ಬದಲಿಸಲು ನಾನೇನು ಟೂರಿಂಗ್‌ ಟಾಕೀಸ್‌ ಅಲ್ಲ ಎಂದು ಅವರಿಗೆ ತಿಳಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿ ನೋಡಿ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ 40% ಭ್ರಷ್ಟಾಚಾರದ ಸರ್ಕಾರವಾಗಿದ್ದರೆ, ಕಾಂಗ್ರೆಸ್‌ ರಿಡೂ ಹಗರಣದ ಪಕ್ಷವಾಗಿದೆ. ಜನ ಎರಡು ಪಕ್ಷಗಳ ದುರಾಡಳಿತ ನೋಡಿದ್ದಾರೆ. ಪಂಚರತ್ನ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂದಿನ ಚುನಾವಣೆಯ ನಂತರ ಆಡಳಿತ ನಡೆಸುವ ಪೆನ್‌ ನನಗೆ ಸಿಗುವ ವಿಶ್ವಾಸವಿದೆ ಎಂದರು.

ಅಡಿಕೆ ಬೆಳೆಗಾರರನ್ನು ಬೀದಿಗೆ ತರುವ ಹುನ್ನಾರ: ಎಚ್‌ಡಿಕೆ ಆರೋಪ

ಅಧಿಕಾರದಾಟ ನೋಡಿದ್ದೇನೆ: ಬಮೂಲ್‌ ಉತ್ಸವಕ್ಕೆ ಸಂಬಂಧಿಸಿದಂತೆ ಬಮೂಲ್‌ ಅಧಿಕಾರಿಗಳು ಹಾಗೂ ಪೊಲೀಸರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಎಆರ್‌ಗಳು, ಡಿಆರ್‌ಗಳು ಯಾವ ರೀತಿ ಅಧಿಕಾರ ನಡೆಸುತ್ತಾರೆ ಗೊತ್ತಿದೆ. ಇನ್ನೆರಡು ತಿಂಗಳು ಮಾತ್ರ ನಿಮ್ಮ ಕಳ್ಳಾಟ. ನನ್ನ ಸರ್ಕಾರ ಬಂದ ನಂತರ ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲಿದ್ದೇನೆಂದರು. ನನ್ನ ವಿರುದ್ಧ ಅಪಪ್ರಚಾರ ಮಾಡುವ ಇಲ್ಲಿನ ಮಾಜಿ ಶಾಸಕರು ತಮ್ಮ 20 ವರ್ಷಗಳ ಅವಧಿಯಲ್ಲಿ ಏನು ಮಾಡಿದ್ದಾರೆ?. ಇವತ್ತು ಸ್ವಾಭಿಮಾನಿ ನಡಿಗೆ ನಡೆಸುತ್ತಿರುವ ಅವರು, ಈ ಹಿಂದೆ ರಾಸುಗಳಿಗೆ ಕಾಲು ಬಾಯಿ ಜ್ವರ ಬಂದಾಗ ಎಲ್ಲಿಗೆ ಹೋಗಿದ್ದರು? ಕೊರೋನಾ ಸಂಕಷ್ಟದಲ್ಲಿ ಅವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.