ಬಿಜೆಪಿ ಸರ್ಕಾರ ರಾಜ್ಯದ ಅಡಿಕೆ ಬೆಳೆದ ರೈತರನ್ನು ಬೀದಿಗೆ ತರುವ ಹುನ್ನಾರದಿಂದ ಹಾಗೂ ಅವರ ನೆಮ್ಮದಿ ಹಾಳು ಮಾಡಲು ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

ಕಡೂರು (ಮಾ.01): ಬಿಜೆಪಿ ಸರ್ಕಾರ ರಾಜ್ಯದ ಅಡಿಕೆ ಬೆಳೆದ ರೈತರನ್ನು ಬೀದಿಗೆ ತರುವ ಹುನ್ನಾರದಿಂದ ಹಾಗೂ ಅವರ ನೆಮ್ಮದಿ ಹಾಳು ಮಾಡಲು ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದರು. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ತಾವು ರಾಜ್ಯದ ಜನ ಸಾಮಾನ್ಯರ, ರೈತರ, ಕಾರ್ಮಿಕರ ಹಿತದೃಷ್ಟಿಇಟ್ಟುಕೊಂಡು ಎರಡು ಬಾರಿ ಮುಖ್ಯಮಂತ್ರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾವುದೇ ಆರೋಪಗಳಿಲ್ಲದೆ ಜನರ, ರೈತರ ಕಷ್ಟಕ್ಕೆ ಸ್ಪಂದಿಸಿದ್ದೇನೆ. 

ನೊಂದವರ ಧ್ವನಿಯಾಗಿ ಕೆಲಸ ಮಾಡಿರುವ ತೃಪ್ತಿಯಿದೆ. ರಾಜ್ಯದ ಜನರ ಕಲ್ಯಾಣಕ್ಕಾಗಿ ಮತ್ತೊಂದು ಅವಕಾಶ ನೀಡಿ ಎಂದು ಕೇಳುತ್ತಿದ್ದೇನೆ ಎಂದರು. ಜನರು ಮನಸ್ಸು ಮಾಡಿ ಅಧಿಕಾರ ನೀಡಿದರೆ ನಮ್ಮ ಪಂಚರತ್ನ ಯೋಜನೆಯನ್ನು ಅನುಷ್ಟಾನ ಮಾಡಿ ಜನರು ನೆಮ್ಮದಿ ಜೀವನ ಸಾಗಿಸಲು ಅನುವು ಮಾಡಿಕೊಡುವ ಆಶಯ ನಮ್ಮ ದಾಗಿದೆ ಎಂದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಕೇಂದ್ರ, ವಸತಿ ಶಾಲೆ, ದೊಡ್ಡ ಮಟ್ಟದ ಜನರ ಕಾಯಿಲೆಗಳಿಗೆ ಸರ್ಕಾರವೇ ಹಣ ಭರಿಸುವ ಯೋಜನೆ, ರೈತರಿಗೆ ಸಕಲ ಸೌಲಭ್ಯ ಕಲ್ಪಿಸುವುದು, ಹೀಗೆ ಅನೇಕ ಚಿಂತನೆಗಳಿವೆ. ಜನರು ಯೋಚನೆ ಮಾಡಿ ಜೆಡಿಎಸ್‌ಗೆ ಪೂರ್ಣ ಅಧಿಕಾರ ನೀಡಿದರೆ ಕರುನಾಡನ್ನು ಸಮೃದ್ಧ ರಾಜ್ಯವನ್ನಾಗಿಸುತ್ತೇನೆ ಎಂದರು.

ಅದೇನ್‌ ಬಿಚ್ಚಿಡ್ತೀರೋ, ಮೊದಲು ಬಿಚ್ಚಿಡಿ: ಶಾಸಕ ಶಿವಲಿಂಗೇಗೌಡರಿಗೆ ಎಚ್‌ಡಿಕೆ ಸವಾಲು

ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದರೆ ಈ ಎಲ್ಲ ಯೋಜನೆಗಳಿಗೆ ಅಗತ್ಯವಾದ 2.5 ಲಕ್ಷ ಕೋಟಿ ರು. ಹಣ ಕ್ರೋಡೀಕರಿಸಿ ಭರವಸೆ ನೀಡಿದಂತೆ ಮಾತಿಗೆ ತಪ್ಪದೆ ರಾಜ್ಯದ ಜನತೆ ಉತ್ತಮ ಜೀವನ ನಡೆಸಲು ಪೂರಕ ವಾತಾವರಣ ಕಲ್ಪಿಸುವುದು ನಿಶ್ಚಿತ. ಹಾಗಾಗಿ ನನಗೆ ಅವಕಾಶ ನೀಡಿ ಅಧಿಕಾರದ ಬಲ ನೀಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ತಿಮ್ಮಶೆಟ್ಟಿ, ಧರ್ಮಗೌಡರ ಪುತ್ರ ಸೋನಾಲ್‌ ಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆನಂದನಾಯ್ಕ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಜೆಡಿಎಸ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರೇಂಕುಮಾರ್‌ , ಚಂದ್ರಪ್ಪ, ಚೇತನ್‌, ಫೈರೋಜ್‌, ಮೋಹನ್‌ ಇದ್ದರು.

ಯಡಿಯೂರಪ್ಪರನ್ನು ನಿವೃತ್ತಿ ಪಡಿಸಿದ ಬಿಜೆಪಿ: ವಯಸ್ಸಿನ ಕಾರಣ ನೀಡಿ ಬಿ.ಎಸ್‌.ಯಡಿಯೂರಪ್ಪರನ್ನು ನಿವೃತ್ತಿ ಪಡಿಸಿದ ಬಿಜೆಪಿ, ಇದೀಗ ಒಂದು ಸಮಾಜದ ಮತ ಪಡೆಯಲು ಅವರನ್ನು ಮುಂದೆ ಬಿಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಯಡಿಯೂರಪ್ಪ ಬಗ್ಗೆ ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಗೊತ್ತಾಗುತ್ತದೆ, ಆ ಪಕ್ಷ ಎಂತಹದ್ದು ಎಂದರು. ಮೈತ್ರಿ ಸರ್ಕಾರದ ನಂತರ ಹೇಗೋ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಇನ್ನೂ 2ವರ್ಷ ಸರ್ಕಾರ ನಡೆಸುತ್ತಿದ್ದರು. ಅವರನ್ನು ಮೂಲೆ ಗುಂಪು ಮಾಡಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪ ಅವರನ್ನು ನೀವೆ ಎನ್ನುತ್ತಿದ್ದಾರೆ ಎಂದ ಅವರು, ಚುನಾವಣೆ ಬಳಿಕ ಯಡಿಯೂ ರಪ್ಪ ಅವರನ್ನು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಕಟ್ಟಿಬೆಳೆಸಿದ ಅದ್ವಾನಿ, ಮುರಳಿ ಮನೋಹರ ಜೋಷಿ ಅಂತವರಿಗೆ ಬಿಜೆಪಿ ವಯಸ್ಸು ಹೇಳಿ ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದರು. 7 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಕರೆ ಕೊಟ್ಟಿರುವ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಸರ್ಕಾರಿ ನೌಕರರೇ ತಿಳಿದುಕೊಳ್ಳಬೇಕು ಎಂದರು. ಬಜೆಟ್‌ ನಲ್ಲಿ ಘೋಷಣೆ ಮಾಡಿದ್ದೇವೆಂದು ಎಂದು ಸಿಎಂ ಹೇಳುತ್ತಾರೆ. ಆದರೆ, ಬರವಣಿಗೆ ಮೂಲಕ ನೀಡಬೇಕೆಂದು ಸಂಘದ ಅಧ್ಯಕ್ಷರು ಹೇಳುತ್ತಿದ್ದಾರೆ, ಬಜೆಟ್‌ನಲ್ಲಿ ಘೋಷಣೆ ಮಾಡಿದಾಕ್ಷಣ ಜಾರಿಗೆ ಆಗುತ್ತಾ ಎಂದು ಪ್ರಶ್ನಿಸಿದರು. ಸರ್ಕಾರಿ ನೌಕರರಿಂದ ಸಿಎಂ ಸಿಹಿ ತಿಂದು ಹಾರ ಹಾಕಿಸಿಕೊಂಡಿದ್ದರು. ಸರ್ಕಾರಿ ನೌಕರರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ರೇವಣ್ಣ, ಎಚ್‌​ಡಿ​ಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸಿ.ಎಂ.ಇಬ್ರಾಹಿಂ

ಜೆಡಿಎಸ್‌ ಪಕ್ಷಅಧಿಕಾರಕ್ಕೆ ಬಂದರೆ ಈ ಭಾಗದ ಎಸ್‌.ಎಲ್‌. ಭೋಜೇಗೌಡ ಅವರನ್ನು ಮಂತ್ರಿ ಮಾಡುವ ಆಸೆಯಿದೆ. ನನ್ನ ಆತ್ಮೀಯ ಸ್ನೇಹಿತರಾಗಿದ್ದ ಧರ್ಮೇಗೌಡರ ಮಗ ಸೋನಾಲ್‌ ಗೌಡ ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತೇನೆ. ಅವನನ್ನು ನೀವೆಲ್ಲ ಸೇರಿ ಬೆಳೆಸಬೇಕು ಎಂದು ಮನವಿ ಮಾಡುತ್ತೇನೆ.
- ಎಚ್‌.ಡಿ. ಕುಮಾರಸ್ವಾಮಿ