ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ: ಸಿದ್ಧರಾಮಯ್ಯಗೆ ಎಚ್‌ಡಿಕೆ ಟಾಂಗ್‌

ಪದೇ ಪದೇ ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ, ಈ ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ತಂದು ನಿಲ್ಲಿಸಿದ್ದೀರಿ, ಇದಕ್ಕೆ ಬಿಜೆಪಿ ಮಾತ್ರವಲ್ಲ, ನಿಮ್ಮ ಪಾಲು ಕೂಡ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಿದ್ಧರಾಮಯ್ಯ ಅವರಿಗೆ ಟಾಂಗ್‌ ನೀಡಿದರು. 

Former CM HD Kumaraswamy Slams On Siddaramaiah At Chikkamagaluru gvd

ಚಿಕ್ಕಮಗಳೂರು (ಮಾ.02): ಪದೇ ಪದೇ ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ, ಈ ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ತಂದು ನಿಲ್ಲಿಸಿದ್ದೀರಿ, ಇದಕ್ಕೆ ಬಿಜೆಪಿ ಮಾತ್ರವಲ್ಲ, ನಿಮ್ಮ ಪಾಲು ಕೂಡ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಿದ್ಧರಾಮಯ್ಯ ಅವರಿಗೆ ಟಾಂಗ್‌ ನೀಡಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಗೆ ಹೋಗುವ ಮೊದಲು ಬಜೆಟ್‌ನಲ್ಲಿ ಹಣ ಇಡದೆ ಕೆಲವು ಕೆಲಸಗಳಿಗೆ ಆಡಳಿತಾತ್ಮಕ ಮಂಜೂರಾತಿ ಕೊಟ್ರು, ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಆಗದಿರುವ ವಾತಾವರಣ ಇದೆ. ಇದರಲ್ಲಿ ನಿಮ್ಮ ಪಾಲು ಇದೆ ಎಂದರು.

ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದಲ್ಲಿ ಸರಿಯಾಗಿ ಆಡಳಿತ ನಡೆಸಿಲ್ಲ, ತಾಜ್‌ ಹೋಟೆಲ್‌ನಲ್ಲಿ ಕಾಲ ಕಳೆದರು ಎಂದು ಸಿದ್ದರಾಮಯ್ಯ ಬೆಳಗಾವಿಯಲ್ಲಿ ಪ್ರಸ್ತಾಪಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ಬೆಳಿಗ್ಗೆ 8.30 ರಿಂದ ರಾತ್ರಿ 12 ಗಂಟೆವರೆಗೆ ನಿರಂತರ ಜನರ ಸಂಪರ್ಕದಲ್ಲಿದ್ದೆ. ದಿನಕ್ಕೆ 10-15 ಸಭೆ ಮಾಡ್ತಾ ಇದ್ದೆ, ನೀವು ಸಿಎಂ ಆಗಿದ್ದಾಗ, ಪ್ರತಿದಿನ ಮಧ್ಯಾಹ್ನ 1.30ಕ್ಕೆ ವಿಧಾನ ಸೌಧ ಖಾಲಿ ಮಾಡಿ ಆರಾಮಗಿ ನಿದ್ದೆ ಮಾಡ್ತಾ ಇದ್ರಿ, ಸಂಜೆ 6ಕ್ಕೆ ಯಾರಿಗೂ ಕಾಣದೆ ಹೋಗ್ತಾ ಇದ್ರಿ, ಎಲ್ಲಿಗೆ ಹೋಗ್ತಾ ಇದ್ರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಮೈತ್ರಿ ಸರ್ಕಾರದಲ್ಲಿ ಇದ್ದಾಗ ನನಗೆ ಇರಲು ಒಂದು ಮನೆ ಕೊಡಲಿಲ್ಲ, ಜನ ಕಾಂಗ್ರೆಸ್‌ನ್ನು ತಿರಸ್ಕರಿಸಿದರು. ಆದರೆ, ಆ ಮನೆಯಲ್ಲಿಯೇ ಮುಂದುವರೆದಿದ್ರಿ, ನಾನು ಮಧ್ಯಾಹ್ನ ಎಲ್ಲಿ ಇರಬೇಕಾಗಿತ್ತು. 

ಅದೇನ್‌ ಬಿಚ್ಚಿಡ್ತೀರೋ, ಮೊದಲು ಬಿಚ್ಚಿಡಿ: ಶಾಸಕ ಶಿವಲಿಂಗೇಗೌಡರಿಗೆ ಎಚ್‌ಡಿಕೆ ಸವಾಲು

ಕುಮಾರ ಕೃಪಾದಲ್ಲಿ ಇರೋಣ ಅಂದ್ರೆ, ಅಲ್ಲಿ ಚಟುವಟಿಕೆ ಯಾವ ರೀತಿ ನಡೆಸಿಕೊಂಡು ಬಂದ್ರಿ ನನಗೂ ಗೊತ್ತಿದೆ ಎಂದರು. ಸಿದ್ದರಾಮಯ್ಯ ನವರೇ, ಜೆಡಿಎಸ್‌ ಪಕ್ಷದ ಬಗ್ಗೆ ಪ್ರಸ್ತಾಪ ಮಾಡಬೇಡಿ. ಅಭಿವೃದ್ಧಿ ಕೆಲಸಗಳಿಗೆ ನಿಮ್ಮ ಪಕ್ಷದ ಶಾಸಕರಿಗೆ 19 ಸಾವಿರ ಕೋಟಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 109 ಕೋಟಿ ಕೊಟ್ಟಿದ್ದೇನೆ. ನಾನು ಆಡಳಿತ ನಡೆಸಿಲ್ವಾ, ನಿಮ್ಮಿಂದ ಕಲಿಯಬೇಕಾ, ಕೊಟ್ಟಕುದುರೆ ಏರಲಿಲ್ಲ ಎನ್ನುತ್ತಿದ್ದೀರಿ, ಕುದುರೆಯ ಕಾಲು ಕಟ್‌ ಮಾಡಿದರೆ ಓಡಿಸಲು ಹೇಗೆ ಸಾಧ್ಯ ಎಂದರು. ಆಪರೇಷನ್‌ ಕಮಲದ ಮೊದಲನೇ ಚುನಾವಣೆ ಎಷ್ಟಕ್ಕೆ ಸುಪಾರಿ ತೆಗೆದುಕೊಂಡಿದ್ದೀರಿ, ಹೇಳಿ ಎಂದ್ರೆ ಚಕಾರ ಎತ್ತುತ್ತಿಲ್ಲ, ಇವರು ನಮ್ಮನ್ನು ಬಿಜೆಪಿಯ ಬಿ ಟೀಮ್‌ ಎನ್ನುತ್ತಾರೆ ಎಂದ ಕುಮಾರಸ್ವಾಮಿ, ಸುರ್ಜೆವಾಲಗೆ ಓಪನ್‌ ಆಗಿ ಸವಾಲು ಹಾಕಿರುವೆ ಚರ್ಚೆಗೆ ಬನ್ನಿ ಎಂದು ಹೇಳಿದ್ದೇನೆ ಎಂದರು.

ಯಡಿಯೂರಪ್ಪರನ್ನು ನಿವೃತ್ತಿ ಪಡಿಸಿದ ಬಿಜೆಪಿ: ವಯಸ್ಸಿನ ಕಾರಣ ನೀಡಿ ಬಿ.ಎಸ್‌.ಯಡಿಯೂರಪ್ಪರನ್ನು ನಿವೃತ್ತಿ ಪಡಿಸಿದ ಬಿಜೆಪಿ, ಇದೀಗ ಒಂದು ಸಮಾಜದ ಮತ ಪಡೆಯಲು ಅವರನ್ನು ಮುಂದೆ ಬಿಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಕಡೂರು ತಾಲೂಕಿನ ದೇವನೂರಿನಲ್ಲಿ ಮಂಗಳವಾರ ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಗೊತ್ತಾಗುತ್ತದೆ, ಆ ಪಕ್ಷ ಎಂತಹದ್ದು ಎಂದರು. ಮೈತ್ರಿ ಸರ್ಕಾರದ ನಂತರ ಹೇಗೋ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಇನ್ನೂ 2ವರ್ಷ ಸರ್ಕಾರ ನಡೆಸುತ್ತಿದ್ದರು. ಅವರನ್ನು ಮೂಲೆ ಗುಂಪು ಮಾಡಿ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪ ಅವರನ್ನು ನೀವೆ ಎನ್ನುತ್ತಿದ್ದಾರೆ ಎಂದ ಅವರು, ಚುನಾವಣೆ ಬಳಿಕ ಯಡಿಯೂ ರಪ್ಪ ಅವರನ್ನು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಸಂವಿಧಾನ ಬದ್ಧವಾಗಿ ಕೆಲಸ ಮಾಡುವ ಪಕ್ಷ ಕಾಂಗ್ರೆಸ್‌: ಡಿ.ಕೆ.ಶಿವಕುಮಾರ್‌

ಬಿಜೆಪಿ ಕಟ್ಟಿ ಬೆಳೆಸಿದ ಅದ್ವಾನಿ, ಮುರಳಿ ಮನೋಹರ ಜೋಷಿ ಅಂತವರಿಗೆ ಬಿಜೆಪಿ ವಯಸ್ಸು ಹೇಳಿ ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿದರು. 7 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಕರೆ ಕೊಟ್ಟಿರುವ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಸರ್ಕಾರಿ ನೌಕರರೇ ತಿಳಿದುಕೊಳ್ಳಬೇಕು ಎಂದರು. ಬಜೆಟ್‌ ನಲ್ಲಿ ಘೋಷಣೆ ಮಾಡಿದ್ದೇವೆಂದು ಎಂದು ಸಿಎಂ ಹೇಳುತ್ತಾರೆ. ಆದರೆ, ಬರವಣಿಗೆ ಮೂಲಕ ನೀಡಬೇಕೆಂದು ಸಂಘದ ಅಧ್ಯಕ್ಷರು ಹೇಳುತ್ತಿದ್ದಾರೆ, ಬಜೆಟ್‌ನಲ್ಲಿ ಘೋಷಣೆ ಮಾಡಿದಾಕ್ಷಣ ಜಾರಿಗೆ ಆಗುತ್ತಾ ಎಂದು ಪ್ರಶ್ನಿಸಿದರು. ಸರ್ಕಾರಿ ನೌಕರರಿಂದ ಸಿಎಂ ಸಿಹಿ ತಿಂದು ಹಾರ ಹಾಕಿಸಿಕೊಂಡಿದ್ದರು. ಸರ್ಕಾರಿ ನೌಕರರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Latest Videos
Follow Us:
Download App:
  • android
  • ios