ಮೋದಿ ಆಡಳಿತಕ್ಕೆ ವಿದೇಶಗಳಿಂದಲೂ ಮೆಚ್ಚುಗೆ: ಎನ್.ರವಿಕುಮಾರ್
ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳುತ್ತಿದೆ. ವಿದೇಶಗಳು ನಮ್ಮ ಪ್ರಧಾನ ಮಂತ್ರಿಗಳನ್ನು ಮೆಚ್ಚುತ್ತಿವೆ. ಆದರೆ, ಕಾಂಗ್ರೆಸ್‌ನವರಿಗೆ ದೇಶ ಅಭಿವೃದ್ಧಿಯಾಗುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲ. ಅವರು ಕೇವಲ ವಿರೋಧ ಮಾಡುವುದನ್ನು ಮಾತ್ರ ಕಲಿತಿದ್ದಾರೆ ಎಂದು ಟೀಕಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್.
ಯಾದಗಿರಿ(ಜು.30): ಪಾಕಿಸ್ತಾನ ಮತ್ತು ಚೀನಾ, ಎರಡೂ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ಅನೇಕ ವಿದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ನಗರದ ಎಸ್‌ಡಿಎನ್ ಹೊಟೆಲ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಬಿಜೆಪಿಯಿಂದ ಆಯೋಜಿಸಲಾಗಿದ್ದ ಪ್ರಬುದ್ಧರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳುತ್ತಿದೆ. ವಿದೇಶಗಳು ನಮ್ಮ ಪ್ರಧಾನ ಮಂತ್ರಿಗಳನ್ನು ಮೆಚ್ಚುತ್ತಿವೆ. ಆದರೆ, ಕಾಂಗ್ರೆಸ್‌ನವರಿಗೆ ದೇಶ ಅಭಿವೃದ್ಧಿಯಾಗುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲ. ಅವರು ಕೇವಲ ವಿರೋಧ ಮಾಡುವುದನ್ನು ಮಾತ್ರ ಕಲಿತಿದ್ದಾರೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿ, ದೇಶದಲ್ಲಿ ಕಾಡುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿವಾರಣೆಯಾಗಿವೆ. ಇಂದು ದೊಡ್ಡದೊಡ್ಡ ಕ್ಷಿಪಣಿಗಳು, ಯುದ್ಧ ವಿಮಾನಗಳು, ರಾಕೆಟ್‌ಗಳು ಭಾರತದಲ್ಲಿ ನಿರ್ಮಾಣವಾಗಿವೆ. ಮೊದಲು ನಾವು ಯುದ್ಧ ಸಾಮಗ್ರಿಗಳನ್ನು ವಿದೇಶದಿಂದ ಖರೀದಿಸಬೇಕಿತ್ತು. ಆದರೆ, ಇಂದು ಭಾರತದ ಬಳಿ ವಿದೇಶಗಳು ಬರುತ್ತಿವೆ. ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಮಂತ್ರಿಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕರಲ್ಲಿ ಅತೃಪ್ತಿ; ಇದು ಬಿಜೆಪಿಗರು ಸೃಷ್ಟಿಸಿದ ಕಟ್ಟುಕಥೆ: ಸಚಿವ ವೈದ್ಯ ಕಿಡಿ
ಬಿಜೆಪಿ ಜಿಲ್ಲಾಧಕ್ಷ ಡಾ.ಶರಣ ಭೂಪಾಲರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್, ಡಾ.ವೀರಬಸವಂತರಡ್ಡಿ ಮುದ್ನಾಳ್, ಬಿಜೆಪಿ ಮುಖಂಡ ಅಮೀನ ರಡ್ಡಿ ಪಾಟೀಲ್ ಯಾಳಗಿ, ಲಲಿತಾ ಅನಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ಸುರೇಶ್ ಸಜ್ಜನ್ ಮುಂತಾದವರು ಇದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರ ನಿರೂಪಿಸಿದರು.
ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಕಾರು ಮತ್ತು ಬೈಕ್ ಖರೀದಿಸುತ್ತಿರುವ ರಾಷ್ಟ್ರ ಭಾರತ. ಆತ್ಮನಿರ್ಭರ ಭಾರತ ಯೋಜನೆಯಡಿ ದೇಶವನ್ನು ವ್ಯವಸ್ಥಿತವಾಗಿ ಕಟ್ಟುವ ಕೆಲಸ ಕೇಂದ್ರ ಸರ್ಕಾರ ಕಳೆದ 9 ವರ್ಷಗಳಿಂದ ಮಾಡಿಕೊಂಡು ಬಂದಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಇದೀಗ ಶೇ.90ರಷ್ಟು ಸಾವು-ನೋವಿನ ಪ್ರಮಾಣ ಕಡಿಮೆಯಾಗಿವೆ. ಮಣಿಪುರದ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯನ್ನು ಕೇಂದ್ರ ಸರ್ಕಾರ ನಿಯಂತ್ರಣ ಮಾಡಲು ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಈ ಘಟನೆಗಳಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಎನ್.ರವಿಕುಮಾರ್ ಶ್ಲಾಘಿಸಿದರು.