ಬೆಂಗಳೂರು[ಮಾ.05]:  ರಾಜ್ಯದಲ್ಲಿ ನೆರೆಯುಂಟಾಗಿದ್ದ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ನಿಗದಿಪಡಿಸಿರುವ ಅನುದಾನದ ಮೊತ್ತ ವಿವಿಧ ಜಿಲ್ಲೆಗಳ ಬಿಜೆಪಿಯ ಜಿಲ್ಲಾಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಮುಖಂಡರಿಗೆ ಹೆಸರಿಗೆ ಜಮೆಯಾಗಿದೆ. ರಾಜ್ಯದ ಬೊಕ್ಕಸದ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌ ಕಿಡಿ ಕಾರಿದರು.

ರಾಜ್ಯಪಾಲರ ಭಾಷಣ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ರೈತ ಮೋರ್ಚಾ, ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಹೆಸರಿನಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ನೆರೆ ಉಂಟಾಗಿದ್ದು ಒಂದು ಭಾಗದಲ್ಲಾದರೆ, ಪರಿಹಾರದ ಮೊತ್ತವನ್ನು ಮತ್ತೊಂದು ಭಾಗದ ಜಿಲ್ಲೆಗಳಿಗೆ ಬಿಡುಗಡೆಯಾಗಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಮೂಲಕ ಬಹಿರಂಗ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾನಾಯಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸರ್ಕಾರದ ಹಣದಲ್ಲಿ ಒಂದು ರುಪಾಯಿ ದುರುಪಯೋಗ ಮಾಡಿಕೊಂಡಿಲ್ಲ. ಈ ಬಗ್ಗೆ ರಾಜ್ಯಪಾಲರ ಭಾಷಣಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ಸಂಪೂರ್ಣವಾಗಿ ವಿವರಿಸುವುದಾಗಿ ಹೇಳಿದರು.

ಸಂಪುಟ ವಿಸ್ತರಣೆಯ ಬಳಿಕ ಬಿಜೆಪಿ ನಿಜ ಬಣ್ಣ ಬಯಲು

ಶೂ, ಸಾಕ್ಸ್‌ ಖರೀದಿಯಲ್ಲಿ ಅಕ್ರಮ

ರಾಯಚೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್‌ ವಿತರಿಸಲು ನಡೆಸಲಾದ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಅದರಲ್ಲಿ ರಾಜಕಾರಣಿಗಳು ಭಾಗಿಯಾಗಿರುವ ಶಂಕೆಯಿದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಶಿಕ್ಷಕರನ್ನು ಅಮಾನತು ಮಾಡಲಾಗುತ್ತಿದೆ. ಸರ್ಕಾರ ಈ ಕೂಡಲೆ ಆ ಬಗ್ಗೆ ತನಿಖೆ ನಡಸಬೇಕು ಎಂದು ಭೋಸರಾಜು ಇದೇ ವೇಳೆ ಆಗ್ರಹಿಸಿದರು.