ಮಂಗಳೂರು, (ಫೆ.08): ಬಿಲ್ಲವ ಸಮುದಾಯದ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.

 ಬಿಲ್ಲವ ಸಮುದಾಯದ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ಹಾಗೂ ಸಮಾಜದ ಶಾಂತಿ ಕದಡುವ ಹೇಳಿಕೆ ಹಿನ್ನೆಲೆಯಲ್ಲಿ ಮೂಡಬಿದ್ರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ದೂರು ನೀಡಿದೆ. 

ಬಿಲ್ಲವರ ಆರಾಧ್ಯ ದೈವ ಕೋಟಿ-ಚೆನ್ನಯ್ಯರ ಬಗ್ಗೆ ಕೀಳಾಗಿ ಮಾತನಾಡಿದ್ದ ಜಗದೀಶ್ ಅಧಿಕಾರಿ ವಿರುದ್ಧ ಮೂಡಬಿದ್ರೆ ಪೊಲೀಸರು ಐಪಿಸಿ 295(A), 505 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಸಿ ಬಳಿದವರಿಗೆ 1 ಲಕ್ಷ ರೂ. ಘೋಷಿಸಿದ ಕೈ ನಾಯಕಿ
ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯರು ಮತ್ತು ಕಾಂಗ್ರೆಸ್‌ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ 1ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಕಾಂಗ್ರೆಸ್ ನಾಯಕಿ, ಪಾಲಿಕೆಯ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿರುವ ಅವರು, 3 ದಿನಗಳಲ್ಲಿ ಜಗದೀಶ್ ಅಧಿಕಾರಿ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಬಿಲ್ಲವ ಸಮುದಾಯದ ಯಾರಾದರೂ ಅವರ ಮುಖಕ್ಕೆ ಮಸಿ ಬಳಿಯಿರಿ. 1ಲಕ್ಷ ಬಹುಮಾನ ರೂ. ನೀಡುತ್ತೇನೆ ಎಂದು ಹೇಳಿದ್ದಾರೆ.

ಜಗದೀಶ್‌ ಅಧಿಕಾರಿಯನ್ನು ಬಿಜೆಪಿ ಕೂಡಲೇ ಉಚ್ಚಾಟಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದನ್ನು ಬಿಲ್ಲವರು ಯೋಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.