ಮೈತ್ರಿ ಪಕ್ಷಗಳಲ್ಲೇ ಹೆದ್ದಾರಿ ಅಭಿವೃದ್ಧಿ ಕ್ರೆಡಿಟ್‌ಗೆ ಫೈಟ್: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ವಿಚಾರವಾಗಿ ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳ ನಡುವೆ ಹೊಸ ಕ್ರೆಡಿಟ್ ವಾರ್ ಶುರುವಾಗಿದೆ.
ಮಂಡ್ಯ (ಜ.16): ಶ್ರೀರಂಗಪಟ್ಟಣ- ಜೇವರ್ಗಿ ಹೆದ್ದಾರಿ ಕಾಮಗಾರಿ ವಿಚಾರದಲ್ಲೇ ಹಳೆಯ ದೋಸ್ತಿಗಳಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕ್ರೆಡಿಟ್ ಫೈಟ್ ಮುಗಿದ ಬೆನ್ನಲ್ಲೇ ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ವಿಚಾರವಾಗಿ ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳ ನಡುವೆ ಹೊಸ ಕ್ರೆಡಿಟ್ ವಾರ್ ಶುರುವಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ವಿಚಾರದ ಕ್ರೆಡಿಟ್‌ಗೆ ಮೈತ್ರಿ ನಾಯಕರ ಬೆಂಬಲಿಗರು ಜಟಾಪಟಿ ನಡೆಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ನಾರಾಯಣಗೌಡ ಬೆಂಬಲಿಗರು ಸಾಮಾಜಿಕ ಜಾಲ ತಾಣದಲ್ಲಿ ಕಾಳಗಕ್ಕಿಳಿದಿದ್ದಾರೆ. ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಸಾರಿಗೆ ಸಚಿವರು ಅಸ್ತು ಎಂದಿದ್ದು, ಈ ಕುರಿತು ಕುಮಾರಸ್ವಾಮಿ ಕೂಡ ಸ್ಪಷ್ಟನೆ ನೀಡಿ ಜೆಡಿಎಸ್ ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಹಾಕಿದ್ದರು.
ಬಿ.ಆರ್.ಅಂಬೇಡ್ಕರ್ ಆಶಯದಂತೆ ಕೇಂದ್ರ ಸರ್ಕಾರ ಕೆಲಸ: ಎಚ್.ಡಿ.ಕುಮಾರಸ್ವಾಮಿ
ಇನ್ನೂ ಅದೇ ವಿಚಾರವಾಗಿ ಎಚ್‌ಡಿಕೆ ಹಾಗೂ ಜೆಡಿಎಸ್ ವಿರುದ್ಧ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಬೆಂಬಲಿಗರ ಕಿಡಿಕಾರಿದ್ದು, ಎಚ್‌ಡಿಕೆಗೂ ಮೊದಲೇ ಶ್ರೀರಂಗಪಟ್ಟಣ-ಅರಸೀಕೆರೆ ಹೆದ್ದಾರಿ ಅಭಿವೃದ್ಧಿಗೆ ನಾರಾಯಣಗೌಡ ಮನವಿ ಮಾಡಿದ್ದು, ಅದಕ್ಕೆ ಹಿಂದೆಯೇ ಒಪ್ಪಿಗೆ ದೊರೆತಿದೆ. ಭಾರತ್ ಮಾಲಾ ಯೋಜನೆಯಡಿ ಈ ಹೆದ್ದಾರಿ ಅಭಿವೃದ್ಧಿ ಯೋಜನೆ ನೋಂದಣಿ ಸಹ ಆಗಿದೆ ಎಂದು ನಾರಾಯಣಗೌಡರು ಹಿಂದೆ ನಿತಿನ್ ಗಡ್ಕರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದ ದಾಖಲೆ ಬಿಡುಗಡೆಗೊಳಿಸಿದ್ದಾರೆ. ಹಾಗಾಗಿ ಶ್ರೀರಂಗಪಟ್ಟಣ-ಅರಸೀಕೆರೆ ಹೆದ್ದಾರಿ ಅಭಿವೃದ್ಧಿಗೆ ನಾರಾಯಣಗೌಡರೇ ಕಾರಣ ಎಂದು ಸಾಮಾಜಿಕ ಜಾಲತಾಣದ ಮೂಲಕ ಜೆಡಿಎಸ್‌ಗೆ ಬಿಜೆಪಿ ಕೌಂಟರ್ ಕೊಟ್ಟಿದೆ.
600 ಅಂಗವಿಕಲರ ಜತೆ ಎಚ್‌ಡಿಕೆ ಸಂಕ್ರಾಂತಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಲವು ವಿಕಲಚೇತನ ಉದ್ಯೋಗಿಗಳೊಂದಿಗೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಕ್ರಾಂತಿ ಹಬ್ಬ ಆಚರಿಸಿದರು. ತಮ್ಮ ಜೆ.ಪಿ.ನಗರದ ನಿವಾಸದಲ್ಲಿ 600ಕ್ಕೂ ಹೆಚ್ಚು ಉದ್ಯೋಗಿಗಳ ಜತೆ 6ನೇ ವರ್ಷದ ಸಂಕ್ರಾಂತಿಯನ್ನು ಆಚರಿಸಿಕೊಂಡರು. 2019 ರಿಂದಲೂ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಕುಮಾರಸ್ವಾಮಿ ಅವರೊಂದಿಗೆ ಪ್ರತೀ ವರ್ಷ ತಪ್ಪದೇ ಸಂಕ್ರಾಂತಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಳ್ಳಲು ತಮ್ಮ ಕುಟುಂಬ ಸಮೇತವಾಗಿ ರಾಜ್ಯದ ಎಲ್ಲಾ ಭಾಗಗಳಿಂದ ಸಿಬ್ಬಂದಿ ಆಗಮಿಸಿದ್ದರು. ಕಳೆದ ಆರು ವರ್ಷಗಳಿಂದ ಇದನ್ನು ನಿರಂತರವಾಗಿ ಕುಮಾರಸ್ವಾಮಿ ಮುಂದುವರಿಸಿಕೊಂಡು ಬಂದಿದ್ದಾರೆ.
ಕುಮಾರಸ್ವಾಮಿ ಕೆಲಸ ಮಾಡದ್ದಕ್ಕೆ ಜನ ನನ್ನ ಗೆಲ್ಲಿಸಿದ್ರು: ಶಾಸಕ ಸಿ.ಪಿ.ಯೋಗೇಶ್ವರ್
ಈ ವೇಳೆ ಎಲ್ಲರಿಗೂ ಶುಭ ಕೋರಿದ ಕುಮಾರಸ್ವಾಮಿ ಅವರು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಆಗಿದ್ದೇನೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿರುವುದಕ್ಕೆ ನಾನು ಆಭಾರಿ. ನಿಮ್ಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾದರು. ಅವಕಾಶ ದೊರಕಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ದೈಹಿಕವಾಗಿ ಶಕ್ತಿ ಇಲ್ಲದ ಯಾರೇ ಇದ್ದರೂ ಅವರಿಗಾಗಿ ನನ್ನ ಹೃದಯ ಮುಂದೆಯೂ ಮಿಡಿಯುತ್ತದೆ. ಪ್ರಾಮಾಣಿಕವಾಗಿ ಅಂಥವರ ಒಳಿತಿಗಾಗಿ ಪ್ರಯತ್ನ ಮಾಡುತ್ತೇನೆ. ವಿಕಲಚೇತನರು, ದೈಹಿಕವಾಗಿ ಆಶಕ್ತರ ಬಗ್ಗೆ ನಮಗೆ ಅನುಕಂಪಕ್ಕಿಂತ ಮಿಗಿಲಾಗಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸ ಆಗಬೇಕಿದೆ. ನನಗೆ ಅವಕಾಶ ಸಿಕ್ಕಿದಾಗ ನಾನು ಇಂಥವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.