ಬಿ.ಆರ್.ಅಂಬೇಡ್ಕರ್ ಆಶಯದಂತೆ ಕೇಂದ್ರ ಸರ್ಕಾರ ಕೆಲಸ: ಎಚ್.ಡಿ.ಕುಮಾರಸ್ವಾಮಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಆಗಿದ್ದ ಅಪಚಾರವನ್ನು ಸರಿಪಡಿಸುವ ಜೊತೆಗೆ ಅವರ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಳವಳ್ಳಿ (ಜ.13): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಆಗಿದ್ದ ಅಪಚಾರವನ್ನು ಸರಿಪಡಿಸುವ ಜೊತೆಗೆ ಅವರ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಬೌದ್ಧ ಅಂಬೇಡ್ಕರ್ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕಾರ್ಯಕ್ರಮ ರೂಪಿಸಿದ್ದು, ಮನುಕುಲ ಇರುವವರೆಗೂ ಬಾಬಾ ಸಾಹೇಬ್ ಅವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ದಲಿತರ ಉದ್ಧಾರಕ್ಕಾಗಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ವಿಧಾನಸಭಾ ಮತ್ತು ಲೋಕಸಭೆಗೆ ಮಾತ್ರ ಇದ್ದ ಮೀಸಲಾತಿ ಸೌಲಭ್ಯವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿಯೂ ಜಾರಿಗೆ ತಂದರು ಎಂದರು. ಹಾಸನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ತಳಮಟ್ಟದ ಸಮುದಾಯದ ವಿದ್ಯಾವಂತ ಒಬ್ಬ ದಲಿತ ಯುವಕನಿಗೆ ಅಧಿಕಾರ ನೀಡಿದರು, ಜೊತೆಗೆ ಎಚ್.ಡಿ.ದೇವೇಗೌಡರು ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದಲಿತರ ಉದ್ಧಾರಕ್ಕೆ ಅನೇಕ ಕಾರ್ಯಕ್ರಮಗಳ ಮೂಲಕ ಬಹುದೊಡ್ಡ ಕಾಣಿಕೆ ನೀಡಿದ್ದಾರೆ. ಗಂಗಾ ಕಲ್ಯಾಣ ಯೋಜನೆಯ ಮೂಲಕ ಅನೇಕರಿಗೆ ಸಹಾಯ ಮಾಡಿದ್ದರು ಎಂದು ಸ್ಮರಿಸಿದರು.
ಭವನಕ್ಕೆ ನೆರವು ನೀಡುವಂತೆ ಮನವಿ: ಕಲ್ಕುಣಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಅಭಿವೃದ್ಧಿಗೆ ನೆರವು ನೀಡುವಂತೆ ಗ್ರಾಮಸ್ಥರ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಭವನದ ಅಭಿವೃದ್ಧಿಗೆ ಸದ್ಯದಲ್ಲಿಯೇ ಸಂಸದರ ಅನುದಾನದಲ್ಲಿ 25 ಲಕ್ಷ ರು. ಅನುದಾನ ನೀಡುವುದಾಗಿ ಭರವಸೆ ನೀಡಿದರು. ಅದಕ್ಕೆ ಅಗತ್ಯವಾದ ಸೂಕ್ತ ಜಾಗವನ್ನು ತಕ್ಷಣವೇ ಗ್ರಾಮಸ್ಥರ ಜತೆ ಸೇರಿ ಗುರುತಿಸುವಂತೆ ಮಾಜಿ ಶಾಸಕ ಅನ್ನದಾನಿ ಅವರಿಗೆ ಸೂಚಿಸಿದರು.
ಕುಮಾರಸ್ವಾಮಿ ಕೆಲಸ ಮಾಡದ್ದಕ್ಕೆ ಜನ ನನ್ನ ಗೆಲ್ಲಿಸಿದ್ರು: ಶಾಸಕ ಸಿ.ಪಿ.ಯೋಗೇಶ್ವರ್
ಇದೇ ವೇಳೆ ಅತ್ಯಂತ ಅರ್ಥಪೂರ್ಣವಾಗಿ ನಿರ್ಮಿಸಲಾಗಿರುವ ಈ ಮಹಾದ್ವಾರ ಸಮ ಸಮಾಜದ ಸಂಕೇತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ, ಜೆಡಿಎಸ್ ಎಸ್ ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಡಾ.ಕೆ.ಅನ್ನದಾನಿ, ಜಿಪಂ ಮಾಜಿ ಅಧ್ಯಕ್ಷ ಜಕ್ರಿಯಾ ಖಾನ್, ಜೆಡಿಎಸ್ ಯುವ ಮುಖಂಡ ಸುಹಾಸ್ ಮಹದೇವಯ್ಯ, ಮುಖಂಡರಾದ ನಂಜುಂಡ ಸ್ವಾಮಿ, ಮಲ್ಲು, ಬಿಎಸ್ಪಿ ತಾಲೂಕು ಮಾಜಿ ಅಧ್ಯಕ್ಷ ಚಿನ್ನಸ್ವಾಮಿ ಸೇರಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.