ಬಿಜೆಪಿ ಟಿಕೆಟ್‌ಗೆ ಅಪ್ಪ- ಮಗನ ನಡುವೆ ಫೈಟ್...!
ಯುವ ನಾಯಕ ಸಿದ್ದಾರ್ಥ ಸಿಂಗ್ ಸ್ವತಃ ತನ್ನ ತಂದೆಗೆ ಟಿಕೆಟ್ ವಿಷಯದಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ಟಿಕೆಟ್ ಫೈಟ್ ವಿಷಯ ಭಾರಿ ಚರ್ಚೆಗೆ ಗ್ರಾಸವನ್ನೊದಗಿಸಿದ್ದು, ಅಭಿಪ್ರಾಯ ಸಂಗ್ರಹದಲ್ಲೂ, ಆಂತರಿಕ ಸರ್ವೆಯಲ್ಲೂ ಸಿದ್ದಾರ್ಥ ಸಿಂಗ್ ಪರ ಒಲವು ವ್ಯಕ್ತವಾಗಿದೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಏ.06): ವಿಜಯನಗರ ಕ್ಷೇತ್ರದಲ್ಲೀಗ ಬಿಜೆಪಿ ಟಿಕೆಟ್‌ಗಾಗಿ ಅಪ್ಪ- ಮಗನ ನಡುವೆ ಫೈಟ್ ಏರ್ಪಟ್ಟಿದ್ದು, ಭಾರಿ ಕುತೂಹಲಕ್ಕೆಡೆ ಮಾಡಿದೆ!. ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹಾಗೂ ಅವರ ಪುತ್ರ ಸಿದ್ದಾರ್ಥ ಸಿಂಗ್ ನಡುವೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. 2008ರಲ್ಲಿ ವಿಜಯನಗರ ಕ್ಷೇತ್ರ ರಚನೆಯಾಗಿದ್ದು, ಉಪ ಚುನಾವಣೆ ಸೇರಿ ಮೂರು ಬಾರಿ ಆನಂದ ಸಿಂಗ್ ಬಿಜೆಪಿ ಟಿಕೆಟ್ ಪಡೆದು, ಸ್ಪರ್ಧಿಸಿ ಗೆದ್ದಿದ್ದರು. ಒಮ್ಮೆ ಅವರು (2018ರಲ್ಲಿ) ಕಾಂಗ್ರೆಸ್ಸಿನಿಂದ ಗೆಲುವು ಸಾಧಿಸಿದ್ದರು.
ಈಗ ಯುವ ನಾಯಕ ಸಿದ್ದಾರ್ಥ ಸಿಂಗ್ ಸ್ವತಃ ತನ್ನ ತಂದೆಗೆ ಟಿಕೆಟ್ ವಿಷಯದಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ಟಿಕೆಟ್ ಫೈಟ್ ವಿಷಯ ಭಾರಿ ಚರ್ಚೆಗೆ ಗ್ರಾಸವನ್ನೊದಗಿಸಿದ್ದು, ಅಭಿಪ್ರಾಯ ಸಂಗ್ರಹದಲ್ಲೂ, ಆಂತರಿಕ ಸರ್ವೆಯಲ್ಲೂ ಸಿದ್ದಾರ್ಥ ಸಿಂಗ್ ಪರ ಒಲವು ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೂಡ್ಲಿಗಿ: ಬಿಜೆಪಿ ಶಾಸಕ ಗೋಪಾಲಕೃಷ್ಣ ರಾಜೀನಾಮೆ ಸಲ್ಲಿಕೆ, ಕಾಂಗ್ರೆಸ್ ತೆಕ್ಕೆಗೆ ಬಿದ್ದ ಕಮಲ ನಾಯಕ..!
ಪುತ್ರನ ಪರ ಆನಂದ ಸಿಂಗ್:
ಇತ್ತ ಆನಂದ ಸಿಂಗ್ ಅವರು ಕೂಡ ಟಿಕೆಟ್ ಕೇಳುತ್ತಿದ್ದಾರೆ. ಆದರೆ, ಪುತ್ರನ ಪರ ಸಿಂಗ್ ಬ್ಯಾಟಿಂಗ್ ಬೀಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಿಜೆಪಿ ಹೈಕಮಾಂಡ್‌ಗೂ ಹೊಸ ಇಕ್ಕಟ್ಟು ತಂದಿಟ್ಟಿದೆ. ವಿಜಯನಗರ ಹೊಸ ಜಿಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ಆನಂದ ಸಿಂಗ್ ಕಣಕ್ಕಿಳಿದರೆ, ಉಳಿದ ನಾಲ್ಕು ಕ್ಷೇತ್ರದಲ್ಲೂ ಪ್ರಭಾವ ಬೀರಬಹುದೆಂಬ ಲೆಕ್ಕಾಚಾರದಲ್ಲಿ ಹೈಕಮಾಂಡ್ ಇದೆ. ಈ ಬಗ್ಗೆ ರಾಜ್ಯ ನಾಯಕರು ಕೂಡ ಆನಂದ ಸಿಂಗ್ ಜತೆಗೆ ಒಂದು ಸುತ್ತು ಮಾತನ್ನಾಡಿದ್ದಾರೆ ಎಂದು ಹೇಳಲಾಗುತ್ತಿದ್ದು. ಹೊಸ ಮುಖ ಮತ್ತು ಯುವ ನಾಯಕ ಸಿದ್ದಾರ್ಥ ಸಿಂಗ್ ಪರ ಆನಂದ ಸಿಂಗ್ ಒಲವು ಹೊಂದಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಲೋಕಸಭೆಯತ್ತ ಸಿಂಗ್ ಚಿತ್ತ:
ಕೊಪ್ಪಳ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಆನಂದ ಸಿಂಗ್ ಅವರು ಈ ಬಾರಿ ವಿಜಯನಗರ ಕ್ಷೇತ್ರದಿಂದ ತನಗೆ ಟಿಕೆಟ್ ಬೇಡ, ತನ್ನ ಪುತ್ರ ಸಿದ್ದಾರ್ಥ ಸಿಂಗ್‌ಗೆ ಟಿಕೆಟ್ ಕೊಡಿ ಎಂದು ಹೈಕಮಾಂಡ್‌ಗೆ ಸಂದೇಶ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು, ಆನಂದ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದರೆ, ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ತೊಡಕ್ಕಾಗಬಹುದು ಎಂಬ ಚಿಂತನೆಯಲ್ಲಿ ಹೈಕಮಾಂಡ್ ಮುಳುಗಿದೆ. ಹಾಗಾಗಿ ಆನಂದ ಸಿಂಗ್‌ರನ್ನೇ ಕಣಕ್ಕಿಳಿಸಲು, ಬಿಜೆಪಿಯಲ್ಲಿರುವ ಸಿಂಗ್ ಆಪ್ತ ನಾಯಕರನ್ನು ಮನವೊಲಿಸುವ ಜವಾಬ್ದಾರಿಯನ್ನು ಕಮಲ ಪಾಳಯ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಆನಂದ ಸಿಂಗ್ ಅವರ ಸಹೋದರಿ ರಾಣಿ ಸಂಯುಕ್ತಾ ಕೂಡ ದಿಲ್ಲಿಗೆ ತೆರಳಿ ಹೈಕಮಾಂಡ್ ಎದುರು ತಾನು ಈ ಬಾರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಎಂದು ಹೇಳಿ ಬಂದಿದ್ದಾರೆ. ಪ್ರತಿ ಲೋಕಸಭೆಗೆ ಒಂದು ಮಹಿಳಾ ಟಿಕೆಟ್ ನೀಡಬೇಕು ಎಂದು ಒತ್ತಾಯ ಕೂಡ ಮಾಡಿದ್ದಾರೆ. ವಿಜಯನಗರ ಕ್ಷೇತ್ರದ ಟಿಕೆಟ್ ಬಗ್ಗೆಯೇ ಹೈಕಮಾಂಡ್ ಈ ಬಾರಿ ತಲೆಬಿಸಿ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಈ ಮೂವರಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕು.
ಅತ್ತ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲೇ ಮಾಜಿ ಶಾಸಕ ಎಚ್.ಆರ್. ಗವಿಯಪ್ಪನವರಿಗೆ ಟಿಕೆಟ್ ನೀಡಿದೆ. ಕ್ಷೇತ್ರಾದ್ಯಂತ ಗವಿಯಪ್ಪನವರು ತಿರುಗಾಡುತ್ತಿದ್ದಾರೆ. ಹಾಗಾಗಿ ಬಿಜೆಪಿ ಕೂಡ ಟಿಕೆಟ್ ಫೈನಲ್ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಅತ್ತ ಬಿಜೆಪಿ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ಅಭಿಪ್ರಾಯ ಕೂಡ ಸಂಗ್ರಹಣೆ ಮಾಡಿದ್ದು, ಸೂಕ್ತ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಸಚಿವ ಆನಂದ ಸಿಂಗ್ ಕುಟುಂಬಸ್ಥರ ವಿರುದ್ಧ ಭೂಮಿ ಪರಭಾರೆ ಆರೋಪಕ್ಕೆ ಬಿಗ್ ಟ್ವಿಸ್ಟ್!
ವಿಜಯನಗರ ಕ್ಷೇತ್ರದಲ್ಲಿ ಆನಂದ ಸಿಂಗ್ ಸೇರಿದಂತೆ ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಅಭಿಪ್ರಾಯ ಸಂಗ್ರಹಿಸಿದ್ದು, ಗೆಲ್ಲುವ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಲಿದೆ ಅಂತ ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.